ಊದಿದ ಮುಖ..ಮುರಿದ ಹಲ್ಲು ; ನೈಟ್ ಕ್ಲಬ್‌ನಲ್ಲಿ ಉದಯೋನ್ಮುಖ ನಟಿಯ ಮೇಲೆ ಭೀಕರ ಹಲ್ಲೆ
ಸಾಮಾನ್ಯವಾಗಿ ವಾರಾಂತ್ಯ ಬಂದರೆ ಸಾಕು, ಜನ ಸಾಮಾನ್ಯರೇ.. ಪಬ್ಬು-ಪಾರ್ಟಿ ಅಂತೆಲ್ಲ ಮಜಾ ಮಾಡುತ್ತಾರೆ. ತಮ್ಮ ಪ್ರೀತಿ ಪಾತ್ರರ ಜೊತೆ ಕಾಲ ಕಳಿಯುತ್ತಾರೆ. ಇನ್ನೂ.. ಸೆಲೆಬ್ರೀಟಿಗಳ ಕಥೆ ಕೇಳ್ಬೇಕಾ..? ಮಬ್ಬುಗತ್ತಲು ಅನೇಕ ಧ್ರುವತಾರೆಯರ ಬದುಕಿನ ಬಹು ಮುಖ್ಯವಾಗಿರುತ್ತೆ.
ಆದರೆ ಇಂದಿನ ಈ ಪಾರ್ಟಿ ಸಂಸ್ಕ್ರತಿ ಕೇವಲ ಮೋಜು ಮಸ್ತಿಗೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ಅಹಂಕಾರ, ದರ್ಪ, ಅಧಿಕಾರದ ಪ್ರದರ್ಶನವಾಗಿದೆ. ಅದರಲ್ಲಿಯೂ ಹೈ- ಫೈ ಕ್ಲಬ್‌ಗಳಿಗೆ ಬರುವ ಬಹುತೇಕರು ದೈಹಿಕ ಹಲ್ಲೆ ನಡೆಸುವ ಲೈಸನ್ಸ್ ತಮ್ಮ ಬಳಿ ಇದೆ ಎಂಬಂತೆ ವರ್ತಿಸಿತ್ತಿದ್ದಾರೆ. ಈಗೋಗೆ ಚೂರೇ ಚೂರು ಹರ್ಟ್ ಆದರೂ ಸಾಕು, ಕಣ್ಣೆದುರು ಯಾರಾದರೂ ಸಿಕ್ಕೂ ಚೂರು ಕಿರಿಕ್ ಆದರೂ ಸಾಕು, ರಂಪ-ರಾಮಾಯಣ ಮಾಡುತ್ತಿದ್ದಾರೆ. ಇದಕ್ಕೆ ಪ್ರೀತ್ ಸಿಂಗ್ ಮೇಲೆ ನಡೆದ ಹಲ್ಲೆ ಸದ್ಯದ ಉದಾಹರಣೆ.

ಹೌದು, ಪ್ರೀತ್ ಸಿಂಗ್.. ಉದಯೋನ್ಮುಖ ತಾರೆ. ಮಾಡೆಲ್. MTVಯ ಜನಪ್ರಿಯ ರಿಯಾಲಿಟಿ ಶೋ ''ಸ್ಪ್ಲಿಟ್ಸ್‌ವಿಲ್ಲಾ'' ಸೀಸನ್ 16ರ ಸ್ಫರ್ಧಿ. ಫಿಟ್‌ನೆಸ್, ಫ್ಯಾಷನ್ ಮತ್ತು ಲೈಫ್ ಸ್ಟೈಲ್ ಬಗ್ಗೆ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ಗಳನ್ನು ಹಾಕುವ ಮೂಲಕ ಇನ್ಫ್ಲುಯೆನ್ಸರ್ ಆಗಿಯೂ ಪ್ರೀತ್ ಗುರುತಿಸಿಕೊಂಡಿದ್ದಾರೆ.
ಇಂಥಾ ಪ್ರೀತ್ ಸಿಂಗ್ ಅವರ ಮೇಲೆ ರಣಭೀಕರ ಹಲ್ಲೆ ಆಗಿದೆ. ಅದು ಮುಂಬೈನಲ್ಲಿ. ಈ ವಿಚಾರ ಹಲವರಿಗೆ ಸದ್ಯ ಆಘಾತವನ್ನುಂಟು ಮಾಡಿದೆ. ಯಾಕೆಂದರೆ ಮುಂಬೈ ಹೇಳಿ ಕೇಳಿ ನೈಟ್ ಲೈಫ್ ವಿಚಾರದಲ್ಲಿ ಬೇರೆ ನಗರಗಳಿಗೆ ಮಾದರಿ. ಯಾವತ್ತೂ ಮಲಗದ ಊರು ಇದು ಎಂದು ಅಲ್ಲಿದ್ದವರು ಮತ್ತು ಹಲವರು ಹೇಳುತ್ತಾರೆ.
[NARI 2025] (National Annual Report and Index on Women's Safety) ವರದಿಯ ಪ್ರಕಾರ ಮಹಿಳೆಯರಿಗೆ ಅತ್ಯಂತ ಸುರಕ್ಷಿತ ನಗರ ಎಂಬ ಬಿರುದು ಪಡೆದ ಕೆಲವೇ ನಗರಗಳಲ್ಲಿ ಮುಂಬೈ ಕೂಡ ಒಂದು. ಹೆಣ್ಣು ಮಕ್ಕಳು ಮುಂಬೈನಲ್ಲಿ ಮಧ್ಯರಾತ್ರಿ 2 ಗಂಟೆಗೆ ಕೂಡ ಆರಾಮಾಗಿ ಓಡಾಡಬಹುದು.. ಕ್ಲಬ್‌ಗಳಲ್ಲಿ ಬಿಂದಾಸ್ ಆಗಿ ಪಾರ್ಟಿ ಮಾಡಬಹುದು.. ಎಂಬ ಮಾತಿದೆ.
