ಹಣದ ಆಸೆಗೆ ಬಿದ್ದ ಸಂಧ್ಯಾ, ದಿವ್ಯಾ ಇಬ್ಬರಿಗೂ ಬಿತ್ತು ಪಂಗನಾಮ!!
ಒಂದು ತಿಂಗಳಿನಲ್ಲಿ ನಿಮ್ಮ ಹಣ ಡಬಲ್ ಆಗುತ್ತದೆ. ಜೀವನದಲ್ಲಿ ದುಡಿಯಲಾರದಷ್ಟು ಹಣವನ್ನು ಕೆಲವೇ ದಿನಗಳಲ್ಲಿ ಬಡ್ಡಿ ಹಾಗೂ ಚಕ್ರಬಡ್ಡಿ ಸಮೇತ ಪಡೆಯಿರಿ ಎಂದೆಲ್ಲಾ ಕೆಲ ಚಿಟ್ ಫಂಡ್‌ಗಳು ಜನರನ್ನು ಮೋಸ ಮಾಡುತ್ತಿರುತ್ತಾರೆ. ಕೆಲ ದಿನಗಳ ಹಿಂದೆ ಇಂತಹ ಮೋಸ ಸರ್ವೇ ಸಾಮಾನ್ಯವಾಗಿ ಬಿಟ್ಟಿತು. ಜನರು ಹಣ ಡಬಲ್ ಆಗುತ್ತದೆ ಎಂದು ನಂಬಿ ಕಳೆದುಕೊಂಡಿದ್ದರು.
ಈಗ ಏನಿದ್ದರೂ ಆನ್‌ಲೈನ್ ಮೋಸ ಹೆಚ್ಚಾಗಿದೆ. ಚಿಟ್ ಫಂಡ್ ನಂಬಿ ಮೋಸ ಹೋಗುವವರ ಸಂಖ್ಯೆ ಕಡಿಮೆಯಾಗಿದ್ದು, ವಂಚಿಸುವ ಚಿಟ್ ಫಂಡ್‌ಗಳು ಕೂಡ ಮಾಯವಾಗಿವೆ. ಆದರೆ, ಇದು ಈಗ ಧಾರಾವಾಹಿಗಳಲ್ಲಿ ಮಾತ್ರವೇ ಉಳಿದುಕೊಂಡಿವೆ. ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸಂಧ್ಯಾ ತವರು ಮನೆಯಿಂದ ದತ್ತ ತಾತ ತಂದಿಟ್ಟಿದ್ದ ಹತ್ತು ಲಕ್ಷ ಹಣವನ್ನು ಕದ್ದುಕೊಂಡು ಓಡಿ ಹೋಗಿದ್ದಳು.

