ಪೌರಾಣಿಕ ಪಾತ್ರದ ಮೂಲಕ ಕಿರುತೆರೆಯಲ್ಲಿ ಮಿಂಚಿದ ಕಲಾವಿದರುಗಳು ಇವರೇ ನೋಡಿ
ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಎಂಬ ಕನಸು ಅನೇಕರಿಗಿರುತ್ತದೆ. ನಟ ನಟಿಯಾಗಿ ಕಿರುತೆರೆಯಲ್ಲಿ ಮೋಡಿ ಮಾಡಿದ ಹೆಚ್ಚಿನವರು ಪೌರಾಣಿಕ ಪಾತ್ರದಲ್ಲಿ ನಟಿಸುವ ಕನಸು ಕಾಣುವುದಂಟು. ಸಂತಸದ ವಿಚಾರವೆಂದರೆ ಒಂದಷ್ಟು ಜನ ಪೌರಾಣಿಕ ಪಾತ್ರ ಮಾಡಿ ತಮ್ಮ ಕನಸನ್ನು ನನಸು ಮಾಡಿಕೊಂಡಿರುವುದು ಇದೆ. ಅಂದ ಹಾಗೇ ಪೌರಾಣಿಕ ಪಾತ್ರದಲ್ಲಿ ನಟಿಸಿ ಯಶಸ್ವಿಯಾದ ನಟ ನಟಿಯರ ಕಿರು ಪರಿಚಯ ಇಲ್ಲಿದೆ.
ಚಿಟ್ಟೆ ಹೆಜ್ಜೆ, ಸಿಐಡಿ ಕರ್ನಾಟಕ, ಅಂಬಾರಿ, ಅಮ್ಮ, ಶುಭವಿವಾಹ ಹೀಗೆ ಸಾಲು ಸಾಲು ಧಾರಾವಾಹಿಗಳಲ್ಲಿ ನಾಯಕ, ಖಳನಾಯಕನಾಗಿ ನಟಿಸಿ ವೀಕ್ಷಕರ ಮನ ಸೆಳೆದ ಹುಡುಗನ ಹೆಸರು ವಿನಯ್ ಗೌಡ. ನಾಯಕನ ಹೊರತಾಗಿ ಖಳನಾಯಕನಾಗಿ ತೆರೆಯ ಮೇಲೆ ವಿನಯ್ ಗೌಡ ಅಬ್ಬರಿಸಿದರೂ ವೀಕ್ಷಕರು ಇಷ್ಟಪಟ್ಟದ್ದು ಮಾತ್ರ ಮಹಾದೇವನಾಗಿ ಬದಲಾದ ಬಳಿಕವೇ.

'ಹರಹರ ಮಹಾದೇವ' ಧಾರಾವಾಹಿಯಲ್ಲಿ ಮಹಾದೇವನಾಗಿ ಅಭಿನಯಿಸಿದ್ದ ವಿನಯ್ ಗೌಡ ಮುಂದೆ 'ಜೈ ಹನುಮಾನ್' ಧಾರಾವಾಹಿಯಲ್ಲಿ ಕೂಡಾ ರಾವಣನಾಗಿ ಮಿಂಚಿದರು. ಅಷ್ಟು ಸಾಲದು ಎಂಬಂತೆ 'ಉಘೇ ಉಘೇ ಮಾದೇಶ್ವರ' ಧಾರಾವಾಹಿಯಲ್ಲಿ ಶ್ರವಣನಾಗಿ ವಿನಯ್ ಕಾಣಿಸಿಕೊಂಡಿದ್ದರು.
ಇತ್ತೀಚೆಗಷ್ಟೇ ತಾಯಿಯಾಗಿರುವ ಪ್ರಿಯಾಂಕಾ ಚಿಂಚೋಳಿ ಸದ್ಯ ಪತಿಯೊಡನೆ ಲಂಡನ್‌ನಲ್ಲಿ ನೆಲೆಸಿದ್ದಾರೆ. " ಮನಸಾರೆ", "ಮನಸ್ಸೆಲ್ಲಾ ನೀನೆ" ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಕೊಂಡಿರುವ ಪ್ರಿಯಾಂಕಾ 'ಹರಹರ ಮಹಾದೇವ' ಧಾರಾವಾಹಿಯ ಪಾರ್ವತಿಯಾಗಿ ಕಿರುತೆರೆಗೆ ಕಾಲಿಟ್ಟರು. ಬಳಿಕ 'ಜೈ ಹನುಮಾನ್' ಧಾರಾವಾಹಿಯಲ್ಲಿ ಹನುಮಂತನ ಅಮ್ಮ ಅಂಜನಾ ದೇವಿಯಾಗಿ ಇವರು ಬಣ್ಣ ಹಚ್ಚಿದ್ದರು.

