ನೀವು ಕೂಡ ಈ ಬಾರಿ ಬಿಗ್ ಬಾಸ್‌ನಲ್ಲಿ ಭಾಗವಹಿಸಬಹುದು, ಈಗಲೇ ಅರ್ಜಿ ಸಲ್ಲಿಸಿ..!
ಬಿಗ್ ಬಾಸ್ ಮೂಲಕ ಅನೇಕರು ಬೆಳಕಿಗೆ ಬಂದಿದ್ದಾರೆ. ಆ ನಂತರ ತಮ್ಮಲ್ಲಿನ ಪ್ರತಿಭೆಯಿಂದ ಬೆಳೆದಿದ್ದಾರೆ. ಕೆಲವರು ಕಿರುತೆರೆಯಲ್ಲಿ .. ಇನ್ನು ಕೆಲವರು ಚಿತ್ರರಂಗದಲ್ಲಿ ಹೆಸರನ್ನು ಸಂಪಾದಿಸಿದ್ದಾರೆ. ಮಿಂಚಿದ್ದಾರೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲ ಬೇರೆ ಬೇರೆ ಭಾಷೆಯಲ್ಲಿ ಕೂಡ ಬಿಗ್ ಬಾಸ್ ಅನೇಕರ ಬದುಕು ಬದಲಿಸಿದೆ. ಇಂಥಾ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗಿಯಾಗುವ ಕನಸನ್ನು ಅನೇಕರು ಕಾಣುತ್ತಾರೆ.
ಆಯೋಜಕರ ಗಮನ ಸೆಳೆಯಲು ನಾನಾ ಕಸರತ್ತು ಕೂಡ ಮಾಡುತ್ತಾರೆ. ಆದರೆ ಬಿಗ್ ಬಾಸ್ ವರ ಎಲ್ಲರಿಗೆ ಸಿಗಲ್ಲ. ಯಾಕೆಂದರೆ ಅದಕ್ಕೆ ಅದ್ರದ್ದೇ ಆದ ನೀತಿ ನಿಯಮಗಳಿವೆ.

ಇನ್ನು ಪ್ರತಿ ವರ್ಷ ಬಿಗ್ ಬಾಸ್ ಶುರುವಾಗುವ ಆಚೀಚೆ ಕೇವಲ ಸೆಲೆಬ್ರೆಟಿಗಳಿಗೆ ಮಾತ್ರವಲ್ಲ ಜನಸಾಮಾನ್ಯರಿಗೆ ಕೂಡ ಬಿಗ್ ಬಾಸ್ ಮನೆಯಲ್ಲಿ ಪ್ರವೇಶ ನೀಡಬೇಕೆಂಬ ಕೂಗು ಕೇಳಿ ಬರುತ್ತೆ. ಸೆಲೆಬ್ರಿಟಿಗಳನ್ನು ಸೆಲೆಬ್ರಿಟಿಗಳನ್ನಾಗಿ ಮಾಡುವುದು ಮುಖ್ಯ ಅಲ್ಲ, ಜನಸಾಮಾನ್ಯರಿಗೆ ಅವಕಾಶ ನೀಡಿ ಅವರನ್ನು ಸೆಲೆಬ್ರಿಟಿ ಮಾಡುವುದು ಮುಖ್ಯ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತೆ.
ವ್ಯಕ್ತವಾದ ಈ ಅಭಿಪ್ರಾಯಗಳನ್ನು ಗೌರವಿಸಿ ಹಿಂದಿ - ಕನ್ನಡ ಸೇರಿ ಬೇರೆ ಭಾಷೆಗಳಲ್ಲಿ ಕೂಡ ಹಿಂದೆ ಕಾಮನ್‌ಮ್ಯಾನ್‌ಗಳಿಗೆ ಅವಕಾಶವನ್ನು ಕೂಡ ನೀಡಲಾಗಿದೆ. ಆದರೆ.. ಈ ಸುವರ್ಣ ಅವಕಾಶ ಜನಸಾಮಾನ್ಯರಿಗೆ ಪ್ರತಿ ವರ್ಷ ಸಿಕ್ಕಿಲ್ಲ. ಅಲ್ಲೊಮ್ಮೆ.. ಇಲ್ಲೊಮ್ಮೆ ಇಂತಹ ಪ್ರಯತ್ನಗಳಾಗಿವೆ. ಈ ಪ್ರಯತ್ನವನ್ನು ತೆಲುಗು ಬಿಗ್ ಬಾಸ್ ನ ಆಯೋಜಕರು ಈ ವರ್ಷ ಮಾಡಲು ಮುಂದಾಗಿದ್ದಾರೆ.
ಹೌದು, ಪಕ್ಕದ ಆಂಧ್ರ ಪ್ರದೇಶದಲ್ಲಿ ಬಿಗ್ ಬಾಸ್‌ನ ಒಂಬತ್ತನೇ ಸೀಸನ್‌ಗೆ ದಿನಗಣನೆ ಆರಂಭವಾಗಿದೆ. ಈ ಬಾರಿ ಕೂಡ ಟಾಲಿವುಡ್ ಕಿಂಗ್ ನಾಗಾರ್ಜುನ ಅವರೇ ಬಿಗ್ ಬಾಸ್ ನಿರೂಪಣೆಯ ಜವಾಬ್ಧಾರಿಯನ್ನು ವಹಿಸಿಕೊಂಡಿದ್ದು ಎರಡು ಮೂರು ದಿನಗಳ ಹಿಂದೆ ಬಿಗ್ ಬಾಸ್ ಪ್ರೋಮೋದಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಈ ಬಾರಿ ಚದುರಂಗ ಅಲ್ಲ ರಣರಂಗ ಎಂಬ ಡೈಲಾಗ್ ಕೂಡ ಹೊಡೆದಿದ್ದಾರೆ.
