ನಟನೆ ಮಾತ್ರವಲ್ಲ ನೃತ್ಯಕ್ಕೂ ನಾವು ಸೈ ಅಂದ ಕಿರುತೆರೆ ನಟಿಯರು ಇವರೇ!
ಭಾರತದ ಶಾಸ್ತ್ರೀಯ ನೃತ್ಯ ಪದ್ಧತಿಗಳಲ್ಲಿ ಹೆಸರಾದ ಭರತನಾಟ್ಯ ಕರ್ನಾಟಕದಲ್ಲಿ ಜನಪ್ರಿಯ. ದೇಶದಲ್ಲಿ ಜನರ ಮನ್ನಣೆ ಗಳಿಸಿದ ಪ್ರಮುಖ ಕಲೆಯಲ್ಲಿ ಈ ನಾಟ್ಯ ಒಂದಾಗಿ ಬೆಳೆದು ಬಂದಿದೆ. ಇಂತಹ ಕಲೆಯನ್ನು ಕಿರುತೆರೆ ನಟಿಯರು ಮೈಗೂಡಿಸಿಕೊಂಡಿದ್ದಾರೆ.
ಒಂದರ ಹಿಂದೊಂದು ಧಾರಾವಾಹಿಗಳಲ್ಲಿ ನಟಿಸುತ್ತಿದ್ದರೂ, ತಮ್ಮ ನೆಚ್ಚಿನ ಡ್ಯಾನ್ಸ್ ಅನ್ನು ಬಿಟ್ಟಿಲ್ಲ. ಇದು ಅವರ ವೃತ್ತಿ ಬದುಕಿಗೂ ಅನುಕೂಲವಾಗಿದೆ. ನಟನೆ ಜೊತೆ ಜೊತೆಗೆ ನೃತ್ಯವನ್ನೂ ಅಭ್ಯಾಸ ಮಾಡಿರೋ ಕನ್ನಡ ಕಿರುತೆರೆ ನಟಿಯರು ಯಾರೆಂದು ತಿಳಿದಿರುವಿರಾ?

ಕವಿತಾ ಗೌಡ
'ಲಕ್ಷ್ಮಿ ಬಾರಮ್ಮ' ಧಾರಾವಾಹಿಯ ಚಿನ್ನು ಆಗಿ ಕಿರುತೆರೆಗೆ ಕಾಲಿಟ್ಟು ಮುಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ವಿದ್ಯಾ ವಿನಾಯಕ' ಧಾರಾವಾಹಿಯಲ್ಲಿ ನಾಯಕಿ ವಿದ್ಯಾಳಾಗಿ ನಟಿಸಿರುವ ಕವಿತಾ ಗೌಡ ಇವರು ಬಾಲ್ಯದಿಂದಲೇ ಭರತನಾಟ್ಯದ ಕಡೆಗೆ ಒಲವನ್ನು ಹೊಂದಿದ್ದು ಹಲವು ಕಾರ್ಯಕ್ರಮಗಳಲ್ಲಿ ನೃತ್ಯದ ಮೂಲಕ ತಮ್ಮ ಛಾಪನ್ನು ಮೂಡಿಸಿದ್ದಾರೆ.
ಸುಷ್ಮಾ ಕೆ ರಾವ್
ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳ ಪೈಕಿ ಗುಪ್ತಗಾಮಿನಿಯೂ ಒಂದು. ವಿಭಿನ್ನ ಕಥಾ ಹಂದರದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದ 'ಗುಪ್ತಗಾಮಿನಿ' ಧಾರಾವಾಹಿಯಲ್ಲಿ ಭಾವನಾ ಆಗಿ ನಟಿಸಿ ಕರ್ನಾಟಕದಾದ್ಯಂತ ಮನೆ ಮಾತಾಗಿರುವ, ಅತ್ಯಂತ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ 'ಗುಪ್ತಗಾಮಿನಿ'ಯಲ್ಲಿ ಭಾವನಾ ಪಾತ್ರಕ್ಕೆ ಜೀವ ತುಂಬಿದ್ದ ಸುಷ್ಮ ರಾವ್ ಕೂಡಾ ಅದ್ಭುತ ಭರತನಾಟ್ಯ ಕಲಾವಿದೆ.

