ಬಿಗ್‌ಬಾಸ್ ಸ್ಪರ್ಧಿಗಳ ಫ್ಯಾನ್ಸ್ ನಡುವೆ ಗಲಾಟೆ, ವಾಹನಗಳ ಗಾಜು ಪುಡಿಪುಡಿ: ಕೇಸ್ ದಾಖಲು
ಕನ್ನಡದಲ್ಲಿ ಮಾತ್ರವಲ್ಲದೇ ಹಿಂದಿ, ತಮಿಳು, ತೆಲುಗಿನಲ್ಲಿ ಬಿಗ್‌ಬಾಸ್ ಶೋ ನಡೀತಿದೆ. ತೆಲುಗು ಬಿಗ್‌ಬಾಸ್ ಸೀಸನ್- 7ಕ್ಕೆ ತೆರೆ ಬಿದ್ದಿದೆ. ಪಲ್ಲವಿ ಪ್ರಶಾಂತ್ ಎಂಬುವವರು ವಿನ್ನರ್ ಆಗಿ ಟ್ರೋಫಿ ಎತ್ತಿ ಹಿಡಿದಿದ್ದಾರೆ. ಆದರೆ ಶೋ ಮುಗಿಯುತ್ತಿದ್ದಂತೆ ವಿನ್ನರ್ ಹಾಗೂ ರನ್ನರ್ ಅಪ್ ಫ್ಯಾನ್ಸ್ ನಡುವೆ ಗಲಾಟೆ ನಡೆದಿದೆ.
ಭಾನುವಾರ(ಡಿಸೆಂಬರ್ 17) ರಾತ್ರಿ ಬಿಗ್‌ಬಾಸ್ ತೆಲುಗು ಸೀಸನ್- 7ರ ಗ್ರ್ಯಾಂಡ್ ಫಿನಾಲೆ ಮುಕ್ತಾಯವಾಯಿತು. ಈ ಬಾರಿ ತೆಲುಗು ಬಿಗ್‌ಬಾಸ್ ಟ್ರೋಫಿಗಾಗಿ ಹಲವರು ಪೈಪೋಟಿ ನಡೆಸುತ್ತಿದ್ದರು. ಅದರಲ್ಲಿ ಅಮರದೀಪ್ ಹಾಗೂ ಪಲ್ಲವಿ ಪ್ರಶಾಂತ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಈ ಇಬ್ಬರಲ್ಲಿ ಒಬ್ಬರು ವಿಜೇತರಾಗುತ್ತಾರೆ ಎಂಬ ಮಾತು ಸಾಮಾಜಿಕ ಜಾಲತಾಣಗಳಲ್ಲಿ ಬಲವಾಗಿ ಕೇಳಿಬಂದಿತ್ತು. ಅಂತಿಮವಾಗಿ ಪಲ್ಲವಿ ಪ್ರಶಾಂತ್ ಈ ಪ್ರಶಸ್ತಿಯನ್ನು ಗೆದ್ದರು. ತಮ್ಮ ಆಟದಿಂದ ಪ್ರೇಕ್ಷಕರ ಮನ ಗೆದ್ದು ಬಿಗ್ ಬಾಸ್ ಸೀಸನ್-7 ರ ವಿನ್ನರ್ ಆದರು.

