BBK10: ಬಿಗ್ ಬಾಸ್ ಮನೆಗೆ ಚಾರ್ಲಿ ಹೋಗುತ್ತಿರುವುದು ಯಾಕೆ?
ಬಿಗ್ ಬಾಸ್ ಶುರುವಾಯ್ತು ಅಂದ್ರೆ ಸಾಕು, ಮನೆಯೊಳಗೆ ಹೋಗುವ ಸ್ಪರ್ಧಿಗಳು ಯಾರು ಅನ್ನೋ ಬಗ್ಗೆ ದೊಡ್ಡ ಚರ್ಚೆನೇ ಆಗುತ್ತೆ. ಅದೆಷ್ಟು ಮುಚ್ಚಿಟ್ಟು ಬಟ್ಟಿಟ್ಟುಕೊಂಡರೂ ಲೀಕ್ ಆಗದೇ ಇರುವುದಿಲ್ಲ.
ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಸೀಸನ್ 10 ಶುರುವಾಗಲು ಇನ್ನು ಕೆಲವೇ ಗಂಟೆಗಳು ಬಾಕಿ ಇವೆ. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡ್ತಿರುವ ಒಬ್ಬೊಬ್ಬ ಸ್ಪರ್ಧಿಗಳು ಒಬ್ಬರಿಗಿಂತ ಒಬ್ಬರು ವಿಭಿನ್ನರಾಗಿರುವುದು ಪಕ್ಕಾ.
ಒಬ್ಬೊಬ್ಬರು ಒಂದೊಂದು ಕ್ಷೇತ್ರದಿಂದ ಬಂದಿರುವವರಾಗಿರುತ್ತಾರೆ. ಇಲ್ಲಿ ಬಂದಿರುವವರೆಲ್ಲರೂ ಈಗಾಗಲೇ ಯಾವುದೋ ಒಂದು ರೂಪದಲ್ಲಿ ಜನಸಾಮಾನ್ಯರಿಗೆ ಚಿರಪರಿಚಿತರಾಗಿರುವವರೇ.

ಸಂಭಾವನೀಯ ಪಟ್ಟಿಯಲ್ಲಿ 17 ಮಂದಿ ಹೆಸರು
ಈಗಾಗಲೇ ಬಿಗ್ ಬಾಸ್ ಮನೆ ಸೇರುವ ಸಂಭಾವನೀಯ ಪಟ್ಟಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಯಾವುದೇ ಸ್ಪರ್ಧಿ ಮನೆಯೊಳಕ್ಕೆ ಹೋದರೆ ಅದರ ಬಗ್ಗೆ ಅವರ ಸ್ನೇಹಿತರು, ಕುಟುಂಬಸ್ಥರು ಮಾತನಾಡುವುದು ಸಹಜ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸಂಭಾವನೀಯ ಪಟ್ಟಿಯಲ್ಲಿ ಒಬ್ಬರ ಹೆಸರು ಕನ್ಫರ್ಮ್ ಆಗಿದೆ. ಈಗಾಗಲೇ ಮಾಹಿತಿ ನೀಡಿರುವಂತೆ ಸುಮಾರು 17 ಮಂದಿ ಸ್ಪರ್ಧಿಗಳು ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಭಾಗವಹಿಸುತ್ತಾರೆ ಎನ್ನಲಾಗಿದೆ. ಅದರಲ್ಲಿ ಪಟ್ಟಿಯ ಮೊದಲ ಸ್ಥಾನದಲ್ಲಿರುವವರ ಹೆಸರು ಬಹಳ ಚಿರಪರಿಚಿತವಾಗಿದ್ದು, ವೀಕ್ಷಕರ ಕುತೂಹಲಕ್ಕೆ ಮತ್ತಷ್ಟು ಮೆರಗು ನೀಡಿದೆ.
