ಕಳೆದ ವರ್ಷ ನವರಾತ್ರಿಯಂದು ಜೈಲಿನಲ್ಲಿದ್ದೆ, ಈ ವರ್ಷ ಇಲ್ಲಿದ್ದೇನೆ- ಕಣ್ಣೀರಾದ ಚೈತ್ರಾ ಕುಂದಾಪುರ...!
ಕೆಲವೊಮ್ಮೆ ನಾವು ಅಂದುಕೊಳ್ಳುವುದು ಒಂದು, ಆಗುವುದು ಮತ್ತೊಂದು. ಲೆಕ್ಕಾಚಾರವೆಲ್ಲ ತಲೆಕೆಳಗಾದಾಗ ಒಮ್ಮೊಮ್ಮೆ ಈ ಬದುಕು ಅನೇಕರಿಗೆ ಬೇಡ ಅನಸುತ್ತೆ. ಚಿನ್ನದಂತೆ ಇದ್ದ ಬದುಕು ಕ್ಷಣಾರ್ಧದಲ್ಲಿಯೇ ಚಿತ್ರಾನ್ನದಂತೆ ಆಗಿ ಜೀವನದಲ್ಲಿ ಜಿಗುಪ್ಸೆ ಮೂಡುತ್ತೆ.
ಆದರೆ. ತಾಳಿದವನು ಬಾಳಿಯಾನು ಎನ್ನುವಂತೆ ಈ ಸಮಯದಲ್ಲಿ ತಾಳ್ಮೆಯನ್ನು ಕಳೆದುಕೊಳ್ಳದೇ, ಎದುರಾದ ಮಹಾ ಸಂಕಷ್ಟಗಳ ವಿರುದ್ಧ ಹೋರಾಡಿ ಗೆದ್ದರೆ ಅದೇ ಬದುಕಿನಲ್ಲಿ ಸಾಕ್ಷಾತ್ಕಾರವಾಗುತ್ತೆ. ಬದುಕಿನ ಪಾಠಶಾಲೆಯಲ್ಲಿ ಕಲಿತ ಪಾಠದಿಂದ ಜೀವನ ಕೂಡ ಬದಲಾಗುತ್ತೆ. ಉದಾಹರಣೆಗೆ ಚೈತ್ರಾ ಕುಂದಾಪುರ ಅವರನ್ನು ತೆಗೆದುಕೊಳ್ಳಿ.

ಹೌದು, ಹೆಚ್ಚೇನ್ ಇಲ್ಲ. ಒಂದು ವರ್ಷದ ಹಿಂದೆ ಇದೇ ಚೈತ್ರಾ ಕುಂದಾಪುರ ಸುತ್ತ ವಿವಾದದ ಹುತ್ತ ಬೆಳೆದಿತ್ತು. ಮಂಗಳೂರಿನ ವಿಶ್ವ ವಿದ್ಯಾಲಯದ ಪದವೀಧರೆಯಾದ ಚೈತ್ರಾ ಕುಂದಾಪುರ ವಿರುದ್ಧ ಬ್ಲ್ಯಾಕ್ ಮೇಲ್ ಆರೋಪ ಕೇಳಿ ಬಂದಿತ್ತು. ಉಡುಪಿ ಜಿಲ್ಲೆಯ ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ವಿಧಾನ ಸಭಾ ಚುನಾವಣೆಯಲ್ಲಿ ಟಿಕೆಟ್ ಕೊಡಿಸುವುದಾಗಿ ಹೇಳಿ, ಅವರ ಕಿವಿಗೆ ಕಮಲ ಮುಡಿಸಿ ಕೋಟ್ಯಾಂತರ ಹಣವನ್ನು ಇದೇ ಚೈತ್ರಾ ವಸೂಲಿ ಮಾಡಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಈ ಪ್ರಕರಣದಲ್ಲಿ ಬಂಧನವೂ ಆಗಿತ್ತು.
ಆದರೆ ಕಳೆದ ವರ್ಷ ಇದೇ ಸಮಯದಲ್ಲಿ ಜೈಲಿನ ಹಿಂದೆ ಕಂಬಿ ಎಣಿಸುತ್ತಿದ್ದ ಚೈತ್ರಾ ಕುಂದಾಪುರ ಈಗ ಬಿಗ್ ಬಾಸ್ ಮನೆಯಲ್ಲಿದ್ದಾರೆ. ಸ್ವರ್ಗ-ನರಕವನ್ನು ನೋಡುತ್ತಿದ್ದಾರೆ. ವಾದ ವಿವಾದ, ಅರಚಾಟ ಕೀರುಚಾಟದಿಂದ ಸುದ್ದಿಯಾಗುತ್ತಿದ್ದಾರೆ. ಆದರೂ ಕೂಡ ಚೈತ್ರಾ ಗೆ ಕಳೆದ ವರ್ಷದ ಆ ಕರಾಳ ದಿನಗಳನ್ನು ಮರೆಯಲು ಸಾಧ್ಯವಾಗುತ್ತಿಲ್ಲ. ಬೇಡವೆಂದರೂ ಆ ದಿನಗಳು ಚೈತ್ರಾಗೆ ಇನ್ನೂ ನೆನಪಾಗುತ್ತಲೇ ಇವೆ. ಇದಕ್ಕೆ ಕೈಗನ್ನಡಿ ಎಂಬಂತೆ ಬಿಗ್ ಬಾಸ್ ಮನೆಯಲ್ಲಿ ಕಳೆದ ವರ್ಷ ತಾವು ಅನುಭವಿಸಿದ ಆ ನರಕಯಾತನೆಯನ್ನು ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಯಲ್ಲಿ ಈಗ ನೆನೆದಿದ್ದಾರೆ. ಅಂದು ಮತ್ತು ಇಂದು, ತಮ್ಮ ಬದುಕು ಎಷ್ಟೆಲ್ಲ ಬದಲಾಗಿದೆ ಎಂದು ಹೋಲಿಕೆ ಮಾಡಿಕೊಂಡಿದ್ದಾರೆ. ಭಾವುಕರಾಗಿ ಕಣ್ಣೀರನ್ನೂ ಹಾಕಿದ್ದಾರೆ.

