ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಕಾಮನ್ ಮ್ಯಾನ್ಗೂ ಅವಕಾಶ, 3 ನಿಮಿಷದ ವಿಡಿಯೋ ಮಾಡಿ ಈಗಲೇ ಕಳಿಸಿ
ಬಿಗ್ ಬಾಸ್ ಮೂಲಕ ಅನೇಕರು ಬೆಳಕಿಗೆ ಬಂದಿದ್ದಾರೆ. ಆ ನಂತರ ತಮ್ಮಲ್ಲಿನ ಪ್ರತಿಭೆಯಿಂದ ಬೆಳೆದಿದ್ದಾರೆ. ಕೆಲವರು ಕಿರುತೆರೆಯಲ್ಲಿ .. ಇನ್ನು ಕೆಲವರು ಚಿತ್ರರಂಗದಲ್ಲಿ ಹೆಸರನ್ನು ಸಂಪಾದಿಸಿದ್ದಾರೆ. ಮಿಂಚಿದ್ದಾರೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲ ಬೇರೆ ಬೇರೆ ಭಾಷೆಯಲ್ಲಿ ಕೂಡ ಬಿಗ್ ಬಾಸ್ ಅನೇಕರ ಬದುಕು ಬದಲಿಸಿದೆ. ಇಂಥಾ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗಿಯಾಗುವ ಕನಸನ್ನು ಅನೇಕರು ಕಾಣುತ್ತಾರೆ.
ಆಯೋಜಕರ ಗಮನ ಸೆಳೆಯಲು ನಾನಾ ಕಸರತ್ತು ಕೂಡ ಮಾಡುತ್ತಾರೆ. ಆದರೆ ಬಿಗ್ ಬಾಸ್ ವರ ಎಲ್ಲರಿಗೆ ಸಿಗಲ್ಲ. ಯಾಕೆಂದರೆ ಅದಕ್ಕೆ ಅದ್ರದ್ದೇ ಆದ ನೀತಿ ನಿಯಮಗಳಿವೆ. ಇನ್ನು ಪ್ರತಿ ವರ್ಷ ಬಿಗ್ ಬಾಸ್ ಶುರುವಾಗುವ ಆಚೀಚೆ ಕೇವಲ ಸೆಲೆಬ್ರೆಟಿಗಳಿಗೆ ಮಾತ್ರವಲ್ಲ ಜನಸಾಮಾನ್ಯರಿಗೆ ಕೂಡ ಬಿಗ್ ಬಾಸ್ ಮನೆಯಲ್ಲಿ ಪ್ರವೇಶ ನೀಡಬೇಕೆಂಬ ಕೂಗು ಕೇಳಿ ಬರುತ್ತೆ.

ಸೆಲೆಬ್ರಿಟಿಗಳನ್ನು ಸೆಲೆಬ್ರಿಟಿಗಳನ್ನಾಗಿ ಮಾಡುವುದು ಮುಖ್ಯ ಅಲ್ಲ, ಜನಸಾಮಾನ್ಯರಿಗೆ ಅವಕಾಶ ನೀಡಿ ಅವರನ್ನು ಸೆಲೆಬ್ರಿಟಿ ಮಾಡುವುದು ಮುಖ್ಯ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತೆ. ವ್ಯಕ್ತವಾದ ಈ ಅಭಿಪ್ರಾಯಗಳನ್ನು ಗೌರವಿಸಿ ಹಿಂದಿ - ಕನ್ನಡ ಸೇರಿ ಬೇರೆ ಭಾಷೆಗಳಲ್ಲಿ ಕೂಡ ಹಿಂದೆ ಕಾಮನ್‌ಮ್ಯಾನ್‌ಗಳಿಗೆ ಅವಕಾಶವನ್ನು ಕೂಡ ನೀಡಲಾಗಿದೆ.
ಆದರೆ.. ಈ ಸುವರ್ಣ ಅವಕಾಶ ಜನಸಾಮಾನ್ಯರಿಗೆ ಪ್ರತಿ ವರ್ಷ ಸಿಕ್ಕಿಲ್ಲ. ಅಲ್ಲೊಮ್ಮೆ.. ಇಲ್ಲೊಮ್ಮೆ ಇಂತಹ ಪ್ರಯತ್ನಗಳಾಗಿವೆ. ಆದರೆ ಈ ಬಾರಿ ಈ ಪ್ರಯತ್ನ ಬಹುಶಃ ಎಲ್ಲ ಭಾಷೆಯಲ್ಲಿ ಕೂಡ ನಡೆಯಲಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಈಗಾಗಲೇ ತೆಲುಗು ಬಿಗ್ ಬಾಸ್‌ನಲ್ಲಿ ಜನಸಾಮಾನ್ಯರಿಗೆ ಆಮಂತ್ರಣವನ್ನು ನೀಡಲಾಗಿದೆ. ಅರ್ಜಿಯನ್ನು ಆಹ್ವಾನಿಸಲಾಗಿದೆ.
www.bb9.jiostar.com ವೆಬ್‌ಸೈಟ್‌ಗೆ ಲಾಗಿನ್ ಆಗಿ ಹೆಸರು ನೋಂದಾಯಿಸಿಕೊಳ್ಳಿ ಮತ್ತು ಬಿಗ್ ಬಾಸ್ 9 ರಲ್ಲಿ ತಾವು ಭಾಗವಹಿಸಲು ಬಯಸಿದ್ದೇಕೆ ಎಂದು ಕಾರಣವನ್ನು ಹೇಳುವ ವೀಡಿಯೊವನ್ನು ಅಪ್‌ಲೋಡ್ ಮಾಡಿ ಎಂದು ಹೇಳಲಾಗಿದೆ. ಇದೀಗ ಇದೇ ತರಹದ ಅವಕಾಶವನ್ನು ಮಲಯಾಳಂನಲ್ಲಿ ಕೂಡ ನೀಡಲಾಗಿದೆ.
ಹೌದು, ತೆಲುಗಿನಂತೆ ಮಲಯಾಳಂನಲ್ಲಿ ಕೂಡ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗಿಯಾಗಲು ಜನಸಾಮಾನ್ಯರಿಗೆ ಅವಕಾಶವನ್ನು ನೀಡಲಾಗಿದೆ. ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಪ್ರಕಟಣೆಯನ್ನು ಹೊರಡಿಸಿರುವ ಏಷ್ಯಾನೆಟ್ ಬಿಗ್ ಬಾಸ್ ಮನೆಗೆ ಪ್ರವೇಶಿಸುವ ಕನಸು ಕಾಣುತ್ತಿದ್ದರೆ, ನಿಮಗೆ ಇಲ್ಲಿದೆ ಸುವರ್ಣ ಅವಕಾಶ ಎಂದು ಹೇಳಿದೆ. ನಿಮಗೆ ಯಾಕೆ ಬಿಗ್ ಬಾಸ್ ಮನೆಗೆ ಹೋಗಬೇಕೆನ್ನುವ ಆಸೆ ಎನ್ನುವುದನ್ನು ಗರಿಷ್ಠ 3 ನಿಮಿಷಗಳ (50 MB ಒಳಗಾಗಿ) ವಿಡಿಯೋವನ್ನು ರೆಕಾರ್ಡ್ ಮಾಡಿ ನಮಗೆ ಕಳುಹಿಸಿ ಎಂದು ಹೇಳಿದೆ. ಜುಲೈ 10ರ ಒಳಗಡೆ ಆ ವಿಡಿಯೋವನ್ನು bb7.jiohotstar.com ನಲ್ಲಿ ಅಪ್ಲೋಡ್ ಮಾಡುವಂತೆ ಹೇಳಿದೆ.

