BBK10: "ಸಂಗೀತಾಳದ್ದು ತಪ್ಪು ಅಂದ್ರಿ.. ಈಗೇನಾಗ್ತಿದೆ?"..ಬೆನ್ನ ಹಿಂದೆ ಮಾತಾಡಿದಕ್ಕೆ ಕಾರ್ತಿಕ್‌ಗೆ ನೆಟ್ಟಿಗರಿಂದ ಕ್ಲಾಸ್!
ಬಿಗ್ ಬಾಸ್ ಮನೆಯಲ್ಲಿ ದಿನಕಳೆದಂತೆ ಮನೆಯವರ ನಡವಳಿಕೆಯೇ ಬದಲಾಗುತ್ತಾ ಹೋಗುತ್ತದೆ. ಆರಂಭದಲ್ಲಿದ್ದ ಅಭಿಪ್ರಾಯಗಳು ನಂತರದಲ್ಲಿ ಬದಲಾಗುವುದು ಸಹಜ. ಈಗ ಸಂಗೀತಾ ಹಾಗೂ ಕಾರ್ತಿಕ್ ವಿಚಾರದಲ್ಲೂ ಅದೇ ರೀತಿ ಆಗಿದೆ. ಕೊನೆವರೆಗೂ ಇವರ ಬಾಂಧವ್ಯ ಕಡಿಮೆಯಾಗುವುದಕ್ಕೆ ಸಾಧ್ಯವೇ ಇಲ್ಲ ಎಂದುಕೊಂಡಿದ್ದ ಅಭಿಪ್ರಾಯವೇ ಬದಲಾಗಿ ಹೋಗಿದೆ.
ಬಿಗ್ ಬಾಸ್‌ನಲ್ಲಿ ಈ ಬಾರಿ ಸಮರ್ಥರು ಹಾಗೂ ಅಸಮರ್ಥರು ಎಂಬ ತಂಡವಾಗಿ ಒಳಗೆ ಬಂದಿದ್ದರು. ಸಮರ್ಥರೆಲ್ಲಾ ಒಂದಾಗಿದ್ದರೆ, ಅಸಮರ್ಥರು ಯಾವಾಗಲೂ, ಎಲ್ಲದಕ್ಕೂ ಜೊತೆಯಾಗಿಯೇ ಇದ್ದರು. ಯಾವುದರಲ್ಲೂ ಬಿಟ್ಟು ಕೊಡದಂತೆ ನಡೆದುಕೊಂಡರು. ಇದೀಗ ಆ ಟೀಂ ಬೇರೆ ಬೇರೆಯಾಗಿದೆ.

