ತನ್ನ 'ಗಾಡ್ ಮದರ್' ಯಾರು ಎಂದು ಪರಿಚಯಿಸಿ ಧನ್ಯವಾದ ತಿಳಿಸಿದ ಬಿಗ್‌ಬಾಸ್ ವಿನ್ನರ್ ಗಿಲ್ಲಿ!
ಮಂಡ್ಯದ ಹೈದ ಗಿಲ್ಲಿ ಈ ಬಾರಿ ಬಿಗ್‌ಬಾಸ್ ಟ್ರೋಫಿ ಗೆದ್ದು ಮನೆ ಮಾತಾಗಿದ್ದಾರೆ. ಧಾರಾವಾಹಿಗಳಿಗೆ ಸೆಟ್ ಹಾಕುವ ವಿಭಾಗದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಗಿಲ್ಲಿ ಈಗ ಸ್ಟಾರ್ ಪಟ್ಟಕ್ಕೇರಿದ್ದಾರೆ. ಬಿಗ್‌ಬಾಸ್ ಸೀಸನ್ 12ರ ವಿನ್ನರ್ ಆಗಿ ಲಕ್ಷ ಲಕ್ಷ ಬಹುಮಾನ ಪಡೆದಿದ್ದಾರೆ.
ತನ್ನ ಸ್ಕಿಟ್ ವಿಡಿಯೋಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆದ ಗಿಲ್ಲಿ 'ಕಾಮಿಡಿ ಕಿಲಾಡಿಗಳು' ವೇದಿಕೆ ಏರಿದ್ದರು. ತಮ್ಮ ಸ್ಕಿಟ್‌ಗಳ ಮೂಲಕ ವೀಕ್ಷಕರನ್ನು ರಂಜಿಸಿ ರನ್ನರ್ ಅಪ್ ಆಗಿದ್ದರು. ಬಳಿಕ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಸೇರಿದಂತೆ ಜೀ ಕನ್ನಡ ವಾಹಿನಿಯ ಕೆಲ ಶೋಗಳಲ್ಲಿ ಭಾಗವಹಿಸಿದ್ದರು. ಬಳಿಕ ಕಲರ್ಸ್ ಕನ್ನಡ ವಾಹಿನಿ ಕಾರ್ಯಕ್ರಮಗಳತ್ತ ಮುಖ ಮಾಡಿದ್ದರು. ಬಿಗ್‌ಬಾಸ್ ಮನೆಗೆ ಹೋಗುವ ಅವಕಾಶ ಪಡೆದರು.

ಜೀ ಕನ್ನಡ ಶೋಗಳಲ್ಲಿ ಗಿಲ್ಲಿ ಕಾಮಿಡಿಗೆ ಬೆಂಬಲವಾಗಿ ನಿಲ್ಲುತ್ತಿದ್ದವರು ಆಂಕರ್ ಅನುಶ್ರೀ. ಈ ಬಗ್ಗೆ ಗಿಲ್ಲಿ ನಟ ಮಾತನಾಡಿದ್ದಾರೆ. 'ಕನಕೋತ್ಸವ' ಕಾರ್ಯಕ್ರಮದ ವೇದಿಕೆಯಲ್ಲಿ ಅನುಶ್ರೀ ಬೆಂಬಲ ನೆನಪಿಸಿಕೊಂಡಿದ್ದಾರೆ. ಆಕೆ ನನಗೆ ಗಾಡ್ ಮದರ್ ಎಂದು ಗಿಲ್ಲಿ ಹೇಳಿವುದು ವೈರಲ್ ಆಗ್ತಿದೆ. ಅನುಶ್ರೀ ಈ ಕಾರ್ಯಕ್ರಮವನ್ನು ನಿರೂಪಣೆ ಮಾಡಿದ್ದರು. ಗಿಲ್ಲಿ ಅತಿಥಿಯಾಗಿ ವೇದಿಕೆ ಏರಿದ್ದರು.
ಬಿಗ್‌ಬಾಸ್ ಶೋ ಮುಗಿಸಿ ಹೊರಬಂದ ದಿನದಿಂದ ಗಿಲ್ಲಿ ನಟ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ದೊಡ್ಡ ದೊಡ್ಡ ಕಾರ್ಯಕ್ರಮಗಳಿಗೆ ಅಥಿತಿಯಾಗಿ ಹೋಗುತ್ತಿದ್ದಾರೆ. ಹೋದರ ಕಡೆಯೆಲ್ಲಾ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಗಿಲ್ಲಿ ಗಿಲ್ಲಿ ಎಂದು ಅಭಿಮಾನಿಗಳು ಜೈಕಾರ ಹಾಕುತ್ತಿದ್ದಾರೆ. ಆತನ ಜೊತೆ ಫೋಟೊ ಕ್ಲಿಕ್ಕಿಸಿಕೊಳ್ಳಲು ಮುಗಿಬೀಳುತ್ತಿದ್ದಾರೆ.
'ಕನಕೋತ್ಸವ' ವೇದಿಕೆಯಲ್ಲಿ ಮಾತನಾಡಿದ ಗಿಲ್ಲಿ "ಅನುಶ್ರೀ ಅಕ್ಕ ಇವತ್ತು ಆಂಕರಿಂಗ್ ಮಾಡ್ತಾರೆ ಎನ್ನುವ ಸುದ್ದಿ ಕೇಳಿ ಖುಷಿಯಾಯಿತು. ನಾನು ಸ್ಟೇಜ್ ಮೇಲೆ ಹೋದ್ರೆ ವೀಕು, ಅನುಶ್ರೀ ಅಕ್ಕ ಜೊತೆಗಿದ್ದರೆ ಪೀಕು" ಎಂದು ತಮ್ಮದೇ ಶೈಲಿಯಲ್ಲಿ ಡೈಲಾಗ್ ಹೊಡೆದಿದ್ದಾರೆ. ಎಲ್ಲರಿಗೂ ಗಾಡ್ ಫಾದರ್ ಇರ್ತಾರೆ, ನನಗೆ ಗಾಡ್ ಮದರ್ ಅಂತ ಇದ್ರೆ ಅನುಶ್ರೀ ಅಕ್ಕ ಮಾತ್ರ. ನಾನು ಇಲ್ಲಿವರೆಗೆ ಬರಲು, ಇಷ್ಟು ಜನರ ಪ್ರೀತಿ ಸಂಪಾದಿಸಲು ಯಾರು ಕಾರಣ ಅಂದ್ರೆ ನನಗೆ ನನಪಾಗುವುದು ಅನುಶ್ರೀ ಅಕ್ಕ" ಎಂದಿದ್ದಾರೆ.
ಜೀ ಕನ್ನಡ ಶೋಗಳಲ್ಲಿ ಗಿಲ್ಲಿ ಹಾಗೂ ಅನುಶ್ರೀ ಜುಗಲ್‌ಬಂದಿ ಚೆನ್ನಾಗಿ ಇರ್ತಿತ್ತು. ಇದೇ ವಿಚಾರದ ಬಗ್ಗೆ ಗಿಲ್ಲಿ ಮಾತನಾಡಿದ್ದಾರೆ. "ನನ್ನನ್ನು ಶೋಗಳಲ್ಲಿ ವೇದಿಕೆಗೆ ಕರೆದು ಕರೆದು ಮಾತನಾಡಿಸಿ, ಕಾಲೆಳೆದು, ಕಾಮಿಡಿ ಮಾಡಿ ಇವರೆಗೆ ಬರುವಂತೆ ಮಾಡಿದ್ದಾರೆ. ಥ್ಯಾಂಕ್ಸ್ ಅಕ್ಕ" ಎಂದು ಅನುಶ್ರೀಗೆ ಧನ್ಯವಾದ ತಿಳಿಸಿದ್ದಾರೆ.
ಗಿಲ್ಲಿ ನಟ ಸಿನಿಮಾ ನಿರ್ದೇಶನ ಮಾಡ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಈ ಬಗ್ಗೆ ವೇದಿಕೆಯಲ್ಲಿ ಅನುಶ್ರೀ ಪ್ರಶ್ನಿಸಿದ್ದಾರೆ. "ನಾನು ಸಿನಿಮಾ ಮಾಡಿದ್ರೆ ನೋಡೋಕೆ ದುಡ್ಡು ಯಾರು ನಿಮ್ಮಪ್ಪ ಕೊಡ್ತಾನಾ ಅಂತ ಕೇಳ್ತಾರೆ, ಮನೆಯಲ್ಲಿ ಟಿವಿಲೀ ನಾನು ಬರ್ತಿದ್ದೆ ನೋಡ್ತಿದ್ರು. ಸಿನಿಮಾ ಬಂದು ನೋಡ್ತಾರಾ?" ಎಂದು ಗಿಲ್ಲಿ ಹೇಳಿದ್ದಾರೆ. ನಿಮ್ಮ 'ನಲ್ಲಿ ಮೂಳೆ' ಕಾಮಿಡಿ ವೀಡಿಯೋ ಅಷ್ಟು ಜನ ನೋಡಿದ್ದಾರೆ. ಸಿನಿಮಾ ಮಾಡಿದ್ರೆ ನೋಡ್ದೆ ಇರ್ತಾರಾ ಎಂದು ಅನುಶ್ರೀ ಹೇಳಿದ್ದಾರೆ.
ಗಿಲ್ಲಿ ಬಿಗ್‌ಬಾಸ್ ಮನೆಯಲ್ಲಿ ಇದ್ದಾಗ ಅಭಿಮಾನಿ ಕುಮಾರ್ ಟ್ಯಾಟೂ ಹಾಕಿಕೊಂಡು ವೈರಲ್ ಆಗಿದ್ದರು. ಗಿಲ್ಲಿ ಶೋ ಮುಗಿಸಿ ಹೊರ ಬಂದ ಮೇಲೆ ನನ್ನನ್ನು ಭೇಟಿ ಆಗಲಿಲ್ಲ ಎಂದು ಆರೋಪಿಸುತ್ತಿದ್ದಾರೆ. ಗಿಲ್ಲಿ ಅಣ್ಣನ ಮಾತು ಕೇಳಿ ಮೋಸ ಹೋದೆ. ಗಿಲ್ಲಿ ಮಾತು ತಪ್ಪಿದ ಮಗ, ನಾವೇ ಬೆಳೆಸಿದ ಗಿಲ್ಲಿ ಈಗ ಉಲ್ಟಾ ಹೊಡೆಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











