ಬಿಗ್ ಬಾಸ್ ಸ್ಫರ್ಧಿಯ ಮನೆಯಲ್ಲಿ ಅಗ್ನಿ ಅವಘಡ, ಬೆಂಕಿ ನಂದಿಸಲು ಹರಸಾಹಸ
''ಬಿಗ್ ಬಾಸ್'' ಭಾರತದ ಜನಪ್ರಿಯ ಕಾರ್ಯಕ್ರಮದಲ್ಲೊಂದು. ಅದರಲ್ಲಿ ದೂಸ್ರಾ ಮಾತಿಲ್ಲ. ನಿಜಾ. ಈ ಕಾರ್ಯಕ್ರಮದ ಬಗ್ಗೆ ಸಾರ್ವತ್ರಿಕ ವಲಯದಲ್ಲಿ ಅಸಮಾಧಾನ ಅಸಹನೆಯ ಅಲೆ ಮೊದಲಿಂದ ಇದ್ದೇ ಇದೆ. ಆದರೂ ಕೂಡ ಬಹುದೊಡ್ಡ ವರ್ಗಕ್ಕೆ ''ಬಿಗ್ ಬಾಸ್'' ಕಾರ್ಯಕ್ರಮ ಅಚ್ಚು ಮೆಚ್ಚು. ಇದಕ್ಕೆ ಕೈಗನ್ನಡಿ ಎಂಬಂತೆ ಕಳೆದ ಹಲವು ವರ್ಷಗಳಿಂದ ಎಲ್ಲ ಭಾಷೆಗಳಲ್ಲಿ ''ಬಿಗ್ ಬಾಸ್''ನ ಮೆರವಣಿಗೆ ...
ಯಾವ ಅಡೆ ತಡೆಯಿಲ್ಲದೇ ನಡೆಯುತ್ತಿದೆ. ಇಂಥಾ ''ಬಿಗ್ ಬಾಸ್'' ಕಾರ್ಯಕ್ರಮದಲ್ಲಿ ಇಲ್ಲಿಯವರೆಗೆ ಬೇರೆ ಬೇರೆ ಭಾಷೆಗಳಲ್ಲಿ ಹಲವಾರು ಜನ ಸ್ಫರ್ಧಿಗಳಾಗಿ ಭಾಗವಹಿಸಿದ್ದಾರೆ. ಗೆದ್ದಿದ್ದಾರೆ. ಸೋತಿದ್ದಾರೆ. ಆ ಪೈಕಿ ಶಿವ್ ಠಾಕರೆ ಕೂಡ ಒಬ್ಬರು. ಹೌದು, ಶಿವ್ ಠಾಕರೆ .. ಹಿಂದಿ ''ಬಿಗ್ ಬಾಸ್'' ಸೀಸನ್ 16ರ ಸ್ಫರ್ಧಿ. ಇಷ್ಟೇ ಅಲ್ಲ ಮರಾಠಿ ''ಬಿಗ್ ಬಾಸ್'' ಎರಡನೇ ಸೀಸನ್‌ನ ವಿನ್ನರ್ ಕೂಡ ಹೌದು. ಖತ್ರೋನ್ ಕೆ ಖಿಲಾಡಿ ಮೂಲಕ ಜನ ಮನ ಗೆದ್ದವರು ಕೂಡ ಇವರು.

ಹೀಗೆ ರಿಯಾಲಿಟಿ ಶೋ ಕಾರ್ಯಕ್ರಮಗಳ ಮೂಲಕವೇ ಬದುಕು ರೂಪಿಸಿಕೊಂಡ ಶಿವ್ ಠಾಕರೆ ಅವರ ಮನೆ ಸದ್ಯ ಬೆಂಕಿ ಅನಾಹುತಕ್ಕೀಡಾಗಿದೆ. ಮುಂಬೈನ ಗೋರೆಗಾಂವ್ನಲ್ಲಿರುವ ಇವರ ಐಷಾರಾಮಿ ಫ್ಲಾಟ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಭಾರೀ ಪ್ರಮಾಣದಲ್ಲಿ ಹಾನಿಯಾಗಿದೆ. ಮನೆಯ ಕೆಲವು ಪ್ರಮುಖ ಭಾಗಗಳು ಸುಟ್ಟು ಭಸ್ಮವಾಗಿವೆ.
