ಬಿಗ್ ಬಾಸ್ ವಿನ್ನರ್ ಮೇಲೆ ಬಿತ್ತು ಭೂಗತ ಲೋಕದ ಕಣ್ಣು ; 10 ಕೋಟಿ ಡಿಮ್ಯಾಂಡ್-ಕೊಡದಿದ್ದರೆ ತಂದೆ-ಮಗನ ಕಥೆ ಖತಂ
ಹೆಸರು, ಹಣ, ಕೀರ್ತಿ ಜೊತೆ ಅಪಾಯ ಕೂಡ ಉಚಿತವಾಗಿ ಬರುತ್ತೆ. ಅದರಲ್ಲಿಯೂ ಮನರಂಜನಾ ಕ್ಷೇತ್ರದ ಹೊಳಪು, ಒನಪು, ವಯ್ಯಾರ ಭೂಗತ ಲೋಕವನ್ನು ಬಹುಬೇಗ ಆಕರ್ಷಿಸುತ್ತೆ. ನೇಮು, ಫೇಮು ಗಳಿಸಿದವರ ಮೇಲೆ ಅಂಡರ್ ವರ್ಲ್ಡ್‌ನ ಕಣ್ಣು ಬಹುಬೇಗ ಬೀಳುತ್ತೆ.
ಅದರಲ್ಲಿಯೂ ಬಾಲಿವುಡ್‌ನಲ್ಲಿ ಈಗ ಬೆದರಿಕೆಯ ಕರೆ ಮತ್ತು ಗುಂಡಿನ ದಾಳಿ ಮಾಮೂಲು ಎನ್ನುವಂತೆ ಆಗಿದೆ. ತಿಂಗಳಿನಲ್ಲಿ ಒಬ್ಬರಿಗಾದರೂ ಭೂಗತ ಲೋಕದಿಂದ ಕರೆ ಹೋಗುತ್ತಿದೆ. ಹಣಕ್ಕಾಗಿ ಬೇಡಿಕೆಯನ್ನು ಇಡಲಾಗುತ್ತಿದೆ. ಇದಕ್ಕೆ ಉದಾಹರಣೆ ಎನ್ನುವಂತೆ ಬಾಲಿವುಡ್‌ನ ಪ್ರಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮನೆ ಮೇಲೆ ಗುಂಡಿನ ದಾಳಿ ನಡೆದಿದೆ. ದೀಪಿಕಾ ಪಡುಕೋಣೆಯ ಪತಿ ರಣವೀರ್ ಸಿಂಗ್ ಅವರಿಗೆ ಬೆದರಿಕೆಯನ್ನು ಕೂಡ ಹಾಕಲಾಗಿದೆ. ಈಗ ಎಲ್ವೀಶ್ ಯಾದವ್ ಸರದಿ.

ಹೌದು, ಎಲ್ವಿಶ್ ಯಾದವ್.. ಉತ್ತರದ ಪ್ರಖ್ಯಾತ ಯೂಟ್ಯೂಬರ್ ಗಳಲ್ಲಿ ಒಬ್ಬರು. 2023ರಲ್ಲಿ ವೈಲ್ಡ್ ಕಾರ್ಡ್ ಮೂಲಕ ''ಬಿಗ್ ಬಾಸ್'' ಒಟಿಟಿ ಸೀಸನ್ 2ರ ಮನೆಯನ್ನು ಪ್ರವೇಶ ಮಾಡಿದ್ದ ಎಲ್ವಿಶ್ ಕಪ್ ಸಮೇತ ಮನೆಯಾಚೆ ಬಂದಿದ್ದರು. ಗೆದ್ದು ಬೀಗಿದ್ದರು.
ಆ ನಂತರ ''ಪ್ಲೇ ಗ್ರೌಂಡ್'' ಸೀಸನ್ 4.. ''ಲಾಫ್ಟರ್ ಶೆಫ್ಸ್''.. ''MTV ರೋಡೀಸ್ XX''.. ಅಂತಹ ರಿಯಾಲಿಟಿ ಶೋಗಳಲ್ಲಿ ಕೂಡ ಭಾಗವಹಿಸಿದ ಎಲ್ವಿಶ್ ಅರ್ಧ ಡಜನ್ ಆಲ್ಬಂ ಹಾಡುಗಳನ್ನು ಕೂಡ ಮಾಡಿದ್ದಾರೆ. ಇನ್ನು ಇವರು ಮಾಡಿಕೊಂಡ ವಿವಾದಗಳು ಒಂದೆರಡಲ್ಲ. ರೇವ್ ಪಾರ್ಟಿಯಲ್ಲಿ ಹಾವಿನ ವಿಷ ಬಳಕೆ ಆರೋಪದಡಿ ಜೈಲಿಗೆ ಕೂಡ ಹೋಗಿ ಬಂದಿದ್ದಾರೆ ಇವರು.
ಇಂಥಾ ಎಲ್ವಿಶ್ ಯಾದವ್ ಈಗ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಕೆಂಗಣ್ಣಿಗೆ ಗುರಿಯಾಗಿದ್ದಾರೆ.ಇದಕ್ಕೆ ಪುರಾವೆ ಎಂಬಂತೆ ಸದ್ಯ ಬೆದರಿಕೆ ಕರೆಯೊಂದು ಬಂದಿದೆ. 10 ಕೋಟಿ ರೂಪಾಯಿ ಬೇಡಿಕೆ ಇಡಲಾಗಿದೆ. ಬೇಡಿಕೆ ಈಡೇರಿಸದಿದ್ದರೆ ಕೊಲ್ಲುವುದಾಗಿ ಕರೆಯಲ್ಲಿ ಹೇಳಲಾಗಿದೆ.
