'ಬ್ರಹ್ಮಗಂಟು' ಫೋಟೋಶೂಟ್ ನೋಡಿ "ಎಲ್ಲಿಗೆ ಹೋಗಿದ್ದೀರಿ? ಬೇಗ ಸೀರಿಯಲ್‌ನಲ್ಲಿ ಕಾಣಿಸಿಕೊಳ್ಳಿ" ಎಂದ ನೆಟ್ಟಿಗರು!
ಜೀ ಕನ್ನಡ ವಾಹಿನಿಯಲ್ಲಿ ಇತ್ತೀಚಿಗಷ್ಟೇ ಆರಂಭವಾಗಿರುವ ಹೊಸ ಧಾರಾವಾಹಿ 'ಬ್ರಹ್ಮಗಂಟು' ಎಲ್ಲರಿಗೂ ತಿಳಿದೇ ಇದೆ. ಹೊಸತಾಗಿದ್ದರೂ ಪ್ರೇಕ್ಷಕರನ್ನು ಸೆಳೆಯುವಲ್ಲಿ ಈ ಧಾರಾವಾಹಿ ತಂಡ ಯಶಸ್ವಿಯಾಗಿದೆ. ಇದಕ್ಕೆ ಒಂದು ಕಾರಣವೆಂದರೆ 'ಪಾರು' ಸೀರಿಯಲ್ಗಾಗಿ ಕೆಲಸ ಮಾಡಿದ್ದ ತಂಡವೇ 'ಬ್ರಹ್ಮಗಂಟು' ಧಾರಾವಾಹಿಯಲ್ಲೂ ಕೆಲಸ ಮಾಡುತ್ತಿದೆ. ಕಿರುತೆರೆ ಹಾಗೂ ಚಿತ್ರರಂಗದಲ್ಲಿ ಉತ್ತಮ ಅನುಭವವಿರುವ ನಟ, ನಿರ್ಮಾಪಕ ದಿಲೀಪ್ ರಾಜ್ ಈ ಧಾರಾವಾಹಿಗೆ ಕ್ರಿಯೇಟಿವ್ ಡೈರೆಕ್ಟರ್ ಆಗಿದ್ದಾರೆ.
ಅಂದ ಹಾಗೆ ಈ ಸುದ್ದಿಯ ಪ್ರಮುಖ ಅಂಶ 'ಬ್ರಹ್ಮಗಂಟು' ಧಾರಾವಾಹಿಯ ನಾಯಕಿ. ಅವರೇ ಕನ್ನಡ ಕಿರುತೆರೆ ಪ್ರೇಕ್ಷಕರ ನೆಚ್ಚಿನ ನಟಿ ಕಾವ್ಯಾ ರಮೇಶ್. ಹೌದು, ಹೊಸದಾಗಿ ಆರಂಭವಾಗಿರುವ 'ಬ್ರಹ್ಮಗಂಟು' ಸೀರಿಯಲ್‌ನಲ್ಲಿ ಕಾವ್ಯಾ ರಮೇಶ್ ಎರಡನೇ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಧಾರಾವಾಹಿಯ ಮೇರು ಅಂಶವಾದ ದೀಪ ಮತ್ತು ರೂಪ ಜೋಡಿ ತಮ್ಮ ನಟನೆಯಿಂದ ಈಗಾಗಲೇ ಕಿರುತೆರೆ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕಿನ್ನರಿ' ಧಾರಾವಾಹಿಯಲ್ಲಿ ನಟಿಸಿದ್ದ ದಿವ್ಯಾ ಅವರು ನಾಯಕಿ ದೀಪಾಳ ಪಾತ್ರವನ್ನು ನಿಭಾಯಿಸುತ್ತಿದ್ದರೆ, ಅವರ ಅಕ್ಕ ರೂಪಾಳ ಪಾತ್ರವನ್ನು ಕಾವ್ಯಾ ರಮೇಶ್ ನಿರ್ವಹಿಸುತ್ತಿದ್ದಾರೆ.

ಈ ಹಿಂದೆ 'ಸೀತಾ ವಲ್ಲಭ' ಧಾರಾವಾಹಿಯಲ್ಲಿ ನಟಿಸಿದ್ದ ಕಾವ್ಯಾ, ಕೆಲ ಕಾಲ ನಟನೆಯಿಂದ ದೂರ ಉಳಿದಿದ್ದರು. 'ಗೌರಿಶಂಕರ' ಧಾರಾವಾಹಿಯಲ್ಲಿ ಗೌರಿಯ ತಂಗಿಯಾಗಿ ನಟಿಸುವ ಮೂಲಕ ಮತ್ತೆ ತೆರೆಯ ಮೇಲೆ ಕಾಣಿಸಿಕೊಂಡರು. ಈಗ ನಟಿ 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ಎರಡನೇ ನಾಯಕಿಯಾಗಿ ನಟಿಸುತ್ತಿದ್ದಾರೆ.
ಸದ್ಯ 'ಬ್ರಹ್ಮಗಂಟು' ಸೀರಿಯಲ್‌ನಲ್ಲಿ ಅವರ ಎಪಿಸೋಡ್‌ಗಳು ಬರುತ್ತಿಲ್ಲ. ಸೀರಿಯಲ್‌ನಲ್ಲಿ ಕಾವ್ಯಾ ಅವರನ್ನು ಕಾಣದೆ ಬೇಸರ ವ್ಯಕ್ತಪಡಿಸಿದ್ದ ಅಭಿಮಾನಿಗಳಿಗೆ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಖುಷಿ ತಂದಿದ್ದಾರೆ. ಹೌದು, ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ನಟಿ ಈಗ ಸಿಂಗಲ್ ಪೀಸ್ ಡ್ರೆಸ್ನಲ್ಲಿರುವ ಫೋಟೋ ಒಂದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿರುವ ನಟಿಯ ಹೊಸ ಪೋಸ್ಟ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಜೊತೆಗೆ "'ಎಲ್ಲಿಗೆ ಹೋಗಿದ್ದೀರಿ? ಬೇಗ ಸೀರಿಯಲ್‌ನಲ್ಲಿ ಕಾಣಿಸಿಕೊಳ್ಳಿ, ನಿಮ್ಮ ಎಪಿಸೋಡ್ಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ" ಅಂತ ಕಾಮೆಂಟ್ಸ್ ಹಾಕಿದ್ದಾರೆ.
ಕಿರುತೆರೆ ಮಾತ್ರವಲ್ಲದೆ ಹಿರಿತೆರೆಯ ಕೆಲವು ಚಿತ್ರಗಳಲ್ಲೂ ಕಾವ್ಯಾ ಕಾಣಿಸಿಕೊಂಡಿದ್ದಾರೆ. 'ನಾಚಿನವಾಡು' ತೆಲುಗು ಸಿನಿಮಾದಲ್ಲಿ ನಟಿಸಿರುವ ಈ ಬೆಡಗಿ ಕನ್ನಡದ 'ನೋಡದ ಪುಟಗಳು', 'ಚೌಕಾಬಾರ' ಮುಂತಾದ ಸಿನಿಮಾಗಳ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿಯೇ ಇದ್ದಾರೆ.


Click it and Unblock the Notifications











