BBK9: 'ಬಾಯಲ್ಲೂ ಫ್ರೀಜರ್ ಇದೆ': ದಿವ್ಯಾ ಉರುಡುಗ ಮಾತು ಕೇಳಿ ದಂಗಾದ ಕಿಚ್ಚ!
ಬಿಗ್ ಬಾಸ್ ವಾರಪೂರ್ತಿ ಒಂಥರ ಮನರಂಜನೆಯಾದರೆ ವಾರಾಂತ್ಯದ ಮನರಂಜನೆ ಇನ್ನು ವಿಭಿನ್ನವಾಗಿರುತ್ತದೆ. ಅಲ್ಲಿ ಸರಿ ತಪ್ಪುಗಳ ಚರ್ಚೆಯೂ ಇರಲಿದೆ, ತಪ್ಪುಗಳಿಗೆ ಸಲಹೆಯೂ ಇರಲಿದೆ. ನಕ್ಕು ನಗಿಸುವವರ ನಡುವೆ, ಎಡವಿದವರ ಕ್ಷಮೆಯಾಚನೆಯೂ ಇರಲಿದೆ. ಅದು ಕಿಚ್ಚನ ವಾರದ ಕಥೆಯ ಗಮ್ಮತ್ತು.
ಕಳೆದ ವಾರ ಕಿಚ್ಚ ಸುದೀಪ್ ಆಸ್ಟ್ರೇಲಿಯಾ ಟೂರ್‌ನಲ್ಲಿದ್ದ ಕಾರಣ ವಾರದ ಕಥೆಯಲ್ಲಿ ಕಿಚ್ಚನ ಬುದ್ದಿ ಮಾತನ್ನು ದೊಡ್ಮನೆ ಮಂದಿ ಮಿಸ್ ಮಾಡಿಕೊಂಡಿದ್ದರು. ಆದರೆ ಈ ವಾರ ಹಾಗೆಲ್ಲ ಆಗಿಲ್ಲ. ಸುದೀಪ್ ಮುಂದೆಯೇ ನಿಂತು ಎಲ್ಲವನ್ನು ಹೇಳಿದ್ದಾರೆ, ಎಲ್ಲದನ್ನು ತಿಳಿಸಿದ್ದಾರೆ, ನಕ್ಕಿದ್ದಾರೆ, ನಗಿಸಿದ್ದಾರೆ. ಆದರೆ ದಿವ್ಯಾ ಉರುಡುಗ ಮಾತಿಗೆ ಕಿಚ್ಚ ಸುದೀಪ್ ಬೆಚ್ಚಿ ಬಿದ್ದಿದ್ದಾರೆ.

ಟೀ ಕುಡಿಯುವ ಸ್ಟೈಲೇ ಬೇರೆ.!
ದಿವ್ಯಾ ಉರುಡುಗಾಗೆ ಬಿಗ್ ಬಾಸ್ ಹೊಸದೇನು ಅಲ್ಲ. ಅರವಿಂದ್ ಕೆಪಿ ಕಂಪನಿ ಇಲ್ಲ ಎಂಬುದನ್ನು ಬಿಟ್ಟರೆ, ಟಾಸ್ಕ್, ಅಡುಗೆ, ಮನೆಗೆಲಸ ಇದೆಲ್ಲವೂ ಬರುತ್ತೆ. ಆದರೆ ದಿವ್ಯಾರ ಮುಗ್ಧತೆ ಈಗ ಎಲ್ಲರಲ್ಲೂ ನಗುವನ್ನು ಮೂಡಿಸಿದೆ. ಅಫ್ ಕೋರ್ಸ್ ಕೆಲವರು ಬಿಸಿ ಇರುವಾಗ ಟೀ, ಕಾಫಿ ಕುಡಿಯಲ್ಲ. ಅದಕ್ಕೆ ಕಾರಣ ನಾಲಿಗೆ ಸುಟ್ಟು ಬಿಟ್ಟರೆ ಅನ್ನೋ ಭಯ. ಸುಟ್ಟ ಮೇಲೆ ಊಟದ ಟೇಸ್ಟ್ ಸಿಗುವುದಕ್ಕೂ ಕಷ್ಟ ಆಗುತ್ತೆ. ಆದರೆ ದಿವ್ಯಾ ಬಿಸಿ ಟೀ ಕುಡಿಯುವ ಸ್ಟೈಲೇ ಬೇರೆ ಗುರು.

ದಿವ್ಯಾ ಬಾಯಲ್ಲಿ ರೆಫ್ರಿಜರೇಟರ್..!
ಟೀ ವಿಚಾರ ಸಾಕಷ್ಟು ಗೊಂದಲವನ್ನು ಉಂಟು ಮಾಡಿತ್ತು. ಮನೆ ಮಂದಿ ಆ ಪ್ರಯತ್ನ ಕೂಡ ಮಾಡಿದ್ದರು. ಕಿಚ್ಚ ಸುದೀಪ್ ಕೇಳಿದ ಪ್ರಶ್ನೆಗೆ ದಿವ್ಯಾ ಹೇಳಿದ್ದು ಹೀಗೆ, 'ಟೀ ಬಿಸಿ ಇರುತ್ತೆ. ನಾನು ಆದಷ್ಟು ಉಫ್ ಉಫ್ ಮಾಡ್ತೀನಿ. ಆದರೂ ನಾಲಿಗೆ ಸುಟ್ಟು ಬಿಟ್ಟರೆ. ಅದಕ್ಕೆ ಟೀಯನ್ನು ಮೊದಲು ನಾಲಿಗೆಯ ಕೆಳಗೆ ಹಾಕಿಕೊಳ್ಳಬೇಕು. ಅಲ್ಲಿಂದ ಮೇಲಕ್ಕೆ ಹಾಕಿಕೊಂಡಾಗ ಟೀ ಬಿಸಿ ಕಡಿಮೆಯಾಗುತ್ತೆ. ಯಾರು ಹೇಗೆ ಕುಡಿಯುತ್ತಾರೆ ಗೊತ್ತಿಲ್ಲ. ನಾನು ಇದೇ ಥರ ಮಾಡೋದು'. ಹೀಗೆ ಟೀ ಕುಡಿಯುವಾಗ ನಾಲಿಗೆಗೆ ಬಿಸಿ ತಾಗದೆ ಇರುವಂತೆ ಕುಡಿಯುವ ರೀತಿಯನ್ನು ಕೇಳಿ ಸೋಫಾ ಮೇಲೆ ಕೂತಿದ್ದ ಸದಸ್ಯರು ಬಿದ್ದು ಬಿದ್ದು ನಕ್ಕಿದ್ದಾರೆ.

ದಿವ್ಯಾ ಮೆಥೆಡ್‌ಗೆ ಕಿಚ್ಚ ಶಾಕ್
ವಾರದ ಕಥೆ ಕಿಚ್ಚನ ಜೊತೆ.. ಸೂಪರ್ ಸಂಡೇ ವಿತ್ ಸುದೀಪ.. ಈ ಎರಡು ಕಾರ್ಯಕ್ರಮ ಬಹಳ ಮುಖ್ಯವಾಗುತ್ತದೆ. ಎಪಿಸೋಡ್ ನೋಡದವರು ಈ ಎರಡು ಕಾರ್ಯಕ್ರಮ ನೋಡಿದರೆ ಮುಗೀತು. ಅಲ್ಲಿಗೆ ವಾರಪೂರ್ತಿ ಏನಾಯ್ತು ಎಂಬುದು ಗೊತ್ತಾಗಿ ಬಿಡುತ್ತದೆ. ಡಿಮ್ಯಾಂಡ್ ಕೂಡ ವೀಕೆಂಡ್ ಶೋಗೆ ಹೆಚ್ಚಿದೆ. ಅದಕ್ಕೆ ಮೊದಲ ಕಾರಣ ಕಿಚ್ಚನ ಮಾತುಗಾರಿಕೆ. ಹೇಳಿಕೇಳಿ ವಾರಪೂರ್ತಿ ನಡೆದ ಎಪಿಸೋಡಿನ ಆಯ್ದ ವಿಚಾರಗಳನ್ನು ಆಯ್ಕೆ ಮಾಡಿಕೊಂಡು ಮನೆ ಮಂದಿಯ ಕಾಲೆಳೆಯುವುದು, ಹೊಗಳುವುದು ಮಾಡುತ್ತಾರೆ. ಅದರಲ್ಲಿ ದಿವ್ಯಾ ಟೀ ಕೂಡ ಒಂದು. ದಿವ್ಯಾ ಹೇಳುತ್ತಾ ಹೋದ ಉತ್ತರಕ್ಕೆ ಕಿಚ್ಚ ಶಾಕ್ ಆಗಿದ್ದಾರೆ. 'ನೀವೂ ನಾಲಿಗೆ ಕೆಳಗೆ ರೆಫ್ರಿಜರೇಟರ್ ಇಟ್ಟಿದ್ದೀರೇನು. ನಾವೆಲ್ಲಾ ನಾರ್ಮಲ್ ಆಗಿ ಮನುಷ್ಯರ ಥರಾನೇ ಕುಡಿತೀವಿ' ಎಂದು ನಕ್ಕು ನಲಿಸಿದ್ದಾರೆ.

ಸಂಬರ್ಗಿ ಉತ್ತರ ನಿರೀಕ್ಷಿಸಿದ ನೆಟ್ಟಿಗರು
ಸದ್ಯ ದಿವ್ಯಾ ಉರಿಡುಗ ಬಳಿ ಟೀ ಚರ್ಚೆ ಮಾಡಿರುವುದು ಫಾಲೋವರ್ಸ್‌ಗೆ ಖುಷಿಯಾಗಿದೆ. ದಿವ್ಯಾ ಕೊಟ್ಟ ಉತ್ತರ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿತ್ತು. ಹೀಗಾಗಿ ಎಲ್ಲರ ಕುತೂಹಲ ಸಂಬರ್ಗಿ ಕಡೆಗೆ ತಿರುಗಿದೆ. ಇದೇ ಪ್ರಶ್ನೆಗೆ ಸಂಬರ್ಗಿ ಇನ್ಯಾವ ಉತ್ತರ ನೀಡುತ್ತಾ ಇದ್ದರೀ ಏನೋ ಎಂದು ಹಲವರು ಕಮೆಂಟ್ ಹಾಕಿದ್ದಾರೆ.


Click it and Unblock the Notifications











