Nanna Devru: ಮೂರೇ ತಿಂಗಳು ಸಮಯ, ಮದುವೆಯಾಗದಿದ್ದರೆ ಸಚ್ಚಿದಾನಂದ ಸಾವು; ಬೆಚ್ಚಿಬಿದ್ದ ರಾಜಮ್ಮ!
ಹೆಂಡತಿ ಸತ್ತ ಮೇಲೆ ಸಚ್ಚಿದಾನಂದ ಒಬ್ಬಂಟಿಯಾಗಿಯೇ ಇದ್ದಾನೆ. ಮಗಳೇ ಪ್ರಪಂಚ. ಆದರೆ ಆ ಮಗಳಿಗೆ ತಂದೆಯ ಮುಖವನ್ನು ನೀಡುವುದಕ್ಕೂ ಇಷ್ಟವಿಲ್ಲ. ಕೋಟ್ಯಾಧೀಶ್ವರ ಸಚ್ಚಿದಾನಂದ. ಕಷ್ಟ ಎಂದು ಬಂದವರಿಗೆ ಕೈಎತ್ತಿ ದಾನ ಮಾಡುತ್ತಾನೆ. ಇಡೀ ಊರಿಗೆ ಊರೇ ಅವನನ್ನ ದೇವ್ರು ಎಂದು ಪೂಜಿಸುತ್ತಾರೆ. ಆದರೆ ಮಗಳಿಗೆ ಮಾತ್ರ ತಂದೆಯ ಒಂದು ಪೈಸೆಯೂ ಬೇಡ. ಸ್ವಂತ ದುಡಿದು ಬದುಕುತ್ತೇನೆ ಎಂಬ ಹಠ.
ಎಲ್ಲರಿಗೂ ಒಳಿತನ್ನೇ ಬಯಸುವ ಸಚ್ಚಿದಾನಂದನಿಗೆ ಕಡಿಮೆ ಶತ್ರುಗಳೇನು ಇಲ್ಲ. ಮನೆಯಲ್ಲೆಲ್ಲಾ ಶತ್ರುಗಳೇ. ಒಮ್ಮೆ ಇಡೀ ಊರಿಗೆ ಊಟ ಹಾಕಿಸುವಾಗ ಸಚ್ಚಿದಾನಂದನ ಹೆಸರಿಗೆ ಮಸಿ ಬಳಿಯಲು, ಊಟದಲ್ಲಿ ವಿಷ ಬೆರೆಸಲಾಗಿತ್ತು.

ಹೀಗೆ ಬೆರೆಸಿದ ಆ ವಿಷದ ಅನ್ನವನ್ನು ತಿಂದ ಮಯೂರಿ, ಧಣಿಗಳ ಪ್ರಾಣ,ಮಾನ ಉಳಿಸಿದ್ದಳು. ಅಂದಿನಿಂದ ಸಚ್ಚಿದಾನಂದ ಕೂಡ ಅವಳಿಗೆ ಬೆಂಬಲವಾಗಿ ನಿಂತಿದ್ದಾನೆ. ಆದರೆ ಸಚ್ಚಿದಾನಂದನ ತಾಯಿ ಜಯಮ್ಮ ಇಬ್ಬರ ಮದುವೆ ಮಾಡಲು ಓಡಾಡುತ್ತಿದ್ದಾರೆ.
ಮಯೂರಿ ಜಾತಕ ತರಿಸಿಕೊಂಡ ಜಯಮ್ಮ
ಮಯೂರಿಯ ನಡೆಯನ್ನು ಕಂಡ ಜಯಮ್ಮ ಇವಳೇ ನನ್ನ ಎರಡನೇ ಸೊಸೆ ಎಂದು ಫಿಕ್ಸ್ ಆಗಿದ್ದಾಳೆ. ಸತಿ ಸಾವಿತ್ರಿ ಎಂಬುದು ಅರ್ಥವಾಗಿದೆ. ದೈವ ಲೀಲೆಯೂ ಅದೇ ಆಗಿದೆ. ಇನ್ನೇನು ಹೋಮ ಕುಂಡಕ್ಕೆ ಸಮರ್ಪಣೆ ಮಾಡಬೇಕಿತ್ತು. ಬಂದ ತೊಂದರೆಯನ್ನು ಮಯೂರಿಯೇ ಬಗೆಹರಿಸಿದಳು. ಮಯೂರಿ ಹಾಗೇ ಸಚ್ಚಿದಾನಂದ ಸೇರಿಕೊಂಡು ಸಮರ್ಪಣೆ ಮಾಡಿದರು. ಈಗ ಮಯೂರಿಯ ಮಲತಾಯಿ ಮಾಧವಿಯಿಂದ ಜಯಮ್ಮ ಜಾತಕ ತರಿಸಿಕೊಂಡಿದ್ದಾರೆ.
