ಕಲರ್ಸ್ ಕನ್ನಡದಲ್ಲಿ ಶುರುವಾಗಲಿದೆ ಹೊಸ ಧಾರಾವಾಹಿ: ಇದು ಬೆಂಕಿಯಲ್ಲಿ ಅರಳಿದ ಹೂವಿನ ಕತೆ
ಕಿರುತೆರೆಯಲ್ಲಿ ಒಂದಕ್ಕಿಂತ ಒಂದು ವಿಭಿನ್ನ ಧಾರಾವಾಹಿಗಳು ಪ್ರಸಾರವಾಗಿ ವೀಕ್ಷಕರನ್ನು ರಂಜಿಸುತ್ತಿವೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಈಗಾಗಲೇ ಮೂಡಿ ಬರುತ್ತಿರುವ ಸಾಕಷ್ಟು ಧಾರಾವಾಹಿಗಳ ಕಥೆ ತುಂಬಾ ಚೆನ್ನಾಗಿದೆ. ಈ ವಾಹಿನಿಯಲ್ಲಿ ಇತ್ತೀಚೆಗೆ ಸಾಕಷ್ಟು ಹೊಸ ಧಾರಾವಾಹಿಗಳು ಪ್ರಾರಂಭವಾಗಿವೆ. 'ಒಲವಿನ ನಿಲ್ದಾಣ', 'ಕೆಂಡಸಂಪಿಗೆ', 'ಭಾಗ್ಯಲಕ್ಷ್ಮಿ', 'ಲಕ್ಷ್ಮಿ ಬಾರಮ್ಮ,' 'ಲಕ್ಷಣ', 'ರಾಮಾಚಾರಿ' ಧಾರಾವಾಹಿಗಳು ಕಲರ್ಸ್ ಕನ್ನಡದಲ್ಲಿ ಗಮನ ಸೆಳೆದಿವೆ.
'ಗೀತಾ' ಧಾರಾವಾಹಿ ಹಳೆಯದಾಗಿದ್ದರೂ, ನಿತ್ಯ ಕುತೂಹಲವನ್ನು ಕೆರಳಿಸುತ್ತಿದೆ. ಇನ್ನು ಇತ್ತೀಚೆಗೆ ಪ್ರಾರಂಭವಾದ 'ಭಾಗ್ಯಲಕ್ಷ್ಮೀ' ಹಾಗೂ 'ಲಕ್ಷ್ಮೀ ಬಾರಮ್ಮ' ಸೀರಿಯಲ್ ಟಾಪ್ ಸ್ಥಾನದಲ್ಲಿದೆ. ಈ ನಡುವೆಯೇ ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮತ್ತೊಂದು ಹೊಸ ಧಾರಾವಾಹಿ ಪ್ರಾರಂಭವಾಗಲು ಸಜ್ಜಾಗುತ್ತಿದೆ. ಈಗಾಗಲೇ ವಾಹಿನಿಯಲ್ಲಿ ಹೊಸ ಧಾರಾವಾಹಿಯ ಪ್ರೋಮೋ ಕೂಡ ಬಿಡುಗಡೆಯಾಗಿದೆ. ಅಪ್ಪನ ಕನಸನ್ನು ಹೊತ್ತು ನಡೆಯುತ್ತಿರುವ ಮಗಳ ಕಥೆಯ ಸೀರಿಯಲ್ ನ ಪ್ರೋಮೋ ನೋಡಿ ಪ್ರೇಕ್ಷಕರು ಖುಷಿ ಪಟ್ಟಿದ್ದಾರೆ.

'ಅಂತರಪಟ' ಎಂಬ ಹೆಸರಿನ ಈ ಹೊಸ ಧಾರಾವಾಹಿ ಶೀಘ್ರದಲ್ಲೇ ಪ್ರಸಾರವಾಗಲಿದೆ ಎಂದು ವಾಹಿನಿ ತಿಳಿಸಿದೆ. ಈ ಧಾರಾವಾಹಿಯ ಪ್ರೋಮೋ ಈಗ ಎಲ್ಲೆಡೆ ಹರಿದಾಡುತ್ತಿದೆ. ಪ್ರೋಮೋದಲ್ಲಿ ಪ್ರಸಾರವಾದಂತೆ ಧಾರಾವಾಹಿಯ ನಾಯಕಿ ತನ್ನ ಅಪ್ಪನ ಕನಸನ್ನು ನನಸು ಮಾಡಲು ಮುಂದಾಗಿದ್ದಾಳೆ. ಕಾರಣಾಂತರಗಳಿಂದ ತಂದೆಯನ್ನು ಚಿಕ್ಕ ವಯಸ್ಸಿನಲ್ಲೇ ಕಳೆದುಕೊಂಡ ನಾಯಕಿ ಮಲ-ತಂದೆಯ ನೆರಳಲ್ಲಿ ಬೆಳೆಯುತ್ತಾಳೆ. ನಾಯಕಿಯ ತಾಯಿ ಬೇರೆ ಮದುವೆಯನ್ನು ಆಗಿರುತ್ತಾಳೆ.