ಅನು ಜನಾರ್ಧನ್
ಪೌರಾಣಿಕ ಧಾರಾವಾಹಿಗಳ ಮೂಲಕ ಕಿರುತೆರೆಗೆ ಕಾಲಿಟ್ಟು, 'ರಂಗನಾಯಕಿ' ಧಾರಾವಾಹಿಯ ವಿಭಾ ಆಗಿ ಕಿರುತೆರೆಯಲ್ಲಿ ಮನೆ ಮಾತಾಗಿರುವ ಅನು ಜನಾರ್ಧನ್ ಸದ್ಯ ಸತ್ಯ ಧಾರಾವಾಹಿಯ ಕೀರ್ತನಾ ಆಗಿ ಫೇಮಸ್ಸು. ಮನೋಜ್ಞ ನಟನೆಯ ಮೂಲಕ ಮನ ಸೆಳೆದಿರುವ ಅನು ಜನಾರ್ಧನ್ ನೃತ್ಯಗಾರ್ತಿಯಾಗಿ ತೊಡಗಿಸಿಕೊಂಡ ಬೆಡಗಿ.
ರಶ್ಮಿ ಪ್ರಭಾಕರ್
'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ಚಿನ್ನು ಆಗಿ ನಟಿಸಿ, ಮುಂದೆ 'ಮರಳಿ ಮನಸಾಗಿದೆ' ಧಾರಾವಾಹಿಯ ರಾಗಳಾಗಿ ಕನ್ನಡ ಕಿರುತೆರೆಯಲ್ಲಿ ಮೋಡಿ ಮಾಡಿರುವ ರಶ್ಮಿ ಪ್ರಭಾಕರ್ ಕೂಡಾ ಉತ್ತಮ ಭರತನಾಟ್ಯ ಕಲಾವಿದೆ. ನಟನೆಯ ನಡುವೆ ಬಿಡುವು ದೊರೆತಾಗಲೆಲ್ಲಾ ಈಕೆ ನೃತ್ಯ ಪ್ರದರ್ಶನ ನೀಡುತ್ತಾರೆ.

ದೀಪಾ ಭಾಸ್ಕರ್
'ಸುಬ್ಬಲಕ್ಷ್ಮಿ ಸಂಸಾರ' ಧಾರಾವಾಹಿಯ ಸುಬ್ಬಲಕ್ಷ್ಮಿಯಾಗಿ ಕಿರುತೆರೆ ಜಗತ್ತಿನಲ್ಲಿ ಮಿಂಚಿದ ದೀಪಾ ಭಾಸ್ಕರ್ ಸದ್ಯ 'ಯುಗಾಂತರ' ಧಾರಾವಾಹಿಯಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಮನೋಜ್ಞ ನಟನೆಯ ಮೂಲಕ ಕಿರುತೆರೆಯಲ್ಲಿ ಮಿಂಚಿದ ಈಕೆ ನೃತ್ಯದ ಮೂಲಕವೂ ಮನಸೆಳೆದ ಚೆಲುವೆ.
ಮಾನಸ ಜೋಶಿ
'ಮಹಾದೇವಿ' ಧಾರಾವಾಹಿಯಲ್ಲಿ ದೇವಿಯಾಗಿ, 'ಮಂಗಳ ಗೌರಿ ಮದುವೆ' ಧಾರಾವಾಹಿಯಲ್ಲಿ ವಿಲನ್ ಪಾತ್ರವನ್ನು ಅಭಿನಯಿಸಿರುವ ಮಾನಸ ಜೋಶಿ ಕಥಕ್ ಕಲಾವಿದೆ ಎಂದು ಹಲವರಿಗೆ ತಿಳಿದಿಲ್ಲ. ಇವರು ಬೆಂಗಳೂರಿನಲ್ಲಿ ಕಥಕ್ ಪ್ರಕಾರಕ್ಕೆ ತರಬೇತಿಯನ್ನು ನೀಡುತ್ತಿದ್ದಾರೆ.

ಪ್ರಥಮಾ ಪ್ರಸಾದ್
'ಬ್ರಹ್ಮಗಂಟು' ಧಾರಾವಾಹಿಯ ಪುಟ್ಟತ್ತೆಯಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡ ಪ್ರಥಮಾ ಪ್ರಸಾದ್ ಸದ್ಯ ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ ಸುಮತಿಯಾಗಿ ಅಭಿನಯಿಸುತ್ತಿದ್ದಾರೆ. ನಟನೆಯ ಹೊರತಾಗಿ ಕಥಕ್ ನೃತ್ಯ ಕಲಾವಿದೆಯಾಗಿರುವ ಪ್ರಥಮಾ ಪ್ರಸಾದ್ ನೃತ್ಯದ ಮೂಲಕ ಮನೆ ಮಾತಾಗಿದ್ದಾರೆ.


Click it and Unblock the Notifications











