ಬುಲೆಟ್ ಪ್ರಕಾಶ್ ರವರ ಈ ಪ್ರಯತ್ನಕ್ಕೆ 'ಭೇಷ್' ಎಂದು ಬೆನ್ನು ತಟ್ಟಲೇಬೇಕು.!
ಹೆಸರಿಗೆ ತಕ್ಕ ಹಾಗೆ ನಟ 'ಬುಲೆಟ್' ಪ್ರಕಾಶ್ 'ತೂಕ'ದ ವ್ಯಕ್ತಿ. ತಮ್ಮ ಆಕಾರವನ್ನೇ ಪ್ಲಸ್ ಪಾಯಿಂಟ್ ಮಾಡಿಕೊಂಡು ಇಷ್ಟು ದಿನ ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸುತ್ತಿದ್ದ ಹಾಸ್ಯ ಕಲಾವಿದ ಬುಲೆಟ್ ಪ್ರಕಾಶ್ ಇದೀಗ ಸಣ್ಣಗಾಗಲು ಮನಸ್ಸು ಮಾಡಿದ್ದಾರೆ.
ಗುಂಡು ಗುಂಡಾಗಿ ಇರುವ ಬುಲೆಟ್ ಪ್ರಕಾಶ್ ತೂಕ ಇಳಿಸುವ ದೃಢ ನಿರ್ಧಾರ ಕೈಗೊಂಡಿದ್ದಾರೆ. ಮುಂಚೆ ಹೊಟ್ಟೆ ತುಂಬಾ ಊಟ ಮಾಡುತ್ತಿದ್ದ ಬುಲೆಟ್ ಪ್ರಕಾಶ್ ಈಗ ಡಯೆಟ್ ಮಾಡುತ್ತಿದ್ದಾರೆ. ಬಿರಿಯಾನಿ ಕಡೆಗೆ ಮುಖ ಮಾಡದ ಬುಲೆಟ್ ಪ್ರಕಾಶ್ ಬರೀ ನೀರು, ಜ್ಯೂಸ್ ಕುಡಿದು ಈಗಾಗಲೇ ಬರೋಬ್ಬರಿ 25 ಕೆ.ಜಿ ತೂಕ ಇಳಿಸಿದ್ದಾರೆ ಅಂದ್ರೆ ನೀವು ಖಂಡಿತ ನಂಬಲೇಬೇಕು.! ಮುಂದೆ ಓದಿರಿ...
Recommended Video


57 ದಿನಗಳ ಕಾಲ ಕೇವಲ ನೀರು, ಜ್ಯೂಸ್ ಸೇವನೆ.!
ಕಠಿಣ ಡಯೆಟ್ ಅನುಸರಿಸುತ್ತಿರುವ ನಟ ಬುಲೆಟ್ ಪ್ರಕಾಶ್, 57 ದಿನಗಳ ಕಾಲ ಬರೀ ನೀರು ಹಾಗೂ ಕ್ಲಿಯರ್ ಜ್ಯೂಸ್ ಸೇವನೆ ಮಾಡಿ 25 ಕೆ.ಜಿ ತೂಕ ಇಳಿಸಿದ್ದಾರಂತೆ.

ಸಿಕ್ಸ್ ಪ್ಯಾಕ್ ಮಾಡುತ್ತಾರಂತೆ.!
ಸಣ್ಣಗಾಗುವುದು ಮಾತ್ರ ಬುಲೆಟ್ ಪ್ರಕಾಶ್ ರವರ ಗುರಿಯಲ್ಲ. ಮುಂದಿನ ವರ್ಷದ ತಮ್ಮ ಹುಟ್ಟುಹಬ್ಬದ ಹೊತ್ತಿಗೆ 'ಸಿಕ್ಸ್ ಪ್ಯಾಕ್'ನಲ್ಲಿ ಮಿಂಚಬೇಕೆಂಬ ದೃಢ ಸಂಕಲ್ಪ ಮಾಡಿದ್ದಾರೆ ನಟ ಬುಲೆಟ್ ಪ್ರಕಾಶ್.

'ಸೂಪರ್ ಟಾಕ್ ಟೈಮ್'ನಲ್ಲಿ ಬುಲೆಟ್ ಪ್ರಕಾಶ್
ಶಿಸ್ತುಬದ್ಧ ಆಹಾರ ಕ್ರಮವನ್ನು ಪಾಲಿಸುತ್ತಿರುವುದಾಗಿ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ನಟ ಬುಲೆಟ್ ಪ್ರಕಾಶ್ ಹೇಳಿದ್ದಾರೆ. ಅಲ್ಲದೇ, ಇದ್ದಕ್ಕಿದ್ದಂತೆ ಇಂತಹ ನಿರ್ಧಾರ ತೆಗೆದುಕೊಳ್ಳಲು ಕಾರಣವಾದ ಸಂಗತಿಯನ್ನೂ ಬಾಯ್ಬಿಟ್ಟಿದ್ದಾರೆ.