ಸಂಗೀತಾ ಮೇಲೆ ಮೈಕೆಲ್ ಬೇಸರ
ಹೂಗಳನ್ನು ಉಳಿಸಿಕೊಳ್ಳುವ ಆಟವನ್ನು ಬಿಗ್ ಬಾಸ್ ನೀಡಿತ್ತು. ಈ ಆಟದಲ್ಲಿ ದೊಡ್ಡ ಯುದ್ಧವೇ ನಡೆದು ಹೋಗಿದೆ. ಆಟದ ಹೆಸರಲ್ಲಿ ಮನುಷ್ಯತ್ವವನ್ನೇ ಮರೆಯುತ್ತಿದ್ದಾರೆ. ಹೂಗಳನ್ನು ಉಳಿಸಿಕೊಳ್ಳುವ ಆಟದಲ್ಲಿ ತುಕಾಲಿ ಸಂತೋಷ್‌ಗೆ ಹೆಚ್ಚು ಪೆಟ್ಟಾಗಿದೆ. ಈ ವಿಚಾರಕ್ಕೆ ಸಂಗೀತಾ ಬಗ್ಗೆ ಮೈಕೆಲ್ ಬೇಸರ ಮಾಡಿಕೊಂಡಿದ್ದಾರೆ. ಮಾನವೀಯತೆಯೇ ಇಲ್ಲದಂತೆ, ಬರೀ ಆಟವನ್ನಷ್ಟೇ ಆಡಿದ್ದಾರೆ. ಅವರಿಗೆ ಕೈ ಪೆಟ್ಟಾಗಿದ್ದರೂ ಸಂಗೀತಾ ಹೂಗಳನ್ನು ತೆಗೆದುಕೊಂಡಿದ್ದಾರೆ ಎಂದು ಮೈಕೆಲ್ ವಾದಿಸಿದ್ದಾರೆ. ಆದರೆ, ಸಂಗೀತಾ ಅದನ್ನು ಕೇಳುವುದಕ್ಕೆ ಸಿದ್ಧ ಇರಲಿಲ್ಲ. ಬಳಿಕ ಮೈಕೆಲ್ ಕೂಡ ಅದನ್ನು ವಾದ ಮಾಡಿ ಸುಮ್ಮನೆ ಆಗಿದ್ದಾರೆ.
ಮೈಕೆಲ್ ಮಾತಿಗೆ ಮಾತು ಜೋಡಿಸಿದ ಕಾರ್ತಿಕ್
ಸಂಗೀತಾ ಬಗೆಗಿನ ಬೇಸರ ಮೈಕೆಲ್‌ಗೆ ಮುಂದುವರೆದಿದೆ. ಊಟ ಮುಗಿದ ಮೇಲೂ ಸಂಗೀತಾ ಬಗ್ಗೆ ಮಾತನಾಡಿದ್ದಾರೆ. ಮನೆಯಲ್ಲಿ ಜೋರು ಧ್ವನಿಯಲ್ಲಿ ಮಾತನಾಡುವುದೇ ಬಂತು. ಆದರೆ, ಜೋರು ಧ್ವನಿ ಬಿಟ್ಟರೆ ಸೆನ್ಸಿಬಲ್ ವಾಯ್ಸ್ ಅಲ್ವೇ ಅಲ್ಲ. ಒಂದು ವೇಳೆ ಈ ವಾರದ ಸೆನ್ಸಿಬಲ್ ವಾಯ್ಸ್ ಯಾರು ಎಂಬ ವೋಟ್ ಇಟ್ಟರೆ ಕಡೆಯಲ್ಲಿ ಬರುತ್ತಾಳೆ ಎಂದಿದ್ದಾರೆ. ಇದಕ್ಕೆ ಕಾರ್ತಿಕ್ ಕೂಡ ಮಾತು ಜೋಡಿಸಿದ್ದಾರೆ.
ಸಂಗೀತಾ ಇಲ್ಲದಾಗ ಕಾರ್ತಿಕ್ ಹೇಳಿದ್ದೇನು?
ಕಾರ್ತಿಕ್ ಮತ್ತು ಸಂಗೀತಾ ದೂರ ದೂರ ಆಗಿರಬಹುದು. ಆದರೆ, ಅವರಿಬ್ಬರು ಮತ್ತೆ ಒಂದಾಗಬಹುದು ಎಂಬ ಅಭಿಪ್ರಾಯ ಹಲವರಲ್ಲಿ ಇನ್ನು ಉಳಿದಿದೆ. ಒಂದಾಗಲಿ ಎಂದೇ ಬಯಸುತ್ತಿದ್ದಾರೆ. ಅದರಂತೆ ಇತ್ತೀಚೆಗಷ್ಟೇ ಸಂಗೀತಾ ಕಣ್ಣೀರು ಹಾಕುತ್ತಿದ್ದಾಗ ಸಂಗೀತಾರನ್ನು ಸಮಾಧಾನ ಮಾಡುವ ಪ್ರಯತ್ನವನ್ನು ಕಾರ್ತಿಕ್ ಮಾಡಿದ್ದರು. ಆದರೆ, ಈಗ ಮೈಕೆಲ್ ಜೊತೆಗೆ ಸೇರಿಕೊಂಡು ಸಂಗೀತಾ ಬಗ್ಗೆ ಮಾತನಾಡುತ್ತಿದ್ದಾರೆ. "ಬರ್ತಾ ಬರ್ತಾ ದೃಷ್ಟಿಕೋನಗಳು ಬದಲಾಗುತ್ತಾ ಇದೆ" ಅಂತ ಹೇಳಿದ್ದಾರೆ. ಬಳಿಕ ಸಂಗೀತಾ ಬಗ್ಗೆ ಮೈಕೆಲ್ ನೆಗೆಟಿವ್ ಆಗಿ ಮಾತನಾಡಿದಾಗಲೂ ಅದನ್ನು ನಿಲ್ಲಿಸುವ ಪ್ರಯತ್ನ ಮಾಡಲಿಲ್ಲ. ಮೈಕೆಲ್ ಜೊತೆಗೇನೆ ಮಾತು ಜೋಡಿಸಿ, ವ್ಯಂಗ್ಯವಾಗಿ ನಕ್ಕಿದ್ದಾರೆ.

ಕಾರ್ತಿಕ್ ನಡವಳಿಕೆಗೆ ನೆಟ್ಟಿಗರ ಬೇಸರ
ಕಾರ್ತಿಕ್ ನಡವಳಿಕೆಗೆ ಸೋಷಿಯಲ್‌ಮೀಡಿಯಾದಲ್ಲಿ ವಿರೋಧ ವ್ಯಕ್ತವಾಗಿದೆ. ಕಾರ್ತಿಕ್‌ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. "ಸಂಗೀತಾ ಬಗ್ಗೆ ಹಿಂದೆ ಮಾತನಾಡುತ್ತಿದ್ದೀಯಾಲ್ವಾ ಇದೇನಾ ಫ್ರೆಂಡ್‌ಶಿಪ್", "ಇಂತಹ ನಡವಳಿಯಿಂದಾನೇ ಸಂಗೀತಾ, ಕಾರ್ತಿಕ್‌ನಿಂದ ದೂರ ಆಗಿರುವುದು", "ಸಂಗೀತಾ ಮಾತ್ರ ಹಿಂದೆ ಮಾತನಾಡಿದ್ದಕ್ಕೆ ಕೆಟ್ಟವರು. ಈಗ ಇವರು ಮಾಡುತ್ತಿರುವುದು ಏನು?"' ಎಂಬೆಲ್ಲಾ ಕಮೆಂಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿವೆ. ಅಷ್ಟೇ ಅಲ್ಲ ಒಂದಷ್ಟು ಜನ ಕಾರ್ತಿಕ್‌ಗೆ ಬುದ್ದಿವಾದ ಹೇಳಿದ್ದಾರೆ. ಈ ರೀತಿ ನಡೆದುಕೊಂಡಿದ್ದು ತಪ್ಪು ಎಂದಿದ್ದಾರೆ.


Click it and Unblock the Notifications











