'ಚೋಟಾ ಚಾಂಪಿಯನ್' ಕಿರುತೆರೆ ಇತಿಹಾಸದಲ್ಲೇ ವಿಭಿನ್ನ
ಜೀ ಕನ್ನಡ ವಾಹಿನಿ ಮೊದಲಿನಿಂದಲೂ ವಿಭಿನ್ನ ಶೈಲಿಯ ಕಾರ್ಯಕ್ರಮಗಳನ್ನು ಪ್ರೇಕ್ಷಕರಿಗೆ ನೀಡುವಲ್ಲಿ ಮುಂಚೂಣಿಯಲ್ಲಿದೆ. ಪತಿ ಪತ್ನಿಯರಿಗೆ, ಅತ್ತೆ ಸೊಸೆಯಂದಿರಿಗೆ, ಹಿರಿಯರಿಗೆ, ಕಿರಿಯರಿಗೆ ಹೀಗೆ ಎಲ್ಲಾ ವರ್ಗದ ಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ಬೇರೆ ಬೇರೆ ರೀತಿಯ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ಜನ ಮನ ಗೆದ್ದಿದೆ.
ಈಗ ಜಗತ್ತಿನ ಯಾವುದೇ ಮುಗ್ಧವಾಗಿ ಆಟವಾಡುವ ಮಕ್ಕಳ ಹಾಗೂ ಪೋಷಕರ ನಡುವಿನ ಬಾಂಧವ್ಯವನ್ನು ಓರೆಗೆ ಹಚ್ಚುವ ಪ್ರಯತ್ನಕ್ಕೆ ಕೈಹಾಕಿದೆ. "ಛೋಟಾ ಚಾಂಪಿಯನ್" ಹೆಸರಿನ ಈ ಷೋನಲ್ಲಿ ತಮ್ಮ ಮಕ್ಕಳ ಮನಸ್ಸನ್ನು ಪೋಷಕರು ಎಷ್ಟರ ಮಟ್ಟಿಗೆ ಅರ್ಥ ಮಾಡಿಕೊಂಡಿರುತ್ತಾರೆ.

ಕೇವಲ 2 ರಿಂದ 3 ವರ್ಷದೊಳಗಿನ ಮಕ್ಕಳು ಮಾತ್ರ ಈ ಶೋನಲ್ಲಿ ಭಾಗವಹಿಸಲಿರುವರು. ಸೆ.14 ರಿಂದ ಪ್ರತಿ ಶನಿವಾರ ಮತ್ತು ಭಾನುವಾರಗಳಂದು ರಾತ್ರಿ 9 ಘಂಟೆಗೆ ಈ ಶೋ ಪ್ರಸಾರಗೊಳ್ಳಲಿದೆ. 3 ತಿಂಗಳ ಕಾಲ ಪ್ರದರ್ಶನಗೊಳ್ಳಲಿರುವ ಈ ಶೋಗೆ ನಡೆಸಿದ ಆಡಿಷನ್ ನಲ್ಲಿ ರಾಜ್ಯಾದ್ಯಂತ ಸುಮಾರು 150 ಕ್ಕೂ ಹೆಚ್ಚು ಮಕ್ಕಳು ಬಂದಿದ್ದಾರಂತೆ. ಅದರಲ್ಲಿ ಬುದ್ಧಿವಂತರು, ಚುರುಕಾದ 30 ಮಕ್ಕಳನ್ನು ಆಯ್ಕೆ ಮಾಡಿಕೊಂಡಿದ್ದಾರಂತೆ.
ಇದೇ ಸೆ.7 ರಿಂದ ಅಬ್ಬಾಯಿ ನಾಯ್ಡು ಸ್ಟುಡಿಯೋದಲ್ಲಿ ಚಿತ್ರೀಕರಣ ಪ್ರಾರಂಭವಾಗಿದ್ದು ಪ್ಲೇಹೋಂ ವಾತಾವರಣವನ್ನು ಮಕ್ಕಳಿಗಾಗಿಯೇ ಸೃಷ್ಟಿಸಲಾಗಿದೆ. ಒಟ್ಟು 3 ಹಂತಗಳಲ್ಲಿ ಈ ಟೆಸ್ಟ್ ಶೋ ನಡೆಯಲಿದ್ದು ಮೊದಲು ಹಾಗೂ ಎರಡನೇ ಹಂತಗಳಲ್ಲಿ ಐವರು ಪೋಷಕರು ಹಾಗು ಅವರ ಮಕ್ಕಳನ್ನು ಬಿಡಲಾಗುವುದು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ವಿದ್ಯಾರ್ಥಿ ವೇತನ, ಫಿಕ್ಸೆಡ್ ಡಿಪಾಸಿಟ್ ಹಾಕಿಸುವುದರ ಮೂಲಕ ಮಕ್ಕಳಿಗೆ ಅನುಕೂಲಕರವಾದ ಯೋಜನೆಗಳನ್ನೇ ಜೀ ವಾಹಿನಿ ಹಮ್ಮಿಕೊಂಡಿದೆ. ಇದರಲ್ಲಿ ತಂದೆ ತಾಯಿ ಮಾತ್ರವಲ್ಲದೇ ಸಹೋದರ, ಸಹೋದರಿಯರು, ಅಜ್ಜಿ, ಅಜ್ಜಂದಿರು ಕೂಡ ಭಾಗವಹಿಸಬಹುದು.
ಕಿರುತೆರೆ ಇತಿಹಾಸದಲ್ಲೇ 3 ವರ್ಷದೊಳಗಿನ ಮಕ್ಕಳಿಗಾಗಿ ನಡೆಸುತ್ತಿರುವ ಮೊದಲ ಕಾರ್ಯಕ್ರಮ ಇದಾಗಿದೆ ಎಂದು ಸೃಜನ್ ಹೇಳಿಕೊಂಡರು. ಮಕ್ಕಳ ತೊದಲ ಮಾತು, ಅಚ್ಚರಿಗೊಳಿಸುವ ಪ್ರತಿಭೆಯನ್ನು ವೀಕ್ಷಕರಿಗೆ ಪರಿಚಯಿಸಲು ಸೃಜನ್ ಕೂಡ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರಂತೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











