ಮದುವೆ ಮುರಿದು ಬಿದ್ದಿರುವ ಸತ್ಯ ಒಪ್ಪಿಕೊಂಡ ಬಿಗ್ ಬಾಸ್ ಚೆಲುವೆ ; ಕಾರಣವೇನು ?
ಪ್ರೇಮ ಕುರುಡು.. ಇತಿಹಾಸದುದ್ದಕ್ಕೂ ಪ್ರೀತಿಗಂಟಿಕೊಂಡೇ ಬಂದ ಆರೋಪ ಇದು. ಆದರೆ ಬದಲಾದ ಕಾಲದಲ್ಲಿ ಪ್ರೀತಿಯ ವರಸೆ ಬದಲಾಗಿದೆ. ಭಾವೋದ್ವೇಗದ ಪ್ರೀತಿ, ಸ್ನೇಹವಾಗಿ ಅರಳಿ, ಬೆಳೆದು ಪ್ರಬುದ್ಧವಾಗುವ ತನಕ, ನಂಬುಗೆಗಳ ಅಡಿಪಾಯದಲ್ಲಿ ನಿಜಾರ್ಥದ ಅನುರಾಗ ಅರಳುವ ತನಕ... ಕಾಯುವ ತಂತ್ರ ಈಗಿನದು.
ಬಾಳಪೂರ್ತಿ ಜೊತೆ ಬರುವ ಪ್ರೀತಿಯ ಗಟ್ಟಿತನವನ್ನು ಒಂದಲ್ಲ ಹತ್ತು ಬಾರಿ ಪರೀಕ್ಷಿಸುವ, ಪೊಳ್ಳೆನಿಸಿದರೆ ಕೈ ಬಿಡುವ, ತಾಳುವುದನ್ನು ಮಾತ್ರ ಆಯ್ದುಕೊಳ್ಳುವ ಪ್ರೀತಿಯ ಹೊಸ ಪರಿ ಇದು.ಇದಕ್ಕೆ ರಿತ್ವಿಕಾ ಅವರ ವೈಯಕ್ತಿಕ ಬದುಕು ಸದ್ಯದ ಉದಾಹರಣೆ.

ಹೌದು. ರಿತ್ವಿಕಾ.. ಕಾಲಿವುಡ್‌ನ ಕಿನ್ನರಿ. ಗಾಡ್ ಫಾದರ್ ಇಲ್ಲದೇ ಚಿತ್ರರಂಗಕ್ಕೆ ಬಂದ ರಿತ್ವಿಕಾ ಸದ್ಯ ಬಣ್ಣದ ಲೋಕದಲ್ಲಿ 12- 13 ವರ್ಷಗಳನ್ನು ಪೂರೈಸಿದ್ದಾರೆ. ಬಾಲಾ ನಿರ್ದೇಶನದ ''ಪರದೇಶಿ'' ಇವರ ಮೊದಲ ಚಿತ್ರ.
ಆ ನಂತರ ''ಸಂದಿತ್ತದುಂ ಸಿಂಧಿತ್ತದುಂ''.. ''ನಿನೈತು ಯಾರೋ''.. ಚಿತ್ರಗಳಲ್ಲಿ ಕಾಣಿಸಿಕೊಂಡ ರಿತ್ವಿಕಾ ತಮಿಳುನಾಡಿನೆಲ್ಲೆಡೆ ಮನೆ ಮಾತಾಗಿದ್ದು ''ಮದ್ರಾಸ್'' ಚಿತ್ರದ ಮೂಲಕ. ಕಾರ್ತಿ ಅಭಿನಯದ ಈ ಚಿತ್ರದಲ್ಲಿ ಮೇರಿ ಎಂಬ ಪಾತ್ರವನ್ನು ರಿತ್ವಿಕಾ ನಿರ್ವಹಿಸಿದ್ದರು. ಈ ಚಿತ್ರದಲ್ಲಿನ ಅಭಿನಯಕ್ಕೆ ದಕ್ಷಿಣ ಭಾರತದ ''ಫಿಲ್ಮ್‌ಫೇರ್'' ಇವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ನೀಡಿತ್ತು.
''ಇರುಂದಿ''.. ''ಸಿಗೈ''.. ''ಟಾರ್ಚ್ ಲೈಟ್''..''ಯಾವರುಂ ವಲ್ಲವರೇ''.. ''ತಂದಕಾರಣ್ಯಂ.. ''ಎಲೆವನ್''.. ''ಡಿಎನ್‌ಎ'.. ಇವರ ಕೆಲ ಪ್ರಮುಖ ಚಿತ್ರಗಳು. 2018ರಲ್ಲಿ ತಮಿಳಿನ ''ಬಿಗ್ ಬಾಸ್'' ಎರಡನೇ ಸೀಸನ್‌ನಲ್ಲಿ ಭಾಗವಹಿಸಿದ್ದ ರಿತ್ವಿಕಾ ಆ ಮನೆಯಿಂದ ಹೊರ ಬಂದಿದ್ದು ಟ್ರೋಫಿ ಸಮೇತವಾಗಿಯೇ. 105 ದಿನ ಮನೆಯಲ್ಲಿದ್ದು ತಮಿಳು ''ಬಿಗ್ ಬಾಸ್'' ಗೆದ್ದ ಮೊದಲ ಮಹಿಳಾ ಸ್ಫರ್ಧಿ ಎನ್ನುವ ಹೆಗ್ಗಳಿಕೆಗೆ ರಿತ್ವಿಕಾ ಪಾತ್ರರಾಗಿದ್ದರು.
ಇಂಥಾ ರಿತ್ವಿಕಾ ಈಗ್ಗೆ ಕೆಲ ವರ್ಷಗಳ ಹಿಂದೆ ವಿನೋದ್ ಲಕ್ಷ್ಮಣ್ ಜೊತೆ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಮೂಲಕ ಹಲವರನ್ನು ಅಚ್ಚರಿಗೆ ದೂಡಿದ್ದರು. ಮನೆಯವರೇ ನಿಶ್ಚಯ ಮಾಡಿದ್ದ ಮದುವೆ ಇದಾಗಿತ್ತು. ವಿನೋದ್ ವೃತ್ತಿಯಲ್ಲಿ ಐಟಿ ಉದ್ಯೋಗಿಯಾಗಿದ್ದರು.