ಬೆಂಕಿ ಆಕಸ್ಮಿಕವಾದ ಬಳಿಕ ನಟ ಶಿವ್ ಠಾಕರೆ ಮಾಧ್ಯಮದವರೊಂದಿಗೆ ತಮ್ಮ ನೋವಿನ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಇಂತಹ ದುರಂತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವುದು ಎಷ್ಟು ಮುಖ್ಯ ಎಂಬುದನ್ನು ಈ ಘಟನೆಯಿಂದ ಕಲಿತೆ ಎಂದು ಹೇಳಿದ್ದಾರೆ.
ಹೊತ್ತಿಕೊಂಡಿದ್ಹೇಗೆ ಬೆಂಕಿ ?
ಈ ದುರ್ಘಟನೆ ಮಂಗಳವಾರ ಬೆಳಗ್ಗೆ ಸುಮಾರು 10 ಗಂಟೆಗೆ ಸಂಭವಿಸಿದೆ. ಹಿಂದಿನ ರಾತ್ರಿ ನಡೆದ ಒಂದು ಸಮಾರಂಭದಲ್ಲಿ ಭಾಗವಹಿಸಿ ತಡವಾಗಿ ಮನೆಗೆ ಬಂದಿದ್ದ ಶಿವ್ ಅವರು ಮಲಗಿದ್ದರು. ಈ ವೇಳೆ ಬೆಂಕಿ ಅವಘಡ ಸಂಭವಿಸಿದೆ.
ವಿದ್ಯುತ್ನ ಶಾರ್ಟ್ ಸರ್ಕ್ಯೂಟ್ನಿಂದ ಮನೆಯ ಹಾಲ್ನಲ್ಲಿ ಬೆಂಕಿ ಪ್ರಾರಂಭವಾಗಿದೆ ಎಂದು ತಿಳಿದುಬಂದಿದೆ. ವಿದ್ಯುತ್ ತಂತಿಯ ವೈಫಲ್ಯವೇ ಇದಕ್ಕೆ ಪ್ರಮುಖ ಕಾರಣ. ಬೆಂಕಿ ಕ್ಷಣ ಮಾತ್ರದಲ್ಲಿ ಇಡೀ ಕೋಣೆಯನ್ನು ಆವರಿಸಿದೆ.

ಸದ್ಯಕ್ಕೆ ಆಸ್ಪತ್ರೆಗೆ ದಾಖಲಾಗುವಂತಹ ದೊಡ್ಡ ಗಾಯಗಳೇನೂ ಆಗಿಲ್ಲ. ಶಿವ್ ಅವರು ಪವಾಡಸದೃಶವಾಗಿ ಪಾರಾಗಿದ್ದಾರೆ. ಬೆಂಕಿಯಿಂದ ಹಾನಿಗೊಳಗಾದ ಅವರ ಮನೆಯ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸದ್ದು ಮಾಡುತ್ತಿವೆ.
ಶಿವ್ ಠಾಕರೆ ಏನಂದರು?
ನಾನು ಮಲಗಿದ್ದಾಗ ನನ್ನ ಕೋಣೆಯ ಹೊರಗೆ ಸಣ್ಣ ಸದ್ದು ಕೇಳಿಸಿತು. ಜೊತೆಗೆ ತೀವ್ರವಾದ ಹೊಗೆಯ ವಾಸನೆ ಬಂತು" ಎಂದು ನಟ ಶಿವ್ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ತಕ್ಷಣ ಎಚ್ಚರಗೊಂಡು ಹೊರಬಂದಾಗ ಮನೆಯ ಸ್ಥಿತಿ ನೋಡಿ ಬೆಚ್ಚಿಬಿದ್ದಿದ್ದಾಗಿ ಹೇಳಿದ್ದಾರೆ.
ಮೊದಲಿಗೆ ಮನೆಯ ಕೆಲಸದ ಸಹಾಯಕರು ಬಾಗಿಲು ತೆರೆದರು. ಪರಿಸ್ಥಿತಿ ಕೈಮೀರುತ್ತಿದೆ ಎಂದು ಅರಿತ ತಕ್ಷಣವೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಲಾಯಿತು. ಬೆಂಕಿಯನ್ನು ನಿಯಂತ್ರಿಸಲು ಅವರು ತಕ್ಷಣ ಓಡೋಡಿ ಬಂದರು ಎಂದು ಶಿವ್ ಠಾಕರೆ ಹೇಳಿದ್ಧಾರೆ.
