Lakshmi Baramma: ಕಾವೇರಿ ಪಟ್ಟ ಖುಷಿ ಪ್ರೇಕ್ಷಕರು ಕೆಂಡಾಮಂಡಲ.. ಅಂಥದ್ದೇನಿದೆ ಆ ನಗುವಿನ ಹಿಂದೆ ?
ನಗು ಮತ್ತೊಬ್ಬರಿಗೂ ನಗು ತರಿಸುವಂತೆ ಇರಬೇಕು. ಒಬ್ಬರ ನಗು ಇನ್ನೊಬ್ಬರ ನಗುವಿಗೆ ಮುಳ್ಳಾಗಬಾರದು. ಕಾವೇರಿಯ ನಗು ಅಂಥದ್ದೇ ಬೇಸರಕ್ಕೆ ಕಾರಣವಾಗಿದೆ. ಯಾವಾಗಲೂ ಸಿಡುಕುತ್ತಿದ್ದ ಕಾವೇರಿ ಈಗ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾಳೆ. ಆ ಖುಷಿಯನ್ನು ಪ್ರೇಕ್ಷಕ ಬಳಗವೇ ಸಹಿಸುತ್ತಿಲ್ಲ. ಅಂದ್ರೆ ಆ ನಗುವಿನ ಹಿಂದೆ ಅದೆಷ್ಟು ಕ್ರೌರ್ಯವಿದೆ ಎಂಬುದನ್ನು ಅರ್ಥೈಸಿಕೊಳ್ಳಿ.
ಕಾವೇರಿಗೆ ಮಗನ ಮೇಲೆ ಮೋಹವಿದೆ ಹೌದು. ಆದರೆ ಅದು ಎಷ್ಟರಮಟ್ಟಿಗೆ. ತಾನೇ ಹುಡುಕಿ ತಂದ ಸೊಸೆಯಿಂದಾನೂ ಕಾವೇರಿ ನೆಮ್ಮದಿ ಕಾಣುವುದಕ್ಕೆ ಆಗುತ್ತಿಲ್ಲ. ಅದಕ್ಕೆಲ್ಲಾ ಕಾರಣ ಕಾವೇರಿ ಯೋಚನೆ ಮಾಡುತ್ತಿರುವ ರೀತಿ, ಮಗನ ಮೇಲಿನ ಅತಿಯಾದ ವ್ಯಾಮೋಹ.

