ಬಿಗ್ ಬಾಸ್ ಮನೆಯಲ್ಲಿ ಮತ್ತೆ ಸೃಷ್ಟಿಯಾಯ್ತು ಸ್ವರ್ಗ-ನರಕ ; ಯಾರು - ಎಲ್ಲಿ...? ಇಲ್ಲಿದೆ ಮಾಹಿತಿ
ಪ್ರತಿ ವರ್ಷದ ದ್ವೀತಿಯಾರ್ಧದಲ್ಲಿ ಭಾರತವನ್ನು ''ಬಿಗ್ ಬಾಸ್'' ಆವರಿಸಿಕೊಳ್ಳುತ್ತೆ. ಜೂನ್ ನಂತರ ಯಾವ ಭಾಷೆಯಲ್ಲಿ ನೋಡಿದರು ಕೂಡ ''ಬಿಗ್ ಬಾಸ್'' ಕುರಿತು ಚರ್ಚೆ ಶುರುವಾಗುತ್ತೆ. ಈ ವರ್ಷ ಕೂಡ ಇದರಿಂದ ಹೊರತಾಗಿಲ್ಲ. ಈಗಾಗಲೇ ಎಲ್ಲೆಡೆ ''ಬಿಗ್ ಬಾಸ್'' ಜಾತ್ರೆ ನಡೆಯುತ್ತಿದೆ. ಸಲ್ಮಾನ್ ಖಾನ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಹಿಂದಿಯ ''ಬಿಗ್ ಬಾಸ್'' ಕಾರ್ಯಕ್ರಮ 93 ದಿನಗಳನ್ನು ಪೂರೈಸಿದೆ.
ಇನ್ನೇನು ಈ ಡಿಸೆಂಬರ್ 7ರಂದು ಕಾರ್ಯಕ್ರಮಕ್ಕೆ ತೆರೆ ಬೀಳಲಿದೆ. ನಾಗಾರ್ಜುನ ನೇತೃತ್ವದ ತೆಲುಗು ''ಬಿಗ್ ಬಾಸ್'' ಕಾರ್ಯಕ್ರಮ 79 ದಿನಗಳನ್ನು ಪೂರೈಸಿದ್ದರೆ, ವಿಜಯ್ ಸೇತುಪತಿ ನಡೆಸಿಕೊಡುವ ತಮಿಳು ''ಬಿಗ್ ಬಾಸ್'' 51 ದಿನಗಳನ್ನು ಪೂರೈಸಿದೆ. ಕನ್ನಡದಲ್ಲಿ ಸುದೀಪ್ ಅವರ ಪಂಚಾಯ್ತಿಗೆ 58 ದಿನಗಳಾಗಿವೆ. ಇನ್ನೂ ಮಲಯಾಳಂನಲ್ಲಿ ಈಗಾಗಲೇ ''ಬಿಗ್ ಬಾಸ್'' ಕಾರ್ಯಕ್ರಮ ಶುರುವಾಗಿ ಮುಕ್ತಾಯವೂ ಕೂಡ ಆಗಿದೆ.

ಹೀಗೆ.. ಎಲ್ಲೆಡೆ ''ಬಿಗ್ ಬಾಸ್'' ಮೆರವಣಿಗೆ ನಡೆಯುತ್ತಿದೆ. ಆದರೆ .. ಮರಾಠಿಯಲ್ಲಿ ಮಾತ್ರ ಇಲ್ಲಿಯವರೆಗೆ ಬಿಗ್ ಬಾಸ್‌ನ ಸದ್ದು ಸುದ್ದಿ ಇರಲಿಲ್ಲ. ಹೀಗಾಗಿ ಈ ಸಲ ಮರಾಠಿಯಲ್ಲಿ ''ಬಿಗ್ ಬಾಸ್'' ಶುರುವಾಗಲ್ಲವೇನೋ ಎಂದು ಹಲವರು ಅಂದುಕೊಂಡಿದ್ದರು. ಮರಾಠಿಯ ''ಬಿಗ್ ಬಾಸ್'' ಪ್ರೇಮಿಗಳು ಕೂಡ ನಿರಾಶೆಗೊಂಡಿದ್ದರು.
ಆದರೆ .. ಈಗ ಮರಾಠಿಯ ''ಬಿಗ್ ಬಾಸ್'' ಕಡೆಯಿಂದ ಏಕಾಏಕಿ ನ್ಯೂಸ್ ಹೊರ ಬಂದಿದೆ. ಮರಾಠಿಯ ''ಬಿಗ್ ಬಾಸ್''ನ ಆರನೇ ಸೀಸನ್ ಶುರುವಾಗಲಿದೆ. ಈ ಬಾರಿಯ ಕಾರ್ಯಕ್ರಮದ ಮೊದಲ ಪ್ರೋಮೋವನ್ನು ಕೂಡ ಬಿಡುಗಡೆ ಮಾಡಲಾಗಿದೆ.
ಇನ್ನೂ ಈ ಬಾರಿಯ ಮರಾಠಿಯ ''ಬಿಗ್ ಬಾಸ್''ಗೆ ಕನ್ನಡದ ''ಬಿಗ್ ಬಾಸ್'' ಪ್ರೇರಣೆಯಾಗಿರುವುದು ವಿಶೇಷ. ಹೌದು, ಎಲ್ಲರಿಗೆ ಗೊತ್ತಿರುವಂತೆ ಕಳೆದ ಬಾರಿ ಕನ್ನಡದ ಹನ್ನೊಂದನೇ ಸೀಸನ್‌ನಲ್ಲಿ ಸುದೀಪ್ ಸಾರಥ್ಯದಲ್ಲಿ ಸ್ವರ್ಗ ಮತ್ತು ನರಕದ ಬಾಗಿಲುಗಳು ''ಬಿಗ್ ಬಾಸ್'' ಮನೆಯಲ್ಲಿದ್ದವು.
ಕೆಲವರು ಸ್ವರ್ಗಕ್ಕೆ ಹೋಗಿ ಸಕಲ ಸೌಲಭ್ಯ ಪಡೆದರೆ, ಇನ್ನು ಕೆಲವರು ನರಕದಲ್ಲಿ ಯಾವ ಸೌಲಭ್ಯಗಳಿಲ್ಲದೇ ನರಳಿದ್ದರು. ಮರಾಠಿಯ ಈ ಬಾರಿಯ ''ಬಿಗ್ ಬಾಸ್''ನ ಥೀಮ್ ಕೂಡ ಇದೆ. ಇದಕ್ಕೆ ಕೈಗನ್ನಡಿ ಎಂಬಂತೆ ಬಿಡುಗಡೆಯಾದ ಪ್ರೋಮೋದಲ್ಲಿ ಸ್ವರ್ಗ ಮತ್ತು ನರಕದ ದರ್ಶನವನ್ನು ಮಾಡಿಸಲಾಗಿದೆ.

ಇನ್ನೂ ಮರಾಠಿಯಲ್ಲಿ ಇಲ್ಲಿಯವರೆಗೆ ''ಬಿಗ್ ಬಾಸ್''ನ 5 ಸೀಸನ್‌ಗಳು ಮುಕ್ತಾಯವಾಗಿವೆ. ಆ ಪೈಕಿ ಮೊದಲಿನ ನಾಲ್ಕು ಸೀಸನ್‌ನ ಮಹೇಶ್ ಮಾಂಜ್ರೇಕರ್ ಮುನ್ನಡೆಸಿಕೊಂಡು ಬಂದಿದ್ದರು. ಕಳೆದ ವರ್ಷದಿಂದ ಈ ಜವಾಬ್ಧಾರಿ ಸುದೀಪ್ ಅವರ ಅತ್ಯಾಪ್ತ ರಿತೇಶ್ ದೇಶಮುಖ್ ಅವರ ಹೆಗಲಿಗೇರಿದೆ.
ಆದರೆ ಈ ವರ್ಷ ನಿರೂಪಕನಾಗಿ ರಿತೇಶ್ ದೇಶಮುಖ್ ಮುಂದುವರೆಯುತ್ತಾರಾ..? ಗೊತ್ತಿಲ್ಲ. ಆದರೆ.. ಮರಾಠಿಯ ಕಿರುತೆರೆಯ ಪ್ರೇಕ್ಷಕರಿಗೆ ರಿತೇಶ್ ದೇಶಮುಖ್ ನಿರೂಪಕರಾಗಿ ಈ ವರ್ಷ ಕೂಡ ಮರಳಿ ಬರುತ್ತಾರೆ ಎನ್ನುವ ವಿಶ್ವಾಸ ಇದೆ. ಸದ್ಯ ಎಂದಿನಿಂದ ಮರಾಠಿಯ ''ಬಿಗ್ ಬಾಸ್''ನ ಆರನೇ ಸೀಸನ್ ಪ್ರಸಾರವಾಗಲಿದೆ ಎನ್ನುವುದು ಗೊತ್ತಿಲ್ಲವಾದರೂ ಹಿಂದಿ ''ಬಿಗ್ ಬಾಸ್'' ಮುಕ್ತಾಯವಾದ ಬೆನ್ನಲ್ಲೇ ಮರಾಠಿಯಲ್ಲಿ ಶುರುವಾಗುವ ಸಾಧ್ಯತೆಗಳಿವೆ. ಡಿಸೆಂಬರ್ 14ರಿಂದ ''ಬಿಗ್ ಬಾಸ್''-6 ಕಾರ್ಯಕ್ರಮ ಆರಂಭವಾಗಬಹುದು ಎನ್ನುವ ಮಾತು ಕೇಳಿ ಬರುತ್ತಿದೆ.
ಇನ್ನುಳಿದಂತೆ ಈ ಬಾರಿ ''ಬಿಗ್ ಬಾಸ್'' ಮನೆಯಲ್ಲಿ ಯಾರೆಲ್ಲಾ ಭಾಗವಹಿಸಲಿದ್ದಾರೆ ಎನ್ನುವ ಪ್ರಶ್ನೆಗೆ ಕೂಡ ಸದ್ಯ ಉತ್ತರ ಇಲ್ಲ. ಮುಂಬರುವ ದಿನಗಳಲ್ಲಿ ಮರಾಠಿ ''ಬಿಗ್ ಬಾಸ್'' ಕುರಿತು ಒಂದೊಂದೇ ಮಾಹಿತಿ ಹೊರ ಬೀಳಲಿವೆ.


Click it and Unblock the Notifications