ನಂದಿನಿ ಹಣದ ಆಸೆಗೆ ಅತ್ತೆ ಮಾವನನ್ನು ಮನೆಯಿಂದ ಆಚೆ ಹಾಕಿದ್ದಳು. ಯಾವುದೋ ಮೇಕಪ್ ಪ್ರಾಡಕ್ಟ್ ಗಳ ಬಿಸಿನೆಸ್ ಎಂದು ಹೇಳಿ ತನ್ನ ಹಣ ಎರಡು ಪಟ್ಟಾಗಿದೆ ಎಂದು ಹೇಳಿ ಸಂಧ್ಯಾ ಬಳಿ ಇದ್ದ ಹಣಕ್ಕೂ ಕೈ ಹಾಕಿದ್ದಳು. ನಂದಿನಿಯನ್ನು ನಂಬಿದ ಸಂಧ್ಯಾ ಮೊದಲು ಮೂರು ಲಕ್ಷ ಹಣವನ್ನು ನೀಡಿದ್ದಳು. ನಂದಿನಿ ಇದರಿಂದ ಐವತ್ತು ಸಾವಿರ ಲಾಭ ತಂದುಕೊಟ್ಟಿದ್ದಳು. ಇದರಿಂದ ಖುಷಿಯಾದ ಸಂಧ್ಯಾ ಮತ್ತಷ್ಟು ಹಣ ಗಳಿಸುವ ಆಸೆಯಿಂದ ಆರೂವರೆ ಲಕ್ಷ ರೂಪಾಯಿ ಇನ್ವೆಸ್ಟ್ ಮಾಡಲು ಹೇಳಿ ಕೊಟ್ಟಿದ್ದಳು.
ಗಲಾಟೆ ಮಾಡಿದ ಅಕ್ಕ-ಪಕ್ಕದವರು
ಇತ್ತ ಸತ್ಯ ಧಾರಾವಾಹಿಯಲ್ಲಿ ದಿವ್ಯಾಳಿಗೆ ಬೇಗ ಶ್ರೀಮಂತಳಾಗಿ ಮೆರೆಯುವ ಆಸೆ ಇತ್ತು. ಆದರೆ, ಹಣವಿಲ್ಲದೇ, ಒಡವೆಗಳನ್ನು ಕೈಯಲ್ಲಿ ಹಿಡಿದುಕೊಂಡು ಗೋಳಾಡುತ್ತಿದ್ದಳು. ಅವರ ದೊಡ್ಡಪ್ಪ, ಬಾಲ ತನಗೆ ಎರಡು ಲಕ್ಷ ಮೋಸ ಮಾಡಿದ ಎಂಬ ಸಿಟ್ಟಿಗೆ ದಿವ್ಯಾಳಿಗೆ ಚಿಟ್ ಫಂಡ್‌ನಲ್ಲಿ ಹಣ ಹಾಕಿ ಡಬಲ್ ಮಾಡಿಕೊಳ್ಳುವ ಐಡಿಯಾ ನೀಡಿದ್ದ. ದಿವ್ಯಾ ಮೊದಲು ತಂದು ಕೊಟ್ಟ ಒಂದು ಲಕ್ಷ ಹಣವನ್ನು ಡಬಲ್ ಮಾಡಿ ಕೊಟ್ಟಿದ್ದ. ಬಳಿಕ ಕೊಟ್ಟ ಹಣವೂ ಡಬಲ್ ಆಗಿತ್ತು. ಇದರಿಂದ ದೊಡ್ಡಪ್ಪನನ್ನು ನಂಬಿದ ದಿವ್ಯಾ, ಕಮಿಷನ್ ಆಸೆಗೆ, ಅಕ್ಕ-ಪಕ್ಕದ ಮನೆಯವರಿಂದ ಹಣ ಪಡೆದು ಚಿಟ್ ಫಂಡ್‌ನಲ್ಲಿ ಹೂಡಿಕೆ ಮಾಡಿದ್ದಳು.
ಚಪ್ಪಡಿ ಕಲ್ಲು ಎಳೆದುಕೊಂಡ ದಿವ್ಯಾ
ಆದರೆ, ಈಗ ಚಿಟ್ ಫಂಡ್ ಕಂಪನಿ ಬಾಗಿಲು ಹಾಕಿಕೊಂಡು ಹೋಗಿದೆ. ಸ್ವಂತ ದೊಡ್ಡಪ್ಪನಿಂದಲೇ ಈಗ ದಿವ್ಯಾಳಿಗೆ ಮೋಸವಾಗಿದೆ. ಮನೆ ಮುಂದೆ ನೆರೆ-ಹೊರೆಯವರು ಬಂದು ಗಲಾಟೆ ಮಾಡುತ್ತಿದ್ದಾರೆ. ಸುಮಾರು ಇಪ್ಪತ್ತು ಲಕ್ಷ ರೂಪಾಯಿ ಮೋಸವಾಗಿರುವುದಕ್ಕೆ ಕೆಂಡಾಮಂಡಲವಾಗಿದ್ದಾರೆ. ಇನ್ನೊಂದು ದಿನದಲ್ಲಿ ಹಣ ಹಿಂದಿರುಗಿಸದಿದ್ದರೆ, ಸುಮ್ಮನೆ ಬಿಡುವುದಿಲ್ಲ ಎಂದು ವಾರ್ನಿಂಗ್ ಕೊಟ್ಟಿದ್ದಾರೆ. ದಿವ್ಯಾ ಈಗ ಸುಮ್ಮೆ ಇರಲಾರದೇ ಇರುವೆ ಬಿಟ್ಟುಕೊಂಡರು ಎಂಬಂತೆ ತನ್ನ ತಲೆಯ ಮೇಲೆ ತಾನೇ ಚಪ್ಪಡಿ ಕಲ್ಲನ್ನು ಎಳೆದುಕೊಂಡಿದ್ದಾಳೆ.

ಓಡಿ ಹೋಗಿರುವ ನಂದಿನಿ
ಇತ್ತ ಸಂಧ್ಯಾ ಕಥೆಯೂ ಇದೇ ಆಗಿದೆ. ಚಿಟ್ ಫಂಡ್ ಮೋಸ ಮಾಡಿರುವ ಸುದ್ದಿ ಪೇಪರ್‌ನಲ್ಲಿ ಬಂದಿದೆ. ಇದನ್ನು ನೋಡಿ ಸಂಧ್ಯಾ ಶಾಕ್ ಆಗಿದ್ದಾಳೆ. ನಂದಿನಿ ಮನೆ ಬಳಿ ಜನರು ಬಂದು ಗಲಾಟೆ ಮಾಡಿದ್ದಾರೆ. ಆದರೆ, ನಂದಿನಿ ಮನೆಯಲ್ಲೇ ಇಲ್ಲ. ಮಗನನ್ನು ಒಂಟಿಯಾಗಿ ಬಿಟ್ಟು ಓಡಿ ಹೋಗಿದ್ದಾಳೆ. ಒಟ್ನಲ್ಲಿ ಎರಡೂ ಧಾರಾವಾಹಿಗಳಲ್ಲಿ ಹಣದಾಸೆಗೆ ಬಿದ್ದು, ಮೋಸ ಹೋಗಿದ್ದಾರೆ. ಈಗ ದಿವ್ಯಾ ಹಾಗೂ ಸಂಧ್ಯಾ ಇಬ್ಬರನ್ನೂ ಯಾರು ಪಾರು ಮಾಡುತ್ತಾರೆ ಎಂಬ ಕುತೂಹಲ ಮೂಡಿದೆ.


Click it and Unblock the Notifications











