Rakesh Adiga: ಬಿಗ್ ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ 'ಕಾಕ್ರೋಚ್' ಕತೆ ಹೇಳಲು ಹೊರಟ ರಾಕೇಶ್
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್' ಯಾರಿಗೆ ಗೊತ್ತಿಲ್ಲ ಹೇಳಿ?! ಇತ್ತೀಚೆಗಷ್ಟೇ ಬಿಗ್ ಬಾಸ್ ಸೀಸನ್ 9 ಮುಗಿದಿದ್ದು ನಟ ರಾಕೇಶ್ ಅಡಿಗ ಬಿಗ್ ಬಾಸ್ ಮನೆಯಲ್ಲೂ, ಹೊರಗೂ ಬಹಳ ಖ್ಯಾತಿಯನ್ನು ಪಡೆದಿದ್ದರು. ಇನ್ನೇನು ಇವರ ನೇರ ವ್ಯಕ್ತಿತ್ವ ಹಾಗೂ ಒಳ್ಳೆಯತನ ನೋಡಿ ಜನರೆಲ್ಲರೂ ಇವರೇ ಬಿಗ್ ಬಾಸ್ ಸೀಸನ್ 9ರ ವಿನ್ನರ್ ಎಂದೇ ಭಾವಿಸಿದ್ದರು. ಆದರೆ ರಾಕೇಶ್ ಅಡಿಗ ರನ್ನರ್ ಆಗಿ ಬಿಗ್ ಬಾಸ್ ಮನೆಯಿಂದ ಹೊರಬಂದರು.
ಅರ್ಥಾತ್ ಓಟಿಟಿ ಸೀಸನ್‌ನಲ್ಲಿಯೂ ರಾಕೇಶ್ ಅಡಿಗ ಅವರೇ ರನ್ನರ್ ಅಪ್ ಆಗಿ ಹೊರಬಂದಿದ್ದರು. ಬಿಗ್ ಬಾಸ್ ಗೆಲ್ಲದಿದ್ದರೂ ತಮ್ಮ ನೇರ ವ್ಯಕ್ತಿತ್ವ ಹಾಗೂ ಒಳ್ಳೆಯತನದಿಂದ ಬಹಳಷ್ಟು ಕರ್ನಾಟಕ ಜನರ ಮನ ಗೆದ್ದಿದ್ದಾರೆ ರಾಕೇಶ್ ಎಂದರೆ ಖಂಡಿತ ತಪ್ಪಾಗಲ್ಲ.

ಬಿಗ್ ಬಾಸ್ ನಂತರ ಸಿನಿಮಾದತ್ತ ರಾಕೇಶ್ ಚಿತ್ತ
ನಟ ರಾಕೇಶ್ ಸಿನಿ ರಂಗದಲ್ಲಿ ಮೊದಲು ಕಾಣಿಸಿಕೊಂಡಿದ್ದು 2009ರ 'ಜೋಶ್' ಚಿತ್ರದಲ್ಲಿ. ಹದಿ ಹರೆಯ ಪ್ರಾಯದ ಮಕ್ಕಳಿಗೆ ಒಂದು ಸ್ಫೂರ್ತಿಯಾಗುವಂತಹ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡ ನಟ ರಾಕೇಶ್ ಅವರು ನಂತರ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. 'ಯಾರೇ ಕೂಗಾಡಲಿ', 'ಮನಸಾಲಜಿ', 'ನಂದಗೋಕುಲ', 'ಮಂದಹಾಸ','ಅಲೆಮಾರಿ', 'ಕೋಟಿಗೊಂದು ಲವ್ ಸ್ಟೋರಿ', 'ಪ್ರೀತಿಯಿಂದ','ಡವ್', 'ಮಂಡ್ಯ ಟು ಮುಂಬೈ' ಇತ್ಯಾದಿ ಹಲವು ಚಿತ್ರಗಳಲ್ಲಿ ಅದ್ಭುತವಾಗಿ ರಾಕೇಶ್ ಅಡಿಗ ನಟಿಸಿದ್ದಾರೆ.
