ಕಿರುತೆರೆ ಧಾರಾವಾಹಿಯಲ್ಲಿ ನಟ ದರ್ಶನ್ 'ಕ್ರೇಜ್'; ಪ್ರೋಮೊ ವೈರಲ್
ಮನರಂಜನೆ ವಾಹಿನಿಗಳಲ್ಲಿ ಹಳೇ ಧಾರಾವಾಹಿಗಳು ಮುಗಿದ ಕೂಡಲೇ ಹೊಸ ಕಥೆ ಹೊತ್ತು ಹೊಸ ಧಾರಾವಾಹಿ ಪ್ರಸಾರವಾಗುತ್ತದೆ. ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮತ್ತೊಂದು ಹೊಸ ಕಥೆ ಶುರುವಾಗುತ್ತಿದೆ. ಈಗಾಗಲೇ ಪ್ರೋಮೊ ಸಹ ಬಿಡುಗಡೆ ಆಗಿ ವೈರಲ್ ಆಗುತ್ತಿದೆ.
ಪ್ರೋಮೊ ನೋಡಿ ನಟ ದರ್ಶನ್ ಅಭಿಮಾನಿಗಳು ಖುಷಿಯಾಗಿದ್ದಾರೆ. ಕಾರಣ ಅದರಲ್ಲಿ ದರ್ಶನ್ ಕ್ರೇಜ್ ದರ್ಶನ ಮಾಡಿಸಲಾಗಿದೆ. ಪ್ರಿಯಾ ಆಚಾರ್, ರಾಘು, 'ಮಿಥುನರಾಶಿ' ಧಾರಾವಾಹಿ ಖ್ಯಾತಿಯ ವೈಷ್ಣವಿ ಹಾಗೂ ವಿಕಾಸ್ ಈ ಧಾರವಾಹಿಯ ಲೀಡ್ ರೋಲ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರು ಸಹೋದರರು ಹಾಗೂ ಇಬ್ಬರು ಸಹೋದರಿಯರ ನಡುವಿನ ಪ್ರೇಮ್ ಕಹಾನಿಯೇ ಧಾರಾವಾಹಿ ಕಥೆ ಎನ್ನುವುದು ಗೊತ್ತಾಗುತ್ತಿದೆ.

ಇನ್ನು ನಾಯಕ ಹಾಗೂ ನಾಯಕಿ ಇಬ್ಬರೂ ನಟ ದರ್ಶನ್ ಅಭಿಮಾನಿಗಳು. ನೆಚ್ಚಿನ ನಟನ ಸಿನಿಮಾ ನೋಡೋಕೆ ಚಿತ್ರಮಂದಿರಕ್ಕೆ ಬಂದಾಗಲೂ ಲವ್ ಟ್ರ್ಯಾಕ್ ನಡೆಯುವಂತೆ ಪ್ರೋಮೊದಲ್ಲಿ ತೋರಿಸಲಾಗಿದೆ. 'ಗಜ' ಸಿನಿಮಾ ರೀ-ರಿಲೀಸ್ ಆಗಿ ಚಿತ್ರಮಂದಿರದ ಮುಂದೆ ಕಟೌಟ್ ಹಾಕಿ ಅಭಿಮಾನಿಗಳ ಸಂಭ್ರಮಾಚರಣೆಯನ್ನು ತೋರಿಸಲಾಗಿದೆ. ಇದು ಸಹಜವಾಗಿಯೇ ನಟ ದರ್ಶನ್ ಅಭಿಮಾನಿಗಳ ಗಮನ ಸೆಳೆದಿದೆ. ಪ್ರೊಮೊ ವೈರಲ್ ಆಗುತ್ತಿದೆ.
ಇತ್ತೀಚೆಗೆ ಭಿನ್ನ ವಿಭಿನ್ನ ಕಾನ್ಸೆಪ್ಟ್‌ಗಳಲ್ಲಿ ಕಿರುತೆರೆ ಧಾರಾವಾಹಿಗಳು ಮೂಡಿ ಬರುತ್ತವೆ. ಯಾವುದೇ ಸಿನಿಮಾಗಿಂತ ಕಮ್ಮಿ ಇಲ್ಲ ಎನ್ನುವಂತೆ ಧಾರಾವಾಹಿಗಳನ್ನು ಕಟ್ಟಿಕೊಡುತ್ತಾರೆ. ಇನ್ನು ಮೊದಲ ಪ್ರೊಮೊ ಎನ್ನುವುದು ಬಹಳ ವಿಶೇಷ. ಅದಕ್ಕಾಗಿ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡು ತಂಡಗಳು ಕೆಲಸ ಮಾಡುತ್ತವೆ. ಅದಕ್ಕಾಗಿ ಭಿನ್ನ ವಿಭಿನ್ನ ಕಾನ್ಸೆಪ್ಟ್ ಮಾಡುತ್ತಾರೆ. 'ಪ್ರೇಮಕಾವ್ಯ' ಧಾರಾವಾಹಿ ಪ್ರೊಮೊಗೆ ದರ್ಶನ್ ಕ್ರೇಜ್ ಸೇರಿಸಿದ್ದಾರೆ.
