Drustibottu: ಅದೇ ವಾಯ್ಸ್.. ಖಡಕ್ ಲುಕ್.. ಅಬ್ಬಕ್ಕನಾಗಿ ಅಬ್ಬರಿಸಿದ ಅಂಬಿಕಾ..!
ಕೇರಳದಲ್ಲಿ ಜನಿಸಿದ ಅಂಬಿಕಾ 70-80ರ ದಶಕದಲ್ಲಿ ಕನ್ನಡ ಚಿತ್ರರಂಗವನ್ನಾಳಿದ ಮೇರು ನಟಿ. ಕನ್ನಡ, ತಮಿಳು, ತೆಲುಗುಮತ್ತು ಮಲಯಾಳಂ ಭಾಷೆಯಲ್ಲಿ ಒಳ್ಳೆಯ ಹೆಸರು ಮಾಡಿದ್ದಂತ ನಟಿ. ಕನ್ನಡದಲ್ಲಿ 'ಚಳಿ ಚಳಿ ತಾಳೆನು ಈ ಚಳಿಯ' ಅಂತ ಪಡ್ಡೆ ಹೈಕ್ಳಿಗೆ ಹೃದಯ ಬೆಚ್ಚಗಾಗಿಸಿದವರು.
ಆ ಕಾಲದಲ್ಲಿ ಅಂಬರೀಶ್ ಅವರಿಗೆ ಹೇಳಿ ಮಾಡಿಸಿದ ಜೋಡಿಯಾಗಿದ್ದರು ಅಂಬಿಕಾ. ಡಾ.ರಾಜ್‍ಕುಮಾರ್, ವಿಷ್ಣುವರ್ಧನ್ ಜೊತೆಗೂ ನಟಿಸಿ ಸೈ ಎನಿಸಿಕೊಂಡಿದ್ದವರು. ಹಲವು ವರ್ಷಗಳ ಬ್ರೇಕ್ ನಂತರ ಮತ್ತೆ ಅಂಬಿಕಾ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಕಲರ್ಸ್ ಕನ್ನಡದಲ್ಲಿ ಹೊಸದಾಗಿ ಶುರುವಾಗಿರುವ 'ದೃಷ್ಟಿಬೊಟ್ಟು' ಧಾರಾವಾಹಿ ಒಂದು ಗಟ್ಟಿ ಕಥೆಯನ್ನಿಟ್ಟುಕೊಂಡು ಬಂದಿದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದ ಕಥೆಯಾಗಿದೆ. ಸೌಂದರ್ಯವೇ ಶಾಪವಾದ ಹುಡುಗಿಯನ್ನ ಸಮಾಜದಲ್ಲಿ ಹೇಗೆ ನಡೆಸಿಕೊಳ್ಳುತ್ತಾರೆ ಎಂಬ ನೋವಿನ ಕಥೆಯಿದೆ. ಈ ಕಥೆಯಲ್ಲಿ ಅಬ್ಬಕ್ಕ ರಾಣಿಯಾಗಿ ಅಬ್ಬರಿಸುತ್ತಿರುವುದು ಎಲ್ಲರ ಅಚ್ಚುಮೆಚ್ಚಿನ ಅಂಬಿಕಾ ಅವರು.
ಧಾರಾವಾಹಿಗೆ ಉತ್ತಮ ರೆಸ್ಪಾನ್ಸ್
'ದೃಷ್ಟಿಬೊಟ್ಟು' ಧಾರಾವಾಹಿ ದತ್ತು ಭಾಯ್ ಹಾಗೂ ದೃಷ್ಟಿ ಪಾತ್ರದ ಮೇಲೆ ಕಥೆ ನಡೆಯುತ್ತದೆ. ಉತ್ತರ ಕರ್ನಾಟಕದ ಭಾಗದಲ್ಲಿ ದತ್ತು ಭಾಯ್ ಕಂಡರೆ ಹಳೇ ರೌಡಿಗಳೆಲ್ಲ ಗಢ ಗಢ ಎಂದು ನಡುಗುತ್ತಾರೆ. ರೌಡಿಗಳಿಗೆ ದೊಡ್ಡ ರೌಡಿ ದತ್ತುಭಾಯ್, ಆದ್ರೆ ಸಾಮಾನ್ಯರಿಗಲ್ಲ. ಮಾನವೀಯತೆಯ ಗುಣವೂ ದತ್ತುಭಾಯ್‌ನಲ್ಲಿ ಜಾಸ್ತಿಯೇ ಇದೆ. ಜೊತೆಗೆ ಯಾರಿಗೂ ಹೇಳಿಕೊಳ್ಳಲಾಗದ ನೋವು ಮನಸ್ಸಲ್ಲಿದೆ. ಅದು ಹಳೆಯ ಪ್ರೀತಿ.