ಮಲ ತಂದೆ ಮಗಳನ್ನು ಚೆನ್ನಾಗಿ ನೋಡಿಕೊಳ್ಳುವುದಿಲ್ಲ. ನಿತ್ಯ ಕುಡಿದು ಸಾಲ ಮಾಡಿ ನಾಯಕಿಯ ತಲೆ ಮೇಲೆ ಎಲ್ಲಾ ಹೊರೆಯನ್ನು ಹೊರಿಸಿರುತ್ತಾನೆ. ಹೆತ್ತ ತಂದೆಯ ಕನಸಿನ ಜೊತೆಗೆ ಸಾಕು ತಂದೆಯ ಸಾಲವನ್ನು ಹೊತ್ತ ನಾಯಕಿ ಸ್ವಂತ ಉದ್ಯಮವನ್ನು ಶುರು ಮಾಡಿ ನೂರಾರು ಜನರ ಬಾಳಲ್ಲಿ ಬೆಳಕಾಗುವುದೇ ಅವಳ ಗುರಿಯಾಗಿರುತ್ತದೆ. ಈ ಪ್ರೋಮೋದಲ್ಲಿ ನಟಿ ಜ್ಯೋತಿ ಕಿರಣ್, ನಟ ಮಂಜು ಪಾವಗಡ ಕೂಡ ಕಾಣಿಸಿಕೊಂಡಿದ್ದಾರೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಮಜಾ ಭಾರತ ಕಾಮಿಡಿ ಶೋ ಕಾರ್ಯಕ್ರಮದಿಂದ ಪ್ರಸಿದ್ಧಿಯಾದವರೇ ಮಂಜು ಪಾವಗಡ. ಬಳಿಕ ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಕನ್ನಡ ಸೀಸನ್ 8 ರ ಸ್ಪರ್ಧಿಯಾಗಿ ಭಾಗವಹಿಸಿ, ವಿನ್ನರ್ ಪಟ್ಟವನ್ನು ಅಲಂಕರಿಸಿದ್ದರು. ಬಿಗ್ ಬಾಸ್ ಬಳಿಕ ಕೆಲ ಶೋಗಳಲ್ಲಿ ಹೋಸ್ಟ್ ಆಗಿ ಮತ್ತು ದಾಸಪ್ಪ ಸೇರಿದಂತೆ ಕೆಲ ಸಿನಿಮಾಗಳಲ್ಲೂ ನಟಿಸಿದ್ದರು. ಇದೀಗ ಅಂತರಪಟ ಧಾರಾವಾಹಿಯಲ್ಲಿ ನಾಯಕಿಯ ತಾಯಿಯ ಎರಡನೇ ಪತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನು 'ನಮ್ಮನೆ ಯುವರಾಣಿ' ಹಾಗೂ 'ಸಿಲ್ಲಿ ಲಲ್ಲಿ' ಖ್ಯಾತಿಯ ನಟಿ ಜ್ಯೋತಿ ಕಿರಣ್ 'ಅಂತರಪಟ' ಧಾರಾವಾಹಿಯ ನಾಯಕಿ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 'ಸಿಲ್ಲಿ ಲಲ್ಲಿ' ಧಾರಾವಾಹಿಯಲ್ಲಿ ಎರಡು ಜುಟ್ಟು ಹಾಕಿಕೊಂಡು ಸೂಜಿ ಪಾತ್ರದ ಮೂಲಕ ನಿತ್ಯ ಎಲ್ಲರನ್ನೂ ನಗಿಸುತ್ತಿದ್ದ ಜ್ಯೋತಿ ಕಿರಣ್ ಈಗ ತಾಯಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ವಯಸ್ಸಿಗೆ ಮೀರಿದ ಪಾತ್ರಗಳನ್ನು ಮಾಡುತ್ತಿದ್ದಾರೆ. ಮೈಸೂರು ಮೂಲದ ಜ್ಯೋತಿ ಕಿರಣ್, ಈಟಿವಿ ವಾಹಿನಿಯಲ್ಲಿ 'ಪಂಚರಂಗಿ' ಕಾರ್ಯಕ್ರಮ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು.
ಜ್ಯೋತಿ ಕಿರಣ್ 'ಸಿಲ್ಲಿ ಲಲ್ಲಿ', 'ಪಾಪ ಪಾಂಡು' ಧಾರಾವಾಹಿಗಳ ಮೂಲಕ ಎಲ್ಲರ ಮನ ಗೆದ್ದರು. ಬಳಿಕ ಮದುವೆ, ಮಗು, ಸಂಸಾರ ಎಂದು ಬ್ಯುಸಿಯಾಗಿದ್ದ ಜ್ಯೋತಿ ಕಿರಣ್ ಅವರು 'ನಮ್ಮ ಯುವರಾಣಿ' ಧಾರಾವಾಹಿ ಮೂಲಕ ಸೆಕೆಂಡ್ ಇನ್ನಿಂಗ್ಸ್ ಪ್ರಾರಂಬಿಸಿದರು. ತೆಲುಗು ಕಿರುತೆರೆಯಲ್ಲೂ ನಟಿಸುತ್ತಿದ್ದು, ಈಗ ಕಲರ್ಸ್ ಕನ್ನಡದ 'ಅಂತರಪಟ' ಧಾರಾವಾಹಿಗೆ ಬಣ್ಣ ಹಚ್ಚಿದ್ದಾರೆ. ಇನ್ನು ನಾಯಕಿಯ ತಂದೆ ಪಾತ್ರದಲ್ಲಿ ನಟ, ನಿರ್ದೇಶಕ ರಘುರಾಮ್ ಕಾಣಿಸಿಕೊಂಡಿದ್ದಾರೆ.


Click it and Unblock the Notifications