ನಾಯಕ-ನಾಯಕಿ ಕೂಡ ದರ್ಶನ್ ಅಭಿಮಾನಿಗಳು ಎನ್ನುವುದನ್ನು ಪ್ರೋಮೊದಲ್ಲಿ ಹೇಳಲಾಗಿದೆ. ಹಾಗಾಗಿ ಮುಂದೆ ಕೂಡ ದರ್ಶನ್ ರೆಫರೆನ್ಸ್ ಕಥೆಯಲ್ಲಿ ಇರುತ್ತಾ ಕಾದು ನೋಡಬೇಕಿದೆ. 'ಕಾವೇರಿ ಕನ್ನಡ ಮೀಡಿಯಂ' ಬಳಿಕ ಪ್ರಿಯಾ ಆಚಾರ್ ಮತ್ತೆ ಲಂಗಾ ದಾವಣಿಯಲ್ಲಿ ಮಿಂಚಿದ್ದಾರೆ. ಮೃಧು ಸ್ವಭಾವದ ಯುವಕನಾಗಿ ವಿಕಾಸ್ ಕಾಣಿಸಿಕೊಂಡಿದ್ದಾರೆ. ಆತನಿಗೆ ಪಟಾಕ ಹುಡುಗಿಯಾಗಿ ಚೈತ್ರಾ ಜೋಡಿಯಾಗಿದ್ದಾರೆ.
ಬಹಳ ಗಂಭೀರ, ಮಾಸ್ ವ್ಯಕ್ತಿತ್ವದ ಯುವಕನಾಗಿ ರಾಘು ಮಿಂಚಿದ್ದು ಆತನಿಗೆ ಜೋಡಿಯಾಗಿ ಮೃಧು ಸ್ವಭಾವದ ಹುಡುಗಿಯಾಗಿ ವೈಷ್ಣವಿ ಕಾಣಿಸಿಕೊಂಡಿದ್ದಾರೆ. ತಮಿಳಿನ 'ಸಿಂಧು ಭೈರವಿ' ಧಾರಾವಾಹಿ ರೀಮೆಕ್ 'ಪ್ರೇಮಕಾವ್ಯ' ಎನ್ನಲಾಗ್ತಿದೆ. ಪ್ರೋಮೊ ಅಭಿಮಾನಿಗಳಿಗೆ ಇಷ್ಟವಾಗಿದೆ. ಯಾವಾಗ ಹೊಸಕಥೆ ಆರಂಭ ಎನ್ನುವ ಬಗ್ಗೆ ಇನ್ನು ಮಾಹಿತಿ ಇಲ್ಲ. ಶೀಘ್ರದಲ್ಲಿ ಎಂದು ವಾಹಿನಿ ತಿಳಿಸಿದೆ.
ಇನ್ನು ದರ್ಶನ್ ವಿಚಾರಕ್ಕೆ ಬಂದರೆ ಸದ್ಯ 'ಡೆವಿಲ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಗಿದಿದೆ. ಸಾಂಗ್ಸ್ ಹಾಗೂ ಆಕ್ಷನ್ ಸೀಕ್ವೆನ್ಸ್ ಶೂಟ್ ಮಾಡಬೇಕಿದೆ. ಚಿತ್ರದಲ್ಲಿ ರಚನಾ ರೈ ನಾಯಕಿಯಾಗಿ ನಟಿಸುತ್ತಿದ್ದಾರೆ. ಇನ್ನುಳಿದಂತೆ ಮಹೇಶ್ ಮಂಜ್ರೇಕರ್, ಅಚುತ್ ಕುಮಾರ್, ಶರ್ಮಿಳಾ ಮಾಂಡ್ರೆ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.
ದಸರಾ ವೇಳೆಗೆ 'ಡೆವಿಲ್' ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ. ಮಿಲನಾ ಪ್ರಕಾಶ್ ಚಿತ್ರವನ್ನು ನಿರ್ಮಿಸಿ ನಿರ್ದೇಶನ ಮಾಡುತ್ತಿದ್ದಾರೆ. ಸುಧಾಕರ್ ರಾಜ್ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ. ಚಿತ್ರದಲ್ಲಿ ಮುಖ್ಯಮಂತ್ರಿಯ ಪಾತ್ರದಲ್ಲಿ ಕೂಡ ದರ್ಶನ್ ನಟಿಸುತ್ತಿದ್ದಾರೆ.
ಬೆನ್ನು ನೋವಿನ ಸಮಸ್ಯೆಯಿಂದ ದರ್ಶನ್ ಬಳಲುತ್ತಿದ್ದಾರೆ. ಹಾಗಾಗಿ ಮೊದಲು ಮಾತಿನ ಭಾಗದ ಚಿತ್ರೀಕರಣ ಮುಗಿಸಲಾಗಿದೆ. ಬೆಂಗಳೂರು, ಮೈಸೂರು ಹಾಗೂ ರಾಜಸ್ಥಾನದಲ್ಲಿ 'ಡೆವಿಲ್' ಚಿತ್ರೀಕರಣ ನಡೆದಿದೆ. ಶೀಘ್ರದಲ್ಲೇ ಸಾಂಗ್ ಶೂಟ್ ಮಾಡಲು ಚಿತ್ರತಂಡ ವಿದೇಶಕ್ಕೆ ಪ್ರಯಾಣ ಬೆಳೆಸುತ್ತಿದೆ. ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಹೆಚ್ಚು ನಿರೀಕ್ಷೆಯಿದೆ.


Click it and Unblock the Notifications











