'ಚಿಕ್ಕೆಜಮಾನಿ' ನಟಿ ಅಕ್ಷತಾ ದೇಶಪಾಂಡೆ ಕಿರುತೆರೆ ಜರ್ನಿ ಅಷ್ಟೊಂದು ಸುಲಭವಾಗಿರಲಿಲ್ಲ!
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಚಿಕ್ಕೆಜಮಾನಿ' ಧಾರಾವಾಹಿಯಲ್ಲಿ ನಾಯಕಿ ಕಾವೇರಿಯಾಗಿ ನಟಿಸುತ್ತಿರುವ ಬೆಡಗಿಯ ಹೆಸರು ಅಕ್ಷತಾ ದೇಶಪಾಂಡೆ. ಸಹಜ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಅಕ್ಷತಾ ದೇಶಪಾಂಡೆ ಕನ್ನಡದ ಜೊತೆಗೆ ಪರಭಾಷೆಯ ಕಿರುತೆರೆಯಲ್ಲಿಯೂ ನಟನಾ ಛಾಪನ್ನು ಪಸರಿಸಿದ್ದಾರೆ.
ನಟಿ ಅಕ್ಷತಾ ದೇಶಪಾಂಡೆ ಅವರಿಗೆ ರಾಧಿಕಾ ಪಂಡಿತ್ ಎಂದರೆ ಮೊದಲಿನಿಂದಲೂ ತುಂಬಾ ಇಷ್ಟ. ದೊಡ್ಡವಳಾದ ಮೇಲೆ ಅವರಂತೆ ನಟಿಸಬೇಕೆಂಬುದೇ ಅಕ್ಷತಾ ಅವರ ಆಸೆಯಾಗಿತ್ತು. ಆದರೆ, ಅಕ್ಷತಾ ಅವರ ಮನೆಯಲ್ಲಿ ನಟನಾ ವೃತ್ತಿಗೆ ಅವಕಾಶವಿರಲಿಲ್ಲ. ಚೆನ್ನಾಗಿ ಓದಿ ಒಳ್ಳೆಯ ಕೆಲಸ ಹಿಡಿಯಬೇಕೆಂಬುದನ್ನೇ ಆಕೆಯ ತಂದೆ ತಾಯಿ ಹೇಳುತ್ತಿದ್ದರು. ಹೀಗಾಗಿ ಅಕ್ಷತಾಗೆ ತನ್ನ ತಂದೆ ತಾಯಿಯನ್ನು ನಟನಾ ವೃತ್ತಿಗೆ ಒಪ್ಪಿಸುವುದು ಮೊದಲಿಗೆ ಕಷ್ಟವಾಗಿತ್ತು.

ಅಕ್ಷತಾ ದೇಶಪಾಂಡೆ ಮೂಲತಃ ಉತ್ತರ ಕರ್ನಾಟಕದ ಹುಡುಗಿ. ಬೆಳಗಾವಿ ಇಂದ ಬೆಂಗಳೂರಿಗೆ ಓಡಾಡುವುದು ಸುಲಭವಾಗಿರಲಿಲ್ಲ. ಓಡಾಟಕ್ಕೆ ತಂದೆ ತಾಯಿಯೇ ಹಣ ನೀಡಬೇಕಾಗಿತ್ತು. ಹಾಗಾಗಿ ಆಕೆಯ ಕನಸು ದೂರವೇ ಉಳಿದಿತ್ತು. ಮೊದಲಿಗೆ ಅಕ್ಷತಾ ದೇಶಪಾಂಡೆ ಫೋಟೋಶೂಟ್ ಮಾಡಿಸಿ ಫೇಸ್ ಬುಕ್‌ನಲ್ಲಿ ಹಾಕಿದ್ದರು. ಆಗ ಡಾನ್ಸ್ ರಿಯಾಲಿಟಿ ಶೋಗಳಿಗೆ ಹಾಗೂ ಧಾರಾವಾಹಿಗಳಿಂದ ಆಫರ್ ಬರಲು ಆರಂಭಿಸಿತ್ತು.
