BBK10: ಸಂಗೀತಾ ಅಭಿಪ್ರಾಯದಲ್ಲಿ ಫ್ರೆಂಡ್ ಅಂದ್ರೆ ಯಾರು..? ಕಿಡಿಕಾರಿದ್ದೇಕೆ ವಿನಯ್..?
ಸಂಗೀತಾ ಹಾಗೂ ಕಾರ್ತಿಕ್ ನಡುವೆ ಆಗಾಗ ಒಂದಷ್ಟು ಕಿರಿಕಿರಿ ಆಗುತ್ತಲೇ ಇರುತ್ತದೆ. ಟಾಸ್ಕ್ ವಿಚಾರ ಬಂದಾಗಲೋ, ನಾಮಿನೇಷನ್‌ನಿಂದ ಸೇವ್ ಮಾಡುವುದಕ್ಕೆ ಸಮಯ ಬಂದಾಗಲೋ ಇಬ್ಬರ ನಡುವೆ ಕಿತ್ತಾಟ ನಡೆಯುತ್ತಿತ್ತು. ನಾನು ನಿನ್ನ ಫ್ರೆಂಡ್. ಹೀಗಾಗಿ ಮೊದಲು ತನ್ನನ್ನೇ ಲೆಕ್ಕದಲ್ಲಿ ಇಟ್ಟುಕೊಳ್ಳಬೇಕಿತ್ತು. ಆದರೆ, ನೀನು ತಪ್ಪು ಮಾಡಿದೆ ಎಂಬ ಅರ್ಥದಲ್ಲಿಯೇ ಸಂಗೀತಾ ವಾದ ಮಾಡುತ್ತಿದ್ದರು.
ಕಳೆದ ವಾರವೆಲ್ಲಾ ಇದೇ ರೀತಿಯ ಯೋಚನೆಯಿಂದಾಗಿಯೇ ಸಂಗೀತಾ ತಂಡವನ್ನೇ ಬದಲಾಯಿಸಿದ್ದರು. ಕಾರ್ತಿಕ್ ತಂಡದಲ್ಲಿ ನೆಮ್ಮದಿಯಾಗಿದ್ದ ಸಂಗೀತಾ, ಇದ್ದಕ್ಕಿದ್ದ ಹಾಗೇ ವಿನಯ್ ತಂಡಕ್ಕೆ ಬಂದು ಬೇರೆ ರೀತಿಯಾಗಿಯೇ ಬದಲಾವಣೆಯಾಗಿದ್ದರು. ಕಿಚ್ಚ ಸುದೀಪ್ ವೇದಿಕೆ ಮೇಲೆ ಇದರ ಪ್ರಶ್ನೆ ಮಾಡಿದಾಗ, ವಿನಯ್ ಟೀಂ ಬೆಸ್ಟ್ ಅಂತ ಕೂಡ ಹೇಳಿದ್ದರು. ಆದರೆ ಒಂದೇ ವಾರಕ್ಕೆ ಮತ್ತೆ ಬದಲಾವಣೆಯಾಗಿದೆ.

ಹೊಸ ಟಾಸ್ಕ್ ನೀಡಿದ ಕಿಚ್ಚ ಸುದೀಪ್
ಬಿಗ್ ಬಾಸ್ ಮನೆಯಲ್ಲೂ ಆಗಾಗ ಟಾಸ್ಕ್‌ಗಳನ್ನು ನೀಡುತ್ತಾ ಇರುತ್ತಾರೆ. ಸಾಕಷ್ಟು ಬಾರಿ ಮನೆಯವರ ಮನ:ಸ್ಥಿತಿಯನ್ನು ತಿಳಿಯುವಂತ ಟಾಸ್ಕ್‌ಗಳನ್ನೇ ನೀಡಲಾಗುತ್ತದೆ. ಪದೇ ಪದೇ ಈ ರೀತಿಯಾದಂತ ಟಾಸ್ಕ್‌ಗಳನ್ನು ನೀಡುವುದರಿಂದ ಸಾಕಷ್ಟು ಬಾರಿ ಒಮ್ಮೆ ನೀಡಿದ ಅಭಿಪ್ರಾಯ ಮತ್ತೊಮ್ಮೆ ಬದಲಾವಣೆಯಾಗುತ್ತಿದೆ. ಈಗ ಕಿಚ್ಚನ ಪಂಚಾಯ್ತಿಯಲ್ಲೂ ಅಂಥದ್ದೇ ಹೊಸದೊಂದು ಟಾಸ್ಕ್ ನೀಡಲಾಗಿದೆ. ಜ್ಯೂಸ್ ನೀಡುವ ಮೂಲಕ ಅಭಿಪ್ರಾಯಗಳ ಹಂಚಿಕೆಯ ಟಾಸ್ಕ್ ಇದಾಗಿದೆ.
ವಿನಯ್ ಬಗ್ಗೆ ಸಂಗೀತಾ ಬೇಸರ
ಹೊಟ್ಟೆ ಕಿಚ್ಚು ನಿವಾರಣೆ, ದುರಹಂಕಾರ ನಿವಾರಣೆ, ಹೇಡಿತನ ನಿವಾರಣೆಯ ಬೋರ್ಡ್ ಇಟ್ಟು, ಅದರ ಮುಂದೆ ಜ್ಯೂಸ್‌ಗಳನ್ನು ಇಡಲಾಗಿದೆ. ಆ ಸಾಲುಗಳು ಯಾರಿಗೆ ಮ್ಯಾಚ್ ಆಗುತ್ತವೋ ಅವರಿಗೆ ಅದರ ಮುಂದಿನ ಜ್ಯೂಸ್ ನೀಡಬೇಕಾಗುತ್ತದೆ. ಅದರಂತೆ ಮನೆ ಮಂದಿಯೆಲ್ಲಾ ಜ್ಯೂಸ್ ನೀಡಿದ್ದರು. ಅದರಲ್ಲಿ ಸಂಗೀತಾ, ನಾಲಿಗೆಗೆ ಲಗಾಮು ಜ್ಯೂಸನ್ನು ವಿನಯ್‌ಗೆ ಕೊಟ್ಟಿದ್ದಾರೆ. ಈ ವೇಳೆ, "ಯಾರ ಬಗ್ಗೆ ಕೆಟ್ಟದ್ದು ಮಾತನಾಡುತ್ತಾರೋ ಇಲ್ಲಿ ಕುಳಿತು ಅವರ ಜೊತೆಗೆ ಮಾತನಾಡುತ್ತಾರೆ, ನಗುತ್ತಾರೆ" ಎಂದು ಆರೋಪ ಮಾಡಿದ್ದಾರೆ.
ಸಂಗೀತಾ ಬಗ್ಗೆ ಕೋಪಗೊಂಡ ವಿನಯ್
ಈ ಮಾತು ಕೇಳಿಸಿಕೊಂಡ ವಿನಯ್ ಕೋಪಗೊಂಡಿದ್ದಾರೆ. ಸಂಗೀತಾ ಮಾತಿಗೆ ಬೇಸರ ವ್ಯಕ್ತಪಡಿಸಿದ್ದಾರೆ. "ಇವರಿಗೆ ಫ್ರೆಂಡ್ ಆಗಿದ್ದರೆ ಶರಣಾಗಿ ಬಿಡಬೇಕು. ಏನೇ ತಪ್ಪು ಮಾಡಿದರೂ ನೀವೇ ರೈಟ್. ನಾನು ನಿನ್ನ ಫ್ರೆಂಡ್ ಆಗಿದ್ದಾಗ ನೀನು ನನ್ನ ಸರ್ವ್ ಮಾಡಬೇಕು ಅನ್ನೋದು ಅದು ಫ್ರೆಂಡ್‌ಶಿಪ್ ಅಲ್ಲ. ಅದು ಅಹಂಕಾರ ಅಂತಾರೆ ಸರ್" ಎಂದು ವಿನಯ್ ತಮ್ಮ ಅಭಿಪ್ರಾಯ ಹೇಳಿದಾಗ, ಸಂಗೀತಾ ಕೂಡ ಮತ್ತೆ ರೊಚ್ಚಿಗೆದ್ದಿದ್ದಾರೆ. ಎಲುಬಿಲ್ಲದ ನಾಲಿಗೆ ಅದಕ್ಕೆ ತಕ್ಕ ಹಾಗೆ ಇರುತ್ತಾರೆ ಸರ್ ಎಂದಿದ್ದಾರೆ.

ಸಂಗೀತಾ ನಿರೀಕ್ಷೆಗಳೇ ಬದಲಾವಣೆಗೆ ಕಾರಣ?
ವಿನಯ್ ಇವತ್ತು ಹೇಳಿದ ಮಾತುಗಳೇ ಸಂಗೀತಾ ಮತ್ತು ಕಾರ್ತಿಕ್ ನಡುವೆ ಆಗಾಗ ಸಣ್ಣ ಸಣ್ಣ ಜಗಳಕ್ಕೆ ಕಾರಣವಾಗುತ್ತಿತ್ತು. ನೀನೇಕೆ ನನ್ನ ಸೇವ್ ಮಾಡಲಿಲ್ಲ ಎಂಬ ವಿಚಾರಗಳು ಮನ:ಸ್ತಾಪಕ್ಕೆ ಎಡೆಮಾಡಿಕೊಟ್ಟಿವೆ. ಈಗ ವಿನಯ್ ಬಳಿಯೂ ಸಂಗೀತಾ ಮನಸ್ತಾಪ ಮಾಡಿಕೊಂಡಿದ್ದಾರೆ. ಅದಕ್ಕೂ ಕಾರಣ ಏನು ಎಂಬುದು ಇನ್ನು ಅಷ್ಟಾಗಿ ತಿಳಿದಿಲ್ಲ. ಆದರೆ ಕಾರ್ತಿಕ್ ಜೊತೆಗೆ ಬಾಂಧವ್ಯ ಸರಿ ಹೋದ ಮೇಲೆ ವಿನಯ್ ಜೊತೆಗೆ ಸಂಗೀತಾ ಮತ್ತೆ ಜಗಳ ಆಡಿಕೊಂಡಿದ್ದಾರೆ. ಇದನ್ನೆಲ್ಲಾ ನೋಡಿದವರು ಸಂಗೀತಾ ಹೆಚ್ಚಿನ ನಿರೀಕ್ಷೆ ಮಾಡುತ್ತಿರುವುದೇ ಇಂತಹ ಮನ:ಸ್ತಾಪಗಳಿಗೆ ಕಾರಣವಾಗುತ್ತಿದೆ ಎನ್ನುತ್ತಿದ್ದಾರೆ.


Click it and Unblock the Notifications











