BBK 12: ₹25 ಲಕ್ಷದ ಬಟ್ಟೆ ತೊಟ್ಟು ಬಂದ ಸತೀಶ್; ವರ್ಕ್ ಆಗಲಿಲ್ಲ ಗಿಲ್ಲಿ ನಟ ಪ್ರಾಪರ್ಟಿ ಕಾಮಿಡಿ
ಬಿಗ್‌ಬಾಸ್ ಕನ್ನಡ ಸೀಸನ್ 12 ಶುರುವಾಗಿದೆ. ಈಗಾಗಲೇ ಒಬ್ಬೊಬ್ಬರಾಗಿ ಸ್ಪರ್ಧಿಗಳು ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಈ ಸಲ ಯಾರೆಲ್ಲಾ ದೊಡ್ಮನೆ ಆಟಕ್ಕೆ ಹೋಗುತ್ತಾರೆ ಎನ್ನುವುದು ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಿತ್ತು. ಅದರಲ್ಲಿ ಬಹುತೇಕ ಒಳಗೆ ಹೋಗುತ್ತಿದ್ದಾರೆ.
ಕಾಕ್ರೋಚ್ ಸುಧಿ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಬಳಿಕ 2ನೇ ಸ್ಪರ್ಧಿಯಾಗಿ ನಟಿ ಕಾವ್ಯ ಶೈವ, 3ನೇಯವರಾಗಿ ಸತೀಶ್ ಹಾಗೂ 4ನೇ ಸ್ಪರ್ಧಿಯಾಗಿ ಗಿಲ್ಲಿ ನಟ ದೊಡ್ಮನೆ ಪ್ರವೇಶಿಸಿದ್ದಾರೆ. ಕಿಚ್ಚ ಸುದೀಪ್ ತಮ್ಮದೇ ಶೈಲಿಯಲ್ಲಿ ಮಾತಲ್ಲೇ ಸ್ಪರ್ಧಿಗಳ ಕಾಲೆಳೆಯುತ್ತಾ ಚಮಕ್ ಕೊಡುತ್ತಿದ್ದಾರೆ. ಇನ್ನು ಒಂಟಿ, ಜಂಟಿ ಟ್ವಿಸ್ಟ್ ಕೂಡ ವೇದಿಕೆಯಲ್ಲಿ ಶುರುವಾಗಿದೆ.

ಇತ್ತೀಚೆಗೆ ಬಂದಿದ್ದ 'ಕೊತ್ತಲವಾಡಿ' ಸಿನಿಮಾದಲ್ಲಿ ಕಾವ್ಯಾ ಶೈವ ನಾಯಕಿಯಾಗಿ ನಟಿಸಿದ್ದರು. ಡಾಗ್ ಬ್ರೀಡರ್ ಸತೀಶ್ ಈ ಬಾರಿ ಬಿಗ್ ಬಾಸ್ ಮನೆಗೆ ಅಚ್ಚರಿಯ ಎಂಟ್ರಿ ಎನ್ನಬಹುದು. ಬಹಳ ದಿನಗಳಿಂದ ನನಗೆ ಬಿಗ್‌ಬಾಸ್ ಮನೆಗೆ ಹೋಗುವ ಆಸೆ ಇತ್ತು ಎಂದು ಅವರು ಹೇಳಿದ್ದಾರೆ. ತಮ್ಮ ಬಳಿ ಇರುವ ದುಬಾರಿ ಶ್ವಾನಗಳ ಬಗ್ಗೆ ಸತೀಶ್ ಮಾತನಾಡಿದ್ದು ಸ್ವತಃ ಸುದೀಪ್ ಕೂಡ ಶಾಕ್ ಆಗಿದ್ದರು.
