'ಕೆಬಿಸಿ'ಯಲ್ಲಿ ಒಂದು ಕೋಟಿ ಗೆದ್ದ ಕ್ಯಾನ್ಸರ್ ಬಾಧಿತೆ
ಬಾಲಿವುಡ್ 'ಶೆಹನ್ ಷಾ' ಅಮಿತಾಬ್ ಬಚ್ಚನ್ ನಡೆಸಿಕೊಡುತ್ತಿರುವ ಬಲು ಜನಪ್ರಿಯ 'ಕೌನ್ ಬನೇಗಾ ಕರೋಡ್ ಪತಿ 8' ಕಾರ್ಯಕ್ರಮದಲ್ಲಿ ನಡದ ತಾಜಾ ಘಟನೆಯೊಂದು ಎಲ್ಲರನ್ನೂ ಮೂಕವಿಸ್ಮಿತಗೊಳಿಸಿದೆ. ಕ್ಯಾನ್ಸರ್ ನಿಂದ ಬಳಲುತ್ತಿರುವ ಮೇಘಾ ಪಾಟೀಲ್ ಎಂಬ ಮಹಿಳೆ ಎಲ್ಲ ಪ್ರಶ್ನೆಗಳಿಗೂ ಸರಿಯಾದ ಉತ್ತರ ಕೊಟ್ಟು ರು. 1 ಕೋಟಿ ಬಹುಮಾನ ಗೆದ್ದಿದ್ದಾರೆ.
ವಿಶೇಷ ಎಂದರೆ ಮಹಿಳೆಯೊಬ್ಬರು 'ಕೌನ್ ಬನೇಗಾ ಕರೋಡ್ ಪತಿ' ಇತಿಹಾಸದಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ಗೆದ್ದಿರುವುದು ಇದೇ ಮೊದಲು. ಮೇಘಾ ಪಾಟೀಲ್ ಅವರು ಕೆಲ ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. [ಅಮಿತಾಬ್ ಬಚ್ಚನ್ 'ಸ್ಟಾರ್ ಆಫ್ ದ ಮಿಲೇನಿಯಂ']

ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮ ಎಂದರೆ ಇವರಿಗೆ ಎಲ್ಲಿಲ್ಲದ ಅಕ್ಕರೆ. ಅದೆಷ್ಟೇ ಕೆಲಸಗಳಿದ್ದರೂ ಅವೆಲ್ಲವನ್ನೂ ಬದಿಗೊತ್ತಿ ಈ ಕಾರ್ಯಕ್ರಮವನ್ನು ತಪ್ಪದೆ ನೋಡುತ್ತಿದ್ದರು. ಕಡೆಗೆ ದೃಢನಿಷ್ಠೆಯಿಂದ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಗಿಟ್ಟಿಸಿದರು.
ಅಲ್ಲಿ ಫಾಸ್ಟೆಸ್ಟ್ ಫಿಂಗರ್ ಸುತ್ತಿನಿಂದ ಹಿಡಿದು ಹಾಟ್ ಸೀಟ್ ವರೆಗೂ ತಲುಪಿ, ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ ಕಡೆಗೆ ರು.1 ಕೋಟಿಯನ್ನು ಬಹುಮಾನವಾಗಿ ಗೆದ್ದಿದ್ದಾರೆ. ಇದೀಗ ಮೇಘಾ ಅವರು ಅದೆಷ್ಟೋ ಮಂದಿಗೆ ಸ್ಫೂರ್ತಿಯಾಗಿ ನಿಂತಿದ್ದಾರೆ.
ಕ್ಯಾನ್ಸರ್ ಕಾರಣದಿಂದ ಸಾವಿಗೆ ತುಂಬಾ ಸಮೀಪಿಸಿದ್ದರೂ ತಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳದೆ 'ಕೌನ್ ಬನೇಗಾ ಕರೋಡ್ ಪತಿ' ಕಾರ್ಯಕ್ರಮದಲ್ಲಿ ಗೆದ್ದು ಎಲ್ಲರನ್ನೂ ಚಕಿತಗೊಳಿಸಿದ್ದಾರೆ ಮೇಘಾ. ಸ್ವತಂ ಅಮಿತಾಬ್ ಅವರು ಆಕೆಯ ಧೈರ್ಯ, ಆತ್ಮವಿಶ್ವಾಸಕ್ಕೆ ಬೆರಗಾಗಿದ್ದಾರೆ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