ನಾಲ್ಕು ವರ್ಷಗಳ ಮತ್ತೆ ನಟನೆಗೆ ಮರಳಿದ ರಾಕೇಶ್
ಈಗ ಈ ಫ್ಲಾಶ್ ಬ್ಯಾಕ್‌ಗಳನ್ನೆಲ್ಲಾ ಯಾಕೆ ಹೇಳ್ತಿದ್ದೀವಿ ಅಂದರೆ, ಇದೇ ನಟ ರಾಕೇಶ್ ಅವರು ನಾಲ್ಕು ವರ್ಷಗಳ ನಂತರ ಮತ್ತೊಂದು ಅದ್ಭುತ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡಲು ಸಜ್ಜಾಗಿದ್ದಾರೆ. 2019ರಲ್ಲಿ ತೆರೆಕಂಡ 'ನೈಟ್ ಔಟ್' ಎಂಬ ಚಿತ್ರದ ನಂತರ ರಾಕೇಶ್ ಅವರು ಮತ್ತು ಯಾವ ಚಿತ್ರದಲ್ಲೂ ಕಾಣಿಸಿಕೊಂಡಿರಲಿಲ್ಲ. ನಂತರ ಬಿಗ್ ಬಾಸ್ ಮಿನಿ ಸೀಸನ ಹಾಗೂ ಬಿಗ್ ಬಾಸ್ ಸೀಸನ್ 9 ಇತ್ಯಾದಿಗಳಲ್ಲಿ ಬ್ಯುಸಿಯಾಗಿ ಬಿಟ್ಟರು. ಇದೀಗ 'ಕಾಕ್ರೋಚ್' ಎಂಬ ಚಿತ್ರವನ್ನು ಮಾಡಲು ಹೊರಟಿರುವ ನಟ ರಾಕೇಶ್ ನಾಲ್ಕು ವರ್ಷಗಳ ನಂತರ ಒಂದು ಅದ್ಭುತ ಪ್ರಾಜೆಕ್ಟ್ ಅನ್ನು ಕೈಗೆ ತೆಗೆದುಕೊಂಡಿದ್ದಾರೆ.

ನಟರಾಗಿ ಮಾತ್ರವಲ್ಲ ನಿರ್ದೇಶಕರಾಗಿಯೂ ಮೋಡಿ
ವಿಶೇಷವೆಂದರೆ ಈ ಸಿನಿಮಾದಲ್ಲಿ ರಾಕೇಶ್ ಬರಿ ನಟರಷ್ಟೇ ಅಲ್ಲ ನಿರ್ದೇಶಕರು ಹೌದು. ಪೂಜಾಶ್ರೀ ಎಂಬವರು ನಿರ್ಮಾಣ ಮಾಡುತ್ತಿರುವ ಈ ಚಿತ್ರವು ರಾಕೇಶ್ ಅವರ ಕಾನ್ಸೆಪ್ಟ್ ಆಗಿದ್ದು, ಅದರಲ್ಲಿ ರಾಕೇಶ್ ಅವರು ನಟಿಸಲಿರುವ ಪಾತ್ರದ ಪ್ರೋಮೊ ಈಗಾಗಲೇ ರಿಲೀಸ್ ಆಗಿದೆ. ಹೆಸರೇ ವಿಭಿನ್ನವಾಗಿರುವುದರಿಂದ ಬಹಳಷ್ಟು ಸಿನಿಪ್ರಿಯರ ಮನಕೆರಳಿರುವ ಈ "ಕಾಕ್ರೋಚ್" ಸಿನಿಮಾ ರಾಕೇಶ್ ಅವರಿಗೆ ಬಿಗ್ ಬ್ರೇಕ್ ನೀಡಬಹುದೇನೋ. ಈ ಚಿತ್ರದ ಬಗ್ಗೆ ಬಹಳಷ್ಟು ಆಕಾಂಕ್ಷೆಗಳಿಟ್ಟುಕೊಂಡಿರುವ ನಟ ರಾಕೇಶ್ ಅಡಿಗ ಅವರು ಇದರ ತಯಾರಿ ಇತ್ಯಾದಿಯಲ್ಲಿ ಬಹಳಷ್ಟು ಕೆಲಸಗಳನ್ನು ಮಾಡುತ್ತಾ ಇದ್ದಾರೆ. ಅವರಷ್ಟೇ ಕೌತುಕದಿಂದ ಸಿಹಿಪ್ರಿಯರು ಕೂಡ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಚಿತ್ರ ಹೇಗಿರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications