₹60 ಲಕ್ಷ ಹಣ, ಒಂದು ಕಾರ್ ಗೆದ್ದ ಗಿಲ್ಲಿ ಬಿಗ್‌ಬಾಸ್ ಮನೆಗೆ ಹೋಗಲು ಖರ್ಚು ಮಾಡಿದ್ದು ಇಷ್ಟೇನಾ?
ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್. ದೊಡ್ಮನೆ ಒಳಗೆ ಹೋಗಬೇಕು ಎನ್ನುವುದು ಸಾಕಷ್ಟು ಜನರ ಕನಸು. ದಿನದ 24 ಗಂಟೆ ಕ್ಯಾಮರಾ ಮುಂದೆ ಕಾಣಿಸಿಕೊಳ್ಳುತ್ತೇವೆ. ಅದಕ್ಕಾಗಿ ಚೆಂದದ ಬಟ್ಟೆಗಳನ್ನು ಹಾಕಿಕೊಳ್ಳಬೇಕು ಎಂದು ಬಿಗ್‌ಬಾಸ್ ಸ್ಪರ್ಧಿಗಳು ಲಕ್ಷ ಲಕ್ಷ ಹಣ ಖರ್ಚು ಮಾಡುತ್ತಿದ್ದಾರೆ.
ಇತ್ತೀಚೆಗೆ ಪಿಆರ್ ಮಾಡಲು, ಡಿಸೈನರ್ ಕಾಸ್ಟ್ಯೂಮ್‌ಗಳಿಗಾಗಿ ಬಿಗ್‌ಬಾಸ್ ಸ್ಪರ್ಧಿಗಳು ಲಕ್ಷ ಲಕ್ಷ ವ್ಯಯಿಸುತ್ತಿರುವುದನ್ನು ಹೇಳಿಕೊಳ್ಳುತ್ತಿದ್ದಾರೆ. ಈ ಬಾರಿ ಬಿಗ್ ಬಾಸ್ ಟ್ರೋಫಿ ಗೆದ್ದ ಗಿಲ್ಲಿ ಬಟ್ಟೆ ಬರೆ ಎಂದು ಎಷ್ಟು ಖರ್ಚು ಮಾಡಿದ್ದಾರೆ ಗೊತ್ತಾ? ಈ ಬಗ್ಗೆ ಸ್ವತಃ ಮಂಡ್ಯದ ಹೈದ ಹೇಳಿದ್ದಾರೆ. ಆದರೆ ಗಿಲ್ಲಿ ಮಾತು ಕೇಳಿ ಕೆಲವರು ಅಚ್ಚರಿಗೊಂಡಿದ್ದಾರೆ.

ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ಬಡವನ ರೀತಿ ನಾಟಕ ಮಾಡಿ ಗೆದ್ದಿದ್ದಾನೆ ಎಂದು ಅಶ್ವಿನಿ ಗೌಡ ಆರೋಪ ಮಾಡಿದ್ದಾರೆ. ಗಿಲ್ಲಿ ಬಡವ ಅಲ್ಲ, ಬಡವ ಎಂದು ಹೇಳಿಕೊಂಡು ಅನುಕಂಪ ಗಿಟ್ಟಿಸಿದ. ಯಾವಾಗಲೂ ಬನಿಯನ್ ಹಾಕಿಕೊಂಡು ಇರುತ್ತಿದ್ದ. ಯಾಕೆ ಹೀಗೆ ಎಂದು ಮನೆ ಒಳಗೆ ಇದ್ದಾಗಲೇ ಪ್ರಶ್ನಿಸಿದ್ದರು. ವೀಕೆಂಡ್ ಎಪಿಸೋಡ್‌ಗಳಲ್ಲಿ ಬಿಟ್ಟರೆ ಗಿಲ್ಲಿ ದುಬಾರಿ ಕಾಸ್ಟ್ಯೂಮ್ಸ್ ಹಾಕಲೇ ಇಲ್ಲ. ಹಾಗಾಗಿ ಬಟ್ಟೆಗಾಗಿ ಹೆಚ್ಚು ಖರ್ಚು ಮಾಡಲಿಲ್ಲ. ಆದರೆ ಬಿಗ್‌ಬಾಸ್ ಮನೆಗೆ ಹೋಗುವ ಮುನ್ನ ಮನೆಗೆ ಒಂದು ವಾಷಿನ್ ಮಿಷನ್ ತೆಗೆದುಕೊಟ್ಟು ಹೋಗಿದ್ದರಂತೆ.
ಬಿಗ್‌ಬಾಸ್ ಮನೆಯಿಂದ ಹೊರಬಂದ ಬಳಿಕ ಗಿಲ್ಲಿ ಸಾಕಷ್ಟು ಸಂದರ್ಶನಗಳಲ್ಲಿ ಮಾತನಾಡಿದ್ದಾರೆ. ಜೀ ಕನ್ನಡ ನ್ಯೂಸ್ ವಾಹಿನಿ ಸಂದರ್ಶನದಲ್ಲಿ ಗಿಲ್ಲಿ ತಮ್ಮ ಬಿಗ್‌ಬಾಸ್ ಜರ್ನಿ ಬಗ್ಗೆ ಮೆಲುಕು ಹಾಕಿದ್ದಾರೆ. ಇದೇ ವೇಳೆ ಖರ್ಚಿನ ಬಗ್ಗೆ ಮಾತನಾಡಿದ್ದಾರೆ. "5 ಸಾವಿರದಿಂದ 10 ಸಾವಿರ ರೂಪಾಯಿ ಬಟ್ಟೆ ಖರೀದಿಸಲು ಖರ್ಚು ಮಾಡಿದ್ದೆ ಅಷ್ಟೇ" ಎಂದು ಗಿಲ್ಲಿ ಹೇಳಿದ್ದಾರೆ.

ಬಟ್ಟೆಗೆ 10 ಸಾವಿರ ಬಿಟ್ಟರೆ ಬೇರೆ ಏನು ಖರ್ಷು ಮಾಡಲಿಲ್ಲ ಎಂದು ಗಿಲ್ಲಿ ತಿಳಿಸಿದ್ದಾರೆ. "ನಮ್ಮ ಅವ್ವ ವಾಷಿನ್ ಮಿಷನ್ ಕೇಳುತ್ತಿದ್ರು. ಬಿಗ್‌ಬಾಸ್ ಮನೆಗೆ ಹೋಗುವ ಮುನ್ನ ಅದೊಂದು ಕೊಡಿಸೋಣ ಎಂದು ಕೊಡಿಸಿದ್ದೆ. ವೀಕೆಂಡ್ ಎಪಿಸೋಡ್‌ಗಳಿಗೆ ಮಾತ್ರ ಬಟ್ಟೆ ಬರ್ತಿತ್ತು. ಇನ್ನುಳಿದಂತೆ ನನ್ನ ಬಳಿ ಇದ್ದ ಬಟ್ಟೆಯನ್ನೇ ನಾನು ಹಾಕಿಕೊಳ್ತಿದ್ದೆ. ನಾನು ದುಡ್ಡು ಖರ್ಚು ಮಾಡುವುದು ಕಮ್ಮಿ. ದುಡ್ಡಿನ ಬೆಲೆ ಗೊತ್ತು. ನಮ್ಮ ಫೀಲ್ಡ್‌ನಲ್ಲಿ ಕೆಲವೊಮ್ಮೆ ಕೆಲಸ ಇರುತ್ತೆ, ಕೆಲವೊಮ್ಮೆ ಇರಲ್ಲ. ಹಾಗಾಗಿ ದುಡ್ಡಿಗೆ ಬಹಳ ಬೆಲೆ ಕೊಡ್ತೀನಿ" ಎಂದಿದ್ದಾರೆ.
ಗಿಲ್ಲಿ ಬನಿಯನ್ ಹಾಕಿಕೊಂಡು ನಾಟಕ ಮಾಡುತ್ತಿದ್ದಾರೆ ಎನ್ನುವ ಮಾತು ಬಂದ ಬಳಿಕ ಹೊರಗಡೆಯಿಂದ ಬಟ್ಟೆ ಬರಲು ಆರಂಭವಾಯಿತು ಎಂದು ಗಿಲ್ಲಿ ಹೇಳಿದ್ದಾರೆ. "ನಮ್ಮ ಸ್ನೇಹಿತರೊಬ್ಬರು ಕಳುಹಿಸುತ್ತಿದ್ರು. ಮನೆಯಿಂದ ಹೊರಗಡೆ ಬಂದಮೇಲೆ ಆ ವಿಚಾರ ಕೂಡ ಗೊತ್ತಾಯಿತು. ಆಗ ಕೂಡ ಭಯ ಇತ್ತು ನಂಗೆ. ಅಯ್ಯೋ ಇಷ್ಟೆಲ್ಲಾ ಕಳ್ಸಿದ್ದಾರಲ್ಲಪ್ಪಾ, ನನ್ನ ದುಡ್ಡೆಲ್ಲಾ ಹೋಯ್ತು. ಹೊರಗಡೆ ಬಂದಾಗ 10 ಲಕ್ಷ ರೂಪಾಯಿ ಸಾಲ ತಲೆ ಮೇಲೆ ಬಂದುಬಿಡುತ್ತೇನೋ ಅಂದುಕೊಂಡಿದ್ದೆ" ಎಂದು ಗಿಲ್ಲಿ ವಿವರಿಸಿದ್ದಾರೆ.
112 ದಿನ ಬಿಗ್‌ಬಾಸ್ ಮನೆಯಲ್ಲಿದ್ದ ಗಿಲ್ಲಿ ಟ್ರೋಫಿ ಗೆದ್ದಿದ್ದಾರೆ. 50 ಲಕ್ಷ ರೂ. ಬಹುಮಾನದ ಹಣ ಸಿಕ್ಕಿದೆ. ಕಿಚ್ಚ ಸುದೀಪ್ ವೈಯಕ್ತಿಕವಾಗಿ 10 ಲಕ್ಷ ರೂ. ಕೊಟ್ಟಿದ್ದಾರೆ. ಒಂದು ಮಾರುತಿ ಸುಜುಕಿ ವಿಕ್ಟೋರಿಸ್ ಕಾರು ಕೂಡ ಬಹುಮಾನವಾಗಿ ಸಿಕ್ಕಿದೆ. ಟ್ಯಾಕ್ಸ್, ಸೆಸ್ ಕಳೆದು ಬಹುಮಾನದ ಹಣ ಸಿಗುತ್ತದೆ. ಕಾರಿಗೆ ಸ್ವತಃ ಗಿಲ್ಲಿ ಟ್ಯಾಕ್ಸ್ ಕಟ್ಟಿ ಮನೆಗೆ ತೆಗೆದುಕೊಂಡು ಹೋಗಬೇಕಿದೆ.


Click it and Unblock the Notifications