''ಟೈಮ್ಸ್ ನೌ ನವ ಭಾರತ'' ವರದಿಯ ಪ್ರಕಾರ ಬೆದರಿಕೆ ಕರೆ ಬಂದ ಬೆನ್ನಲ್ಲೇ ಎಲ್ವಿಶ್ ಯಾದವ್ ಪೊಲೀಸರಿಗೆ ದೂರು ನೀಡಿದ್ದು, ಅವರ ದೂರಿನ ಆಧಾರದ ಮೇಲೆ, ಸೆಕ್ಟರ್-56 ಪೊಲೀಸ್ ಠಾಣೆಯಲ್ಲಿ ಅಜ್ಞಾತ ವ್ಯಕ್ತಿಗಳ ವಿರುದ್ಧ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಪೊಲೀಸರಿಗೆ ನೀಡಿದ ದೂರಿನಲ್ಲಿ ಮೇ 5ರಂದು ವಿದೇಶಿ ಸಂಖ್ಯೆಯಿಂದ ವಾಟ್ಸಾಪ್ ಕರೆ ಬಂದಿರುವುದಾಗಿ ಎಲ್ವಿಶ್ ಹೇಳಿದ್ದು ಆ ಕರೆಯನ್ನು ತಾವು ಸ್ವೀಕರಿಸಲಿಲ್ಲ ಎಂದು ಹೇಳಿದ್ದಾರೆ. ಆ ನಂತರ ಮತ್ತೊಂದು ಫಾರಿನ್ ನಂಬರ್ ದಿಂದ ವಾಟ್ಸಾಪ್ ಮೆಸೇಜ್ ಬಂದಿದ್ದು, ಸಂದೇಶ ಕಳುಹಿಸದ ವ್ಯಕ್ತಿ ತನ್ನನ್ನು ತಾನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ನಿಕಟವರ್ತಿ ರಣದೀಪ್ ಮಲಿಕ್ ಎಂದು ಪರಿಚಯಿಸಿಕೊಂಡಿದ್ದ ಎಂದು ಹೇಳಿರುವ ಎಲ್ವಿಶ್, 10 ಕೋಟಿ ರೂಪಾಯಿ ನೀಡುವಂತೆ ಒತ್ತಾಯಿಸಿದ್ದಾನೆ ಎಂದು ತಮ್ಮ ದೂರಿನಲ್ಲಿ ಉಲ್ಲೇಖ ಮಾಡಿದ್ಧಾರೆ.
ಕೇವಲ ಎಲ್ವಿಶ್ ಮಾತ್ರವಲ್ಲದೆ, ಎಲ್ವಿಶ್ ಯಾದವ್ ಅವರ ತಂದೆಗೂ ಕೂಡ ಬೆದರಿಕೆ ಸಂದೇಶ ಬಂದಿದೆ. ಬೇಡಿಕೆ ಈಡೇರಿಸದಿದ್ದರೆ ಗುಂಡಿಕ್ಕಿ ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿದೆ. 10 ಕೋಟಿ ಹಣ ನೀಡಲು ಎಲ್ವಿಶ್ ಯಾದವ್‌ಗೆ ಎರಡು ದಿನಗಳ ಗಡುವನ್ನು ನೀಡಲಾಗಿದ್ದು ಘಟನೆಯ ಹಿಂದೆ ಲಾರೆನ್ಸ್ ಬಿಷ್ಣೋಯ್ ಕೈವಾಡ ಇದೆ ಎನ್ನುವ ಅನುಮಾನ ಪೊಲೀಸರನ್ನು ಕಾಡುತ್ತಿದೆ. ಸದ್ಯ ದೂರು ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣದ ತನಿಖೆಯನ್ನು ಮಾಡುತ್ತಿದ್ದಾರೆ.
ಅಂದ್ಹಾಗೇ ಮೊದಲಾದರೆ ಈ ಬಿಷ್ಣೋಯ್ ಗ್ಯಾಂಗ್ ಕೇವಲ ಸಲ್ಮಾನ್ ಖಾನ್ ಮಾತ್ರ ಬಿದ್ದಿತ್ತು. ಸಲ್ಮಾನ್ ಖಾನ್ ಜೀವ ತೆಗೆಯುವ ಶಪಥ ಮಾಡಿತ್ತು. ಅದಕ್ಕೆ ಈ ಗ್ಯಾಂಗ್ ಬಳಿ ಕಾರಣವೂ ಇದೆ. ಆದರೆ..ಈಗ ಬಿಷ್ಣೋಯ್ ಗ್ಯಾಂಗ್ ಇಡೀ ಬಾಲಿವುಡ್‌ನ ಬೆನ್ನು ಹತ್ತಿದೆಯಾ ಎನ್ನುವ ಪ್ರಶ್ನೆ ಕೂಡ ಸದ್ಯ ಹಲವರಲ್ಲಿ ಮನೆ ಮಾಡಿದೆ. ಈ ಹಿಂದೆ ಐದು ತಿಂಗಳಿನಲ್ಲಿ ನಾಲ್ಕು ಬಾರಿ ಕಪಿಲ್ ಶರ್ಮಾ ಅವರ ರೆಸ್ಟೋರೆಂಟ್ ಮೇಲೆ ದಾಳಿ ಮಾಡಿದ್ದ ಈ ಗ್ಯಾಂಗ್‌ನ ಹಿಟ್ ಲಿಸ್ಟ್‌ನಲ್ಲಿ ಇನ್ನೂ ಯಾರೆಲ್ಲ ಇದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications