Bigg Boss Kannada 10: ಈ ಬಿಗ್ ಬಾಸ್ ಮನೆಗೆ ಹೊಗ್ತಾರಾ ಕಿರುತೆರೆ ನಟಿ ಸುಕೃತ ನಾಗ್? ಏನಿದು ಸುದ್ದಿ?
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಮತ್ತೆ ಕನ್ನಡದ ವೀಕ್ಷಕರು ರಂಜಿಸಲು ಬರುತ್ತಿದೆ. ಹೌದು! ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಅನ್ನು ನಟ ಸುದೀಪ್ ಅವರು ಅಚ್ಚುಕಟ್ಟಾಗಿ ನಡೆಸಿಕೊಡುತ್ತಾ ಬಂದಿದ್ದಾರೆ. ಈಗಾಗಲೇ ಒಟ್ಟು 9 ಸೀಸನ್ ಹಾಗೂ ಒಂದು ಮಿನಿ ಸೀಸನ್ ಯಶಸ್ವಿಯಾಗಿ ಪೂರ್ಣಗೊಂಡಿದ್ದು ಶೀಘ್ರದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 10 ಸದ್ಯದಲ್ಲೇ ಆರಂಭಗೊಳ್ಳಲಿದೆ.
ಹಾಗಾದರೆ, ಈ ಹೊಸ ಸೀಸನ್‌ನಲ್ಲಿ ಯಾವ್ಯಾವ ಸ್ಪರ್ಧಿಗಳು ಇರುತ್ತಾರೆ ಎಂಬ ಕುತೂಹಲ ಎಲ್ಲಾ ವೀಕ್ಷಕರಲ್ಲಿ ಮನೆ ಮಾಡಿರುವುದಂತೂ ಹೌದು. ಇದೀಗ ಈ ವಿಚಾರದಲ್ಲಿ ಒಂದು ಸುದ್ದಿಯೊಂದು ಓಡಾಡುತ್ತಿದೆ. ನಟಿ ಸುಕೃತಾ ನಾಗ್ ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಗಳಲ್ಲಿ ಒಬ್ಬರು ಎಂಬ ಮಾತು ಕೇಳಿ ಬರುತ್ತಿದೆ.

ಕಲರ್ಸ್ ಕನ್ನಡದ 'ಲಕ್ಷಣ' ಧಾರವಾಹಿಯಲ್ಲಿ ವಿಲನ್ ರೋಲ್ ಮಾಡುವ ಮೂಲಕ ಕಿರುತೆರೆ ವೀಕ್ಷಕರ ಮನೆಗೆದ್ದಿದ್ದರು ನಟಿ ಸುಕೃತ ನಾಗ್. ಈಗ ಇದೇ ನಟಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಿದ್ದಾರೆ ಎಂಬ ಸುದ್ದಿ ಬಹಳಷ್ಟು ಕುತೂಹಲ ಕೆರಳಿಸಿದೆ.
ಅಂದ ಹಾಗೆ, ಸದ್ಯದಲ್ಲೇ ಲಕ್ಷಣ ಧಾರಾವಾಹಿ ಮುಗಿದು ಬಿಗ್ ಬಾಸ್ ಆರಂಭವಾಗುತ್ತದೆ ಎಂಬ ಮಾತು ಬಹಳಷ್ಟು ಕೇಳಿಬಂದಿತ್ತು. ಇದೀಗ ಸುಕೃತ ನಾಗ್ ಅವರು ಬಿಗ್ ಬಾಸ್ ಮನೆಯೊಳಗೆ ಕಾಲಿಡುತ್ತಿರುವುದು ಕನ್ಫರ್ಮ್ ಅಂತ ಕಿರುತೆರೆ ವಲಯದಲ್ಲಿ ಸುದ್ದಿಯೊಂದು ಜೋರಾಗಿಯೇ ಹರಿದಾಡುತ್ತಿದೆ. ಇನ್ನು ನಟಿ ಸುಕೃತ ನಾಗ್ ಅವರು ಈ ಮೊದಲು 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ಅಂಜಲಿ ಎಂಬ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡಿ ಜನರ ಮನ ಗೆದ್ದಿದ್ದರು. ಅದಾದ ನಂತರ ಕೆಲ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡ ಇವರು ಇದೀಗ 'ಲಕ್ಷಣ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಒಂದರಲ್ಲಿ ನಟಿಸುತ್ತಿದ್ದಾರೆ.
ಇತ್ತೀಚೆಗಷ್ಟೇ ನಟಿ ಸುಕೃತ ನಾಗ್ ಅವರು ಒಂದು ಯೂಟ್ಯೂಬ್ ಚಾನೆಲ್ ಅನ್ನು ಆರಂಭಿಸಿದ್ದು, ತಮ್ಮ ದೈನಂದಿನ ಜೀವನ, ಶಾಪಿಂಗ್ ಇತ್ಯಾದಿ ವಿಚಾರಗಳ ಬಗ್ಗೆ ವಿಡಿಯೋಗಳನ್ನು ಆಗಾಗ ಹೊರಹಾಕುತ್ತಿದ್ದಾರೆ. ಈ ಮೂಲಕ ಜನರಿಗೆ ಇನ್ನಷ್ಟು ಹತ್ತಿರವಾಗಲು ಹೊಸ ಪ್ರೇಕ್ಷಕರನ್ನು ತಮ್ಮತ್ತ ಸೆಳೆಯುತ್ತಿದ್ದಾರೆ.
ಧಾರಾವಾಹಿಯಲ್ಲಿ ಶಕುಂತಲಾ ದೇವಿಯನ್ನು ತಮಗೆ ಬೇಕಾದಂತೆ ಆಡಿಸಿಕೊಳ್ಳುತ್ತಿರುವ ವಿಲನ್ ಪಾತ್ರಧಾರಿ ಸುಕೃತಾ ನಾಗ್ ಅವರು ಇದೀಗ ನಿಜ ಜೀವನದಲ್ಲಿ ಯಾವ ರೀತಿ ಇರುತ್ತಾರೆ ಎಂಬ ಕುತೂಹಲ ಅವರ ಅಭಿಮಾನಿಗಳಿಗೆ ಮೊದಲಿನಿಂದಲೂ ಉಂಟು. ಈ ಕುತೂಹಲಕ್ಕೆ ಬಿಗ್ ಬಾಸ್ ಸೀಸನ್ ಹತ್ತರಲ್ಲಿ ಈ ನಟಿ ಭಾಗವಹಿಸಿದರೆ ಅದಕ್ಕೆ ತೆರೆ ಎಳೆಯುವ ಎಲ್ಲಾ ಸಾಧ್ಯತೆಗಳೂ ಇವೆ. ಅಂದ ಹಾಗೆ ಸೀಸನ್ 10ರ ಇತರೆ ಸ್ಪರ್ಧಿಗಳು ಯಾರೆಂಬುದು ಇನ್ನೂ ಖಚಿತವಾಗಿಲ್ಲ.


Click it and Unblock the Notifications