ನನ್ನ ಮನೆಯ ಲಿವಿಂಗ್ ರೂಂ ಸಂಪೂರ್ಣ ನಾಶವಾಗಿದೆ. ನನ್ನ ದೇವರ ಮೂರ್ತಿಗಳಿದ್ದ ಮಂದಿರವೂ ಸುಟ್ಟು ಹೋಗಿದೆ. ಆದರೆ ಬೆಂಕಿ ನನ್ನ ಮಲಗುವ ಕೋಣೆಯನ್ನು ತಲುಪಲಿಲ್ಲ. ಇದೇ ನನಗೆ ದೇವರಿಂದ ದೊರೆತ ದೊಡ್ಡ ವರ ಎಂದು ಬಿಗ್ ಬಾಸ್ 16ರ ಸ್ಪರ್ಧಿ ಶಿವ್ ಠಾಕರೆ ಕಣ್ಣೀರು ಹಾಕಿದ್ದಾರೆ. ನಾನು ಒಂದು ದಿನ ಮುಂಚೆಯೇ ಮನೆಗೆ ಬಂದಿದ್ದು ನನ್ನ ಅದೃಷ್ಟ. ಇಲ್ಲವಾದರೆ ಇಡೀ ಮನೆಯೇ ಭಸ್ಮವಾಗುತ್ತಿತ್ತು ಎಂದು ಅವರು ದೇವರಿಗೆ ಧನ್ಯವಾದವನ್ನು ಕೂಡ ಸಲ್ಲಿಸಿದ್ದಾರೆ.
ನೆಚ್ಚಿನ ತಾರೆಯ ಮನೆಗೆ ಭಾರಿ ಹಾನಿ: ಅಭಿಮಾನಿಗಳ ಬೆಂಬಲ...
ಈ ಶಾರ್ಟ್ ಸರ್ಕ್ಯೂಟ್ ದುರಂತ ನಿಜಕ್ಕೂ ಎಚ್ಚರಿಕೆ ನೀಡುವಂತಿದೆ. ಜನಪ್ರಿಯ ಸೆಲೆಬ್ರಿಟಿಗಳ ನಿವಾಸದಲ್ಲಿ ಇಂತಹ ಘಟನೆಗಳು ನಡೆಯುವುದು ಅತ್ಯಂತ ದುಃಖಕರ. ಲಕ್ಷಾಂತರ ಅಭಿಮಾನಿಗಳ ಪ್ರೀತಿಗೆ ಪಾತ್ರರಾದ ಈ ನಟನಿಗೆ ಆದ ಆಘಾತದಿಂದ ಎಲ್ಲರೂ ಬೇಸರಗೊಂಡಿದ್ದಾರೆ.
ಶಿವ್ ಠಾಕರೆ ಅವರು ತಮ್ಮ ವಸತಿ ಸಮುಚ್ಚಯದ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ವಿದ್ಯುತ್ ವೈರಿಂಗ್ಗಳನ್ನು ಕಡ್ಡಾಯವಾಗಿ ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ. ಪ್ರತಿಯೊಬ್ಬರೂ ಈ ವಿಚಾರದಲ್ಲಿ ಜಾಗರೂಕರಾಗಿರಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಸಕಾಲದಲ್ಲಿ ಬಂದು ನೆರವಾದ ಅಗ್ನಿಶಾಮಕ ದಳದವರಿಗೆ ಅವರು ಕೃತಜ್ಞತೆಗಳನ್ನು ಸಲ್ಲಿಸಿರುವ ಶಿವ್ ಠಾಕರೆ, ಅಗ್ನಿಶಾಮಕದ ದಳದವರ ತ್ವರಿತ ಕಾರ್ಯಚರಣೆಯಿಂದ ಹೆಚ್ಚಿನ ಆಸ್ತಿ ನಷ್ಟವಾಗಿಲ್ಲ ಎಂದು ಹೇಳಿದ್ದಾರೆ.
ಶಿವ್ ಅವರ ಸ್ನೇಹಿತರು ಮತ್ತು ಚಿತ್ರರಂಗದ ಸಹೋದ್ಯೋಗಿಗಳು ಕರೆ ಮಾಡಿ ಸಾಂತ್ವನ ಹೇಳಿದ್ದಾರೆ. ಈ ಕಠಿಣ ಪರಿಸ್ಥಿತಿಯಲ್ಲಿ ಶಿವ್ ಠಾಕರೆಗೆ ಅಭಿಮಾನಿಗಳ ಪ್ರೀತಿಯ ಬೆಂಬಲ ಸಿಕ್ಕಿದೆ. ಸದ್ಯಕ್ಕೆ ಅವರು ಮನೆಯ ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದಾರೆ.


Click it and Unblock the Notifications











