ತಮಿಳು ಸರಿಗಮಪ-5 ಶೋನಲ್ಲಿ ಕನ್ನಡದ ಹುಡುಗಿ ಶಿವಾನಿ ನವೀನ್ ಜಾದೂ
ಕರ್ನಾಟಕದ ಪ್ರತಿಭೆಗಳು ದೇಶ ವಿದೇಶಗಳಲ್ಲಿ ಸದ್ದು ಮಾಡ್ತಿದ್ದಾರೆ. ಮನರಂಜನ ಕ್ಷೇತ್ರದಲ್ಲಿ ಹಲವರು ಬೇರೆ ಬೇರೆ ಕಡೆ ತಮ್ಮ ಪ್ರತಿಭೆ ಮೂಲಕ ಮೋಡಿ ಮಾಡುತ್ತಿದ್ದಾರೆ. ಸದ್ಯ ಚಿಕ್ಕಮಗಳೂರಿನ ಗಾಯಕಿ ಶಿವಾನಿ ನವೀನ್ ಈಗ ತಮಿಳು ಸರಿಗಮಪ ಸೀಸನ್-5ರಲ್ಲಿ ಫಿನಾಲೆ ತಲುಪಿದ್ದಾರೆ.
ಗ್ರ್ಯಾಂಡ್ ಆಡಿಷನ್ ವೇಳೆ ಕನ್ನಡದ ಹಾಡು ಹಾಡಿ ಶಿವಾನಿ ಗಮನ ಸೆಳೆದಿದ್ದರು. ಆ ಮೂಲಕ ಶೋನಲ್ಲಿ ಸ್ಪರ್ಧಿಸುವ ಅವಕಾಶ ಗಿಟ್ಟಿಸಿಕೊಂಡಿದ್ದರು. ಬಳಿಕ ಕಳೆದ 6 ತಿಂಗಳಿನಿಂದ ಪ್ರತಿ ವಾರ ತಮ್ಮ ಅದ್ಭುತ ಗಾಯನದಿಂದ ಶಿವಾನಿ ಸಂಗೀತ ಪ್ರೇಮಿಗಳನ್ನು ರಂಜಿಸುತ್ತಿದ್ದರು. ಕನ್ನಡಿಗರು ಕೂಡ ಆಕೆಗೆ ಬೆಂಬಲ ಸೂಚಿಸುತ್ತಾ ಬಂದಿದ್ದರು.

ಬಹಳ ಸುಲಭವಾಗಿ ಶಿವಾನಿ ಫಿನಾಲೆ ತಲುಪುತ್ತಾರೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಕೊನೆ ಕೊನೆಗೆ ಸ್ಪರ್ಧೆ ಟಫ್ ಆಗಿತ್ತು. ಒಟ್ಟು 6 ಮಂದಿ ಫೈನಲಿಸ್ಟ್‌ಗಳ ಪೈಕಿ ನಾಲ್ವರಿಗೆ ಫಿನಾಲೆ ಟಿಕೆಟ್ ಸಿಕ್ಕರೂ ಶಿವಾನಿಗೆ ಸಾಧ್ಯವಾಗಿರಲಿಲ್ಲ. ಅಂತಿಮವಾಗಿ 5ನೇ ಸ್ಪರ್ಧಿಯಾಗಿ ಆಕೆ ಫಿನಾಲೆಯಲ್ಲಿ ಸ್ಪರ್ಧಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಹೈ ನೋಟ್ಸ್ ಇರುವ ಹಾಡುಗಳನ್ನು ಆಕೆ ಹೆಚ್ಚು ಆಯ್ಕೆ ಮಾಡಿಕೊಂಡು ಕಮಾಲ್ ಮಾಡುತ್ತಾ ಬಂದಿದ್ದರು.
ಶಿವಾನಿಗೆ ಮೆಲೋಡಿ ಹಾಡುಗಳನ್ನು ಅಷ್ಟು ಚೆನ್ನಾಗಿ ಹಾಡಲು ಬರಲ್ಲ ಎಂದು ಕೆಲವರು ಮೂದಲಿಸಿದ್ದರು. ಆದರೆ ಅದನ್ನೆಲ್ಲಾ ಮೆಟ್ಟಿ ಆಕೆ ಇದೀಗ ಸರಿಗಮಪ ಸೀಸನ್-5ರ ಅಂತಿಮ ಸುತ್ತಿಗೆ ಆಯ್ಕೆ ಆಗಿದ್ದಾರೆ. ಕನ್ನಡದ 'ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19'ರಲ್ಲಿ ಶಿವಾನಿ ಮೊದಲ ರನ್ನರ್ ಅಪ್ ಆಗಿದ್ದರು. ಇದೀಗ 4 ವರ್ಷಗಳ ಬಳಿಕ ಸರಿಗಮಪ ತಮಿಳು ಶೋನಲ್ಲಿ ಮಿಂಚುತ್ತಿದ್ದಾರೆ.
