"ಒಬ್ಬ ಛತ್ರಿ ಹಿಡಿಯೋನು, ನಾಲ್ಕು ಜನ ಬಾಡಿಗಾರ್ಡ್ಸ್"; ಗಿಲ್ಲಿ ಬಗ್ಗೆ ಜಗ್ಗೇಶ್ ಭವಿಷ್ಯ ನಿಜವಾಗುತ್ತಾ?
ಎಲ್ಲೆಲ್ಲೂ ಗಿಲ್ಲಿ ಹವಾ ಜೋರಾಗಿದೆ. ಬಿಗ್‌ಬಾಸ್ ಸೀಸನ್ 12 ವಿನ್ನರ್ ಗಿಲ್ಲಿ ಎಂದು ಚರ್ಚೆ ಜೋರಾಗಿದೆ. ಫಿನಾಲೆಗೆ ಇನ್ನು 3 ದಿನ ಬಾಕಿಯಿದೆ. ಸದ್ಯ ಬಿಗ್‌ಬಾಸ್ ಮನೆಯಲ್ಲಿ 7 ಮಂದಿ ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಧ್ರುವಂತ್ ಮಿಡ್ ವೀಕ್ ಎಲಿಮಿನೇಷನ್‌ನಲ್ಲಿ ಹೊರ ಬಂದಿದ್ದಾರೆ ಎನ್ನಲಾಗ್ತಿದೆ. ಇನ್ನುಳಿದ 6 ಮಂದಿ ಫೈನಲಿಸ್ಟ್‌ಗಳಲ್ಲಿ ಗಿಲ್ಲಿ ಬಹಳ ಟಫ್ ಕಾಂಪಿಟೇಟರ್ ಆಗಿದ್ದಾರೆ.
ತಮ್ಮ ಮಾತಿನಿಂದಲೇ ಗಿಲ್ಲಿ ಮ್ಯಾಜಿಕ್ ಮಾಡ್ತಾ ಬರ್ತಿದ್ದಾರೆ. ತಮಾಷೆ ಮಾಡುತ್ತಾ ಎಲ್ಲರ ಕಾಲೆಳೆಯುತ್ತಾ, ಕೆಣಕಿದವರಿಗೆ ತಿರುಗೇಟು ಕೊಡುತ್ತಾ ಗಿಲ್ಲಿ ಕಮಾಲ್ ಮಾಡ್ತಿದ್ದಾರೆ. ಈ ಹಿಂದೆ 'ಕಾಮಿಡಿ ಕಿಲಾಡಿಗಳು' ಶೋನಲ್ಲಿ ಕೂಡ ಗಿಲ್ಲಿ ಭಾಗವಹಿಸಿ ಗಮನ ಸೆಳೆದಿದ್ದರು. ಅಂದು ಗಿಲ್ಲಿ ಬಗ್ಗೆ ಶೋ ತೀರ್ಪುಗಾರರಾಗಿದ್ದ ನಟ ಜಗ್ಗೇಶ್ ಒಂದು ಮಾತು ಹೇಳಿದ್ದರು. ಅವರು ಹೇಳಿದ ಆ ಭವಿಷ್ಯ ಈಗ ನಿಜವಾಗುತ್ತಿದೆ.