'ಹೀರೋ' ತರಹ ಕಾಣಬೇಕು
''ಹೀರೋ ತರಹ ಕಾಣಬೇಕು ಎಂಬುದು ನನಗೂ ಇಷ್ಟ. ಅದಕ್ಕಾಗಿ ಸ್ವಲ್ಪ ಸಣ್ಣ ಆಗೋಣ ಅಂತಿದ್ದೀನಿ. ಈಗೆಲ್ಲ ಹೊಸಬರು ಬರುತ್ತಿದ್ದಾರೆ. ಅವರ ಮಧ್ಯದಲ್ಲಿ ನಾನೂ ಚೆನ್ನಾಗಿ ಕಾಣಬೇಕು. ನನಗೀಗ 41 ವರ್ಷ ಆಯ್ತು, ಚೆನ್ನಾಗಿ ಕಾಣಬೇಕು ಎಂಬ ಆಸೆಯಿಂದ ಈಗಾಗಲೇ 25 ಕೆಜಿ ತೂಕ ಇಳಿಸಿದ್ದೇನೆ'' - ಬುಲೆಟ್ ಪ್ರಕಾಶ್, ನಟ

ಇಡ್ಲಿ ಇಲ್ಲ, ಬಿರಿಯಾನಿ ಬೇಡ.!
''ಮುಂಚೆ ಹದಿನೈದು ಇಡ್ಲಿ, ಎರಡು ಬಿರಿಯಾನಿ ತಿನ್ನುತ್ತಿದ್ದೆ. ಆದ್ರೆ ಈಗ ಡಯೆಟ್ ಮಾಡುತ್ತಿದ್ದೇನೆ. ನನಗೆ ಹಿಡಿಸದ ಪದ ಎಂದರೆ ಅದು ಡಯೆಟ್. ಆದರೂ, ವಿಧಿಯಿಲ್ಲ. ಈಗ ಡಯೆಟ್ ಮಾಡಲೇಬೇಕಾಗಿದೆ. ನಾನು ಬದುಕಬೇಕಾಗಿದೆ'' ಎನ್ನುತ್ತಾರೆ ನಟ ಬುಲೆಟ್ ಪ್ರಕಾಶ್

ಸಿನಿಮಾದಲ್ಲಿರಬೇಕು...
''ನಾನಿನ್ನೂ ಸಿನಿಮಾದಲ್ಲಿರಬೇಕು, ರಾಜಕಾರಣದಲ್ಲಿರಬೇಕು ಎಂಬ ಉದ್ದೇಶದಿಂದ ಡಯೆಟ್ ಮಾಡುತ್ತಿದ್ದೇನೆ'' - ಬುಲೆಟ್ ಪ್ರಕಾಶ್, ನಟ

ಸಿಕ್ಸ್ ಪ್ಯಾಕ್ ಮಾಡಿ ತೋರಿಸುತ್ತೇನೆ.!
''ಇನ್ನೂ 25 ರಿಂದ 30 ಕೆ.ಜಿ ಸಣ್ಣ ಆಗುತ್ತೇನೆ. ಏಪ್ರಿಲ್ 2 ನನ್ನ ಹುಟ್ಟುಹಬ್ಬ. ಏಪ್ರಿಲ್ 2, 2018 ರಂದು ನಾನು ಸಿಕ್ಸ್ ಪ್ಯಾಕ್ ಮಾಡಿ ತೋರಿಸುತ್ತೇನೆ'' - ಬುಲೆಟ್ ಪ್ರಕಾಶ್, ನಟ

ಭೇಷ್ ಎನ್ನಲೇಬೇಕು.!
ತಮ್ಮ 41 ನೇ ವಯಸ್ಸಿನಲ್ಲಿ ತೂಕ ಇಳಿಸಿ, ಸಿಕ್ಸ್ ಪ್ಯಾಕ್ ಮಾಡಲು ಹೊರಟಿರುವ ಬುಲೆಟ್ ಪ್ರಕಾಶ್ ಪ್ರಯತ್ನಕ್ಕೆ ಹಾಗೂ ದೃಢ ಸಂಕಲ್ಪಕ್ಕೆ ಭೇಷ್ ಎನ್ನಲೇಬೇಕು.


Click it and Unblock the Notifications











