ಈ ಬಾಲನಟಿ ನಟನೆಯಲ್ಲಷ್ಟೇ ಅಲ್ಲ, ರೀಲ್ಸ್ ಮಾಡೋದ್ರಲ್ಲೂ ಫೇಮಸ್; ಮಹಿತಾ ಬಗ್ಗೆ ನಿಮಗೆಷ್ಟು ಗೊತ್ತು?
ಕನ್ನಡ ಕಿರುತೆರೆ ಹಾಗೂ ಹಿರುತರೆ ಬಹಳಷ್ಟು ಅದ್ಭುತವಾದ ಬಾಲ ನಟ ನಟಿಯರನ್ನು ಕಂಡಿದೆ. ನಟ ಪುನೀತ್ ರಾಜಕುಮಾರ್ ಸೇರಿದಂತೆ ಹಲವು ಕಲಾವಿದರು ಬಾಲನಟರಾಗಿಯೇ ಮೊದಲು ಕಾಣಿಸಿಕೊಂಡಿದ್ದು. ಅದರಲ್ಲೂ ಕನ್ನಡ ಕಿರುತೆರೆಯಲ್ಲಿ ನೋಡುವುದಾದರೆ ನಟಿ ಅಂಕಿತಾ ಅಮರ್, ನಟಿ ನಮೃತಾ ಗೌಡ, ಸಾನ್ಯಾ ಅಯ್ಯರ್ ಸೇರಿದಂತೆ ಇಂದಿನ ಹಲವು ಜನಪ್ರಿಯ ನಟ ನಟಿಯರು ಬಾಲ ಕಲಾವಿದರಾಗಿಯೇ ಕಾಣಿಸಿಕೊಂಡಿದ್ದು.
ಅಂತೆಯೇ ಸದ್ಯಕ್ಕೆ ಕಿರುತೆರೆಯಲ್ಲಿ ಹಲವು ಬಾಲ ಕಲಾವಿದರು ಅದ್ಭುತ ನಟನೆಯ ಮೂಲಕ ಜನಮನ ಗೆಲ್ಲುತ್ತಿದ್ದಾರೆ. ಅದರಲ್ಲೂ ಬಾಲನಟಿ ಮಹಿತಾ ಎರಡು ರಿಯಾಲಿಟಿ ಶೋಗಳಲ್ಲದೆ ಇದೀಗ ಎರಡನೇ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಸುತ್ತಿದ್ದಾಳೆ.

ಹೌದು, ಹೊಸ ಧಾರಾವಾಹಿ ಮೂಲಕ ಕಿರುತೆರೆ ಜನರನ್ನು ರಂಜಿಸುತ್ತಿದ್ದಾಳೆ ಬಾಲ ನಟಿ ಮಹಿತಾ. ಏಳು ವರ್ಷದ ಮುದ್ದು ಕನ್ನಡತಿ ಮಹಿತಾ 'ನನ್ನಮ್ಮ ಸೂಪರ್ ಸ್ಟಾರ್' ಎಂಬ ರಿಯಾಲಿಟಿ ಶೋ ಮೂಲಕ ತನ್ನ ತಾಯಿಯೊಂದಿಗೆ ಮೊದಲ ಬಾರಿಗೆ ಕಿರುತೆರೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು.
ರಿಯಾಲಿಟಿ ಶೋನ ಉದ್ದಕ್ಕೂ ಬಹಳ ಆ್ಯಕ್ಟೀವ್ ಇದ್ದ ಪುಟಾಣಿ ಮಹಿತಾ ತನ್ನ ತಾಯಿಯೊಂದಿಗೆ ಬಹಳಷ್ಟು ರೀಲ್ಸ್ ಹಾಗೂ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿರುತ್ತಾಳೆ. 'ನಮ್ಮಮ್ಮ ಸೂಪರ್ ಸ್ಟಾರ್' ರಿಯಾಲಿಟಿ ಶೋನಲ್ಲಿ ಈ ತಾಯಿ ಮಗಳ ಜೋಡಿ ಸೆಕೆಂಡ್ ರನ್ನರ್ ಅಪ್ ಆದರು. ನಂತರ ಬಹಳಷ್ಟು ಖ್ಯಾತಿಗಳಿಸಿದ ಈಕೆ 'ಗಿಚ್ಚಿ ಗಿಲಿ ಗಿಲಿ' ರಿಯಾಲಿಟಿ ಶೋನಲ್ಲೂ ಕಾಣಿಸಿಕೊಂಡಳು.