ಗಿಲ್ಲಿ ಕ್ರೇಜ್ ಬಗ್ಗೆ ಬಿಡಿಸಿ ಹೇಳುವುದು ಬೇಕಾಗಿಲ್ಲ. ಬಿಗ್‌ಬಾಸ್ ಸ್ಪರ್ಧಿಗಳ ಕುಟುಂಬ ಸದಸ್ಯರು ಕೂಡ ಗಿಲ್ಲಿ ಅಭಿಮಾನಿಗಳಾಗಿಬಿಟ್ಟಿದ್ದಾರೆ. ಫ್ಯಾಮಿಲಿ ರೌಂಡ್ ವೇಳೆ ಮನೆ ಒಳಗೆ ಹೋದ ಎಲ್ಲರೂ ಗಿಲ್ಲಿ ಬಗ್ಗೆ ಮಾತನಾಡಿದ್ದರು. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಗಿಲ್ಲಿ ಫ್ಯಾನ್ಸ್ ಪೇಜ್‌ಗಳ ಆರ್ಭಟ ಜೋರಾಗಿದೆ. ಶೋ ಗೆದ್ದುಬಿಟ್ಟರೆ ಗಿಲ್ಲಿ ಹವಾ ಮತ್ತಷ್ಟು ಹೆಚ್ಚಾಗಲಿದೆ. ಅವರು ಹೋದಲ್ಲಿ ಬಂದಲ್ಲಿ ಅಭಿಮಾನಿಗಳು ಮುತ್ತಿಕೊಳ್ಳುವುದು ಗ್ಯಾರಂಟಿ. ಹಾಗಾಗಿ ಬೌನ್ಸರ್ಸ್ ಇಟ್ಕೊಂಡು ಓಡಾಡಬೇಕಾದ ಅನಿವಾರ್ಯತೆ ಎದುರಾಗಬಹುದು.
ಗಿಲ್ಲಿ ಬಗ್ಗೆ ಅಂದೇ ಮಾತನಾಡಿದ್ದ ನವರಸ ನಾಯಕ ಜಗ್ಗೇಶ್ "ಇವ್ನು(ಗಿಲ್ಲಿ) ಮುಂದಿನ ವರ್ಷದೊಳಗೆ ಛತ್ರು ಹಿಡಿಯೋಕೆ ಒಬ್ಬರನ್ನು ಇಟ್ಕೊಂಡು, ನಾಲ್ಕು ಜನ ಬಾಡಿಗಾರ್ಡ್ಸ್ ಜೊತೆ ಓಡಾಡುವ ಹಂತಕ್ಕೆ ಬರ್ತಾನೆ" ಎಂದು ಹೇಳಿದ್ದರು. ಅಂದು ಜಗ್ಗೇಶ್ ಮಾತನಾಡಿದ್ದ ವೀಡಿಯೋವನ್ನು ಗಿಲ್ಲಿ ಅಭಿಮಾನಿಗಳು ವೈರಲ್ ಮಾಡುತ್ತಿದ್ದಾರೆ.
ಗಿಲ್ಲಿ ಕಾಮಿಡಿ ಕ್ರೇಜಿಸ್ಟಾರ್ ರವಿಚಂದ್ರನ್, ನಟ ಶಿವರಾಜ್‌ಕುಮಾರ್, ನಟಿ ರಚಿತಾರಾಮ್ ಕೂಡ ಫಿದಾ ಆಗುತ್ತಿದ್ದರು. ಗಿಲ್ಲಿ ಬಿಗ್‌ಬಾಸ್ ಶೋ ಗೆಲ್ಲಬೇಕು ಎಂದು ಅಭಿಮಾನಿಗಳು ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಮಂಡ್ಯದ ಅಭಿಮಾನಿ ಗಿಲ್ಲಿ ಭಾವಚಿತ್ರ ಟ್ಯಾಟೂ ಹಾಕಿಸಿಕೊಂಡಿರುವುದನ್ನು ನೋಡಬಹುದು. 26 ವರ್ಷ ವಯಸ್ಸಿನ ಗಿಲ್ಲಿ ಬಿಗ್‌ಬಾಸ್ ಮನೆಯಲ್ಲಿ ಘಟಾನುಘಟಿ ಸ್ಪರ್ಧಿಗಳನ್ನು ಹಿಂದಿಕ್ಕಿ ಟ್ರೋಫಿ ಗೆಲ್ಲುವತ್ತ ದಾಪುಗಾಲು ಇಟ್ಟಿದ್ದಾರೆ.