ಬಿಗ್ ಬಾಸ್ ಮೂಲಕ ಕನ್ನಡ ಕಿರುತೆರೆಯಲ್ಲಿ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದ ಸಂಗೀತಾ ಶೃಂಗೇರಿ ಬಣ್ಣದ ಪಯಣ ಶುರುವಾಗಿದ್ದು ಸತಿ ಪಾತ್ರದಿಂದ. 'ಹರಹರ ಮಹಾದೇವ' ಧಾರಾವಾಹಿಯ ಸತಿಯಾಗಿ ಬಣ್ಣದ ಜಗತ್ತಿಗೆ ಕಾಲಿಟ್ಟ ಈಕೆ ಮೊದಲ ಧಾರಾವಾಹಿಯಲ್ಲೇ ವೀಕ್ಷಕರು ಮನ ಗೆದ್ದರು. ಸದ್ಯ ಬೆಳ್ಳಿತೆರೆಯಲ್ಲಿ ಬ್ಯುಸಿಯಾಗಿರುವ ಈಕೆ ಸತಿ ಪಾತ್ರದಿಂದಲೇ ಈಗಲೂ ಫೇಮಸ್ಸು.
'ಶನಿ' ಧಾರಾವಾಹಿಯ ಮೂಲಕ ನಟನಾ ಲೋಕಕ್ಕೆ ಸುನಿಲ್ ಬಾಲ ಶನಿಯಾಗಿ ನಟಿಸಿ ಮನಗೆದ್ದಿದ್ದರು. ಮೂಲತಃ ಚಾಮರಾಜನಗರ ಮೂಲದ ಸುನೀಲ್ ನಟಿಸಿದ್ದು ಕೇವಲ ಒಂದು ಧಾರಾವಾಹಿಯಾದರೂ, ಇವರು ನಟಿಸಿರುವ ಶನಿ ಪಾತ್ರ ಇಂದಿಗೂ ಕಿರುತೆರೆ ವೀಕ್ಷಕರ ಮನದಲ್ಲಿ ಶಾಶ್ವತವಾಗಿ ಉಳಿದಿದೆ. ಅಷ್ಟರ ಮಟ್ಟಿಗೆ ಅವರ ನಟನೆ ಮೋಡಿ ಮಾಡಿತ್ತು.
'ಹರಹರ ಮಹಾದೇವ' ಧಾರಾವಾಹಿಯಲ್ಲಿ ವಿಷ್ಣುವಾಗಿ ನಟಿಸಿದ್ದ ಆರ್ಯನ್ ರಾಜ್ ಅವರಿಗೆ ಜನಪ್ರಿಯತೆ ನೀಡಿದ್ದು ಮಾದೇವನ ಪಾತ್ರ. ಹೌದು, 'ಉಘೇ ಉಘೇ ಮಾದೇಶ್ವರ' ಧಾರಾವಾಹಿಯಲ್ಲಿ ಮಾದೇಶ್ವರನ ಪಾತ್ರ ಮಾಡಿದ್ದ ಆರ್ಯನ್ ರಾಜ್ ಇಂದಿಗೂ ಆ ಪಾತ್ರದ ಮೂಲಕ ಫೇಮಸ್ಸು.


Click it and Unblock the Notifications











