"ನಾನು ಯಾರ ಬಳಿಯೂ ಹಣ ತಗೊಂಡಿಲ್ಲ.. ನನಗೆ ಚಿತ್ರಹಿಂಸೆ ಕೊಟ್ರು.. ಆ ಮೂವರೇ ಕಾರಣ": ಪ್ರತಾಪ್ ಕಣ್ಣೀರು
ಡ್ರೋನ್ ಪ್ರತಾಪ್ ಬಿಗ್ ಬಾಸ್ ಮನೆಗೆ ಬಂದಾಗಿನಿಂದಲೂ ಇತರ ಸ್ಪರ್ಧಿಗಳಿಂದಲೂ ಸಹ ಸಾಕಷ್ಟು ಅವಮಾನಗಳಿಗೆ ಒಳಗಾದರು. ನಿನ್ನ ಡ್ರೋನ್ ಡೋಂಗಿ ಎಂದೆಲ್ಲಾ ಪ್ರತಾಪ್‌ನ ಅವಮಾನಿಸಿದ್ದರು. ಆದರೆ ಪ್ರತಾಪ್ ಯಾವುದರ ಬಗ್ಗೆಯೂ ತುಟಿ ಬಿಚ್ಚಿ ಮಾತನಾಡಿರಲಿಲ್ಲ. ಇನ್ನೂ ಪ್ರತಾಪ್ ವಿದೇಶದಿಂದ ಬರುವ ಮುನ್ನವೇ ಅವರನ್ನು ಹೆಸರನ್ನು ಹಾಳು ಮಾಡಲು ಮೂವರು ಕಾಯುತ್ತಿದ್ದರು ಎಂದಷ್ಟೇ ಹೇಳಿದ್ದಾರೆ. ಆದರೆ ಆ ಮೂವರ ಹೆಸರನ್ನು ಮಾತ್ರ ಪ್ರತಾಪ್ ಹೇಳಿಲ್ಲ.
ನಟಿ ತಾರಾ ಮನೆಯೊಳಗೆ ಹೋದಾಗಲೂ ಪ್ರತಾಪ್ ನಾನು ಯಾರಿಗೂ ಮೋಸ ಮಾಡಿಲ್ಲ, ಆದರೂ ನನ್ನನ್ನ ಜನರು ತಪ್ಪಾಗಿ ತಿಳಿದುಕೊಂಡರು ಎಂದು ಕಣ್ಣೀರು ಹಾಕಿದ್ದರು. ನನ್ನ ತಂದೆಯಿಂದ ನಾನು ದೂರವಾಗಿ 3 ವರ್ಷವಾಗಿದೆ ಎಂದು ಸಹ ಹೇಳಿದ್ದರು. ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಯ ಬಗ್ಗೆ ಮನಸ್ಸು ಬಿಚ್ಚಿ ಪ್ರತಾಪ್ ಮಾತನಾಡಿದ್ದಾರೆ.

ನಾನು ಸಣ್ಣದೊಂದು ರಿಸರ್ಚ್ ಮಾಡಿದ್ದೆ. ನನ್ನನ್ನು ಜನರು ಹಾಡಿ ಹೊಗಳಿ ಮೆರೆಸಿದ್ದರು. ತದನಂತರ ಪಾತಾಳಕ್ಕೆ ತಳ್ಳಿಬಿಟ್ಟರು ಎಂದು ಪ್ರತಾಪ್ ಕಣ್ಣೀರು ಹಾಕಿದ್ದಾರೆ. ನನ್ನ ಜೊತೆಗೆ ಇದ್ದ ಮೂವರು ಹೆಣೆದ ಬಲೆಯೊಳಗೆ ನಾನು ಸಿಕ್ಕಿಬಿದ್ದೆ ಎಂದಿದ್ದಾರೆ. ಕೊನೆಗೆ ನನ್ನನ್ನು ಬಹಳ ಹಿಂಸೆ ಮಾಡಿದರು. ಇನ್ನು ನನ್ನ ತಂದೆಯನ್ನು ಕೂಡ ಪೋಲಿಸ್ ಸ್ಟೇಷನ್‌ಗೆ ಎಳೆದುಕೊಂಡು ಹೋಗಲಾಗಿತ್ತು. ನಿಮ್ಮ ಮಗ ಕ್ವಾರಂಟೈನ್‌ನಲ್ಲಿ ಇಲ್ಲ ಎಂದು ಹೇಳಿದ್ದರು ಜೊತೆಗೆ ಕಂಡಲ್ಲಿ ಗುಂಡು ಹೊಡೆದು ಸಾಯಿಸುವ ಆದೇಶವಾಗಿದೆ ಎಂದು ನನ್ನ ತಂದೆಯ ತಲೆಗೆ ತುಂಬಿದ್ದರು. ನಾನು ಅಂದು ಎಷ್ಟು ನೊಂದುಕೊಂಡಿದ್ದೆ ಎಂಬುದು ನನಗೆ ಮಾತ್ರ ಗೊತ್ತು ಎಂದು ಪ್ರತಾಪ್ ಭಾವುಕರಾಗಿದ್ದಾರೆ.
