ನಾಳೆಯಿಂದ 'ಬಿಗ್ ಬಾಸ್' ಶುರು, ಇಲ್ಲಿದೆ ಸ್ಪರ್ಧಿಗಳ ಕಂಪ್ಲೀಟ್ ಲಿಸ್ಟ್
''ಬಿಗ್ ಬಾಸ್'' ಜನಪ್ರಿಯವಾದ ಕಾರ್ಯಕ್ರಮ. ಹಲವರು ಈ ಕಾರ್ಯಕ್ರಮವನ್ನು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ನೋಡುತ್ತಾರೆ. ಕೇವಲ ಹಿಂದಿಯಲ್ಲಿ ಮಾತ್ರವಲ್ಲ ಕನ್ನಡ, ತೆಲುಗು, ಮಲಯಾಳಂ, ತಮಿಳು ಮತ್ತು ಮರಾಠಿಯಲ್ಲಿ ಈ ಕಾರ್ಯಕ್ರಮಕ್ಕೆ ಅದ್ರದ್ದೇ ಆದ ಡಿಮ್ಯಾಂಡ್ ಇದೆ.ಹಿಂದಿಯಲ್ಲಿ ಜನಪ್ರಿಯವಾದ ನಂತರ ''ಬಿಗ್ ಬಾಸ್'' ದಕ್ಷಿಣದ ಭಾಷೆಗಳಲ್ಲಿ ಆರಂಭವಾಗಿತ್ತು.''ಕನ್ನಡ''ದ ಕಾರ್ಯಕ್ರಮದ ಸಾರಥ್ಯವನ್ನು ಕಳೆದ ಹನ್ನೊಂದು ವರ್ಷದಿಂದ...
''ಸುದೀಪ್'' ವಹಿಸಿಕೊಂಡಿದ್ದರೆ ತೆಲುಗಿನಲ್ಲಿ ''ನಾಗಾರ್ಜುನ'' ಉಸ್ತುವಾರಿಯಲ್ಲಿ ಕಾರ್ಯಕ್ರಮ ಮೂಡಿ ಬರುತ್ತಿದೆ. ತಮಿಳಿನಲ್ಲಿ ಈ ಜವಾಬ್ದಾರಿಯನ್ನು ''ಕಮಲ್ ಹಾಸನ್'' ಕಳೆದ ವರ್ಷದಿಂದ ''ವಿಜಯ್ ಸೇತುಪತಿ'' ಅವರಿಗೆ ವಹಿಸಿದ್ದಾರೆ. ಮಲಯಾಳಂನಲ್ಲಿ ''ಮೋಹನ್ ಲಾಲ್'' ಈ ''ಬಿಗ್ ಬಾಸ್'' ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದ್ದಾರೆ. ಮರಾಠಿಯಲ್ಲಿ ರಿತೇಶ್ ದೇಶ್‌ಮುಖ್ ಅವರಿಗೆ ಈ ಜವಾಬ್ದಾರಿ ವಹಿಸಲಾಗಿದೆ.

ಇಂಥಾ ''ಬಿಗ್ ಬಾಸ್''ನ ಕಲರವ ಈಗಾಗಲೇ ಎಲ್ಲೆಡೆ ಶುರುವಾಗಿದೆ. ಮಲಯಾಳಂ ಮತ್ತು ಹಿಂದಿಯಲ್ಲಿ ಕಾರ್ಯಕ್ರಮ ರಂಗೇರಿದೆ. ಮಲಯಾಳಂನಲ್ಲಿ ಬಿಗ್ ಬಾಸ್ ಐದನೇ ವಾರಕ್ಕೆ ಕಾಲಿಟ್ಟಿದ್ದರೆ ಹಿಂದಿಯಲ್ಲಿ ಬಿಗ್ ಬಾಸ್ ಎರಡು ವಾರಗಳನ್ನು ಪೂರೈಸಿದೆ. ಈಗ ''ತೆಲುಗು ಬಿಗ್ ಬಾಸ್''ನ ಸರದಿ.
ಹೌದು, ಮಲಯಾಳಂ ಮತ್ತು ಹಿಂದಿ ಬೆನ್ನಲ್ಲಿಯೇ ಈಗ ತೆಲುಗಿನಲ್ಲಿ ''ಬಿಗ್ ಬಾಸ್''ನ ಒಂಬತ್ತನೇ ಸೀಸನ್ ಶುರುವಾಗುತ್ತಿದೆ. ನಾಳೆ ಈ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ ಸಿಗಲಿದೆ.