ಕುತೂಹಲ ಕೆರಳಿಸಿದ ಹೊಸ ಸ್ಪರ್ಧಿ
ದಕ್ಷಿಣ ಭಾರತದ ನಾಲ್ಕೂ ಭಾಷೆಗಳ ಪೈಕಿ ಕನ್ನಡದಲ್ಲೇ ಮೊದಲ ಬಾರಿಗೆ ಓಟಿಟಿ ಅನ್ನು ಪ್ರಸಾರ ಮಾಡಲಾಗಿತ್ತು. ಅದರಂತೆಯೇ ಈ ಬಾರಿ ಮೊದಲ ಪ್ರಯತ್ನ ಎಂಬಂತೆ ರಿಯಾಲಿಟಿ ಶೋ ಒಂದರಲ್ಲಿ ವ್ಯಕ್ತಿಯನ್ನು ಹೊರತು ಪಡಿಸಿ ಪ್ರಾಣಿಯನ್ನು ಕೂಡ ಸ್ಪರ್ಧಿಗಳ ಪಟ್ಟಿಯಲ್ಲಿ ಲಿಸ್ಟ್ ಮಾಡಲಾಗಿದೆ. ಈ ಬಗ್ಗೆ ಈಗಾಗಲೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬಂದ ಅನುಬಂಧ ಅವಾರ್ಡ್ ಕಾರ್ಯಕ್ರಮದಲ್ಲಿ ಹೆಸರು ಬಯಲಾಗಿದೆ. ಎಲ್ಲರ ನೆಚ್ಚಿನ ಸಿನಿಮಾ '777 ಚಾರ್ಲಿ' ಸಿನಿಮಾದಲ್ಲಿ ಹೈ ಲೈಟ್ ಆಗಿದ್ದ ಚಾರ್ಲಿ ಬಿಗ್ ಬಾಸ್ ಕನ್ನಡ ಸೀಸನ್ 10ನಲ್ಲಿ ಭಾಗವಹಿಸಲಿದೆ. ಚಾರ್ಲಿ ಈ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿರುವುದರಿಂದ ಜನರ ಕುತೂಹಲ ಕೆರಳಿಸಿದೆ.
ಚಾರ್ಲಿ ಆಟದ ಬಗ್ಗೆ ನೂರೆಂಟು ಪ್ರಶ್ನೆ
ಇನ್ನು ಬಿಗ್ ಬಾಸ್ ಮನೆಗೆ ಚಾರ್ಲಿ ಬರುತ್ತಿರುವುದು ಯಾಕೆ ಎಂಬ ಪ್ರಶ್ನೆಯೂ ಎದ್ದಿದೆ. ಕಳೆದ ವರ್ಷ ಪ್ರಸಾರಗೊಂಡ ಬಿಗ್ ಬಾಸ್ ಕನ್ನಡ ಸೀಸನ್ 09 ರಲ್ಲಿ ಪ್ರವೀಣರು ಹಾಗೂ ನವೀನರು ಎಂದು ಸ್ಪರ್ಧಿಗಳ ಪಟ್ಟಿ ಮಾಡಿ ಕಳಿಸಲಾಗಿತ್ತು. ಬಿಗ್ ಬಾಸ್ ಅನುಭವ ಇರುವ ಸ್ಪರ್ಧಿಗಳನ್ನು ಪ್ರವೀಣರು ಹಾಗೂ ಅನುಭವ ಇಲ್ಲದ ಸ್ಪರ್ಧಿಗಳಿಗೆ ನವೀನರು ಎನ್ನಲಾಗಿತ್ತು. ಸೀನಿಯರ್ ಹಾಗೂ ಜೂನಿಯರ್ ನಡುವೆ ಸ್ಪರ್ಧೆ ಏರ್ಪಡಿಸಿದ್ದು ಕೂಡ ಒಂದು ರೀತಿ ಚೆನ್ನಾಗಿತ್ತು. ಆದರೆ ಬಿಗ್ ಬಾಸ್ ನಲ್ಲಿ ಭಾಗವಹಿಸಲು ಸ್ಫರ್ಧಿಗಳ ಕೊರತೆ ಉಂಟಾಗಿರಬೇಕು ಎಂದು ಕೆಲವರು ಮಾತನಾಡಿದ್ದು ಉಂಟು. ಈಗ ಚಾರ್ಲಿ ಅನ್ನು ಕರೆಸುತ್ತಿರುವುದು ಮತ್ತಷ್ಟು ಕುತೂಹಲವನ್ನು ಹೆಚ್ಚಿಸಿದೆ.
ಬಿಗ್‌ಬಾಸ್‌ಗೆ ಚಾರ್ಲಿ ಬರ್ತಿರೋದ್ಯಾಕೆ?
ಇನ್ನು ಚಾರ್ಲಿ ಅನ್ನು ಬಿಗ್ ಬಾಸ್ ಶೋಗೆ ಕರೆಸುತ್ತಿರುವ ಕಾರಣ ಏನಿರಬಹುದು.? ಬಿಗ್ ಬಾಸ್ ಶೋ ಪಬ್ಲಿಸಿಟಿಗಾಗಿ ಹೀಗೆ ಮಾಡಲಾಗುತ್ತಿದೆಯಾ..? ಅಥವಾ ಈಗಾಗಲೇ ಶ್ವಾನವನ್ನು ಸಿನಿಮಾದಲ್ಲಿ ತೋರಿಸುವುದು ಸರ್ವೇ ಸಾಮಾನ್ಯವಾಗಿದ್ದು, ಕಿರುತೆರೆಯಲ್ಲಿ ಈಗಷ್ಟೇ ಹೊಸಬಗೆಯಾಗಿದೆ. ಇತ್ತೀಚೆಗಷ್ಟೇ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಶುರುವಾಗಿರುವ 'ಅವನು ಮತ್ತೆ ಶ್ರಾವಣಿ' ಧಾರಾವಾಹಿಯಲ್ಲೂ ಶ್ವಾನ ಒಂದನ್ನು ಬಳಸಿಕೊಂಡು ಕಥೆ ಹೆಣೆಯಲಾಗಿದೆ. ಹೀಗಾಗಿ ರಿಯಾಲಿಟಿ ಶೋ ಯಾವುದಕ್ಕೂ ಕಡಿಮೆ ಇಲ್ಲ ಎಂದು ತೋರಿಸುವ ಸಲುವಾಗಿ ಚಾರ್ಲಿ ಅನ್ನು ಕರೆತರುತ್ತಿರಬಹುದು ಎನ್ನುವ ಚರ್ಚೆ ನಡೀತಿದೆ.
ಚಾರ್ಲಿ ಆಟ ಎಷ್ಟು ದಿನ?
ಬಿಗ್ ಬಾಸ್ ಸೀಸನ್ 10 ಸಂಪೂರ್ಣವಾಗಿಯೂ ಮುಗಿಯುವವರೆಗೆ ಚಾರ್ಲಿ ಆ ಮನೆಯಲ್ಲಿ ಇರುತ್ತಾ ಇಲ್ಲವಾ? ಅನ್ನೋ ಸಂದೇಹ ಕೂಡ ಹಲವರಲ್ಲಿದೆ. ಜೊತೆಗೆ ಚಾರ್ಲಿ ಕಂಟೆಸ್ಟೆಂಟ್ ಆಗಿ ಹೋಗುತ್ತಿರುವುದಾ? ಇಲ್ಲ ಕೆಲ ಸಮಯದವರೆಗೂ ಗೆಸ್ಟ್ ರೀತಿ ಹೋಗಿ ಬರುತ್ತಾ? ಚಾರ್ಲಿ 100 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇರಲು ಸಾಧ್ಯವೇ.? ಚಾರ್ಲಿ ಕಂಟೆಸ್ಟೆಂಟ್ ಗಳ ಜೊತೆಗೆ ಹೇಗಿರಲಿದೆ ಎನ್ನುವ ಕುತೂಹಲ ಇದೆ. ಇದೆಲ್ಲದಕ್ಕೂ, ಶೋ ಪ್ರಸಾರವಾದಾಗಲೇ ಉತ್ತರ ಸಿಗಲಿದೆ. ಇದರ ಜೊತೆಗೆ ಈ ಬಾರಿ ಯಾರೆಲ್ಲ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂಬ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಸಾಮಾನ್ಯವಾಗಿ ಬಿಗ್‌ಬಾಸ್‌ಗೆ ಹೋದಮೇಲೆ ಸ್ಪರ್ಧಿಗಳು ವೀಕ್ಷಕರ ಮೆಚ್ಚುಗೆ ಗಳಿಸುತ್ತಾರೆ. ವೀಕ್ಷಕರ ನೆಚ್ಚಿನ ಸ್ಪರ್ಧಿ ಬಿಗ್‌ಬಾಸ್ ಮನೆಗೆ ಹೋಗುತ್ತಿರುವುದು ಇದೇ ಮೊದಲು.


Click it and Unblock the Notifications