ನನ್ನ ಬಗ್ಗೆ ಅಪಪ್ರಚಾರ ಮಾಡಿದರು
ನಾನು ಚಿಕ್ಕಮಗಳೂರಿನ ನನ್ನ ಗೆಳೆಯನ ಮನೆಯಲ್ಲಿ ಕ್ವಾರಂಟೈನ್ ಆಗಲು ಹೋಗಿದ್ದೆ. ನನ್ನ ಪ್ಲಾಟ್ಅನ್ನು ಕೂಡ ಒಡೆದು ಯಾರು ವಿಡಿಯೋ ಮಾಡಿ ಮೀಡಿಯಾಗೆಲ್ಲಾ ಹಂಚಿಬಿಟ್ಟಿದ್ದರು ಎಂದು ಪ್ರತಾಪ್ ಹಳೆಯ ದಿನಗಳ ಬಗ್ಗೆ ಹೇಳಿದ್ದಾರೆ. ನಾನು ಯಾರಿಂದಲೂ ಕೂಡ ಒಂದು ರೂಪಾಯಿ ದುಡ್ಡು ಸಹ ಪಡೆದಿಲ್ಲ. ಆದರೆ ನನ್ನ ಬಗ್ಗೆ ಸುಳ್ಳ, ಕಳ್ಳ, ಮಳ್ಳ, ಡೋಂಗಿ ಎಂದೆಲ್ಲಾ ಅಪಪ್ರಚಾರವಾಗಿ ಮೀಡಿಯಾದಲ್ಲಿ ಬಂದಿತು. ಕೊನೆಗೆ ಕ್ವಾರಂಟೈನ್ ಮುಗಿಸಿ ನನ್ನನ್ನ ಶಾಂತಿ ಸಾಗರ್ ಹೋಟೆಲ್‌ಗೆ ಕರೆದುಕೊಂಡು ಹೋಗಿ ಚಿತ್ರಹಿಂಸೆ ನೀಡಿದರು. ನೀನು ಮೆಂಟಲಿ ಸರಿ ಇಲ್ಲ ಎಂದೆಲ್ಲಾ ಮೀಡಿಯಾ ಮುಂದೆ ಹೇಳು ಆಗ ನಾವು ನಿನ್ನನ್ನು ಬಿಟ್ಟುಬಿಡುತ್ತೇವೆ ಎಂದು ತಲೆಯ ಮೇಲೆ ಒಡೆದರು ಎಂದು ಪ್ರತಾಪ್ ಹೇಳಿದ್ದಾರೆ.
ಹಳೆಯದನ್ನೆಲ್ಲಾ ನೆನೆದು ಕಣ್ಣೀರು
ಹೋಟೆಲ್‌ನಲ್ಲಿ ಇದ್ದಾಗ ನೀನು ಮೆಂಟಲ್, ತಲೆ ಸರಿ ಇಲ್ಲ ಎಂಬ ಒಂದು ಕಾಗದವನ್ನ ಬರೆದು ಅದಕ್ಕೆ ನಾನು ಸೈನ್ ಮಾಡಲಿ ಎಂದು ಒತ್ತಾಯಿಸಿದರು. ತದನಂತರ ಮೀಡಿಯಾ ಮುಂದೆ ಹೋಗಿ ನಾನು ಸರಿ ಇಲ್ಲ ಎಂದು ಹೇಳು ಎಂದರು. ನಾನು ಹೋಟೆಲ್‌ನಿಂದ ಹೊರಗೆ ಬರುವ ಮುನ್ನವೇ ಅವರೇ ಮೀಡಿಯಾ ಮುಂದೆ ಹೋಗಿ ಪ್ರತಾಪ್ ಹೇಳುವುದು ಎಲ್ಲವೂ ಸುಳ್ಳು ಎಂದು ಹೇಳಿಸಿ ಮೀಡಿಯಾದವರನ್ನೆಲ್ಲಾ ಹೊರಗೆ ಕಳುಹಿಸಿ ಬಿಟ್ಟರು. ನಿನ್ನ ತಂಗಿಯನ್ನು ಮದುವೆ ಆಗುವವರು ಯಾರು..? ನಾವು ನಿನ್ನನ್ನು ಬೀದಿಗೆ ತರುತ್ತೇವೆ, ನಿನ್ನ ತಾಯಿ ಹುಚ್ಚಿಯಂತೆ ಅಲೆದಾಡಬೇಕು. ನಿನ್ನ ತಂದೆಗೆ ಯಾರು ಇಲ್ಲ ಎಂದು ಅನಿಸಬೇಕು ಆ ರೀತಿ ಮಾಡುತ್ತೇವೆ ಎಂದು ಹೇಳಿದರು. ಆದರೆ ಅದ್ಯಾವುದೂ ಕೂಡ ಸಾಧ್ಯವಾಗಿಲ್ಲ.