ಕ್ರಮೇಣ ಆಕೆ ತನ್ನ ತಂದೆ ತಾಯಿಯನ್ನು ಒಪ್ಪಿಸಿ, ಆಡಿಷನ್‌ಗೆ ಬೆಂಗಳೂರಿಗೆ ಬರಲು ಆರಂಭಿಸಿದರು. ಮೊದಮೊದಲಿಗೆ ಯಾವುದೂ ಸೆಟ್ ಆಗಲಿಲ್ಲ. ಆರು ತಿಂಗಳ ನಂತರ ಕೈ ಚೆಲ್ಲಿ ಓದಿನ ಕಡೆಗೆ ಗಮನ ಹರಿಸಬೇಕು ಎಂದುಕೊಳ್ಳುವಷ್ಟರಲ್ಲಿ 'ಅಮೃತವರ್ಷಿಣಿ 2' ಧಾರಾವಾಹಿಯಿಂದ ಲುಕ್ ಟೆಸ್ಟ್‌ಗೆ ಕರೆದರು. ತನ್ನ ಆರ್ಥಿಕ ಪರಿಸ್ಥಿತಿ ಬಗ್ಗೆ ಹೇಳಿ ಲುಕ್ ಟೆಸ್ಟ್ ಗೆ ಹೋದರು. ಅಷ್ಟರಲ್ಲೇ ಇನ್ನೊಂದು ಧಾರಾವಾಹಿಗೂ ಕರೆದರು. ಎರೆಡರಲ್ಲೂ ಸೆಲೆಕ್ಟ್ ಆದರು. ಆದರೆ ಅಕ್ಷತಾ ಅಮೃತವರ್ಷಿಣಿ ಧಾರಾವಾಹಿಯನ್ನು ಆಯ್ಕೆ ಮಾಡಿಕೊಂಡರು.

ಅಂದ ಹಾಗೇ ಅಕ್ಷತಾ ಅವರಿಗೆ ಮೂಲಭೂತವಾಗಿ ನಟನೆಯೇ ಬರುತ್ತಿರಲಿಲ್ಲ. ಜೊತೆಗೆ ಬೆಳಗಾವಿ ಕನ್ನಡವೇ ಬೇರೆ, ಬೆಂಗಳೂರು ಕನ್ನಡವೇ ಬೇರೆ ಆಗಿದ್ದರಿಂದ ಭಾಷೆಯ ತೊಡಕು ಕಾಡಿತು. ಆಗ ನಿರ್ದೇಶಕ ಅನಿಲ್ ಕೋರಮಂಗಲ ಅವರು ನಟನೆ ಬಹಳ ಸುಲಭ ಎನ್ನುತ್ತಾ ಆಕೆಯಲ್ಲಿ ಆತ್ಮವಿಶ್ವಾಸವನ್ನು ತುಂಬಿದರು.
ಇವರು ನಟಿಸಿದ ಮೊದಲ ಶಾಟ್ ಓಕೆ ಆದಾಗ ಧೈರ್ಯ ಬಂತು. ಕ್ರಮೇಣ ಎಲ್ಲಾ ರೀತಿಯ ಅಭಿನಯವನ್ನು ಕಲಿತುಕೊಂಡರು. ಈಗ ನಟನೆಯಲ್ಲಿಯೇ ಜೀವನವನ್ನು ಕಟ್ಟಿಕೊಳ್ಳುವಷ್ಟು ಆತ್ಮವಿಶ್ವಾಸ ಆಕೆಯಲ್ಲಿ ಮೂಡಿದೆ.
'ಚಿಕ್ಕೆಜಮಾನಿ' ಧಾರಾವಾಹಿಯ ಕಥಾ ಹಂದರ ಬಹಳ ಸೊಗಸಾಗಿದೆ. ಇದರಲ್ಲಿ ನಮ್ಮ ತಾತ ಬಹಳ ನಿಷ್ಠೆಯಿಂದ ಬದುಕು ಸವೆಸಿದವರು. ಆದರೆ, ಅವರ ಅಳಿಯ ಮಹಾಸ್ವಾರ್ಥ. ಮಗ ಜೂಜುಕೊರ. ಅವರ ಮನೆತನದ ಜವಾಬ್ದಾರಿಯನ್ನು ಪಡೆಯಲು ಯಾರು ಇಲ್ಲ ಎಂದು ಹತಾಶರಾಗಿದ್ದಾರೆ. ಇದೇ ಸಂದರ್ಭದಲ್ಲಿ ನಾನು ಹೇಗೆ ಆ ಮನೆ ಸೇರುತ್ತೇನೆ ಹಾಗೂ ಚಿಕ್ಕೆ ಜಮಾನಿ ಆಗುತ್ತೇನೆ ಎಂಬುದೇ ಇಡೀ ಕಥೆಯ ಮೂಲ ಹಂದರ.