ಜಯಮ್ಮನಿಗಂತು ಸೊಸೆ ಬಗ್ಗೆ ಪ್ರೀತಿ
ಸಚ್ಚಿದಾನಂದನ ಜಾತಕದಲ್ಲಿ ಸಾಕಷ್ಟು ಸಮಸ್ಯೆಗಳು ಇದಾವೆ. ಅದೆಲ್ಲದಕ್ಕೂ ಪರಿಹಾರ ಮಯೂರಿಯ ಜಾತಕ. ಆಕೆಯ ಜಾತಕದಲ್ಲಿ ಮಹಾರಾಣಿ ಯೋಗ ಇದೆ. ಅಷ್ಟೇ ಅಲ್ಲ ಮಹಾನಕ್ಷತ್ರದಲ್ಲಿ ಮಯೂರಿ ಹುಟ್ಟಿರುವ ಕಾರಣ ಮದುವೆಯಾಗುವವರ ಜಾತಕದಲ್ಲಿ ಯಾವುದೇ ದೋಷವಿದ್ದರು ಅದಕ್ಕೆ ಈ ಜಾತಕ ಉತ್ತರವಾಗುತ್ತದೆ. ಇದನ್ನು ಕೇಳಿದ ರಾಜಮ್ಮನಿಗೆ ಸಂತೋಷವಾಗಿದೆ.
ಮೂರು ತಿಂಗಳ ಒಳಗೆ ಮದುವೆ
ಮಗ ಎಂದರೆ ಪ್ರಾಣವನ್ನೇ ಇಟ್ಟುಕೊಂಡಿದ್ದಾರೆ ರಾಜಮ್ಮ. ಆದರೆ ಹಲವು ಕಂಟಕಗಳು ಮಗನನ್ನು ಕಾಡುತ್ತಿರುವ ಕಾರಣ ನೊಂದುಕೊಂಡಿದ್ದಾಳೆ. ಈಗ ಅದಕ್ಕೆಲ್ಲ ಪರಿಹಾರ ಸಿಕ್ಕಿದೆ. ಆದರೂ ಇಲ್ಲಿ ಒಂದು ಸಮಸ್ಯೆ ಇದೆ. ಮಗನಿಗೆ ಮದುವೆ ಮಾಡಿಸಲೇಬೇಕು. ಮಯೂರಿ ಜೊತೆಗೆ ಮಾತ್ರ. ಅದು ಮೂರೇ ತಿಂಗಳಲ್ಲಿ ನಡೆಯಬೇಕಿದೆ. ಇಲ್ಲವಾದರೆ ಮಗನ ಸಾವು ಖಚಿತ ಎಂದು ಪುರೋಹಿತರು ತಿಳಿಸಿದ್ದಾರೆ. ಮಗನ ಸಾವನ್ನ ಯಾವ ತಾಯಿ ತಾನೇ ಸಹಿಸುತ್ತಾಳೆ. ಪುರೋಹಿತರು ಸಾವು ಎಂದಾಕ್ಷಣಾ ಜಯಮ್ಮ ಗಾಬರಿಯಾಗಿದ್ದಾರೆ.
ದೇವ್ರಿಗಾಗಿ ಯಾವ ತ್ಯಾಗಕ್ಕೂ ಸಿದ್ಧ
ಮಯೂರಿಗೆ ಈ ವಿಚಾರ ಇನ್ನು ಗೊತ್ತಿಲ್ಲ. ಮಾಧವಿಗೇನಾದರೂ ಈ ವಿಚಾರ ಗೊತ್ತಾದರೇ ಮೊದಲು ಮುಂದೆ ನಿಲ್ಲುತ್ತಾಳೆ. ದುಡ್ಡಿನ ಬಕಾಸುರಿ. ಮಯೂರಿ ಸ್ವಂತ ಮಗಳಲ್ಲ. ಹೀಗಾಗಿ ದುಡಿಯುವ ಮಾರ್ಗಕ್ಕೆ ಅವಳನ್ನೇ ಬಳಸಿಕೊಳ್ಳುತ್ತಾಳೆ. ಹಣ ಆಸೆಗೆ ಧಣಿಗಳ ಮನೆಗೆ ಮಗಳನ್ನ ಕೊಡುವುದರಲ್ಲಿ ಅನುಮಾನವಿಲ್ಲ. ಇನ್ನು ಮಯೂರಿ ಕಥೆ ಕೇಳುವಂತೆ ಇಲ್ಲ. ಧಣಿಗಳ ಪ್ರಾಣ ಉಳಿಯುತ್ತೆ ಎಂದರೆ ಯಾವ ತ್ಯಾಗಕ್ಕೂ ಸಿದ್ಧಳಾಗುತ್ತಾಳೆ. ದೇವ್ರನ್ನ ಕಾಪಾಡುವುದೇ ನನ್ನ ಕಾಯಕ ಎಂದಿದ್ದಾಳೆ. ಹೀಗಾಗಿ ಮಯೂರಿಯನ್ನು ಒಪ್ಪಿಸುವುದು ಸುಲಭದ ಕೆಲಸವೇ. ಜಯಮ್ಮ ಇದನ್ನ ಬೇಗ ಮಾಡಲೇಬೇಕಿದೆ. ಆದರೆ ಒಪ್ಪಿಸುವುದಕ್ಕೆ ಯಾವ ಕಾರಣ ಕೊಡ್ತಾರೆ ಅನ್ನೋದೆ ಮುಖ್ಯವಾಗಿದೆ.


Click it and Unblock the Notifications











