BBK10: ಮದುವೆ ಆಲೋಚನೆ ಇಲ್ಲ ಎನ್ನುತ್ತಲೇ ಬಿಗ್‌ಬಾಸ್ ಮನೆಗೆ ನಟಿ ಸಿರಿಜಾ ಎಂಟ್ರಿ
'ಅವಳ ಒಲವ ನಗೆ' ಹಾಡಿಗೆ ಹೆಜ್ಜೆ ಹಾಕುತ್ತಾ ನಟಿ ಸಿರಿಜಾ ಬಿಗ್‌ಬಾಸ್ ಗ್ರ್ಯಾಂಡ್ ಪ್ರೀಮಿಯರ್ ವೇದಿಕೆಗೆ ಬಂದರು. ದಶಕಗಳಿಂದ ಕನ್ನಡ ಹಾಗೂ ತೆಲುಗು ಕಿರುತೆರೆಯಲ್ಲಿ ಆಕೆ ಗುರ್ತಿಸಿಕೊಂಡಿದ್ದಾರೆ. ಸುದೀಪ್ ನಟನೆಯ 'ಚಂದು' ಚಿತ್ರದಲ್ಲಿ ಕೂಡ ಸಿರಿಜಾ ನಟಿಸಿದ್ದರು.
ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ಸಿರಿಜಾ 9ನೇ ತರಗತಿಯಲ್ಲಿ ಇದ್ದಾಗಲೇ 'ಅಂಬಿಕಾ' ಧಾರಾವಾಹಿಯಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದರು. 2001ರಲ್ಲಿ ತೆಲುಗಿನ 'ನಿನ್ನು ಚೂಡಾಲನಿ' ಚಿತ್ರದಲ್ಲಿ ಜ್ಯೂ. ಎನ್‌ಟಿಆರ್ ಜೊತೆ ಕಾಣಿಸಿಕೊಂಡಿದ್ದರು. 'ರಂಗೋಲಿ' ಧಾರಾವಾಹಿ ದೊಡ್ಡಮಟ್ಟದಲ್ಲಿ ಹೆಸರು ತಂದು ಕೊಟ್ಟಿತು.

'ಸಿಂಹಾದ್ರಿಯ ಸಿಂಹ' ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಸಿರಿಜಾ ನಟಿಸಿದ್ದು ಇನ್ನು ಮದುವೆ ಆಗಿಲ್ಲ ಎಂದು ವೇದಿಕೆಯಲ್ಲಿ ಹೇಳಿದ್ದಾರೆ. ಮದುವೆಯ ಬಗ್ಗೆ ಆಸಕ್ತಿ ಇಲ್ಲ ಎನ್ನುವಂತೆ ಮಾತನಾಡಿದ್ದಾರೆ. ಕನ್ನಡದಲ್ಲಿ ದಶಕಗಳ ಹಿಂದೆ ಮೆಗಾ ಧಾರಾವಾಹಿಗಳ ಟ್ರೆಂಡ್ ಶುರುವಾಗಿತ್ತು. ಅಂತಹ ಸಮಯದಲ್ಲಿ ಸಿರಿಜಾ ಸಾಕಷ್ಟು ಧಾರಾವಾಹಿಗಳಲ್ಲಿ ಮಿಂಚಿದ್ದರು.
'ಅಂಬಿಕಾ', 'ಗೀತಾಂಜಲಿ', 'ಜೋಡಿಹಕ್ಕಿ', 'ಅಂಜಲಿ', 'ನನ್ನವಳು ನನ್ನವಳು', 'ಮನೆಯೊಂದು ಮೂರು ಬಾಗಿಲು', 'ಬಂದೇ ಬರತಾವ ಕಾಲ', 'ರಂಗೋಲಿ', 'ಸಂಬಂಧ', 'ಕೋಗಿಲೆ , 'ಈ ಬಂಧನ', 'ಬದುಕು' ಸೇರಿದಂತೆ ಹಲವು ಹಿಟ್ ಧಾರಾವಾಹಿಗಳಲ್ಲಿ ಸಿರಿ ನಟಿಸಿದ್ದರು. ಇತ್ತೀಚೆಗೆ 'ರಾಮಾಚಾರಿ' ಧಾರಾವಾಹಿಯಲ್ಲಿ ನಟಿಸುತ್ತಿದ್ದರು.
25ಕ್ಕೂ ಅಧಿಕ ಧಾರಾವಾಹಿಗಳಲ್ಲಿ ಸಿರಿ ಮಿಂಚಿದ್ದಾರೆ. ಕನ್ನಡ ಮಾತ್ರವಲ್ಲದೇ ಪರಭಾಷೆ ಧಾರಾವಾಹಿ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ. ಕೆಲ ವರ್ಷಗಳ ಹಿಂದೆ ಏಕಕಾಲಕ್ಕೆ 3-4 ಧಾರಾವಾಹಿಗಳಲ್ಲಿ ನಟಿಸುತ್ತಿದ್ದರು. ಆದರೆ ಕೋವಿಡ್ ಸಮಯದಲ್ಲಿ ಕೊಂಚ ಸೈಲೆಂಟ್ ಆಗಿದ್ದರು. 'ಮದುಮಗಳು' ಧಾರಾವಾಹಿ ಮೂಲಕ ವಾಪಸ್ ಆಗಿದ್ದರು.
83% ವೋಟ್ ಪಡೆದು ಸಿರಿಜಾ ಸುಲಭವಾಗಿ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟರು. ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿ ಗೆದ್ದಿರುವ ನಟಿ ಇದೀಗ ರಿಯಾಲಿಟಿ ಶೋನಲ್ಲಿ ಗೆದ್ದು ಬೀಗುತ್ತಾರಾ ಕಾದು ನೋಡಬೇಕಿದೆ.


Click it and Unblock the Notifications