ಬಹಳ ಚಿತ್ರಹಿಂಸೆ ಅನುಭವಿಸಿದೆ
ನಾನು ಬೆಂಗಳೂರಿನಿಂದ ಮನೆಗೆ ಹೋಗಿ ಆರು ತಿಂಗಳು ಹೊರಗೆ ಬಾರದೆ ಮನೆಯಲ್ಲೇ ಚಿತ್ರ ಹಿಂಸೆ ಅನುಭವಿಸುತ್ತೇನೆ ಎಂದು ಪ್ರತಾಪ್ ಹಳೆಯ ದಿನಗಳ ಬಗ್ಗೆ ಮೆಲುಕು ಹಾಕಿದ್ದಾರೆ. ನನ್ನ ತಂದೆ ತಾಯಿಗೆ ಸಂಬಂಧಿಕರು ಸ್ವಲ್ಪ ಊಟದಲ್ಲಿ ವಿಷ ಹಾಕಿ ಅವನನ್ನು ಸಾಯಿಸಿ ಬಿಡಿ ಎಂದರು. ಆ ರೀತಿ ಏನಾದರೂ ನನ್ನ ತಂದೆ ತಾಯಿ ಮಾಡಿದ್ದರೆ ಇಂದು ನಾನು ಬಿಗ್ ಬಾಸ್ ಮನೆಗೆ ಬರುತ್ತಿರಲಿಲ್ಲ. ಎಲ್ಲಾ ಅಪಮಾನಗಳನ್ನು ಸಹಿಸಿಕೊಂಡು ನಾನು ಮೂರು ವರ್ಷದಿಂದ ತಂದೆ- ತಾಯಿಯಿಂದ ದೂರವಾಗಿದ್ದೇನೆ ಎಂದು ಪ್ರತಾಪ್ ಕಣ್ಣೀರು ಹಾಕಿದ್ದಾರೆ.
ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿಡಿ
ನಾನು ಸಣ್ಣದೊಂದು ರಿಸರ್ಚ್ ಮಾಡಿ ನನ್ನ ಬದುಕನ್ನ ಕಟ್ಟಿಕೊಂಡಿದ್ದೇನೆ, ದಯವಿಟ್ಟು ಅಪಪ್ರಚಾರ ಮಾಡದೇ ನನ್ನ ಪಾಡಿಗೆ ನನ್ನನ್ನ ಬಿಟ್ಟುಬಿಡಿ ಎಂದು ಪ್ರತಾಪ್ ಹೇಳಿದ್ದಾರೆ. ಬಿಗ್ ಬಾಸ್ ವೇದಿಕೆ ನನಗೊಂದು ಅವಕಾಶವನ್ನ ಕಲ್ಪಿಸಿದೆ. ನಾನು ಯಾರ ಸಹವಾಸಕ್ಕೂ ಹೋದವನಲ್ಲ. ನನ್ನ ಸಹವಾಸಕ್ಕೆ ಬಂದಿದ್ದಾರೆ ನನಗೆ ಚಿತ್ರ ಹಿಂಸೆ ನೀಡಿದ್ದಾರೆ. ನೀವು ನಿಮ್ಮ ಮಕ್ಕಳನ್ನ ಬಾವಿಗೆ ತಳ್ಳಿ ಆಟವಾಡಿ ಇನ್ನೊಬ್ಬರ ಮಕ್ಕಳನ್ನ ಬಾವಿಗೆ ತಳ್ಳಿ ಆಳ ಎಷ್ಟಿದೆ ಎಂಬುದನ್ನು ನೋಡಬೇಡಿ. ನನ್ನನ್ನು ಪ್ರೀತಿಸುವ ಜನರು ನನಗೆ ಪ್ರೀತಿಯನ್ನು ಕೊಡುತ್ತಾರೆ. ನಾನು ಯಾರಿಗೂ ಮೋಸ ಮಾಡಿಲ್ಲ ನಾನು ಕಳ್ಳ, ಸುಳ್ಳ ಅಲ್ಲ ಎಂದು ಪ್ರತಾಪ್ ಹೇಳಿದ್ದಾರೆ.


Click it and Unblock the Notifications