ಮತ್ತೆ ದರ್ಶನ ಕೊಟ್ಟ ನಟಿ ಅಂಬಿಕಾ
ಅಂಬಿಕಾರನ್ನ ಮತ್ತೆ ಕಿರುತೆರೆಯಲ್ಲಿ ಕಂಡು ಮಂದಿ ಫುಲ್ ಖುಷಿಯಾಗಿದ್ದಾರೆ. ದತ್ತು ಭಾಯ್ ಅಮ್ಮನಾಗಿ, ಅಬ್ಬಕ್ಕನಾಗಿ ಬಂದಿದ್ದಾರೆ. ಅದೇ ವಾಯ್ಸ್, ನೋಟ ಮಾತ್ರ ಬೆಂಕಿ ಚೆಂಡು. ಗತ್ತು ಗಾಂಭಿರ್ಯದಿಂದ ನಡೆದು ಬರುತ್ತಿದ್ದರೆ ಎದುರಿದ್ದವರು ಸೈಡಿಗೆ ಹೋಗುತ್ತಾರೆ, ರೌಡಿಗಳೇ ಆದರೂ ನಡುಗಿ ಮೂಲೆ ಸೇರುತ್ತಾರೆ. ಅಂಥಹ ಖಡಕ್ ಪಾತ್ರದಲ್ಲಿ ಅಂಬಿಕಾ ಕಾಣಿಸಿಕೊಂಡಿದ್ದಾರೆ.

ಅಬ್ಬಕ್ಕ ಎಂದರೆ ಊರವರಿಗೆ ಭಯ
ದತ್ತುಭಾಯ್ ಕೆಟ್ಟ ಜನಗಳನ್ನ ಮಟ್ಟ ಹಾಕದೆ ಬಿಡುವುದಿಲ್ಲ. ಅದರಲ್ಲೂ ಹಳೇ ರೌಡಿಗಳಿಂದ ತನ್ನ ಊರಿಗೆ ಕಳಂಕ ಬರುವುದಕ್ಕೂ ಬಿಡುವುದಿಲ್ಲ. ಅದಕ್ಕೆ ಹಳೇ ರೌಡಿಗಳ ಪ್ರಾಣ ತೆಗೆಯುವ ಕೆಲಸ ಶುರು ಮಾಡಿದ್ದಾನೆ. ದತ್ತುಭಾಯ್ ಕೇಳುವುದು ಒಬ್ಬರದ್ದೇ ಮಾತು. ಅದು ಅಮ್ಮ ಅಬ್ಬಕ್ಕನವರದ್ದು. ಹಳೇ ರೌಡಿಗಳೆಲ್ಲಾ ಜೀವ ಉಳಿಸಿಕೊಳ್ಳಲು ದೊಡ್ಡವರ ಮನೆ ಬಳಿ ಬಂದಿದ್ದಾನೆ. ಅಬ್ಬಕ್ಕ ಎಂಟ್ರಿಯಾಗುತ್ತಿದ್ದಂತೆ ಕಾಲಿಗೆ ಬೀಳು ಹೋಗಿದ್ದಾನೆ. ಜೀವ ಉಳಿಸಿ ಎಂದು ಅಂಗಲಾಚಿದಾಗ, ಮಗನ ಬಳಿ ಮಾತನಾಡುತ್ತೇನೆ ಎಂದಿದ್ದಾರೆ.
ಮಗನನ್ನ ರೌಡಿ ಎಂದರೆ ಸಹಿಸಲ್ಲ
ಅಬ್ಬಕ್ಕನಿಗೆ ಮಗನೆಂದರೆ ಪ್ರಾಣ. ದತ್ತು ಭಾಯ್ ಅಮ್ಮನೆಂದರೆ ಭಕ್ತಿ, ಭಯ. ಹಳೆ ಹುಡುಗಿಯ ನೆನಪಲ್ಲಿ ಕುಡಿದು ನೋವು ತೋಡಿಕೊಳ್ಳುತ್ತಿದ್ದಾನೆ. ಇತ್ತ ಸಂಭ್ರಮದಲ್ಲಿ ಮಗನಿಲ್ಲವೆಂಬ ಬೇಸರ ಅಬ್ಬಕ್ಕನನ್ನು ಕಾಡಿದೆ. ಅದೇ ಸಮಯಕ್ಕೆ ದೊಡ್ಡ ಮಗಳು ಶರಾವತಿ ಬಂದು ತಮ್ಮನ ಮೇಲೆ ಬಹಳ ಪ್ರೀತಿ ಇರುವಂತೆ ನಾಟಕವಾಡಿದ್ದಾಳೆ. ಅದೇ ನಾಟಕವನ್ನು ಅಬ್ಬಕ್ಕ ಕೂಡ ನಂಬಿದ್ದಾರೆ. ಮಗನನ್ನು ನಾನೇ ಕರೆದುಕೊಂಡು ಬರುತ್ತೇನೆಂದು ಹೊರಟಿದ್ದಾರೆ. ಮಗ ಕುಡಿಯುತ್ತಾ ಕುಳಿತಿದ್ದಾಗ, ಅಬ್ಬಕ್ಕ ಸೈಲೆಂಟ್ ಆಗಿ ಅಲ್ಲಿಗೆ ಬಂದು ತನ್ನದೇ ಗತ್ತಲ್ಲಿ ಕುಳಿತಿದ್ದಾರೆ. ಊರನ್ನೆ ಎದುರಿಸುವ ದತ್ತು ಭಾಯ್ ಗೆ ಕೈ ಕಾಲು ನಡುಕ ಶುರುವಾಗಿದೆ. ಅಂಬಿಕಾ ಅವರ ಮೊದಲ ದಿನದ ಎಪಿಸೋಡಿಗೇನೆ ಜನ ಫಿದಾ ಆಗಿದ್ದಾರೆ.


Click it and Unblock the Notifications











