ತಮಿಳಿಗೆ ಹಾರಿದ ಬಿಗ್ ಬಾಸ್ ಕನ್ನಡ ಸೀಸನ್ 9 ವಿನ್ನರ್ ರೂಪೇಶ್ ಶೆಟ್ಟಿ; ಯೋಗಿ ಬಾಬು ಜೊತೆ ದರ್ಬಾರ್
ರೂಪೇಶ್ ಶೆಟ್ಟಿ.. ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 9 ರ ವಿನ್ನರ್ ಆಗಿ ಹೊರಹೊಮ್ಮಿರುವ ಹ್ಯಾಂಡ್ ಸಮ್ ಹುಡುಗ ರೂಪೇಶ್ ಶೆಟ್ಟಿ. 'ಬಿಗ್ ಬಾಸ್ ವಿನ್ನರ್' ಆಗಿ ಹೊರಹೊಮ್ಮಿದ ಬಳಿಕ ರೂಪೇಶ್ ಶೆಟ್ಟಿ ನಟನೆಯ ತುಳು ಸಿನಿಮಾ 'ಸರ್ಕಸ್' ಬಿಡುಗಡೆಯಾಗಿತ್ತು. ಮಾತ್ರವಲ್ಲದೇ ಅದು ಬಾಕ್ಸ್ ಆಫೀಸ್‌ನಲ್ಲೂ ಕೂಡಾ ಸಕತ್ ಸದ್ದು ಮಾಡಿತ್ತು.
ಇದರ ನಡುವೆ ರೂಪೇಶ್ ಶೆಟ್ಟಿ ಉದ್ಯಮಿಯಾಗಿ ಭಡ್ತಿ ಪಡೆದಿದ್ದರು. ಹೌದು, ನಟ, ನಿರೂಪಕ ರೂಪೇಶ್ ಶೆಟ್ಟಿ ಮಂಗಳೂರಿನಲ್ಲಿ ಲಿಟಲ್ ಪ್ಲಾಂಟ್ಸ್ ಎನ್ನುವ ಶಾಪ್ ಓಪನ್ ಮಾಡಿದ್ದರು. ಆ ಮೂಲಕ ಚಂದ ಚಂದದ, ನಾನಾ ನಮೂನೆಯ ಗಿಡಗಳನ್ನು ರೂಪೇಶ್ ಶೆಟ್ಟಿ ಅಲ್ಲಿ ಮಾರಾಟಕ್ಕಿಟ್ಟಿದ್ದರು. ಇದರ ಜೊತೆಗೆ ಮಗದೊಂದು ಸಿಹಿ ಸುದ್ದಿಯನ್ನು ರೂಪೇಶ್ ಶೆಟ್ಟಿ ಹಂಚಿಕೊಂಡಿದ್ದಾರೆ.