ಇತ್ತೀಚೆಗೆ ಗಿಲ್ಲಿ ಅಭಿಮಾನಿಗಳನ್ನು ಬಿಗ್‌ಬಾಸ್ ಮನೆ ಒಳಗೆ ಕಳುಹಿಸಲಾಗಿತ್ತು. ಗಿಲ್ಲಿನ ನೋಡುತ್ತಿದ್ದಂತೆ ಅವರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಅವರ ಬಳಿ ಗಿಲ್ಲಿ ವೋಟ್ ಮಾಡುವಂತೆ ಮನವಿ ಮಾಡಿದ್ದರು. ಟ್ಯಾಟೂ ಹಾಕಿಸಿಕೊಂಡಿದ್ದ ಅಭಿಮಾನಿಯನ್ನು ನೋಡಿ ಗಿಲ್ಲಿ ಭಾವುಕರಾಗಿದ್ದರು. "ಯಾವುದೇ ಸಂದರ್ಭದಲ್ಲಿ ಆಟದ ದಿಕ್ಕನ್ನು ಬದಲಿಸೋ ತಾಕತ್ತು ಇರೋದು ಜೋಕರ್‌ಗೆ ಮಾತ್ರ" ಎಂದು ಬಿಗ್‌ಬಾಸ್ ಹೇಳಿದ್ದು ವೈರಲ್ ಆಗ್ತಿದೆ.
ಗ್ರ್ಯಾಂಡ್ ಓಪನಿಂಗ್ ವೇಳೆ 4ನೇ ಸ್ಪರ್ಧಿಯಾಗಿ ಗಿಲ್ಲಿ ವೇದಿಕೆಗೆ ಬಂದಿದ್ದರು. ಕಾವ್ಯಾ ಶೈವ ಜೊತೆ ಜಂಟಿಯಾಗಿ ಮನೆ ಒಳಗೆ ಹೋಗುವಂತೆ ಆಗಿತ್ತು. ಜಂಟಿ ಆಟ ಮುಗಿದ ಬಳಿಕ ಕೂಡ ಕಾವ್ಯಾ ಜೊತೆ ಗಿಲ್ಲಿ ಸ್ನೇಹ ಮುಂದುವರೆಸಿದ್ದರು. ಆಕೆಯನ್ನು ಫಿನಾಲೆವರೆಗೂ ಕರ್ಕೊಂಡ್ ಹೋಗ್ತೀನಿ ಎನ್ನುತ್ತಿದ್ದರು. ಆಕೆಯನ್ನು ಪದೇ ಪದೆ ರೇಗಿಸಿದ್ದು ಭಾರೀ ಚರ್ಚೆ ಹುಟ್ಟಾಕ್ಕಿತ್ತು. ಕೊನೆಗೆ ಸ್ವತಃ ಕಾವ್ಯಾ ಬೇಡ ಅಂದ್ರು ಗಿಲ್ಲಿ ಕ್ವಾಟ್ಲೆ ಮುಂದುವರೆಸಿದರು.
ಈಗಾಗಲೇ ಬಿಗ್‌ಬಾಸ್ ಸೀಸನ್ 12ರ ವಿಜೇತರನ್ನು ಆಯ್ಕೆ ಮಾಡಲು ವೀಕ್ಷಕರು ವೋಟ್ ಮಾಡುತ್ತಿದ್ದಾರೆ. ಹೆಚ್ಚಿನ ವೋಟ್ ಪಡೆದು ಗಿಲ್ಲಿ ದೊಡ್ಡಮಟ್ಟದಲ್ಲಿ ಗೆಲ್ಲುವ ನಿರೀಕ್ಷೆಯಿದೆ. ಸೋಶಿಯಲ್ ಮೀಡಿಯಾದಲ್ಲೂ ಇದೇ ವಿಚಾರ ಭಾರೀ ಚರ್ಚೆ ಹುಟ್ಟಾಕ್ಕಿದೆ.


Click it and Unblock the Notifications











