ಬಿಗ್ ಬಾಸ್ ಒಟಿಟಿ ಸಖತ್ ಹಾಟ್: ಮಕ್ಳು ನೋಡೋಕೆ ಆಗಲ್ಲ, ವಯಸ್ಕರೇ ಟಾರ್ಗೆಟ್
ಹಿಂದಿ ಬಿಗ್ ಬಾಸ್ ಸೀಸನ್ 15 ಬಹಳ ವಿಶೇಷವಾಗಿ ಗಮನ ಸೆಳೆಯುತ್ತಿದೆ. ಟಿವಿಯಲ್ಲಿ ಪ್ರಸಾರವಾಗುವುದಕ್ಕೂ ಮುಂಚೆ ಒಟಿಟಿಯಲ್ಲಿ ಆರು ವಾರಗಳು ಕಾರ್ಯಕ್ರಮ ಪ್ರಸಾರವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಒಟಿಟಿ ಬಿಗ್ ಬಾಸ್ ಸಂಚಿಕೆಯನ್ನು ಕರಣ್ ಜೋಹರ್ ನಿರೂಪಣೆ ಮಾಡಲಿದ್ದು, ಟಿವಿ ಸಂಚಿಕೆಗಳನ್ನು ಸಲ್ಮಾನ್ ಖಾನ್ ಮುಂದುವರಿಸಲಿದ್ದಾರೆ.
ಹಿಂದಿ ಬಿಗ್ ಬಾಸ್ ಒಟಿಟಿಯ ಹೊಸ ಪ್ರೋಮೋ ಮಂಗಳವಾರ (ಆಗಸ್ಟ್ 3) ಬಿಡುಗಡೆಯಾಗಿದ್ದು, 15ನೇ ಆವೃತ್ತಿ ಸಖತ್ ಬೋಲ್ಡ್ ಹಾಗೂ ಹಾಟ್ ಆಗಿರಲಿದೆ ಎಂದು ಸುಳಿವು ಸಿಕ್ಕಿದೆ. ಈ ಪ್ರೋಮೋ ನೋಡಿದ್ಮೇಲೆ ಈ ಸಲ ಬಿಗ್ ಬಾಸ್ ಸಾಮಾನ್ಯ ಪ್ರೇಕ್ಷಕರಿಗೆ ಕಿರಿಕಿರಿ ಉಂಟು ಮಾಡಬಹುದು.
ಇದು ವಯಸ್ಕರನ್ನು ಗುರಿಯಾಗಿಸಿ ಮಾಡುತ್ತಿರುವ ಯೋಜನೆ ಎಂದು ವಿಶ್ಲೇಷಿಸಲಾಗುತ್ತಿದೆ. ಅದಕ್ಕೆ ಪುಷ್ಠಿ ನೀಡುವಂತೆ ಪ್ರೋಮೋ ರಿಲೀಸ್ ಮಾಡಲಾಗಿದೆ. ಹೌದು, ಬಿಗ್ ಬಾಸ್ ಒಟಿಟಿಯಲ್ಲಿ ಸ್ಪರ್ಧಿಗಳು ಬೆತ್ತಲಾಗುವ ಆಟಗಳನ್ನು ಆಯೋಜಿಸಲಾಗುತ್ತದೆ. ಅರೆನಗ್ನವಾಗಿ ಕಾಣಿಸಿಕೊಳ್ಳಬೇಕಾಗಬಹುದು.

ಅದನ್ನು ಸ್ವತಃ ಕರಣ್ ಜೋಹರ್ ಅವರೇ ಪ್ರೋಮೋದಲ್ಲಿ ಹೇಳಿದ್ದಾರೆ. ಈ ಸಲ ಆಟ ಮತ್ತಷ್ಟು ಇಂಟರೆಸ್ಟಿಂಗ್ ಆಗಿರಲಿದೆ ಎಂದು ಸುಳಿವು ಕೊಟ್ಟಿರುವ ಕರಣ್, ಸ್ಪರ್ಧಿಗಳು ಹಾಟ್ ಆಗಿಯೂ ಇರಲಿದ್ದಾರೆ. ಬೋಲ್ಡ್ ಆಗಿಯೂ ನಡೆದುಕೊಳ್ಳಲಿದ್ದಾರೆ ಎಂದು ಉದಾಹರಣೆ ಕೊಟ್ಟಿದ್ದಾರೆ.