ಹೀಗೆ ನಿಶ್ಚಿತಾರ್ಥ ಸಮಾರಂಭವೇನೋ ನಡೆಯಿತು. ಆದರೆ ಮದುವೆ ಮಾತ್ರ ನಡೆಯಲೇ ಇಲ್ಲ. ಬದಲಿಗೆ ಆಗಸ್ಟ್ 27ರಂದು ನಿಗದಿಯಾದ ಮದುವೆಯನ್ನು ಮುಂದೂಡಲಾಯ್ತು. ಇದರಿಂದ ಹಲವರಲ್ಲಿ ಇವರ ಮದುವೆಯ ಕುರಿತು ಅನುಮಾನ ಕಾಡಲು ಶುರುವಾಯ್ತು. ಸದ್ಯ ಈ ಅನುಮಾನವನ್ನು ಖುದ್ದು ರಿತ್ವಿಕಾ ಅವರೇ ದೂರ ಮಾಡಿದ್ದಾರೆ.
ಹೌದು, ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬರು ರಿತ್ವಿಕಾಗೆ ಮದುವೆಯ ಕುರಿತು ಪ್ರಶ್ನೆ ಕೇಳಿದ್ದಾರೆ. ನಿಮ್ಮ ಮದುವೆಯಲ್ಲಿ ಏನಾದರೂ ಸಮಸ್ಯೆ ಆಯ್ತಾ..? ಎಂದು ಕೇಳಿದ್ದಾರೆ. ಇದಕ್ಕೆ ರಿತ್ವಿಕಾ ಸಮಾಧಾನದಿಂದಲೇ ಉತ್ತರವನ್ನು ಕೂಡ ನೀಡಿದ್ದು ಅಂದುಕೊಂಡಿದ್ದು ನಡೆಯಲಿಲ್ಲ ಎಂದಷ್ಟೇ ಹೇಳಿದ್ದಾರೆ. ಈ ಮೂಲಕ ಮದುವೆ ಮುರಿದು ಬಿದ್ದಿರುವುದನ್ನು ಖಚಿತ ಪಡಿಸಿದ್ದಾರೆ. ಯಾರನ್ನೂ ದೂಷಿಸದೇ.. ಸ್ಪಷ್ಟವಾದ ಕಾರಣವನ್ನು ನೀಡದೇ.. ಸರಳವಾಗಿ ಹಲವರ ಅನುಮಾನವನ್ನು ದೂರ ಮಾಡಿದ್ದಾರೆ.
ಸದ್ಯ ರಿತ್ವಿಕಾ ಅವರಿಗೆ ಹಲವರು ಸೋಶಿಯಲ್ ಮೀಡಿಯಾ ಮೂಲಕ ಧೈರ್ಯ ತುಂಬುತ್ತಿದ್ದಾರೆ. ಸಮಾಧಾನ ಮಾಡುತ್ತಿದ್ದಾರೆ. ನಿಶ್ಚಿತಾರ್ಥದ ನಂತರ ಮದುವೆ ನಿಂತು ಹೋದರೆ ಆ ಹುಡುಗಿಗೆ ಬೇರೊಂದು ಮದುವೆಯಾಗುವುದು ಕಷ್ಟ ಎಂಬುದೆಲ್ಲಾ ಹಳೆಯ ಮಾತು. ನೀವು ಹೆಚ್ಚು ಯೋಚನೆ ಮಾಡಬೇಡಿ ಎಂದು ಒಬ್ಬರು ಹೇಳಿದರೆ, ಆ ದೇವರ ದಯೆಯಿಂದ ನಿಮ್ಮ ಬದುಕಿನಲ್ಲಿ ಒಳ್ಳೆಯ ವ್ಯಕ್ತಿ ಬಂದೇ ಬರುತ್ತಾರೆ, ತಾಳ್ಮೆಯಿಂದಿರಿ ಎಂದು ಮತ್ತೊಬ್ಬರು ಹೇಳಿದ್ದಾರೆ. ಆಗೋದೆಲ್ಲಾ ಒಳ್ಳೆಯದಕ್ಕೆ ನೀವು ನೊಂದುಕೊಳ್ಳಬೇಡಿ, ಮಾನಸಿಕವಾಗಿ ಕುಗ್ಗಬೇಡಿ ಎಂದೆಲ್ಲಾ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಇನ್ನುಳಿದಂತೆ ನಟನೆಯ ಹೊರತಾಗಿ ರಿತ್ವಿಕಾ ಪರಿಸರ ಸಂರಕ್ಷಣೆ ಮತ್ತು ಪ್ರಾಣಿ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುತ್ತಿರುತ್ತಾರೆ.ಪುಸ್ತಕ ಓದುವುದು ಇವರ ನೆಚ್ಚಿನ ಹವ್ಯಾಸ.


Click it and Unblock the Notifications