ನಂತರ 'ಚುಕ್ಕಿತಾರೆ' ಧಾರಾವಾಹಿಯಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡು, ಒಳ್ಳೆಯ ಕಲಾವಿದೆ ಎಂಬುದಾಗಿ ಕಿರುತೆರೆ ಪ್ರೇಕ್ಷಕರಿಂದ ಭೇಷ್ ಎನಿಸಿಕೊಂಡಳು. ನಟನೆ ಅಷ್ಟೇ ಅಲ್ಲದೆ ಕಾಮಿಡಿ ಜೊತೆ ಜೊತೆಗೆ ಹಲವಾರು ಹಾಡುಗಳನ್ನು ಹಾಡುವ ಮೂಲಕ ಎಲ್ಲರ ಫೇವರಿಟ್ ಪುಟಾಣಿ ನಟಿಯಾಗಿದ್ದಾಳೆ ಮಹಿತಾ.
ಇತ್ತೀಚೆಗೆ ಬಹಳ ಟ್ರೆಂಡ್‌ನಲ್ಲಿ ಇದ್ದ 'ನಾನು ನಂದಿನಿ', 'ಓನಲ್ಲ ನೀನಲ್ಲ' ಮುಂತಾದ ಹಾಡುಗಳಿಗೆ ತನ್ನದೇ ಲಿರಿಕ್ಸ್ ಸೇರಿಸಿ ಹಾಡಿ ಬಹಳಷ್ಟು ಜನಪ್ರಿಯತೆ ಗಳಿಸಿದ್ದಳು. ನಂತರ ಕನ್ನಡದ ಕ್ಲಾಸಿಕ್ ಧಾರಾವಾಹಿಗಳಲ್ಲಿ ಒಂದಾದ 'ಮೂಡಲ ಮನೆ' ಹಾಡನ್ನು ಹಾಡಿ ಆ ವಿಡಿಯೋ ಬಹಳ ವೈರಲ್ ಆಗಿತ್ತು. ಬಹಳಷ್ಟು ಕಲಾವಿದರು, ಸಾಹಿತಿಗಳು ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಈ ಹಾಡನ್ನು ಶೇರ್ ಮಾಡಿ ಶ್ಲಾಘಿಸಿದ್ದರು.
ಧಾರಾವಾಹಿ ಸೆಟ್‌ಗಳಲ್ಲಿ ನಡೆಯುವ ಕಾಮಿಡಿಯಿಂದ ಹಿಡಿದು ಹಲವಾರು ರೀಲ್ಸ್ ಅನ್ನು ಮಾಡುವ ಮೂಲಕ ತನ್ನ ಫಾಲೋವರ್ಸ್ ಅನ್ನು ಸದಾ ರಂಜಿಸುತ್ತಿರುವ ಬಾಲನಟಿ ಮಹಿತಾಗೆ 200 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಏಳ್ನೂರು ಐವತ್ತಕ್ಕೂ ಹೆಚ್ಚು ಪೋಸ್ಟ್‌ಗಳನ್ನು ಇವರ ಅಫಿಶಿಯಲ್ ಇನ್‌ಸ್ಟಾಗ್ರಾಂ ಪೇಜ್ ಹೊಂದಿವೆ. ಅಷ್ಟೇ ಅಲ್ಲದೆ ಮಹಿತಾ ಅಭಿಮಾನಿಗಳು ಹಲವಾರು ಫ್ಯಾನ್ ಪೇಜ್‌ಗಳನ್ನು ಕೂಡ ಸೃಷ್ಟಿಸಿದ್ದಾರೆ.
ಪ್ರಸ್ತುತ ಹೊಸದೊಂದು ರೀಲ್ ಮಹಿತಾ ಇನ್‌ಸ್ಟಾಗ್ರಾಂ ಅಕೌಂಟ್‌ನಿಂದ ಹೊರ ಬಂದಿದ್ದು ಬಹಳ ವೈರಲ್ ಆಗಿದೆ. ಇದರಲ್ಲಿ ಮಹಿತಾ ತಾಯಿ ತನುಜಾ ಅವರು ಓಪನ್ ಹೇರು ಬಿಟ್ಕೊಂಡು ಹಾಡಿಗೆ ತಮ್ಮದೇ ಸಾಹಿತ್ಯ ಬರೆದು ಮಗಳ ಮುಂದೆ ನಟಿಸಿದ್ದಾರೆ. ಇದಕ್ಕೆ ಸರಿಯಾಗಿ ಮಹಿತಾ ಕೂಡ ನಟಿಸಿದ್ದಾಳೆ. ಒಳ್ಳೆಯ ಮೆಸೇಜ್ ಇರುವ ಈ ಹಾಡಿನ ರೀಲ್ ಇದೀಗ ಬಹಳ ವೈರಲಾಗಿದೆ.
"ಓಪನ್ ಹೇರ್ ಬಿಟ್ಕೊಂಡು ಸ್ಲೀವ್ಲೆಸ್ ಬಟ್ಟೆ ಹಾಕ್ಕೊಂಡು ಈ ಏರಿಯಾದಲ್ಲಿ ಓಡಾಡ ಬೇಡ್ವೇ, ನಿನ್ನ ಜಡ್ಜ್ ಮಾಡ್ತಾರೆ. ಹುಡುಗಿ ಸರಿಗಿಲ್ಲ ಅಂತಾರೆ, ಸಂಸ್ಕಾರ ಕಲ್ಸಿಲ್ಲ ಅಂತಾರೆ ಶೋಕಿ ಜಾಸ್ತಿ ಅಂತಾರೆ. ಟೈಟ್ ಫಿಟ್ ಡಾರ್ಕ್ ಲಿಪ್‌ಸ್ಟಿಕ್ ಬ್ಯಾಡ.. ಗಂಡು ಬೀರಿ ಅಂತಾರೆ. ಟಾಪ್ ಟು ಬಾಟಮ್ ನೋಡ್ತಾರೆ.. ನಿನ್ನ ರೇಟ್ ಎಷ್ಟು ಕೇಳ್ತಾರೆ.. ಗಂಡ ಬಿಟ್ಟೋಳ್ ಅಂತಾರೆ" ಎಂದು ಹೆಣ್ಣು ಮಕ್ಕಳನ್ನು ಅವರ ಉಡುಗೆ ತೊಡುಗೆಯಿಂದಲೇ ಜಡ್ಜ್ ಮಾಡುವ ಸಮಾಜದ ಬಗ್ಗೆ ಬಹಳ ಫನ್ನಿ ಆಗಿ, ಆದರೆ ಒಳ್ಳೆಯ ಸಂದೇಶದೊಂದಿಗೆ ಈ ಹಾಡನ್ನು ಹಾಡಿದ್ದಾರೆ ಮಹಿತಾ ತಾಯಿ ತನುಜಾ. ತನುಜಾ ಹಾಗೂ ಮಹಿತಾ ತಾಯಿ-ಮಗಳ ಈ ಜೋಡಿಗೆ ಬಹಳಷ್ಟು ಶ್ಲಾಘನೆ ಹಾಗೂ ಮೆಚ್ಚುಗೆ ಬಂದಿದೆ. 6000ಕ್ಕೂ ಹೆಚ್ಚು ಲೈಕ್ಸ್ ಬಂದಿವೆ.