''ಬಿಗ್ ಬಾಸ್ ಕಾರ್ಯಕ್ರಮದ ಅಭಿಯಾನಿಯಾಗಿ ನಾನು ಸಹ ತುಂಬಾ ಉತ್ಸುಕನಾಗಿದ್ದೇನೆ. ಬಿಗ್ ಬಾಸ್ ಒಟಿಟಿ ಪರಿಚಯ ಮಾಡ್ತಿರುವ ಹೊಸ ಅಂಶಗಳ ಬಗ್ಗೆ ನನಗೆ ಹೆಚ್ಚು ಖುಷಿ ಇದೆ. ಇಲ್ಲಿ ಸ್ಪರ್ಧಿಗಳಿಗೆ ಪ್ರೇಕ್ಷಕರು ಶಿಕ್ಷೆ ಕೊಡಬಹುದು. ಯಾವ ರೀತಿ ಶಿಕ್ಷೆಯನ್ನು ಕೊಡ್ತಾರೆ ಎನ್ನುವುದನ್ನು ತಿಳಿಯಲು ನಾನು ಕುತೂಹಲದಿಂದ ಕಾಯುತ್ತಿದ್ದೇನೆ'' ಎಂದು ಕರಣ್ ಜೋಹರ್ ಹೇಳಿದ್ದಾರೆ.
ಮೊದಲೇ ಒಟಿಟಿಗೆ ಬಲವಾದ ಸೆನ್ಸಾರ್ ಇಲ್ಲ. ಇದನ್ನೇ ಪ್ರಮುಖ ಅಸ್ತ್ರವನ್ನಾಗಿಸಿರುವ ಬಿಗ್ ಬಾಸ್ ಆಯೋಜಕರು ಈ ಸಲ ಶೋ ಬೋಲ್ಡ್ ಆಗಿ ನಿರೂಪಣೆ ಮಾಡಲು ನಿರ್ಧರಿಸಿದ್ದಾರೆ. ಹೊಸದಾಗಿ ಬಿಡುಗಡೆಯಾಗಿರುವ ಬಿಗ್ ಬಾಸ್ ಪ್ರೋಮೋಗೆ ಕೆಲವರು ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ''ಒಟಿಟಿ ಹೆಸರಿನಲ್ಲಿ ಕಾರ್ಯಕ್ರಮವನ್ನು ಅಸಭ್ಯ ಮಾಡಲು ಹೊರಟಿದ್ದೀರಾ'' ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ''ಒಟಿಟಿ ಬಿಗ್ ಬಾಸ್ ಮುಗಿಯುವ ವೇಳೆ ಆ ಸ್ಪರ್ಧಿಗಳು ಬದುಕಿ ಉಳಿದಿದ್ದರೆ ಅದೇ ಹೆಚ್ಚು'' ಎಂದು ಓರ್ವ ನೆಟ್ಟಿಗ ಕಾಮೆಂಟ್ ಮಾಡಿದ್ದಾರೆ.