ಹೌದು, ನಿಮಗೆ ಗೊತ್ತು. ಸದ್ಯಕ್ಕೆ ಎಲ್ಲೆಡೆ ನವರಾತ್ರಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಆದರೆ, ಬಿಗ್ ಬಾಸ್ ಮನೆಯಲ್ಲಿ ಈ ಸಂಭ್ರಮ ಇಲ್ಲ. ಇನ್ನೂ ನವರಾತ್ರಿಯಂದು ಅನೇಕರು ಈರುಳ್ಳಿ ಮತ್ತು ಬೆಳ್ಳುಳ್ಳಿಯಿಂದ ತಯಾರಿಸಿದ ಆಹಾರ ತಿನ್ನುವುದಿಲ್ಲ. ಆಯುರ್ವೇದದಲ್ಲಿ ಅದಕ್ಕೆ ಅದ್ರದ್ದೇ ಆದ ಕಾರಣಗಳಿವೆ. ಆ ಕಾರಣಗಳೇನೇ ಇರಲಿ ಆದರೆ ಚೈತ್ರಾ ಕುಂದಾಪುರ ಈ ನವರಾತ್ರಿ ಸಮಯದಲ್ಲಿ ಈರುಳ್ಳಿಯಿಂದ ಅಂತರವನ್ನು ಕಾಪಾಡಿಕೊಳ್ಳುವ ಅಭ್ಯಾಸ ಮಾಡಿಕೊಂಡಿದ್ದಾರೆ.
ಇಂಥಾ ಚೈತ್ರಾ ಕುಂದಾಪುರ ಅವರಿಗೆ ನರಕದಲ್ಲಿರುವ ಹಿನ್ನೆಲೆ ಬಿಗ್ ಬಾಸ್ ಮನೆಯಲ್ಲಿ ಅವಲಕ್ಕಿ ನೀಡಲಾಗಿತ್ತು. ಆ ಅವಲಕ್ಕಿಯಲ್ಲಿ ಸಹಜವಾಗಿ ಈರುಳ್ಳಿ ಇತ್ತು. ಹೀಗಾಗಿಯೇ ಅವಲಕ್ಕಿಯನ್ನು ನೋಡುತ್ತಿದ್ದಂತೆಯೇ ನವರಾತ್ರಿ ಸಂದರ್ಭದಲ್ಲಿ ನಾನು ಈರುಳ್ಳಿ ತಿನ್ನಲ್ಲ ಎಂದ ಚೈತ್ರಾ ಹಾಗೇ ನೋಡಿದರೆ ಉಪವಾಸ ಮಾಡಬೇಕಿತ್ತು, ಅದನ್ನು ಬಿಟ್ಟಿದ್ದೇನೆ ಎಂದು ಬಿಕ್ಕಿದ್ದಾರೆ. ಕಣ್ಣೀರು ಹಾಕಿದ್ದಾರೆ. ಮುಂದುವರೆದು ಸಮಾಧಾನ ಮಾಡಿಕೊಂಡು ನಾನು ಇಲ್ಲಿಗೆ ಬಂದಿರುವುದೇ ದೊಡ್ಡ ಖುಷಿ ಎಂದಿರುವ ಚೈತ್ರಾ ಕುಂದಾಪುರ ಕಳೆದ ವರ್ಷ ಈ ಸಮಯದಲ್ಲಿ ನಾನು ಜೈಲಿನಲ್ಲಿದ್ದೆ, ಎಲ್ಲವನ್ನೂ ಕಳೆದುಕೊಂಡಿದ್ದೆ. ಆದರೆ ನಾನು ಕುಗ್ಗಿರಲಿಲ್ಲ. ಹೀಗಾಗಿಯೇ ನಾನು ನಾನು ನಿಜವಾಗಿಯೂ ತಪ್ಪು ಮಾಡಿಲ್ಲ ಅಂತ ನಿನಗೆ ಗೊತ್ತಿದ್ದರೆ ನನಗೆ ಮತ್ತೆ ವೇದಿಕೆ ಬೇಕು ಎಂದು ಆ ತಾಯಿ ಬಳಿ ನಾನು ಕೇಳಿದ್ದೆ, ಆ ತಾಯಿ ಎಷ್ಟು ದೊಡ್ಡವಳು, ಒಂದೈನೂರು ಅಬ್ಬಬ್ಬಾ ಅಂದರೆ ಸಾವಿರ ಜನರ ಮುಂದೆ ಭಾಷಣ ಮಾಡಬಹುದು ಅಂದುಕೊಂಡಿದ್ದೆ, ಆದರೆ ಆ ತಾಯಿ ಇಷ್ಟು ದೊಡ್ಡ ವೇದಿಕೆಯನ್ನು ನನಗೆ ನೀಡಿದ್ದಾಳೆ ಎಂದು ಚೈತ್ರಾ ಕುಂದಾಪುರ ಭಾವುಕರಾಗಿದ್ದಾರೆ


Click it and Unblock the Notifications