ಏಳು ವರ್ಷದ ಎಳೆ ವಯಸ್ಸಿಗೆ ಇಷ್ಟೆಲ್ಲ ಖ್ಯಾತಿಯನ್ನು ಗಳಿಸಿರುವುದು ಪುಟಾಣಿ ನಟಿ ಮಹಿತಾ ನಟನೆ ಹಾಗೂ ಕಲೆಯನ್ನು ಎತ್ತಿ ಹಿಡಿಯುತ್ತದೆ. ಈಕೆಯ ಪೋಷಕರ ಸಹಕಾರ ಪ್ರೋತ್ಸಾಹವು ಮೆಚ್ಚುಗೆಗೆ ಪಾತ್ರವಾಗುವಂತದ್ದು.
ಪ್ರಸ್ತುತ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನಾ ನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ ಬಾಲ ನಟಿ ಮಹಿತಾ. ಹೌದು, 'ನಾ ನಿನ್ನ ಬಿಡಲಾರೆ' ಎಂಬ ಟೈಟಲ್ ಅಡಿಯಲ್ಲಿ ಹೊಸ ಧಾರಾವಾಹಿ ಆರಂಭವಾಗಿದ್ದು ಇದರಲ್ಲಿ ತಾಯಿ ಇಲ್ಲದ ಮಗುವಾಗಿ ಮಹಿತಾ ನಟಿಸುತ್ತಿದ್ದಾಳೆ. ಈಗಾಗಲೇ ತನ್ನ ಸೋಶಿಯಲ್ ಮೀಡಿಯಾ ಇನ್‌ಸ್ಟಾಹಗ್ರಾಂನಲ್ಲಿಯೂ ಈ ಧಾರಾವಾಹಿಗೆ ಸಂಬಂಧಪಟ್ಟ ಒಂದಷ್ಟು ರೀಲ್ಸ್ ಗಳನ್ನು ಹಂಚಿಕೊಂಡಿರುವ ಮಹಿತ ಧಾರಾವಾಹಿಯಲ್ಲಿಯೂ ಬಹಳ ಭಾವನಾತ್ಮಕವಾಗಿ ನಟಿಸಿ ಜನಮನ ಗೆಲ್ಲುತ್ತಿದ್ದಾಳೆ.
ಈ ಧಾರಾವಾಹಿಯ ಪ್ರೋಮೋ ಬಿಟ್ಟಾಗ, ವಿಭಿನ್ನ ಕಥಾಹಂದರ ಜನರಿಗೆ ಹಿಡಿಸಿದೆ. ತಾಯಿಯನ್ನು ಕಳೆದುಕೊಂಡಿರುವ ಹಿತ ತನ್ನ ತಂದೆಯ ತಾಯಿಯನ್ನು ಕೊಂದಿದ್ದಾನೆ ಎಂದು ನಂಬಿದ್ದಾಳೆ. ಈ ಕಾರಣಕ್ಕೆ ತಂದೆಯಿಂದಲೂ ದೂರವೇ ಇದ್ದಾಳೆ. ಇದಕ್ಕೆ ಸರಿಯಾಗಿ ಪುಟಾಣಿ ಹಿಟ್ ಆಗಿ ಭಯ ಹುಟ್ಟಿಸಿ ಅವಳನ್ನು ಕಂಟ್ರೋಲ್‌ನಲ್ಲಿ ಇಟ್ಕೊಂಡಿದ್ದಾರೆ ಮನೆಯ ಕೆಲವು ಸದಸ್ಯರು. ಹೀಗೆಲ್ಲ ಇರುವಾಗ ದೇವರಂತೆ ಬಂದಿರುವ ದುರ್ಗಾ ಯಾವ ರೀತಿಯಲ್ಲಿ ಹಿತಾಳಿಗೆ ಹಿತವನ್ನು ನೀಡುತ್ತಾ ತಾಯಿಯ ಪ್ರೀತಿ ನೀಡುತ್ತಿದ್ದಾಳೆ. ಈ ರೀತಿ ಕಥೆ ಮುಂದುವರಿಯುತ್ತಿದ್ದು ಇದರಲ್ಲಿ ಮಹಿತಾ ನಟನೆಯನ್ನು ಜನ ಮೆಚ್ಚಿದ್ದಾರೆ.


Click it and Unblock the Notifications