ಇನ್ನು ಬಿಗ್‌ಬಾಸ್ ಒಟಿಟಿಗಾಗಿ ಬೆತ್ತಲೇ ಯೋಗ ಗುರು ಎಂದೇ ಖ್ಯಾತಿ ಗಳಿಸಿಕೊಂಡಿರುವ ವಿವೇಕ್ ಮಿಶ್ರಾ ಅವರನ್ನು ಸಂಪರ್ಕಿಸಲಾಗಿದೆ ಎನ್ನುವ ವಿಚಾರ ಬಹಿರಂಗವಾಗಿತ್ತು. ಈ ಕುರಿತು ಸ್ವತಃ ವಿವೇಕ್ ಮಿಶ್ರಾ ಹೇಳಿಕೊಂಡಿದ್ದಾರೆ. ''ಒಟಿಟಿ ಬಿಗ್‌ಬಾಸ್ ಆಯೋಜಕರು ನನ್ನನ್ನು ಸಂಪರ್ಕಿಸಿ ಶೋ ನಲ್ಲಿ ಭಾಗವಹಿಸುವಂತೆ ಕೇಳಿದರು. ಜೊತೆಗೆ ಶೋ ನಲ್ಲಿ ಬೆತ್ತಲೆ ಅಥವಾ ಅರೆಬೆತ್ತಲೆಯಾಗಿ ಯೋಗ ಮಾಡಲು ಸಹ ಹೇಳಿದರು. ಅವರ ಡಿಮ್ಯಾಂಡ್ ಕೇಳಿ ನನಗೆ ಆಶ್ಚರ್ಯವಾಯಿತು'' ಎಂದಿದ್ದಾರೆ.
''ದಿನವೊಂದಕ್ಕೆ ಐವತ್ತು ಲಕ್ಷ ಹಣ ಕೊಡುವುದಾದರೆ ಮಾತ್ರವೇ ನಾನು ಒಟಿಟಿ ಬಿಗ್‌ಬಾಸ್‌ನಲ್ಲಿ ಭಾವಹಿಸುತ್ತೇನೆ. ಶೋನಲ್ಲಿ ಬೆತ್ತಲೆ ಯೋಗ ಮಾಡುತ್ತೇನೆ ಎಂದು ನಾನು ಆಯೋಜಕರಿಗೆ ಹೇಳಿದ್ದೇನೆ. ನಾನು ಈಗಾಗಲೇ ಬಿಗ್‌ಬಾಸ್‌ನಲ್ಲಿ ಭಾಗವಹಿಸಿದ್ದೇನೆ, ಅಲ್ಲಿ ನನ್ನ ಪ್ರತಿಭೆ ಪ್ರದರ್ಶನ ಮಾಡಿದ್ದೇನೆ. ಹಾಗಾಗಿ ಈ ಆಫರ್ ನನಗೆ ಹೊಸದೇನೂ ಅಲ್ಲ'' ಎಂದಿದ್ದಾರೆ ವಿವೇಕ್.

ಇದೆಲ್ಲ ನೋಡಿದ್ಮೇಲೆ ಬಿಗ್‌ಬಾಸ್ ಒಟಿಟಿ ಈ ಹಿಂದಿನಕ್ಕಿಂತಲೂ ಹೆಚ್ಚು ಗ್ಲಾಮರಸ್ ಆಗಿ, ಎರೊಟಿಕಾ ಮಾದರಿಯಲ್ಲಿ ಪ್ರಸ್ತುತಪಡಿಸುವುದು ಬಹುತೇಕ ಖಚಿತ. ಹಾಗಾಗಿ, ಈ ಸಲ ಕಾರ್ಯಕ್ರಮದ ಥೀಮ್‌ಗೆ ಹೊಂದಿಕೆ ಆಗುವಂತಹಾ ಸ್ಪರ್ಧಿಗಳನ್ನೇ ಹುಡುಕಿ ಶೋ ಕರೆತರಲಾಗುತ್ತಿದೆ.
ಆಗಸ್ಟ್ 8 ರಿಂದ ಬಿಗ್ ಬಾಸ್ ಒಟಿಟಿ ಪ್ರಸಾರವಾಗಲಿದೆ. ಈ ಸಲ ಆನ್‌ಲೈನ್ ವೇದಿಕೆಯಲ್ಲಿ ಯಾವೆಲ್ಲಾ ಸ್ಪರ್ಧಿಗಳು ಭಾಗವಹಿಸುತ್ತಾರೆ ಎನ್ನುವುದು ತೀವ್ರ ಕುತೂಹಲ ಕೆರಳಿಸಿದೆ.


Click it and Unblock the Notifications