ತಮಿಳು ನಟ ಯೋಗೀಶ್ ಬಾಬು ಅವರೊಂದಿಗೆ ಇರುವ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ರೂಪೇಶ್ ಶೆಟ್ಟಿ ಹಂಚಿಕೊಂಡಿದ್ದಾರೆ . ಫೋಟೋದ ಜೊತೆಗೆ "ನನ್ನ ಪಾಲಿಗೆ ಇದು ತುಂಬಾ ಸಂತಸದ ದಿನ. ನಿಮ್ಮೆಲ್ಲರ ಆಶೀರ್ವಾದ ಹಾಗೂ ಪ್ರೋತ್ಸಾಹದಿಂದ ಇಂದು ಒಂದು ಅದ್ಭುತ ತಂಡದ ಜತೆಗೆ 'ಸನ್ನಿಧಾನಮ್ P.O' ಎನ್ನುವ ನನ್ನ ಮೊದಲ ತಮಿಳು ಚಿತ್ರ ಮಾಡುವ ಅವಕಾಶ ದೊರಕಿದೆ. ತಮಿಳಿನ ಸೂಪರ್ ಸ್ಟಾರ್ ಹಾಸ್ಯ ನಟರಾದ ಯೋಗಿ ಬಾಬು ಅವರ ಜತೆ ನಟಿಸುವ ಅವಕಾಶ ನನ್ನ ಪಾಲಿಗೆ ದೊಡ್ಡ ಹೆಮ್ಮೆ. ನಿಮ್ಮ ಆಶೀರ್ವಾದ ಸದಾ ಇರಲಿ" ಎಂದು ನಟ ರೂಪೇಶ್ ಶೆಟ್ಟಿ ಅವರು ಬರೆದುಕೊಂಡಿದ್ದಾರೆ.
ನಿರೂಪಕನಾಗಿ ಅರಳು ಹುರಿದಂತೆ ಪಟಪಟನೆ ಮಾತಾನಾಡುತ್ತಾ ಶೋತೃಗಳ ಮನ ಸೆಳೆದ ಹುಡುಗ ರೂಪೇಶ್ ಶೆಟ್ಟಿ. ತುಳು ಸಿನಿಮಾ ಮೂಲಕ ನಟನೆಗೆ ಕಾಲಿಟ್ಟ ಈಕೆ ಮುಂದೆ ಕನ್ನಡ ಸಿನಿಮಾದಲ್ಲಿಯೂ ನಾಯಕನಾಗಿ ನಟಿಸಿದ್ದರು. ಇದೀಗ ಮೊದಲ ಬಾರಿಗೆ ತಮಿಳು ಸಿನಿಮಾದಲ್ಲಿ ನಟಿಸುವ ಮೂಲಕ ಅಲ್ಲೂ ನಟನಾ ಕಂಪನ್ನು ಪಸರಿಸಲು ತಯಾರಾಗುತ್ತಿದ್ದಾರೆ.
ಜೊತೆಗೆ ಸೌತ್ ಸಿನಿಮಾ ಇಂಡಸ್ಟ್ರಿಯ ಬಹು ಬೇಡಿಕೆಯ ನಟರ ಪೈಕಿ ಯೋಗಿ ಬಾಬು ಕೂಡ ಒಬ್ಬರು. ತಮಿಳು ಹಾಗೂ ತೆಲುಗು ಸಿನಿಮಾರಂಗದಲ್ಲಿ ಗುರುತಿಸಿಕೊಂಡಿರುವ ಯೋಗಿ ಬಾಬು ಅವರೊಂದಿಗೆ ತೆರೆ ಹಂಚಿಕೊಳ್ಳುವ ಸುವರ್ಣಾವಕಾಶ ರೂಪೇಶ್ ಶೆಟ್ಟಿಗೆ ದೊರಕಿದೆ. ರೂಪೇಶ್ ಶೆಟ್ಟಿ ಹಂಚಿಕೊಂಡಿರುವಂತಹ ಫೋಟೋಗೆ ಸಾವಿರಗಟ್ಟಲೇ ಲೈಕ್ಸ್ ಬಂದಿದೆ. ಬಹಳಷ್ಟು ಜನರು ಕಮೆಂಟ್ ಕೂಡಾ ಮಾಡಿದ್ದಲ್ಲದೇ ಶುಭ ಹಾರೈಸಿದ್ದಾರೆ.

ಇದರ ಜೊತೆಗೆ ರೂಪೇಶ್ ಶೆಟ್ಟಿ ನಾಯಕನಾಗಿ ನಟಿಸಿರುವ 'ಮಂಕು ಭಾಯ್ ಫಾಕ್ಸಿ ರಾಣಿ' ಸಿನಿಮಾವೂ ಒಟಿಟಿಗೆ ಬಂದಿದೆ. ಈ ವಿಚಾರವನ್ನು ಕೂಡಾ ಸ್ವತಃ ರೂಪೇಶ್ ಶೆಟ್ಟಿ ಅವರೇ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. "ಮಂಕು ಬಾಯ್ ಫಾಕ್ಸಿ ರಾಣಿ' ಸಿನಿಮಾದ ಪೋಸ್ಟರ್ ಅನ್ನು ಹಂಚಿಕೊಂಡಿರುವ ರೂಪೇಶ್ ಶೆಟ್ಟಿ 'ನನ್ನ ನಟನೆಯ, ಗಗನ್ ಅವರ ನಿರ್ದೇಶನದ ಸಿನಿಮಾ 'ಮಂಕು ಭಾಯಿ ಫಾಕ್ಸಿ ರಾಣಿ ಕನ್ನಡ' ಸಿನಿಮಾವನ್ನು ಅಮೆಜಾನ್ ಪ್ರೈಂ ವಿಡಿಯೋದಲ್ಲಿ ನೋಡಿ ಆಶೀರ್ವದಿಸಿ" ಎಂದು ಅವರು ಬರೆದುಕೊಂಡಿದ್ದರು.


Click it and Unblock the Notifications











