BBK10: ಬಿಗ್ ಸರ್‌ಪ್ರೈಸ್: ಬಿಗ್‌ಬಾಸ್ ಮನೆಗೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಹೊಸ ಎಂಟ್ರಿ
ಬಿಗ್‌ಬಾಸ್ ಕನ್ನಡ ಸೀಸನ್ 10 ಗ್ರ್ಯಾಂಡ್ ಪ್ರೀಮಿಯರ್‌ಗೆ ಅದ್ಧೂರಿ ತೆರೆ ಬಿದ್ದಿದೆ. ಈಗಾಗಲೇ 17 ಜನ ಸ್ಪರ್ಧಿಗಳು ಬಿಗ್‌ಬಾಸ್ ಮನೆ ಒಳಗೆ ಎಂಟ್ರಿ ಕೊಟ್ಟಿದ್ದಾರೆ. 7 ಜನ ನೇರವಾಗಿ ದೊಡ್ಮನೆ ಪ್ರವೇಶಿಸಿದರೆ ಇಬ್ಬರು ಫೇಲ್ ಆಗಿ ತಮ್ಮ ಮನೆಗೆ ವಾಪಸ್ ಹೋಗಿದ್ದರು. ಆರು ಜನ ಜಸ್ಟ್ ಪಾಸ್ ಆಗಿದ್ದರೂ ಷರತ್ತಿನ ಮೇಲೆ ಗೃಹಪ್ರವೇಶ ಮಾಡಿದ್ದಾರೆ.
ಪ್ರತಿ ಬಾರಿ ಬಿಗ್‌ಬಾಸ್ ಶೋ ಆರಂಭವಾದಗಲೂ ಯಾರೆಲ್ಲಾ ದೊಡ್ಮನೆಗೆ ಎಂಟ್ರಿ ಕೊಡುತ್ತಾರೆ ಎನ್ನುವ ಕುತೂಹಲ ಇರುತ್ತದೆ. ಇನ್ನು ವೀಕ್ಷಕರು ಕೂಡ ಕೆಲವರನ್ನು ಬಿಗ್‌ಬಾಸ್ ಮನೆಯಲ್ಲಿ ನೋಡಲು ಇಷ್ಟಪಡುತ್ತಾರೆ. ಈ ಬಾರಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ದೊಡ್ಮನೆಗೆ ಹೋಗಬೇಕು ಎಂದು ಸಾಕಷ್ಟು ಜನ ಬಯಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಕೂಡ ನಡೆದಿತ್ತು. ಆದರೆ ಗ್ರ್ಯಾಂಡ್ ಪ್ರೀಮಿಯರ್‌ನಲ್ಲಿ ಅದಕ್ಕೆ ಬ್ರೇಕ್ ಬಿದ್ದಿತ್ತು. ಆದರೆ ಈಗ ದಿಢೀರನೆ ಪ್ರದೀಪ್ ಈಶ್ವರ್ ಬಿಗ್‌ಬಾಸ್ ಮನೆಗೆ ಒಳಗೆ ಪ್ರವೇಶಿಸಿದ್ದಾರೆ.

ಇದು ಅಂತೆ ಕಂತೆ ಸುದ್ದಿ ಅಲ್ಲ. ಬಿಗ್‌ಬಾಸ್ ಮನೆಗೆ ಎಂಎಲ್‌ಎ ಪ್ರದೀಪ್ ಈಶ್ವರ್ ಹೋಗಿರುವುದು ನೂರಕ್ಕೆ ನೂರರಷ್ಟು ಸತ್ಯ. ಬಿಗ್‌ಬಾಸ್ ಮೊದಲ ದಿನದ ಆಟ ಈಗಾಗಲೇ ಶುರುವಾಗಿದೆ. 17 ಜನ ಸ್ಪರ್ಧಿಗಳು ತಮ್ಮ ತಮ್ಮ ಪರಿಚಯ ಮಾಡಿಕೊಂಡು ಬೆರೆಯಲು ಆರಂಭಿಸುತ್ತಿದ್ದಂತೆ ಬಿಗ್‌ಬಾಸ್ ಮನೆಗೆ ಪ್ರದೀಪ್ ಈಶ್ವರ್ ಎಂಟ್ರಿ ಕೊಟ್ಟು ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ.
ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಹಲವರಿಗೆ ಶಾಕ್ ಕೊಟ್ಟಿತ್ತು. ಆ ದಿನ ಇಡೀ ರಾಜ್ಯ ಚಿಕ್ಕಬಳ್ಳಾಪುರ ಕಡೆ ನೋಡುವಂತಾಗಿತ್ತು. ಕಾರಣ ಪ್ರಭಾವಿ ಸಚಿವ ಡಾ. ಕೆ ಸುಧಾಕರ್ ಅವರನ್ನು ನಗರದಲ್ಲಿ ಸಾಮಾನ್ಯನಾಗಿ ಓಡಾಡಿಕೊಂಡಿದ್ದ ಹುಡುಗ ಪ್ರದೀಪ್ ಈಶ್ವರ್ ಸೋಲಿಸಿದ್ದರು. ಪೆರೇಸಂದ್ರದ ಪ್ರದೀಪ್ ಈಶ್ವರ್ ಮೋಟಿವೇಶನಲ್ ಸ್ಪೀಕರ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸದ್ದು ಮಾಡಿದವರು.
ಸಿದ್ಧಗಂಗಾ ಮಠದಲ್ಲಿ ಓದಿ ಬೆಳೆದ ಪ್ರದೀಪ್ ಈಶ್ವರ್ ಪಿಯುಸಿ ಬಳಿಕ ಬೋಧನೆ ಕ್ಷೇತ್ರಕ್ಕೆ ಕಾಲಿಟ್ಟರು. ಚಾನಲ್‌ವೊಂದರಲ್ಲಿ ನಿರೂಪಕರಾಗಿಯೂ ಕೆಲಸ ಮಾಡಿದ್ದ ಪ್ರದೀಪ್ ಬಳಿಕ ಯೂಟ್ಯೂಬ್ ಚಾನಲ್ ಆರಂಭಿಸಿದರು. ಜೀವಶಾಸ್ತ್ರ ಶಿಕ್ಷಕರಾಗಿರುವ ಪ್ರದೀಪ್ ತಮ್ಮ ಪಾಠ ಮಾಡುವ ಶೈಲಿಯಿಂದ ಹೆಚ್ಚು ಗಮನ ಸೆಳೆದಿದ್ದರು. ಅವರು ಪಾಠ ಮಾಡುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.
ಪ್ರದೀಪ್ ಈಶ್ವರ್ ಬಿಗ್‌ಬಾಸ್ ಮನೆಗೆ ಹೋಗಬೇಕು ಎನ್ನುವುದು ಸಾಕಷ್ಟು ಜನರ ಆಸೆಯಾಗಿತ್ತು. ಆದರೆ 17 ಸ್ಪರ್ಧಿಗಳಲ್ಲಿ ಅವರ ಹೆಸರು ಇರಲಿಲ್ಲ. ಚಿಕ್ಕಬಳ್ಳಾಪುರದ ಶಾಸಕರಾಗಿರುವುದರಿಂದ 3 ತಿಂಗಳ ಕಾಲ ಬಿಗ್‌ಬಾಸ್ ಮನೆಯೊಳಗೆ ಹೋಗಿ ಇರಲು ಸಾಧ್ಯವೂ ಇಲ್ಲ. ಆದರೂ ಬಿಗ್‌ಬಾಸ್ ಮನೆಗೆ ಮೊದಲ ದಿನವೇ ಎಂಟ್ರಿ ಕೊಟ್ಟು ಸ್ಪರ್ಧಿಗಳಿಕೆ ಸ್ವೀಟ್ ಶಾಕ್ ಕೊಟ್ಟಿದ್ದಾರೆ.
ಡೊಳ್ಳು ಕುಣಿತ ತಂಡ ಮುಖ್ಯದ್ವಾರದ ಮೂಲಕ ಬಿಗ್‌ಬಾಸ್ ಮನೆ ಪ್ರವೇಶಿಸಿದೆ. ಸ್ಪರ್ಧಿಗಳೆಲ್ಲಾ ಡೊಳ್ಳು ಕುಣಿತದ ತಾಳಕ್ಕೆ ಹೆಜ್ಜೆ ಹಾಕಲು ಪ್ರಾರಂಭಿಸುತ್ತಿದ್ದಂತೆ ಶಾಸಕ ಪ್ರದೀಪ್ ಈಶ್ವರ್ ಸರ್‌ಪ್ರೈಸ್ ಎಂಟ್ರಿ ಕೊಟ್ಟಿದ್ದಾರೆ. "ನಾನು ಆಕ್ಚ್ಯುಲಿ ನಿನ್ನೆ ಬರಬೇಕಿತ್ತು. ನನಗೂ ಬಹಳ ಖುಷಿಯಾಗುತ್ತಿದೆ ಕಂಟೆಸ್ಟಂಟ್ ಆಗಿ ಜಾಯ್ನ್ ಆಗುತ್ತಿರುವುದಕ್ಕೆ ಎಂದು ಪ್ರದೀಪ್ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ.
ಶಾಸಕರು ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿ ಇರುತ್ತಾರಾ? ಇಲ್ವಾ? ಎನ್ನುವ ಗೊಂದಲ ಉಳಿದ ಸ್ಪರ್ಧಿಗಳಲ್ಲಿದೆ. "ನಾವು ಬೆಂಗಳೂರಿಗೆ ಬಂದಿರೋದು ಸೋಲೋಕೆ ಕಾಂಪಿಟೇಟರ್ ಗೆಲ್ಲೋಕೆ" ಎನ್ನುವ ಡೈಲಾಗ್ ಪ್ರದೀಪ್ ಈಶ್ವರ್ ಮಾತು ಕುತೂಹಲ ಮೂಡಿಸಿದೆ. ಪ್ರದೀಪ್ ಈಶ್ವರ್ ಅತಿಥಿಯಾಗಿ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದಾರೆ ಎಂದು ವೀಕ್ಷಕರು ಅಂದಾಜಿಸುತ್ತಿದ್ದಾರೆ. ಒಂದು ಅಥವಾ ಎರಡು ದಿನ ಮಾತ್ರ ಮನೆಯಲ್ಲಿ ಇರುತ್ತಾರೆ ಎನ್ನುವ ಚರ್ಚೆ ನಡೀತಿದೆ.


Click it and Unblock the Notifications