ಈ ವಾರ 'ಗುರು' ಚಿತ್ರದ 'ಮಯ್ಯ ಮಯ್ಯ' ಹಾಡು ಹಾಡಿ ಶಿವಾನಿ ಎಲ್ಲರನ್ನು ಮಂತ್ರಮುಗ್ಧರನ್ನಾಗಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ಪ್ರೋಮೊ ವೈರಲ್ ಆಗ್ತಿದೆ. ಆಕೆಗೆ ಫಿನಾಲೆ ಅವಕಾಶ ಸಿಕ್ಕಿದ್ದು ತೀರ್ಪುಗಾರರಿಗೂ ಸಂತಸ ತಂದಿದೆ. ನಿರೂಪಕಿ ಅರ್ಚನಾ ಕೂಡ ಸಂಭ್ರಮಿಸಿದ್ದಾರೆ. ಶ್ರೀನಿವಾಸ್, ಶ್ವೇತಾ ಮೋಹನ್, ವಿಜಯ ಪ್ರಕಾಶ್ ಎಲ್ಲರೂ ಹಾಡಿ ಹೊಗಳಿದ್ದಾರೆ. ನಿಜಕ್ಕೂ ನೀನು ಫಿನಾಲೆಗೆ ಹೋಗಲು ಅರ್ಹಳು ಎಂದು ಕೊಂಡಾಡಿದ್ದಾರೆ.
ಆಡಿಷನ್ ವೇಳೆ 'ಸೋಜುಗದ ಸೂಜು ಮಲ್ಲಿಗೆ' ಹಾಡು ಹಾಡಿ ಶಿವಾನಿ ಮೋಡಿ ಮಾಡಿದ್ದರು. ತೀರ್ಪುಗಾರರು ಎದ್ದು ನಿಂತು ಚಪ್ಪಾಳೆ ತಟ್ಟಿ ಹುರಿದುಂಬಿಸಿದ್ದರು. ಅದಕ್ಕೂ ಮುನ್ನ ಆಡಿಷನ್‌ನಲ್ಲಿ 'ವಾಗೈ ಸೂಡ ವಾ' ಚಿತ್ರದ 'ಪೋರಾನೆ ಪೋರಾನೆ' ಹಾಡನ್ನು ಆಕೆ ಹಾಡಿದ್ದಳು. ಮೂವರು ತೀರ್ಪುಗಾರರು ಒಪ್ಪಿದರೂ ವಿಜಯ್ ಪ್ರಕಾಶ್ ಮಾತ್ರ ವೇಯ್ಟಿಂಗ್ ಲಿಸ್ಟ್‌ನಲ್ಲಿ ಇಟ್ಟಿದ್ದರು. ಆದರೆ ಬಳಿಕ ವಾಪಸ್ ಕರೆಸಿ 'ಸೋಜುಗದ ಸೂಜಿಮಲ್ಲಿಗೆ' ಹಾಡು ಹಾಡುವಂತೆ ಹೇಳಿದ್ದರು. ಆಕೆಯ ಗಾಯನದ ಸಾಮರ್ಥ್ಯ ಎಂಥದ್ದು ಎಂದು ತಮಿಳರಿಗೆ ಪರಿಚಯಿಸಿದ್ದರು.
ಶೀಘ್ರದಲ್ಲೇ ಸರಿಗಮಪ ತಮಿಳು ಸೀಸನ್-5 ಫಿನಾಲೆ ನಡೆಯಲಿದೆ. ಇನ್ನು ಸುಶಾಂತಿಕಾ, ಶ್ರೀಹರಿ, ಸಪೇಶನ್, ಸೆಂತಮಿಲನ್, ಪವಿತ್ರಾ ಹೀಗೆ ಫೈನಲಿಸ್ಟ್ ಆಗಿದ್ದಾರೆ. ಈ ಐವರು ಗಾಯಕರು ಶಿವಾನಿಗೆ ಸವಾಲು ಹಾಕಲಿದ್ದಾರೆ. ಆಕೆ ಫಿನಾಲೆ ತಲುಪಿರುವುದಕ್ಕೆ ಅಭಿಮಾನಿಗಳು ಅಭಿನಂದನೆ ತಿಳಿಸಿದ್ದು ಬೇಗ ಗೆದ್ದು ಬಾ ಎಂದು ಶುಭ ಹಾರೈಸುತ್ತಿದ್ದಾರೆ. ಶಿವಾನಿ ತಂದೆ ನವೀನ್ ಆರ್ಕೇಸ್ಟ್ರಾಗಳಲ್ಲಿ ಹಾಡುಗಾರರು. ಹಾಗಾಗಿ ಮಗಳಿಗೆ ಚಿಕ್ಕಂದಿನಿಂದಲೇ ಗಾಯನ ಒಲಿದು ಬಂದಿದೆ.
ಗಾಯಕಿ ಶಿವಾನಿ ತಾಯಿ ಸಂಜನಾ ತಮಿಳುನಾಡು ಮೂಲದವರು. ಇದೇ ಕಾರಣಕ್ಕೆ ಶಿವಾನಿಗೆ ತಮಿಳು ಭಾಷೆ ಮಾತನಾಡಲು, ಹಾಡಲು ಸುಲಭವಾಗಿದೆ. ಮಗಳು ತಮಿಳು ಸರಿಗಮಪ ಶೋಗೆ ಆಯ್ಕೆ ಆಗಿದ್ದರ ಬಗ್ಗೆ ತಾಯಿ ಅಂದು ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿ ಸಂತಸ ವ್ಯಕ್ತಪಡಿಸಿದ್ದರು.


Click it and Unblock the Notifications