ಸದ್ಯ ಬಿಡುಗಡೆಯಾದ ಈ ಹೊಸ ಪ್ರೋಮೋ ತೆಲುಗು ಬಿಗ್ ಬಾಸ್ ಪ್ರೇಕ್ಷಕರ ಸಂಭ್ರಮಕ್ಕೆ ಕಾರಣವಾಗಿದೆ. ನಾಗಾರ್ಜುನ ಮತ್ತೆ ಬಿಗ್ ಬಾಸ್ ಮನೆಗೆ ಮರಳಿರುವುದು ಅನೇಕರಿಗೆ ಖುಷಿಯನ್ನು ನೀಡಿದೆ. ಇದರ ನಡುವೆ ಇದೀಗ ಬಿಗ್ ಬಾಸ್ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿರುವ ಸ್ಟಾರ್ ಮಾ ವಾಹಿನಿ ಹೊಸ ಪ್ರೋಮೋ ಮೂಲಕ ಬಿಗ್ ಬಾಸ್ ಮನೆಗೆ ಬರುವಂತೆ ಕಾಮನ್ ಮ್ಯಾನ್‌ಗಳಿಗೆ ಆಮಂತ್ರಣವನ್ನು ನೀಡಿದೆ. ಈ ಮೂಲಕ ಸಾಮಾನ್ಯ ಜನರಿಗೆ ಬಿಗ್ ಬಾಸ್ ಬಾಗಿಲನ್ನು ತೆರೆದಿದೆ.
ಬಿಡುಗಡೆಯಾದ ಹೊಸ ಪ್ರೋಮೊದಲ್ಲಿ ಈ ಕುರಿತು ಮಾತನಾಡಿರುವ ನಾಗಾರ್ಜುನ, ಇಲ್ಲಿಯವರೆಗೆ ನೀವು ಬಿಗ್ ಬಾಸ್ ಕಾರ್ಯಕ್ರಮವನ್ನು ಮೆಚ್ಚಿದ್ದೀರಾ, ಪ್ರೀತಿಸಿದ್ದೀರಾ, ಇಷ್ಟೊಂದು ಪ್ರೀತಿ ನೀಡಿದ್ದಕ್ಕೆ ನಾನು ನಿಮಗೆ ರಿಟರ್ನ್ ಗಿಫ್ಟ್ ನೀಡಬೇಕು ಎಂದಿದ್ದಾರೆ. ನೀವು ತುಂಬಾ ಪ್ರೀತಿಸಿದ ಬಿಗ್ ಬಾಸ್ ಮನೆಗೆ ನಿಮಗೆ ಪ್ರವೇಶ ನೀಡುವುದೇ ರಿಟರ್ನ್ ಗಿಫ್ಟ್ ಎಂದು ಹೇಳಿದ್ದಾರೆ. ಈ ಬಾರಿ, ಕೇವಲ ಸೆಲೆಬ್ರಿಟಿಗಳು ಬಿಗ್ ಬಾಸ್ ಮನೆಗೆ ಪ್ರವೇಶಿಸುತ್ತಿಲ್ಲ. ನಾವು ನಿಮಗೂ ಒಂದು ಅವಕಾಶ ನೀಡುತ್ತಿದ್ದೇವೆ ಎಂದು ನಾಗಾರ್ಜುನ ಹೇಳಿದ್ದಾರೆ. ಬಿಗ್ ಬಾಸ್ 9ರ ಮನೆಯ ಬಾಗಿಲುಗಳು ನಿಮಗಾಗಿ ಕಾಯುತ್ತಿವೆ ಎಂದು ಕೂಡ ಹೇಳಿದ್ದಾರೆ.
ಅಂದ್ಹಾಗೇ ತೆಲುಗು ಬಿಗ್ ಬಾಸ್ ಸೀಸನ್ 9ರಲ್ಲಿ ಭಾಗವಹಿಸಲು ಬಯಸುವವರು www.bb9.jiostar.com ವೆಬ್‌ಸೈಟ್‌ಗೆ ಲಾಗಿನ್ ಆಗಿ ಹೆಸರು ನೋಂದಾಯಿಸಿಕೊಳ್ಳಬೇಕು ಮತ್ತು ಬಿಗ್ ಬಾಸ್ 9 ರಲ್ಲಿ ತಾವು ಭಾಗವಹಿಸಲು ಬಯಸಿದ್ದೇಕೆ ಎಂದು ಕಾರಣವನ್ನು ಹೇಳುವ ವೀಡಿಯೊವನ್ನು ಅಪ್‌ಲೋಡ್ ಮಾಡಬೇಕು. ಹೀಗೆ ಕಳುಹಿಸಲಾದ ಅರ್ಜಿಗಳನ್ನೆಲ್ಲ ಪರಿಶೀಲಿಸಿ ಅಳೆದು ತೂಗಿ ಕಲೆವರಿಗೆ ಅವಕಾಶವನ್ನು ನೀಡಲು ಬಿಗ್ ಬಾಸ್ ಆಯೋಜಕರು ಮುಂದಾಗಿದ್ದಾರೆ. ಇನ್ನುಳಿದಂತೆ ಬಿಗ್ ಬಾಸ್ ಸೀಸನ್ 9ರ ಪ್ರಸಾರದ ದಿನಾಂಕ ಶೀಘ್ರದಲ್ಲಿಯೇ ಹೊರ ಬೀಳುವ ಸಾಧ್ಯತೆ ಇದೆ.


Click it and Unblock the Notifications