ಯೂಟ್ಯೂಬರ್ ಆಗಿ ಜನಪದ ಹಾಡುಗಳನ್ನು ಹಾಡುವ ಮೂಲಕ ಗಮನ ಸೆಳೆದಿದ್ದ ಪ್ರಶಾಂತ್ ಈಗ ಬಿಗ್ ಬಾಸ್ ವಿನ್ನರ್ ಆಗಿದ್ದಾರೆ. ಇನ್ನೊಂದೆಡೆ ಕೊನೆಯವರೆಗೂ ಉತ್ತಮ ಪೈಪೋಟಿ ನೀಡಿದ ಕಿರುತೆರೆ ನಟ ಅಮರದೀಪ್ ರನ್ನರ್ ಅಪ್ ಆದರು. ಆದರೆ ಇವರಿಬ್ಬರ ಅಭಿಮಾನಿಗಳ ಜಗಳ ಈಗ ಚರ್ಚೆಗೆ ಗ್ರಾಸವಾಗಿದೆ.
ಗ್ರ್ಯಾಂಡ್ ಫಿನಾಲೆ ಹಿನ್ನೆಲೆ ಬಿಗ್ ಬಾಸ್ ಶೋ ಶೂಟಿಂಗ್ ನಡೆಯುತ್ತಿದ್ದ ಅನ್ನಪೂರ್ಣ ಸ್ಟುಡಿಯೋಸ್‌ಗೆ ಅಮರದೀಪ್ ಮತ್ತು ಪ್ರಶಾಂತ್ ಅಭಿಮಾನಿಗಳು ಆಗಮಿಸಿದ್ದರು. ರೈತನ ಮಗ ಪ್ರಶಾಂತ್ ಗೆದ್ದಿದ್ದು ಗೊತ್ತಾದಾಗ ಅಭಿಮಾನಿಗಳು ಸಂಭ್ರಮಿಸಿದ್ದರು. ಆದರೆ ಈ ವೇಳೆ ಪ್ರಶಾಂತ್-ಅಮರ್ ಅಭಿಮಾನಿಗಳ ನಡುವೆ ಶುರುವಾದ ವಾಗ್ವಾದ ವಿಕೋಪಕ್ಕೆ ಹೋಗಿತ್ತು. ಇಬ್ಬರ ಅಭಿಮಾನಿಗಳು ಪರಸ್ಪರ ತಳ್ಳಾಡಿ, ಗುದ್ದಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅದೇ ವೇಳೆ ಆ ಕಡೆ ಹೋಗುತ್ತಿದ್ದ ಕೊಂಡಾಪುರ-ಸಿಕಂದರಾಬಾದ್ ಆರ್‌ಟಿಸಿ ಬಸ್ ಮೇಲೆ ದಾಳಿ ಮಾಡಿ ಗಾಜು ಒಡೆದಿದ್ದಾರೆ.
ಇನ್ನೊಂದೆಡೆ ಬಿಗ್ ಬಾಸ್ ಮನೆಯಿಂದ ಹೊರ ಬಂದ ರನ್ನರ್ ಅಪ್ ಅಮರ್ ದೀಪ್ ವಾಹನವನ್ನು ಕೆಲವರು ಸುತ್ತುವರಿದಿದ್ದಾರೆ. ವಾಹನ ಮುಂದೆ ಹೋಗಲು ಬಿಡದೇ ದಾಳಿಗೆ ಯತ್ನಿಸಿದರು. ಕಾರಿನ ಗಾಜುಗಳನ್ನು ಒಡೆದು ಅಮರ್‌ದೀಪ್ ಅವರನ್ನು ಹೊರಹೋಗುವಂತೆ ಘೋಷಣೆ ಕೂಗಿದ್ದರು. ಕಾರಿನ ಗಾಜುಗಳನ್ನು ಒಡೆದು ಹೊರಗೆ ಬರುವಂತೆ ಹೇಳಿದ್ದಕ್ಕೆ ಅಮರ್‌ದೀಪ್ ಅವರ ತಾಯಿ ಮತ್ತು ಪತ್ನಿ ಗಾಬರಿಗೊಂಡಿದ್ದಾರೆ.

ಅನ್ನಪೂರ್ಣ ಸ್ಟುಡಿಯೋಗೆ ಧಾವಿಸಿದ ಪೊಲೀಸರು ಎರಡೂ ಗುಂಪುಗಳನ್ನು ಚದುರಿಸಿದ್ದಾರೆ. ಭದ್ರತೆಯ ನಡುವೆ ಅಮರ್‌ದೀಪ್ ಕುಟುಂಬ ಸದಸ್ಯರನ್ನು ಅಲ್ಲಿಂದ ಕರೆದೊಯ್ಯಲಾಯಿತು. ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಪಲ್ಲವಿ ಪ್ರಶಾಂತ್ ಹಾಗೂ ಅಮರ್‌ದೀಪ್ ಅಭಿಮಾನಿಗಳ ಹುಚ್ಚಾಟಕ್ಕೆ ನೆಟ್ಟಿಗರು ಗರಂ ಆಗಿದ್ದಾರೆ. ಆಟವನ್ನು ಆಟವನ್ನಾಗಿ ನೋಡಿ ಈ ರೀತಿ ವರ್ತಿಸುವುದು ಸರಿಯಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಅಮರ್ ಅವರ ಕಾರಿನ ಮೇಲೆ ದಾಳಿ ನಡೆಸಿ ಕುಟುಂಬಸ್ಥರನ್ನು ಗಾಬರಿಗೊಳಿಸಿದ್ದು ಸರಿಯಲ್ಲ ಎನ್ನುತ್ತಿದ್ದಾರೆ.
ಗ್ರ್ಯಾಂಡ್ ಫಿನಾಲೆಗೆ ಬೇರೆ ಸ್ಪರ್ಧಿಗಳು ಕೂಡ ಆಗಮಿಸಿದ್ದರು. ಪ್ರಶಾಂತ್ ಹಾಗೂ ಅಮರ್ ಅಭಿಮಾನಿಗಳು ಗಲಾಟೆಯಲ್ಲಿ ಇತರೆ ಸ್ಪರ್ಧೀಗಳ ವಾಹನಗಳ ಗಾಜು ಪುಡಿಪುಡಿಯಾಗಿದೆ. ಸ್ಪರ್ಧಿ ಅಶ್ವಿನಿ ಶ್ರೀ ತಮ್ಮ ಕಾರಿನ ಗಾಜು ಪುಡಿ ಪುಡಿ ಮಾಡಿದ್ದರ ಬಗ್ಗೆ ವೀಡಿಯೋ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ. ಗೀತು ರಾಯಲ್ ಎಂಬುವವರ ವಾಹನದ ಮೇಲೂ ದಾಳಿ ನಡೆದಿದ್ದು ಆಕರ ಪೊಲೀಸರಿಗೆ ದೂರು ನೀಡಿರುವುದಾಗಿ ವರದಿಯಾಗಿದೆ.


Click it and Unblock the Notifications











