ಲಕ್ಷ್ಮೀ ನಿವಾಸದ ಚಿನ್ನುಮರಿ ಚಂದನಾಗೆ 'ಮಂಚ'ಕ್ಕೆ ಕರೆದ 'ನಿರ್ಮಾಪಕ' ಯಾರು ?
ಬಣ್ಣದ ಲೋಕದಲ್ಲಿ ಅಮಾಯಕ ಹೆಣ್ಣು ಮಕ್ಕಳನ್ನು ಕಂಡರೆ ಮುಕ್ಕಿ ತಿನ್ನುವರು ತುಂಬಾ ಜನ ಇದ್ದಾರೆ. ಇಲ್ಲಿ ಬಹುತೇಕರಲ್ಲ ಆದರೆ ಕೆಲವರು ಮುಖವಾಡದ ಬದುಕನ್ನು ಬದುಕುತ್ತಾರೆ. ಕೆಲವರು ಪ್ರಚಾರದ ಹುಚ್ಚಿಗೆ ಬರುತ್ತಾರೆ, ಇನ್ನೂ ಕೆಲವರು ಹೆಣ್ಣಿನ ಚಪಲಕ್ಕಾಗಿ ಸಿನಿಮಾ ನಿರ್ಮಾಣ ಮಾಡಲು ಬರುತ್ತಾರೆ. ಈ ಕಾರಣಕ್ಕೆ ಸಿನಿಮಾ ರಂಗದಲ್ಲಿ ಈಗ ಕಾಸ್ಟಿಂಗ್ ಕೌಚ್ ಎಂಬುದು ತೀರಾ ಸಾಮಾನ್ಯವಾಗಿಬಿಟ್ಟಿದೆ.
ಕೇವಲ ಆ ಇಂಡಸ್ಟ್ರೀ ಈ ಇಂಡಸ್ಟ್ರೀ ಅಂತ ಅಲ್ಲ. ಎಲ್ಲ ಚಿತ್ರೋದ್ಯಮಗಳಲ್ಲಿ ಬಹುತೇಕ ಈ ಕಥೆ ಒಂದೇ. ಇದಕ್ಕೆ ಕೈಗನ್ನಡಿ ಎಂಬಂತೆ ಇಲ್ಲಿಯವರೆಗೆ ಹಲವು ನಾಯಕಿಯರು ತಮಗಾದ ಕಹಿ ಅನುಭವ ಹಂಚಿಕೊಂಡಿದ್ದಾರೆ. ಬಿಕ್ಕಿದ್ದಾರೆ. ಪಾತ್ರದ ಹೆಸರಿನಲ್ಲಿ ತಮ್ಮನ್ನು ಮಂಚಕ್ಕೆ ಕರೆದ ವ್ಯಕ್ತಿಗಳ ಜನ್ಮವನ್ನೂ ಜಾಲಾಡಿದ್ದಾರೆ. ಚಂದನಾ ಅನಂತಕೃಷ್ಣ ಇದಕ್ಕೆ ಸದ್ಯದ ಉದಾಹರಣೆ.

ಹೌದು .. ಚಂದನಾ ಅನಂತ ಕೃಷ್ಣ. ಕನ್ನಡ ಕಿರುತೆರೆಯ ಚಿರಪರಿಚಿತ ಹೆಸರು. ದಿವಂಗತ ನಟ ಉದಯ್ ಹುತ್ತಿನ ಗದ್ದೆ ಮತ್ತು ಲಲಿತಾಂಜಲಿಯವರ ಪುತ್ರ ಪ್ರತ್ಯಕ್ಷ್ ಅವರನ್ನು ಮದುವೆಯಾಗಿರುವ ಚಂದನಾ ಕರುನಾಡಿನೆಲ್ಲೆಡೆ ಚಿನ್ನುಮರಿ ಎಂದೇ ಜನಜನಿತ. ಲಕ್ಷ್ಮಿ ನಿವಾಸ ಧಾರಾವಾಹಿಯ ಮೂಲಕ ಎಲ್ಲರ ಹೃದಯ ಗೆದ್ದಿರುವ ಚಂದನಾ ಕೃಷ್ಣ ರಾಜಾ ರಾಣಿ ಮತ್ತು ಹೂ ಮಳೆ ಧಾರಾವಾಹಿಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ.
ಇಂಥಾ ಚಂದನಾ ಅನಂತಕೃಷ್ಣ ಸದ್ಯ ತಮಗಾದ ಕಹಿ ಅನುಭವ ಹಂಚಿಕೊಂಡಿದ್ದಾರೆ. ವೈ 5 ಟಿವಿ ಕನ್ನಡ ಯೂಟ್ಯೂಬ್ ಚಾನೆಲ್ ಜೊತೆ ತಮ್ಮ ಬದುಕಿನ ಹಲವು ಕಥನಗಳನ್ನು ಹಂಚಿಕೊಂಡಿರುವ ಚಿನ್ನುಮರಿ ಅಲಿಯಾಸ್ ಚಂದನಾ ಹೀಗೆ ಒಂದು ದಿನ ವ್ಯಕ್ತಿಯೊಬ್ಬರು ತಮ್ಮನ್ನು ತಾವು ನಿರ್ಮಾಪಕ ಎಂದು ಪರಿಚಯ ಮಾಡಿಕೊಂಡು ಕರೆ ಮಾಡಿದ್ದರು ಎಂದು ಹೇಳಿದ್ದಾರೆ.
ಒಬ್ಬ ವ್ಯಕ್ತಿ ನನಗೆ ಕರೆ ಮಾಡಿದ್ದರು, ಆಫರ್ ಕೂಡ ನೀಡಿದರು, ಆದರೆ.. ನನ್ನ ಗ್ಲ್ಯಾಮರಸ್/ಮಾಡರ್ನ್ ಫೋಟೊವನ್ನು ಅವರು ಕೇಳಿದರು ಎಂದಿರುವ ಚಂದನಾ ಆಗ ನಾನು ಅಷ್ಟೊಂದು ಮಾಡರ್ನ್ ಫೋಟೊ ಶೂಟ್ ಮಾಡಿಸಿರಲಿಲ್ಲ ಹೀಗಾಗಿ ನನ್ನ ಬಳಿ ಇದ್ದ ಕೆಲ ಮಾಡರ್ನ್ ಫೋಟೊಗಳನ್ನು ನಾನು ಅವರಿಗೆ ಕಳುಹಿಸಿದ್ದೇ ಎಂದಿದ್ದಾರೆ.
ಮುಂದುವರೆದು ಮಾಡರ್ನ್ ಫೋಟೊ ಕಳುಹಿಸಿದ ನಂತರವೂ ಕೂಡ ಮತ್ತೆ ಮೇಕಪ್ ಇಲ್ಲದ ಫೋಟೊ ಕಳುಹಿಸುವಂತೆ ಆ ವ್ಯಕ್ತಿ ಬೇಡಿಕೆಯನ್ನಿಟ್ಟ ಆಗಲೂ ಕೂಡ ನಾನು ಮರುಮಾತನಾಡದೇ ಫೋಟೊಗಳನ್ನು ಕಳುಹಿಸಿದೆ ಎಂದಿರುವ ಚಂದನಾ ಆ ನಂತರ ಆ ವ್ಯಕ್ತಿ ವಿಡಿಯೋ ಕಾಲ್ ಮಾಡಿ ಎಂದು ಬೆನ್ನು ಬಿದ್ದ ಎಂದು ಹೇಳಿದ್ದಾರೆ.
ವಿಡಿಯೋ ಕಾಲ್ ಮಾಡಿ ಎಂದಾಗ ನನಗೆ ಅನುಮಾನ ಬಂತು, ಯಾರು ತಾನೇ ಹೀಗೆ ಮಾಡಲು ಕೇಳಲು ಸಾಧ್ಯ ಎಂದುಕೊಂಡು ನಾನು ಸುಮ್ಮನಾದೆ ಆದರೆ ಆ ವ್ಯಕ್ತಿ ನನ್ನ ಬೆನ್ನು ಬಿಡಲಿಲ್ಲ ಬದಲಿಗೆ ನಿರಂತರವಾಗಿ ಕರೆಯನ್ನು ಮಾಡುತ್ತಲೇ ಇದ್ದ ಎಂದು ಹೇಳಿದ್ದಾರೆ. ಆಗ ನನ್ನ ಜೊತೆ ಸ್ನೇಹಿತರು ಮಾತನಾಡಿದ ನಂತರ ಆ ವ್ಯಕ್ತಿ ಫೋನ್ ಕಟ್ ಮಾಡಿದ ಆ ನಂತರ ಕೂಡ ಹಲವು ಬಾರಿ ಕಾಲ್ ಮಾಡಿದ್ದ ಆದರೆ ನಾನು ಅವರನ್ನು ಬ್ಲಾಕ್ ಮಾಡಿದೆ ಎಂದು ಕೂಡ ಚಂದನಾ ಹೇಳಿದ್ದಾರೆ.
ಇನ್ನು ಮತ್ತೊಂದು ಘಟನೆಯನ್ನು ಕೂಡ ಇದೇ ಸಂದರ್ಶನದಲ್ಲಿ ನೆನಪು ಮಾಡಿಕೊಂಡಿರುವ ಚಂದನಾ ಒಮ್ಮೆ ಒಂದು ಏಜೆನ್ಸಿ ಅವರು ನನಗೆ ಮೆಸೆಜ್ ಮಾಡಿದ್ದರು, ಮೂರು ತಿಂಗಳು ಚಿತ್ರೀಕರಣ ಇರುತ್ತೆ ಆದರೆ ನೀವು ರಾಜಿಯಾಗಬೇಕು, ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಅವರು ಕಳುಹಿಸಿದ ಮೆಸೇಜ್ ನಲ್ಲಿತ್ತು ನಾನು ಆ ನಂಬರ್‌ನ ಆ ನಂತರ ಬ್ಲಾಕ್ ಮಾಡಿದೆ ಎಂದು ಕೂಡ ಚಂದನಾ ಅನಂತಕೃಷ್ಣ ಹೇಳಿದ್ದಾರೆ. ಸದ್ಯ ಚಂದನಾ ಅವರ ಮಾತುಗಳ ಬಗ್ಗೆ ಕಿರುತೆರೆ ಮತ್ತು ಬೆಳ್ಳಿತೆರೆ ವಲಯದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಚಂದನಾ ಅವರ ಜೊತೆ ಲೈವ್‌ನಲ್ಲಿ ಮಾತನಾಡಲು ಬಯಸಿದ್ದ ಆ ನಿರ್ಮಾಪಕ ಯಾರು ಎನ್ನುವ ಪ್ರಶ್ನೆ ಕೂಡ ಅನೇಕರನ್ನು ಕಾಡುತ್ತಿದೆ.


Click it and Unblock the Notifications