"ನಿಮ್ಮದು ಫ್ರಾಡ್ ಬಿನ್ನೆಸ್ಸಾ?" ಎಂದು ಸುದೀಪ್ ನೇರವಾಗಿ ಸತೀಶ್ ಕಾಲೆಳೆದಿದ್ದಾರೆ. "ಕೆಲ ಕಾರಣಗಳಿಂದ ನಾನು ಪತ್ನಿಯಿಂದ ದೂರ ಇದ್ದೇನೆ, ಮಗನಿಗಾಗಿ ಮತ್ತೆ ಮದುವೆ ಆಗಿಲ್ಲ" ಎಂದು ಸತೀಶ್ ಹೇಳಿದ್ದಾರೆ. ಇಲ್ಲಿಗೆ ಬರೋಕ್ಕೆ 25 ಲಕ್ಷ ರೂ. ಬಟ್ಟೆ ಖರೀದಿಸಿದ್ದೀನಿ, ಒಂದು ದಿನಕ್ಕೆ ಸಿಗುವ 65 ಲಕ್ಷ ರೂ. ಬಿಟ್ಟು ಇಲ್ಲಿಗೆ ಬಂದಿದ್ದೀನಿ ಎಂದು ಹೇಳಿದ್ದಾರೆ.
ಮಂಡ್ಯ ಹೈದ ಗಿಲ್ಲಿ ನಟ ವಿಟಿಯಲ್ಲಿ ತಮ್ಮ ಜರ್ನಿಯನ್ನು ಬಿಚ್ಚಿಟ್ಟಿದ್ದಾರೆ. ಒಮ್ಮೆ ಯೋಗರಾಜ್ ಭಟ್ ಅವರನ್ನು ಭೇಟಿ ಮಾಡಲು ಹೋದಾಗ ಕಾಮಿಡಿ ಶೋನಲ್ಲಿ ಭಾಗವಹಿಸುವಂತೆ ಹೇಳಿದ್ದರು. ನಾನು ಬೇಡ ಎಂದೆ. ಇಲ್ಲ ನಾವೆಲ್ಲಾ ಇರ್ತೀವಿ ಬಾ ಎಂದು ಕರೆದರು. ಹಾಗೆ ಒಂದು ಶೋ ಬಳಿಕ ಬೇರೆ ಬೇರೆ ಶೋಗಳ ಅವಕಾಶ ಸಿಕ್ಕಿತು. ಪ್ರಾಪರ್ಟಿ ಕಾಮಿಡಿ ಮೂಲಕ ರಂಜಿಸುವ ಪ್ರಯತ್ನ ಮಾಡಿದೆ ಎಂದಿದ್ದಾರೆ.
ಲುಂಗು ಉಟ್ಟು ಗಿಲ್ಲಿ ನಟ ವೇದಿಕೆ ಏರಿದ್ದರು. "ಕಳೆದ ಬಾರಿ ಹನುಮಂತ ಕೂಡ ಹೀಗೆ ಬಂದ್ರು ಗೆದ್ರು. ಇದೆಲ್ಲ ವರ್ಕ್ ಆಗುತ್ತೆ" ಎಂದು ಕಿಚ್ಚ ವೇದಿಕೆಯಲ್ಲೇ ಕಿಚಾಯಿಸಿದರು. ಸುದೀಪ್ ಎದುರು ಗಿಲ್ಲಿ ನಟ ತಮ್ಮ ಪ್ರಾಪರ್ಟಿ ಕಾಮಿಡಿ ಜೋಕ್ ಹೇಳಿ ನಗಿಸುವ ಪ್ರಯತ್ನ ಮಾಡಿದ್ರು, ಆದರೆ ತಬ್ಬಿಬ್ಬಾಗಿಬಿಟ್ಟರು.
5ನೇ ಸ್ಪರ್ಧಿಯಾಗಿ ನಿರೂಪಕಿ- ನಟಿ ಜಾಹ್ನವಿ, 6ನೇ ಸ್ಪರ್ಧಿಯಾಗಿ ಕಿರುತೆರೆ ನಟ ಧನುಷ್, 7ನೇ ಸ್ಪರ್ಧಿಯಾಗಿ ಹಾಸ್ಯನಟ ಚಂದ್ರಪ್ರಭ, 8ನೇ ಸ್ಪರ್ಧಿಯಾಗಿ ಕಿರುತೆರೆ ನಟಿ ಮಂಜುಭಾಷಿಣಿ, 9ನೇ ಸ್ಪರ್ಧಿಯಾಗಿ ನಟಿ ರಾಶಿಕಾ ಶೆಟ್ಟಿ ದೊಡ್ಮನೆ ಒಳಗೆ ಹೋಗಿದ್ದಾರೆ.


Click it and Unblock the Notifications