ಸಕಲೇಶಪುರದ ಇಡೀ ಸೌಂದರ್ಯವನ್ನು ಬಹಳ ಸೊಗಸಾಗಿ ನಮ್ಮ ತಂಡ ಕ್ಯಾಮೆರಾ ಕಣ್ಣಿನಿಂದ ಹಿಡಿದು ತೋರಿಸುತ್ತಿದೆ. ಸಹ ನಟರು ಬಹಳ ಸಪೋರ್ಟಿವ್ ಇದ್ದಾರೆ ಎಂದು ತಮ್ಮ ಪ್ರಸ್ತುತ ಧಾರಾವಾಹಿ 'ಚಿಕ್ಕೆಜಮಾನಿ' ಬಗ್ಗೆ ನಟಿ ಅಕ್ಷತಾ ದೇಶಪಾಂಡೆ ಮಾತನಾಡಿದ್ದಾರೆ.
ಇನ್ನು ಬೆಂಗಳೂರಿನಲ್ಲಿ ವಾಸ ಅಷ್ಟೊಂದು ಸುಲಭವಾಗಿರಲಿಲ್ಲ ಎಂದು ಹೇಳುವ ಅಕ್ಷತಾ ದೇಶಪಾಂಡೆ ದುಡ್ಡಿಗೆ ಬಹಳಷ್ಟು ಲೆಕ್ಕಾಚಾರ ಹಾಕುತ್ತಿದ್ದರು. ಆಗ ಆಕೆಯ ಮನೆಯ ಸಂದರ್ಭವೂ ಹಾಗೆ ಇತ್ತು. ಹಾಗಾಗಿ ಮೊದಲು ಆಕೆ ತನ್ನ ನೆಂಟರೊಬ್ಬರ ಮನೆಯಲ್ಲಿ ಉಳಿದುಕೊಂಡಿದ್ದರು. ಶೂಟಿಂಗ್ ಸಮಯ ಬೇರೆ ಬೇರೆ ಇರುತ್ತಿದ್ದರಿಂದ ಬಹಳ ಕಷ್ಟವಾಗುತ್ತಿತ್ತು.
ನಿಧಾನವಾಗಿ ಸಹನಟಿಯೊಂದಿಗೆ ಬಾಡಿಗೆ ಮನೆ ಮಾಡಿಕೊಂಡರು. ಆರ್ಥಿಕವಾಗಿ ಸಬಲೇ ಎಂದಾದ ಮೇಲೆ ತನ್ನದೇ ಮನೆ ಮಾಡಿಕೊಂಡಿದ್ದಾರೆ. ಮೊದಲಿಗೆಲ್ಲಾ ಧಾರಾವಾಹಿ ಸಿಕ್ಕಾಗ ತನ್ನ ತಾಯಿ ಮುಂದೆ ಬಹಳಷ್ಟು ಕೊಚ್ಚಿಕೊಳ್ಳುತ್ತಿದ್ದರು. ಕ್ರಮೇಣ ಆಕೆಗೆ ವಾಸ್ತವದ ಅರಿವಾಗಿತ್ತು. ಈ ಜಗತ್ತು ಬಹಳ ಗ್ಲಾಮರಸಾಗಿ ಕಂಡರೂ ಸಹ ಇದರಲ್ಲಿ ಇದರದ್ದೇ ಆದ ಒಂದಷ್ಟು ಲಿಮಿಟೇಶನ್‌ಗಳಿವೆ. ಅದನ್ನೆಲ್ಲ ಎದುರಿಸುವ ಛಲ ನಮ್ಮದಾಗಿರಬೇಕು ಎಂಬುದು ಅಕ್ಷತಾ ದೇಶಪಾಂಡೆ ಅಭಿಪ್ರಾಯ.


Click it and Unblock the Notifications