ಇನ್ನು ಪ್ರತಿ ವರ್ಷ ''ಬಿಗ್ ಬಾಸ್'' ಶುರುವಾಗುವ ಆಚೀಚೆ ಈ ಬಾರಿ ಕಾರ್ಯಕ್ರಮದಲ್ಲಿ ಯಾರೆಲ್ಲಾ ಭಾಗವಹಿಸಬಹುದು ಎನ್ನುವ ಕುತೂಹಲ ಹಲವರಲ್ಲಿರುತ್ತೆ. ಹಲವು ಹೆಸರುಗಳು ಅಂತೆ ಕಂತೆಯ ಸಂತೆಯಲ್ಲಿ ಚಾಲ್ತಿ ಕೂಡ ಇರುತ್ತವೆ. ಈ ವರ್ಷ ಇದೇ ತರಹದ ವಾತಾವರಣ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಬಾರಿ ತೆಲುಗು ''ಬಿಗ್‌ಬಾಸ್''ನಲ್ಲಿ ಸಾಮಾನ್ಯ ಜನರಿಗೆ ಕೂಡ ಅವಕಾಶವನ್ನು ಕಲ್ಪಿಸಲಾಗಿದೆ. ''ಬಿಗ್ ಬಾಸ್''ನ ಈ ನಡೆಯಿಂದ ಈ ಬಾರಿ ಆಂಧ್ರ ಮತ್ತು ತೆಲಂಗಾಣದಲ್ಲಿ ಯಾರಿಗೆಲ್ಲಾ ಲಾಟರಿ ಹೊಡೆಯಬಹುದು ಎನ್ನುವ ಕುತೂಹಲವಂತೂ ಇದ್ದೇ ಇದೆ.ಇದಕ್ಕೆ ಪೂರಕವಾಗಿ ನಾಳೆಯಿಂದ (ಸೆಪ್ಟೆಂಬರ್ 7) ಶುರುವಾಗಲಿರುವ ತೆಲುಗು ''ಬಿಗ್ ಬಾಸ್''ನಲ್ಲಿ ಭಾಗವಹಿಸಲಿರುವ ಸ್ಫರ್ಧಿಗಳ ಲಿಸ್ಟ್ ಸದ್ಯ ವೈರಲ್ ಆಗಿದ್ದು ಆ ಪಟ್ಟಿ ಈ ಕೆಳಗಿನಂತೆ ಇದೆ.
ತೆಲುಗು 'ಬಿಗ್ ಬಾಸ್'ನ ಸಂಭಾವ್ಯ ಸ್ಫರ್ಧಿಗಳ ಪಟ್ಟಿ
* ಇಮ್ಯಾನ್ಯುಯೆಲ್ - 'ಜಬರ್‌ದಸ್ತ್' ಕಾರ್ಯಕ್ರಮದ ಮೂಲಕ ಬೆಳಕಿಗೆ ಬಂದ, ತಮ್ಮ ಹಾಸ್ಯ ಪ್ರಜ್ಞೆಯಿಂದ ಹೆಸರುವಾಸಿಯಾದ ಇಮ್ಯಾನ್ಯುಯೆಲ್ ಈ ಬಾರಿ ''ಬಿಗ್ ಬಾಸ್'' ಮನೆಯನ್ನು ಪ್ರವೇಶ ಮಾಡಲಿದ್ದಾರೆ ಎನ್ನುವ ಸುದ್ದಿ ಇದೆ.
* ಫ್ಲೋರಾ ಸೈನಿ - ಫ್ಲೋರಾ ಸೈನಿ ಅಲಿಯಾಸ್ ಆಶಾ ಸೈನಿ. ಚಂಡೀಗಡನ ಚೆಲುವೆ. 1999ರಲ್ಲಿ ತೆಲುಗಿನ ''ಪ್ರೇಮಕೋಸಂ'' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಫ್ಲೋರಾ ಆ ನಂತರ ನಾಯಕಿಯಾಗಿ ಹೆಚ್ಚು ಕಡಿಮೆ 50 ಚಿತ್ರಗಳನ್ನು ಮಾಡಿದರು. ತೆಲುಗಿನಿಂದ ಆ ನಂತರ ಕನ್ನಡ ಚಿತ್ರರಂಗಕ್ಕೂ ಕೂಡ ವಲಸೆ ಬಂದಿದ್ದ ಫ್ಲೋರಾ ಸೈನಿ, ಶಿವರಾಜ್ ಕುಮಾರ್ ಮತ್ತು ರವಿಚಂದ್ರನ್ ಅಭಿನಯದ ''ಕೋದಂಡರಾಮ'' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ''ಸಂಗೀತಾ'' ಪಾತ್ರವನ್ನು ನಿರ್ವಹಿಸಿದ್ದರು.