ಆದರೆ..ಈ ಕಲರ್ ಫುಲ್ ಲೈಟಿನ ಹಿಂದಿನ ಒಂದು ಕಥೆ ಈಗ ಬೆಳಕಿಗೆ ಬಂದಿದ್ದು ಇನ್‌ಸ್ಟಾಗ್ರಾಮ್‌ನಲ್ಲಿ ಪ್ರೀತ್ ಸಿಂಗ್ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಪ್ರೀತ್ ಸಿಂಗ್, ಮುಂಬೈ ಮಹಿಳೆಯರಿಗೆ ಅತ್ಯಂತ ಸುರಕ್ಷಿತ ನಗರಗಳಲ್ಲಿ ಒಂದು ಎಂದು ನಾನು ಯಾವಾಗಲೂ ಕೇಳಿದ್ದೆ. ಆದರೆ ನನಗೆ ಇಂತಹ ಅನುಭವ ಆಗುತ್ತದೆ ಎಂದು ನಾನು ಕನಸು ಮನಸಿನಲ್ಲಿಯೂ ಊಹಿಸಿರಲಿಲ್ಲ ಎಂದು ಹೇಳಿದ್ದಾರೆ. ಈ ವಿಚಾರ ಬರೆಯುತ್ತಿರುವಾಗಲೂ ನನ್ನ ದೇಹ ನಡಗುತ್ತಿದೆ ಎಂದಿದ್ದಾರೆ.
ನನ್ನ ಕಣ್ಣುಗಳು ಊದಿವೆ, ಮುಖದ ಮೇಲೆ ಗಾಯಗಳಾಗಿವೆ ಎಂದು ಹೇಳಿರುವ ಪ್ರೀತ್ ಸಿಂಗ್ ನನಗೆ ಏನಾಯಿತು ಎಂದು ಈ ಕ್ಷಣಕ್ಕೂ ಇನ್ನೂ ನನಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ.
ತಮ್ಮ ಮೇಲೆ ನಡೆದ ಹಲ್ಲೆಯ ವಿವರವನ್ನು ಹಂಚಿಕೊಂಡಿರುವ ಪ್ರೀತ್ ಸಿಂಗ್,
ನಾನು ನನ್ನ ಸ್ನೇಹಿತನೊಂದಿಗೆ ಕ್ಲಬ್‌ನಲ್ಲಿ ಸುಮ್ಮನೆ ಕುಳಿತಿದ್ದೆ. ಆಗ ಒಬ್ಬಳು ಹುಡುಗಿ ಬಂದು ಇವರನ್ನು ಒಳಗಡೆ ಬಿಟ್ಟಿದ್ಯಾರು ಎಂದು ಜೋರಾಗಿ ಕೀರುಚಾಡಲು ಶುರು ಮಾಡಿದಳು ಎಂದು ಹೇಳಿದ್ದಾರೆ.
ಆರಂಭ ಚಿಕ್ಕ ಜಗಳದಿಂದಾಯ್ತು, ಮಾತಿಗೆ ಮಾತು ಬೆಳೆಯಿತು ಎಂದು ಹೇಳಿರುವ ಪ್ರೀತ್ ಇದೇ ಸಮಯದಲ್ಲಿ ಆ ಹುಡುಗಿಯ ಸ್ನೇಹಿತ ಮಧ್ಯ ಪ್ರವೇಶಿಸಿ ಮನಸೋ ಇಚ್ಚೆ ನನ್ನ ಮೇಲೆ ಹಲ್ಲೆ ಮಾಡಿದ ಎಂದು ಹೇಳಿದ್ದಾರೆ.
ಅವನು ಹೊಡೆದ ಏಟಿಗೆ ನನ್ನ ಒಂದು ಹಲ್ಲು ಮುರಿಯಿತು ಎಂದು ಹೇಳಿರುವ ಪ್ರೀತ್ ಸಿಂಗ್ ಅಲ್ಲಿದ್ದ ಬೇರೆ ಜನರು ನನ್ನ ಸಹಾಯಕ್ಕೆ ಬರುವವರೆಗೆ ಆ ವ್ಯಕ್ತಿ ನನ್ನ ಮೇಲೆ ಹಲ್ಲೆ ಮಾಡುತ್ತಲೇ ಇದ್ದ ಎಂದು ಬಿಕ್ಕಿದ್ದಾರೆ.
ಆ ಹುಡುಗಿ ಇನ್ಫ್ಲುಯೆನ್ಸರ್ ಎಂಬ ವಿಚಾರ ನನಗೆ ಆಮೇಲೆ ಗೊತ್ತಾಯ್ತು ಎಂದು ಹೇಳಿರುವ ಪ್ರೀತ್ ಸಿಂಗ್ ಇಷ್ಟೆಲ್ಲಾ ಹೇಗೆ ಆಯ್ತು ಎನ್ನುವುದೇ ನನಗೆ ಗೊತ್ತಾಗುತ್ತಿಲ್ಲ, ನಾನು ಇನ್ನೂ ಆಘಾತದಲ್ಲಿದ್ದೇನೆ ಎಂದು ಹೇಳಿದ್ದಾರೆ. ಯಾರಿಗೂ ಇಂತಹ ಪರಿಸ್ಥಿತಿಯನ್ನು ಬರಬಾರದು ಎಂದು ಹೇಳಿದ್ಧಾರೆ.


Click it and Unblock the Notifications