ಅಂದ್ಹಾಗೇ ಮಲಯಾಳಂ ಬಿಗ್ ಬಾಸ್‌ನಲ್ಲಿ ಮೊದಲ ಬಾರಿ ಸೀಸನ್ 5ರಲ್ಲಿ ಕಾಮನ್ ಮ್ಯಾನ್‌ಗಳಿಗೆ ಅವಕಾಶ ನೀಡಲಾಗಿತ್ತು. ಈ ಸೀಸನ್‌ನಲ್ಲಿ ಗೋಪಿಕಾ ಗೊಪಿ ಜನಪ್ರಿಯರಾಗಿದ್ದರು. ಆ ನಂತರ ಸೀಸನ್ 6ರಲ್ಲಿ ಕೂಡ ನಂದನಾ, ನಿಶಾನ್ ಎನ್ ಮತ್ತು ರೆಸ್ಮಿನ್ ಬೈ ಹೀಗೆ ಮೂರು ಸಾಮಾನ್ಯ ಜನರನ್ನು ಬಿಗ್ ಬಾಸ್ ಮನೆಯೊಳಗೆ ಕಳುಹಿಸಲಾಗಿತ್ತು. ಈಗ 7ನೇ ಸೀಸನ್‌ನ ಸರದಿ. ಈ ಬಾರಿ ಕಾಮನ್ ಮ್ಯಾನ್‌ಗಳೆಷ್ಟು ಜನ ಮನೆಯೊಳಗೆ ಹೋಗುತ್ತಾರೆ ಎನ್ನುವುದನ್ನು ನೋಡಬೇಕಿದೆ.
ಇನ್ನುಳಿದಂತೆ ಕನ್ನಡದಲ್ಲಿ ಕಿಚ್ಚ ಸುದೀಪ್ ಬಿಗ್ ಬಾಸ್ ಮನೆಗೆ ಮರಳಿ ಬಂದಂತೆ, ತೆಲುಗಿನಲ್ಲಿ ನಾಗಾರ್ಜುನ ಕಾರ್ಯಕ್ರಮ ಮುಂದುವರೆಸಿಕೊಂಡು ಹೋಗುತ್ತಿರುವಂತೆ ಮಲಯಾಳಂನಲ್ಲಿ ಈ ಬಾರಿ ಕೂಡ ಮೋಹನ್ ಲಾಲ್ ಸಾರಥ್ಯದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಮೋಹನ್ ಲಾಲ್ ಈ ಬಾರಿ ಬಿಗ್ ಬಾಸ್ ನಡೆಸಿಕೊಡುವುದು ಅನುಮಾನ ಎನ್ನುವ ಮಾತು ಕೇಳಿ ಬಂದಿತ್ತಾದರೂ ಇದೀಗ ಕಾಮನ್ ಮ್ಯಾನ್‌ಗಳಿಗೆ ಸ್ಫರ್ಧೆಯಲ್ಲಿ ಭಾಗವಹಿಸುವಂತೆ ಕರೆ ನೀಡಿರುವ ಏಷ್ಯಾನೆಟ್ ವಾಹಿನಿ ಮೋಹನ್ ಲಾಲ್ ಅವರ ಭಾವಚಿತ್ರ ಬಳಸಿಕೊಂಡಿದೆ. ಈ ಹಿನ್ನೆಲೆ ಮೋಹನ್ ಲಾಲ್ ಈ ಬಾರಿ ಕಾರ್ಯಕ್ರಮ ನಡೆಸಿಕೊಡುವುದು ಖಚಿತ.


Click it and Unblock the Notifications