ಅಮ್ಮನಿಗೆ ಸಮಾಧಾನ ಮಾಡಿದ ವೈಷ್ಣವ್
ಲಕ್ಷ್ಮೀಯ ಮನೆ ಪರಿಸ್ಥಿತಿ ಗೊತ್ತಿದ್ದರು ಕಾವೇರಿ ಲಕ್ಷ್ಮೀಯನ್ನೇ ಬಾಯಿಗೆ ಬಂದಂಗೆ ಬೈದಿದ್ದಾಳೆ. ಇದು ವೈಷ್ಣವ್‌ಗೆ ಸಹಿಸುವುದಕ್ಕೆ ಆಗಿಲ್ಲ. ಎಲ್ಲರ ಮುಂದೆ ಮಾತನಾಡದೆ, ಸೀದಾ ಅಮ್ಮನ ರೂಮಿಗೆ ಹೋಗಿದ್ದಾನೆ. ಕೋಪದಲ್ಲಿದ್ದ ಅಮ್ಮನ ಬಳಿ ಸಮಾಧಾನವಾಗಿ ಮಾತನಾಡಿದ್ದಾನೆ. ಲಕ್ಷ್ಮೀ ಮನೆ ಪರಿಸ್ಥಿತಿ ಗೊತ್ತಿದ್ದೆ ತಾನೇ ಮದುವೆ ಮಾಡಿಕೊಂಡು ಬಂದಿರೋದು. ಮತ್ತೆ ಹಿಯಾಳಿಸುವುದು ಯಾಕೆ ಎಂದು ಪ್ರಶ್ನಿಸಿದ್ದಾನೆ. ಲಕ್ಷ್ಮೀ ಇಷ್ಟು ವರ್ಷ ಕಷ್ಟಪಟ್ಟಿದ್ದಾಳೆ. ಅಂಗಡಿಯಲ್ಲೂ ದುಡಿದಿದ್ದಾಳೆ, ದೊಡ್ಡಮ್ಮನಿಂದ ಬೈಸಿಕೊಂಡಿದ್ದಾಳೆ. ನಮ್ಮ ಮನೆಯಲ್ಲೂ ಅಂಥದ್ದೇ ಅವಮಾನವಾಗುವುದು ಬೇಡ ಎಂದಿದ್ದಾನೆ.
ವೈಷ್ಣವ್ ಮಾತು ಕೇಳಿ ಖುಷಿ ಪಟ್ಟ ಕಾವೇರಿ
ಅಮ್ಮನ ಬಳಿ ಮುಂದುವರೆದು ಮಾತನಾಡಿದ ವೈಷ್ಣವ್ ತಮ್ಮಿಬ್ಬರ ನಡುವಿನ ಬಾಂಧವ್ಯದ ಬಗ್ಗೆಯೂ ಹೇಳಿದ್ದಾನೆ. "ಕೀರ್ತಿನೇ ಎಲ್ಲಾ ಎಂದುಕೊಂಡಿದ್ದೆ. ಈಗ ಲಕ್ಷ್ಮೀ ಮೇಲೆ ಪ್ರೀತಿ ಹುಟ್ಟುತ್ತೋ ಇಲ್ವೋ ಗೊತ್ತಿಲ್ಲ. ಆದರೆ ಅವಳು ನನ್ನ ಜವಾಬ್ದಾರಿ" ಎಂದಿದ್ದಾನೆ. ಇದು ಕಾವೇರಿಗೆ ಇನ್ನಿಲ್ಲದ ಸಂತಸ ತಂದಿದೆ. ಅಂದ್ರೆ, ನೀನು ಲಕ್ಷ್ಮೀಯನ್ನು ಪ್ರೀತಿಸ್ತಾ ಇಲ್ವಾ ಎಂದಾಗ, ಇಲ್ಲ ಅಂದಿದ್ದೇ ತಡ ಹಾಲು ಕುಡಿದಷ್ಟು ಖುಷಿ ಪಟ್ಟಿದ್ದಾಳೆ. ಮಗ ಸೊಸೆಯನ್ನು ಪ್ರೀತಿಸಲ್ಲ ಎಂದು ಖುಷಿ ಪಟ್ಟಿದ್ದಾಳೆ. ಆದರೆ, ಇದು ಪ್ರೇಕ್ಷಕರಿಗೆ ಬೇಸರ ತರಿಸಿದೆ. ಕಾವೇರಿಯೇ ಮದುವೆ ಮಾಡಿ, ಈಗ ಮಗ -ಸೊಸೆ ಚೆನ್ನಾಗಿರುವುದನ್ನೇ ಸಹಿಸುತ್ತಿಲ್ಲ ಎಂದು ಬೇಸರ ಹೊರ ಹಾಕಿದ್ದಾರೆ.
ಲಕ್ಷ್ಮೀಗೆ ಕಣ್ಣೀರು ಹಾಕಿಸಿದ ವೈಷ್ಣವ್
ಕಡೆಗೂ ಅಮ್ಮನನ್ನು ಸಮಾಧಾನ ಮಾಡಿ, ತನ್ನ ರೂಮಿಗೆ ಬಂದಿದ್ದಾನೆ. ಆಗ ಲಕ್ಷ್ಮೀ ಗಾಬರಿಯಾಗಿದ್ದನ್ನು ಕಂಡು ರೇಗಿಸಿದ್ದಾನೆ. ಅಮ್ಮ ಏನಂದ್ರು ಅಂದ್ರೆ, "ನೀನು ಹೇಳಿದಂತೆಯೇ ಆಯ್ತು. ಜಗಳ ಆಯ್ತು. ನಾಳೆನೇ ನಿನ್ನ ತವರು ಮನೆಗೆ ಕಳುಹಿಸು" ಅಂದ್ರು ಎಂದಾಕ್ಷಣ ಲಕ್ಷ್ಮೀ ಕಣ್ಣೀರು ಹಾಕಿದ್ದಾಳೆ. ಅವಳ ಕಣ್ಣೀರು ಕೆಳಗೆ ಬೀಳುವಷ್ಟರಲ್ಲಿ ವೈಷ್ಣವ್ ಸತ್ಯ ಹೇಳಿ ಸಮಧಾನ ಮಾಡಿದ್ದಾನೆ.

ಕೀರ್ತಿಯಿಂದ ಡಿಸ್ಟರ್ಬ್ ಆದ ಕಾವೇರಿ
ಮಗ ಯಾವತ್ತೂ ಅಮ್ಮನನ್ನೇ ಪ್ರೀತಿ ಮಾಡುವುದು ಎಂಬುದನ್ನು ಕೇಳಿ ಕಾವೇರಿ ತುಂಬಾ ಖುಷಿಯಾಗಿದ್ದಾಳೆ. ಆ ಖುಷಿಯ ಅಲೆಯಲ್ಲಿಯೇ ತೇಲುತ್ತಿದ್ದಾಳೆ. ತಕ್ಷಣ ಕೀರ್ತಿಯ ಕಾಲ್ ಬಂದಿದೆ. ಗೊಣಕಿಕೊಂಡೆ ರಿಸೀವ್ ಮಾಡಿದ ಕಾವೇರಿಗೆ ಆ ಕಡೆಯಿಂದ ಅರಗಿಸಿಕೊಳ್ಳಲಾಗದ ಶಾಕಿಂಗ್ ನ್ಯೂಸ್ ಸಿಕ್ಕಿದೆ. "ನನ್ನ ಮತ್ತು ವೈಷ್ಣವ್ ಎಂಗೇಜ್‌ಮೆಂಟ್ ಡೇಟ್ ಅನೌನ್ಸ್ ಮಾಡ್ತಾ ಇದ್ದೀನಿ. ನಾಳೆ ಜಾಗ ನೋಡಿಕೊಂಡು ಬರೋದಕ್ಕೆ ಹೋಗ್ತಾ ಇದ್ದೀವಿ. ನೀವೂ ಮರೆಯದೇ ಬನ್ನಿ. ನಂಗೆ ಬೇರೆಯವರಿಗೆಲ್ಲಾ ಹೇಳುವುದಕ್ಕೆ ಇದೆ" ಅಂತ ಕೀರ್ತಿ ಕಾಲ್ ಕಟ್ ಮಾಡಿಯೇ ಬಿಟ್ಲು. ಕಾವೇರಿಗೆ ಏನು ಮಾಡಬೇಕು ಎಂಬುದೇ ತಿಳಿಯುತ್ತಿಲ್ಲ.


Click it and Unblock the Notifications











