Ramchari: ಮನೆಯವರ ಜೊತೆ ಜಗಳಕ್ಕೆ ನಿಂತ ವೈಶಾಖ: ಚಾರು ಕಳಿಸಿದ್ದ ವಿಡಿಯೋ ಬಗ್ಗೆ ಚಿಂತೆ
ಚಾರು ಮನೆಯಲ್ಲಿ ವಿಕಾಸ್ ಬಾನೇರಿಯ ಜೊತೆ ಆಕೆಯ ಎಂಗೇಜ್ಮೆಂಟ್ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಯಾವ ರೀತಿಯಲ್ಲಿ ಎಂಗೇಜ್ಮೆಂಟ್ ಮಾಡಬೇಕು ಎಂದು ಮಾನ್ಯತಾ ಹಾಗೂ ಜೈ ಶಂಕರ್ ಮಾತನಾಡುತ್ತಿದ್ದಾರೆ. ಆದರೆ ಚಾರುಗೆ ಮಾತ್ರ ಇದರ ಚಿಂತೆ ಇಲ್ಲ. ರಾಮಾಚಾರಿ ಎಂಗೇಜ್ಮೆಂಟ್ ಕಾರ್ಯಕ್ರಮಕ್ಕೆ ಬರುತ್ತಿಲ್ಲ ಅನ್ನೋದೆ ಈಗ ಆಕೆಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
ರಾಮಾಚಾರಿ ಎಂಗೇಜ್ಮೆಂಟ್‌ಗೆ ಬರುತ್ತಿಲ್ಲ ಎನ್ನುವ ಚಾರು ತನ್ನ ತಂದೆಯ ಬಳಿ ಹೇಳಿದ್ದಾಳೆ. ಇದಕ್ಕೆ ಜಯಶಂಕರ್ ಯಾಕೆ ಬರುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಅಂದು ಅವರ ಮನೆಯಲ್ಲಿ ರಾಮಾಚಾರಿಯ ಎಂಗೇಜ್ಮೆಂಟ್ ಇದೆಯಂತೆ ಎಂದು ಚಾರು ಹೇಳಿದ್ದಾಳೆ. ಇದಕ್ಕೆ ಜಯಶಂಕರ್ ನಾನು ರಾಮಾಚಾರಿಯ ಬಳಿ ಮಾತನಾಡುತ್ತೇನೆ ಎಂದು ಚಾರುಗೆ ಧೈರ್ಯ ತುಂಬಿದ್ದಾರೆ.

ಮಾನ್ಯತಾ ಮಾತ್ರ ರಾಮಾಚಾರಿ ಬರುತ್ತಿಲ್ಲ ಎಂಬ ವಿಷಯ ಕೇಳಿ ನನಗೆ ಹಾಲು ಕುಡಿದಷ್ಟು ಸಂತೋಷವಾಗಿದೆ ಎಂದು ಹೇಳುತ್ತಿದ್ದಾಳೆ. ಇದಕ್ಕೆ ಕೋಪಗೊಂಡ ಜೈ ಶಂಕರ್, ನೀನು ಸ್ವಲ್ಪ ಸುಮ್ಮನೆ ಇರು ಎಂದು ಮಾನ್ಯತಾ ಬಾಯಿ ಮುಚ್ಚಿಸಿದ್ದಾರೆ. ಆದರೆ ಮಾನ್ಯತಾ ಮಾತ್ರ ನನಗೆ ರಾಮಾಚಾರಿ ಎಂಗೇಜ್ಮೆಂಟ್ ನಡೆಸಿಕೊಡುವುದು ಸ್ವಲ್ಪವೂ ಸಹ ಇಷ್ಟವಿಲ್ಲ ಎಂದು ಹೇಳಿದ್ದಾಳೆ.
ಎಲ್ಲದಕ್ಕೂ ಜಗಳ ಮಾಡುವ ವೈಶಾಖ
ಇತ್ತ ವೈಶಾಖ, ಕೋದಂಡನನ್ನು ಮದುವೆಯಾಗಿ ಬಂದ ದಿನದಿಂದಲೂ ಸಹ ಮನೆಯಲ್ಲಿ ಅತ್ತೆಯ ಜೊತೆಯಾಗಲಿ, ನಾದಿನಿಯ ಜೊತೆಯಾಗಲಿ, ಮೈದುನನ ಜೊತೆಯಾಗಲಿ ಸರಿಯಾಗಿ ನಡೆದುಕೊಳ್ಳುತ್ತಿಲ್ಲ. ಯಾವಾಗಲೂ ಎಲ್ಲರ ಮೇಲು ದುರಹಂಕಾರದ ಮಾತುಗಳನ್ನ ಆಡುವ ಮೂಲಕ ದರ್ಪವನ್ನು ತೋರಿಸುತ್ತಿದ್ದಾಳೆ. ನಾರಾಯಣ ಆಚಾರ್ಯರು ಇದ್ದಾಗ ಮಾತ್ರ ಏನನ್ನು ಮಾತನಾಡುವುದಿಲ್ಲ.