ಆ ನಂತರ ''ಗಿರಿ''.. ''ನಮ್ಮಣ್ಣ''.. ''ವ್ಹಾರೇ ವ್ಹಾ''.. ''ಸಿಐಡಿ ಈಶಾ''.. ಚಿತ್ರಗಳಲ್ಲಿ ಕೂಡ ಫ್ಲೋರಾ ಆಕ್ಟ್ ಮಾಡಿದ್ದರು. ಇಂಥಾ ಫ್ಲೋರಾ ಸೈನಿ ಈ ಬಾರಿ ಕೂಡ ನಾಗಾರ್ಜುನ ಸಾರಥ್ಯದಲ್ಲಿ ಸೆಪ್ಟೆಂಬರ್ 7ರಿಂದ ಶುರುವಾಗಲಿರುವ ತೆಲುಗು ''ಬಿಗ್ ಬಾಸ್''ನಲ್ಲಿ ಭಾಗವಹಿಸಲಿದ್ದಾರೆ ಎನ್ನುವ ಸುದ್ದಿ ಸದ್ಯ ಹಬ್ಬಿದೆ. ''ottplay''.. ''ಟಿವಿ9 ತೆಲುಗು'' ಸೇರಿ ಅನೇಕ ಮಾಧ್ಯಮಗಳು ಈ ಕುರಿತು ವರದಿಯನ್ನು ಮಾಡಿವೆ.
* ತನುಜಾ - ''ಮುದ್ದಾ ಮಂದಾರಂ'' ಎಂಬ ಖ್ಯಾತ ಧಾರಾವಾಹಿಯ ಮೂಲಕ ಪ್ರೇಕ್ಷಕರ ಹೃದಯ ಗೆದ್ದ, ಆಂಧ್ರದಲ್ಲೆಡೆ ಮನೆ ಮಾತಾದ ಈ ಚೆಲುವೆಯ ಹೆಸರು ಈ ಬಾರಿಯ ''ಬಿಗ್ ಬಾಸ್'' ಮನೆಯ ಸುತ್ತ ಭಾರೀ ಗಿರಕಿ ಹೊಡೆಯುತ್ತಿದೆ.
* ಸುಮನ್ ಶೆಟ್ಟಿ - ಒಂದ್ಕಾಲದಲ್ಲಿ ಆಂಧ್ರದ ಪಡ್ಡೆಹುಡುಗರನ್ನು ಹುಚ್ಚು ಹಿಡಿಸಿದ್ದ, ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ್ದ ''7/G ಬೃಂದಾವನ ಕಾಲೋನಿ''ಯಲ್ಲಿ ಅಭಿನಯಿಸಿದ್ದ ಸುಮನ್ ಶೆಟ್ಟಿ ಹೆಸರು ಕೂಡ ಈ ಬಾರಿ ಚಾಲ್ತಿಯಲ್ಲಿದೆ.

*ಭರಣಿ ಶಂಕರ್ - ಪಾಸಿಟಿವ್ ಮತ್ತು ನೆಗೆಟಿವ್, ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡು ಹಲವರ ಹೃದಯ ಗೆದ್ದ, ''ಚಿ ಲಾ ಸೌ ಶ್ರಾವಂತಿ'' ಸೇರಿ ಹಲವು ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ಅಭಿನಯಿಸಿರುವ ಭರಣಿ ಶಂಕರ್ ಹೆಸರು ಕೂಡ ಈ ಬಾರಿ ಮುಂಚೂಣಿಯಲ್ಲಿದೆ.
