Katheyondu shuruvagide: ಸೂರಜ್ ಜಾಗಕ್ಕೆ ಬಂದ ಚಂದು.. ಬದಲಾದ ಯುವರಾಜ ಪಾತ್ರಧಾರಿಗೆ ಹೇಗಿದೆ ರೆಸ್ಪಾನ್ಸ್?
ಕೆಲವೊಂದು ಧಾರಾವಾಹಿಗಳು ಆರಂಭವಾದ ಕೆಲವೇ ದಿನಗಳಲ್ಲಿ ಪಾತ್ರಗಳ ಬದಲಾವಣೆಯನ್ನು ಮಾಡಿಕೊಳ್ಳುತ್ತವೆ. ಅದು ಅನಿವಾರ್ಯತೆಯೋ ಏನೋ ತಿಳಿಯುವುದಿಲ್ಲ. ಕೆಲವೊಂದಿಷ್ಟು ಕಲಾವಿದರು ಆ ಪಾತ್ರಕ್ಕೆ ಮ್ಯಾಚ್ ಆಗದೆ ಇರುವುದು ಇರಬಹುದು. ಇನ್ನೊಂದು ಪ್ರೊಫೆಶನಲ್ ಕಾರಣಗಳು ಇರಬಹುದು. ಆದರೆ ಬದಲಾವಣೆ ಜಗದ ನಿಯಮ ಎಂಬಂತೆ ಪಾತ್ರಗಳು ಬದಲಾಗುತ್ತಿರುತ್ತವೆ.
ಈಗ 'ಕಥೆಯೊಂದು ಶುರುವಾಗಿದೆ' ಧಾರಾವಾಹಿ ಈಗಷ್ಟೇ ಜನರ ಮನಸ್ಸಿನಲ್ಲಿ ಟೇಕಾಫ್ ಆಗ್ತಾ ಇತ್ತು. ಈಗಲೇ ಮುಖ್ಯ ಪಾತ್ರವೊಂದು ಬದಲಾವಣೆಯಾಗಿದೆ. ಅದುವೇ ಯುವರಾಜ್ ಬಹದ್ದೂರ್ ಪಾತ್ರ. ಕೃತಿಯ ಮುಖದಲ್ಲಿ ಈಗೀಗ ನಗು ತುಂಬಿರುವಂತೆ ಮಾಡಿದ ಯುವರಾಜ್ ಬಹದ್ದೂರ್ ಬದಲಾಗಿದ್ದಾರೆ.

ಯುವರಾಜನ ಪಾತ್ರದಲ್ಲಿ ಚಂದು
'ಕಥೆಯೊಂದು ಶುರುವಾಗಿದೆ' ಧಾರಾವಾಹಿ ಆರಂಭವಾದಾಗಿನಿಂದ ಯುವರಾಜ್ ಪಾತ್ರ ಮುಖ್ಯ ಪಾತ್ರವಾಗಿದೆ. ಬಹದ್ದೂರ್ ಕುಟುಂಬದ ಮೊದಲ ಕುಡಿ. ಅವನೆಂದರೆ ಮನೆಯವರಿಗೆಲ್ಲಾ ಸಿಕ್ಕಾಪಟ್ಟೆ ಇಷ್ಟ. ಅದಕ್ಕಾಗಿಯೇ ಅವನಿಷ್ಟ ಪಟ್ಟಂತ ಹುಡುಗಿಯನ್ನೇ ಮದುವೆ ಮಾಡುವುದಕ್ಕೂ ಹೊರಟರು. ಆದರೆ ಘಟಿಸಿದ್ದೆಲ್ಲವೂ ನಿರೀಕ್ಷೆ ಮಾಡದ ಘಟನೆಗಳೇ. ಪ್ರೀತಿಸಿದ ವರ್ಣಿಕಾ ಜಾಗದಲ್ಲಿ ಕೃತಿ ಬಂದು ಕೂತಳು. ಬಹದ್ದೂರ್ ಮನೆಯ ಸೊಸೆಯಾದಳು. ಮೊದ ಮೊದಲಿಗೆ ಕೃತಿ ಮನೆಯವರಿಗೂ ಇಷ್ಟವಿರಲಿಲ್ಲ. ದಿನ ಕಳೆದಂತೆ ಕೃತಿಯ ಒಳ್ಳೆಯತನ ಮನೆಯವರಿಗೆ ಅರ್ಥವಾಯಿತು. ಆದರೆ, ಯುವರಾಜನಿಗೆ ಅಲ್ಲ. ಇದೇ ಯುವರಾಜನಾಗಿ ಬೆಳಗಾವಿ ಮೂಲದ ಸೂರಜ್ ಹೂಗಾರ್ ಕಾಣಿಸಿಕೊಂಡಿದ್ದರು. ಆದ್ರೀಗ ಅವರ ಜಾಗಕ್ಕೆ ಚಂದು ಗೌಡ ಎಂಟ್ರಿ ಕೊಟ್ಟಿದ್ದಾರೆ. ಇನ್ಮುಂದೆ ಯುವರಾಜನಾಗಿ ಚಂದು ಕಾಣಿಸುತ್ತಾರೆ. ಕೋಪ, ಪ್ರೀತಿ, ನಗುವಿನ ಔತಣವನ್ನು ಚಂದು ಬಡಿಸಲಿದ್ದಾರೆ.

ಶಿವರಾತ್ರಿಯ ದಿನ ಘೋಷಣೆ
ಪಾತ್ರದ ಬದಲಾವಣೆಯನ್ನು ಸ್ಟಾರ್ ಸುವರ್ಣ ಅದ್ಭುತವಾಗಿ ತೋರಿಸಿದ್ದಾರೆ. ಇಂದು ಶಿವರಾತ್ರಿ ಹಬ್ಬ. ನಾಡಿನೆಲ್ಲೆಡೆ ಶಿವನನ್ನು ಆರಾಧಿಸುವ ದಿನ. ಬಹದ್ದೂರ್ ಕುಟುಂಬದಿಂದ ಸ್ಫಟಿಕ ಲಿಂಗವನ್ನು ಪೂಜಿಸುವ ಪದ್ಧತಿ ಇದೆ. ಆ ಲಿಂಗವನ್ನು ದೇವರ ಸನ್ನಿಧಿಗೆ ತೆಗೆದುಕೊಂಡು ಹೋಗಬೇಕು. ಅಲ್ಲಿ ಶಿವನ ಜೊತೆಗೆ ಆ ಸ್ಫಟಿಕ ಲಿಂಗವನ್ನು ಇಟ್ಟು ಪೂಜಿಸುತ್ತಾರೆ. ಈ ಹಿಂದೆಯೆಲ್ಲಾ ಸ್ಫಟಿಕ ಲಿಂಗವನ್ನು ಮನೆಯ ದೊಡ್ಡ ಸೊಸೆ ಶಾಂತಲಾ ತೆಗೆದುಕೊಂಡು ಹೋಗುತ್ತಿದ್ದಳು. ಆದರೆ ಈಗ ಬಹದ್ದೂರ್ ಮನೆಗೆ ಕೃತಿ ಸೊಸೆಯಾಗಿ ಬಂದಿದ್ದಾಳೆ. ಕೆಲವೊಂದು ಜವಬ್ದಾರಿಯನ್ನು ಮನೆಯ ದೊಡ್ಡ ಸೊಸೆಯೇ ಮುಂದೆ ನಿಂತು ನೆರವೇರಿಸಬೇಕಾಗುತ್ತದೆ. ಈಗ ಬಹದ್ದೂರ್ ಮನೆಯವರೆಲ್ಲಾ ಸೇರಿ ಕೃತಿ ಕೈನಲ್ಲಿಯೇ ಲಿಂಗವನ್ನು ನೀಡಿದ್ದಾರೆ. ದೇವಸ್ಥಾನದಲ್ಲಿ ಲಿಂಗ ಪೂಜಿಸಿ, ದೇವರ ಹೂವಿನ ಪಲ್ಲಕ್ಕಿಯನ್ನು ಹೊರಬೇಕು. ಅದು ಯುವರಾಜ್ ಬಹದ್ದೂರ್. ಆ ಪಾತ್ರ ಬದಲಾವಣೆಯೂ ಆಗುವುದು ಇಲ್ಲೆ. ಶಿವನಿಗೆ ನಮಸ್ಕರಿಸುವಾಗ "ಬದಲಾವಣೆ ಜಗದ ನಿಯಮ ಅಂತಾರೆ. ಕೃತಿ ನಾನು ಬದಲಾಗಿದ್ದೀನಿ ಅಂದುಕೊಂಡಿದ್ದಾಳೆ. ಆದರೆ.." ಎಂಬ ವಾಕ್ಯದೊಂದಿಗೆ ಸೂರಜ್ ಬದಲಾಗಿ ಚಂದು ಕಾಣಿಸಿಕೊಂಡಿದ್ದಾರೆ.

ಧಾರಾವಾಹಿ ಪ್ರೇಕ್ಷಕರು ಬಯಸಿದ್ದೇನು..?
ಧಾರಾವಾಹಿಗಳ ಯುಗವಿದು. ಒಂದಕ್ಕಿಂತ ಒಂದು ಸೂಪರ್ ಎಂಬ ಧಾರಾವಾಹಿಗಳ ನಡುವೆ ಜನರ ಮನಸ್ಸು ಮುಟ್ಟುವುದಕ್ಕೆ ಸ್ಟ್ರಾಂಗ್ ಸ್ಪರ್ಧೆಯನ್ನೇ ಒಡ್ಡಬೇಕಾಗುತ್ತದೆ ಹೊಸ ಧಾರಾವಾಹಿಗಳು. ಆದ್ರೆ ಸ್ಟಾರ್ ಸುವರ್ಣದಲ್ಲಿ ಆರಂಭವಾದ 'ಕಥೆಯೊಂದು ಶುರುವಾಗಿದೆ' ಧಾರಾವಾಹಿ ಆ ರೀತಿ ಅಲ್ಲ. ಶುರುವಾದ ಆರಂಭದಲ್ಲಿಯೇ ಜನರ ಮನಸ್ಸನ್ನು ಗೆದ್ದಿತ್ತು. ಜನರ ಪ್ರೀತಿಗೆ ಪಾತ್ರವಾಗಿತ್ತು. ಅದರಲ್ಲಿ ಪ್ರಮುಖ ಪಾತ್ರ ಯುವರಾಜ ಕೆಲವರಿಗೆ ಇಷ್ಟವಾಗಿತ್ತು. ಇನ್ನು ಕೆಲವರಿಗೆ ಕಷ್ಟವಾಗಿತ್ತು. ಈಗ ಪಾತ್ರ ಬದಲಾದ ಕಾರಣ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಕೆಲವೊಂದಿಷ್ಟು ಮಂದಿ ಆ ಪಾತ್ರಕ್ಕೆ ಮೊದಲಿನ ಯುವರಾಜ ಮ್ಯಾಚ್ ಆಗುತ್ತಿರಲಿಲ್ಲ. ಬದಲಾಗಿದ್ದೆ ಒಳ್ಳೆಯದ್ದಾಯ್ತು ಎಂದು ಅಭಿಪ್ರಾಯ ಪಟ್ಟರೆ. ಇನ್ನು ಕೆಲವರು, ಒಂದು ಪಾತ್ರಕ್ಕೆ ಮೊದಲು ಯಾರು ನಾಯಕರಾಗಿರುತ್ತಾರೋ ಅವರೇ ಉಳಿಯುತ್ತಾರೆ ಎಂದಿದ್ದಾರೆ. ಈ ಮಿಶ್ರ ಪ್ರತಿಕ್ರಿಯೆಯ ನಡುವೆ ಚಂದು ಜನರನ್ನು ಗೆಲ್ಲುವುದು ಬಹಳ ಮುಖ್ಯವಾಗಿದೆ.


Click it and Unblock the Notifications