* ರಮ್ಯಾ ಮೋಕ್ಷ - ಅಲೇಖ್ಯ ಚಿಟ್ಟಿ ಉಪ್ಪಿನಕಾಯಿ ಮೂಲಕವೇ ಅಖಂಡ ಆಂಧ್ರದೆಲ್ಲೆಡೆ ಜನಪ್ರಿಯವಾದ ರಮ್ಯಾ ಮೋಕ್ಷ ಅವರ ಹೆಸರು ಕೂಡ ಈ ಬಾರಿ ''ಬಿಗ್ ಬಾಸ್'' ಸುತ್ತ ಮುತ್ತ ಕೇಳಿ ಬರುತ್ತಿದೆ.
* ಜುಬೇದಾ - ತೆಲುಗು ಚಿತ್ರರಂಗದ ಜನಪ್ರಿಯ ಹಾಸ್ಯ ನಟ ಅಲಿ ಅವರ ಪತ್ನಿ ಜುಬೇದಾ ಕೂಡ ಈ ಬಾರಿಯ ''ಬಿಗ್ ಬಾಸ್''ನಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಅಡುಗೆಯಲ್ಲಿ ಪರಿಣಿತಿಯನ್ನು ಹೊಂದಿರುವ ಜುಬೇದಾ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಕೂಡ ಹೊಂದಿದ್ದಾರೆ.
* ಸಂಜನಾ ಗಲ್ರಾನಿ - ಈ ಬಾರಿ ತೆಲುಗು ''ಬಿಗ್ ಬಾಸ್''ನ ಅಚ್ಚರಿಯ ಹೆಸರು ಇದು. ಕನ್ನಡದ ''ಬಿಗ್ ಬಾಸ್'' ಸೀಸನ್ 1ರಲ್ಲಿ ಕಾಣಿಸಿಕೊಂಡಿದ್ದ ಸಂಜನಾ ಗಲ್ರಾನಿ ಈ ಬಾರಿಯ ತೆಲುಗು ''ಬಿಗ್ ಬಾಸ್''ನಲ್ಲಿ ಇರುತ್ತಾರೆ ಎನ್ನುವ ಸುದ್ದಿ ಸದ್ಯ ವ್ಯಾಪಕವಾಗಿ ಕೇಳಿ ಬರುತ್ತಿದೆ.
* ಹರ್ಷಿತ್ ರೆಡ್ಡಿ - ತೆಲುಗು ಚಿತ್ರರಂಗದ ಡಾರ್ಲಿಂಗ್ ಪ್ರಭಾಸ್ ಅವರ ಬಹುದೊಡ್ಡ ಅಭಿಮಾನಿಯಾಗಿರುವ ಹರ್ಷಿತ್ ರೆಡ್ಡಿ ಕೂಡ ಈ ಬಾರಿಯ ''ಬಿಗ್‌ಬಾಸ್''ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಮಂತಾ ನಿರ್ಮಾಣದ ಚಿತ್ರದಲ್ಲಿ ಕೂಡ ಇವರು ಅಭಿನಯಿಸಿರುವುದು ವಿಶೇಷ
ಹೀಗೆ ಇವರೆಲ್ಲರೂ ಈ ಬಾರಿ ತೆಲುಗು ''ಬಿಗ್ ಬಾಸ್ ಸೀಸನ್ 9''ರಲ್ಲಿ ಭಾಗವಹಿಸುತ್ತಾರೆ ಎನ್ನುವ ಸುದ್ದಿ ಹಬ್ಬಿದೆ. ಇವರಲ್ಲಿ ಯಾರೆಲ್ಲಾ ಭಾಗವಹಿಸಲಿದ್ದಾರೆ ಎನ್ನುವುದಕ್ಕೆ ಸ್ಪಷ್ಟವಾದ ಉತ್ತರ ನಾಳೆ (ಸೆಪ್ಟೆಂಬರ್ 7) ಸಿಗಲಿದೆ. ಆಸಕ್ತರು ನಾಳೆ ಸಂಜೆ 7 ಗಂಟೆಯಿಂದ ''ಸ್ಟಾರ್ ಮಾ''ದಲ್ಲಿ ಈ ಕಾರ್ಯಕ್ರಮ ವೀಕ್ಷಿಸಬಹುದು. ಟಿವಿಯಲ್ಲಿ ನೋಡಲು ಸಾಧ್ಯವಾಗದವರಿಗೆ ನೆರವಾಗಲು ಕೊನೆಗೆ ''ಜೀಯೋ ಹಾಟ್ ಸ್ಟಾರ್'' ಅಂತೂ ಇದ್ದೇ ಇದೆ.


Click it and Unblock the Notifications