ಜಾನಕಿ ಊಟವನ್ನು ಬಡಿಸುತ್ತಿದ್ದು ಇದೇ ವೇಳೆ ವೈಶಾಖ ಎಂದಿನಂತೆ ಖ್ಯಾತೆ ತೆಗೆದಿದ್ದಾಳೆ. ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ನೀವು ಹಚ್ಚುತ್ತೀರ ಅತ್ತೆ ಎಂದೆಲ್ಲ ಹೇಳಿದ್ದಾಳೆ. ಅತ್ತಿಗೆ ಏನಾಯಿತು ಎಂದು ರಾಮಾಚಾರಿ ಕೇಳಿದ್ದಕ್ಕೆ ನಿನಗೆ ಮಾತ್ರ ಆರು ನುಗ್ಗೆಕಾಯಿಯನ್ನು ಹಾಕಿದ್ದಾರೆ. ನನ್ನ ಗಂಡನಿಗೆ ಮೂರು ನುಗ್ಗೆಕಾಯಿ ಹಾಕಿದ್ದಾರೆ. ನನಗೆ ಇಬ್ಬರು ಎರಡು ಕಣ್ಣು ಎಂದು ಹೇಳುವವರು ಈ ರೀತಿ ಮಾಡುವುದು ಸರಿಯೇ ಎಂದು ವೈಶಾಖ ಪ್ರಶ್ನೆ ಮಾಡಿದ್ದಾಳೆ. ಇದೇ ವೇಳೆ ತಿನ್ನುವ ಅನ್ನಕ್ಕೆ ಕೈ ತೊಳೆದುಕೊಂಡು ಹೋಗಿದ್ದಾಳೆ. ಇದರಿಂದಾಗಿ ಜಾನಕಿ ಕಣ್ಣೀರನ್ನು ಹಾಕಿದ್ದಾಳೆ.
ದೀಪಾಳನ್ನು ಮದುವೆಯಾಗು ಎಂದ ಶ್ರುತಿ
ಇಷ್ಟೆಲ್ಲ ಮನೆಯಲ್ಲಿ ಅವಾಂತರ ನಡೆದ ಮೇಲೆ ಶ್ರುತಿ ತನ್ನ ಅಣ್ಣನ ಬಳಿ ಬಂದು ನೋಡು ಯಾವ ರೀತಿ ಆಗುತ್ತಿದೆ, ಇದರಲ್ಲೂ ಸಹ ನೀನು ಈ ರೀತಿ ಮಾಡಿಕೊಂಡು ಬಂದಿದ್ದೀಯಾ ಎಂದು ಹೇಳುತ್ತಾಳೆ. ಇದಕ್ಕೆ ರಾಮಾಚಾರಿ ನಾನು ಈಗಾಗಲೇ ಧರ್ಮ ಸಂಕಟದಲ್ಲಿ ಸಿಲುಕಿದ್ದೇನೆ. ನೀನು ಮತ್ತೆ ಮತ್ತೆ ಅದನ್ನೇ ಹೇಳಿ ನನಗೆ ಬೇಸರ ತರಿಸಬೇಡ ಎಂದು ಹೇಳಿದ್ದಾನೆ. ಇದಕ್ಕೆ ಶ್ರುತಿ ಕೋದಂಡ ಅಣ್ಣ ಈ ರೀತಿ ಮಾಡಿದ್ದಕ್ಕೆ ಅಮ್ಮ ಕಣ್ಣೀರು ಹಾಕುತ್ತಿದ್ದಾಳೆ. ನಿನ್ನ ವಿಚಾರ ಏನಾದರೂ ತಿಳಿದು ಹೋದರೆ ಎದೆ ಬಡಿದುಕೊಂಡು ಸತ್ತೋಗುತ್ತಾಳೆ ಎಂದು ಹೇಳಿದ್ದಾಳೆ.
ರಾಮಾಚಾರಿ ಇದರಿಂದ ಭಯಭೀತನಾಗಿ ದಯವಿಟ್ಟು ಮೊಬೈಲ್‌ನಲ್ಲಿ ಇರುವ ವಿಡಿಯೋ ಡಿಲೀಟ್ ಮಾಡು ಎಂದು ಶ್ರುತಿ ಬಳಿ ಕೇಳಿದ್ದಾನೆ. ಇದಕ್ಕೆ ಶ್ರುತಿ ಯಾವುದೇ ಕಾರಣಕ್ಕೂ ನಾನು ಮೊಬೈಲ್‌ನಲ್ಲಿ ಇರುವ ವಿಡಿಯೋವನ್ನು ಡಿಲೀಟ್ ಮಾಡುವುದಿಲ್ಲ, ನೀನು ಯಾವಾಗ ದೀಪ ಕುತ್ತಿಗೆಗೆ ತಾಳಿ ಕಟ್ಟುತ್ತಿಯೋ ಅದೇ ವೇಳೆ ನಾನು ಡಿಲೀಟ್ ಮಾಡುತ್ತೇನೆ ಎಂದು ಹೇಳಿದ್ದಾಳೆ. ಇದೆಲ್ಲವನ್ನು ಮರೆಯಲ್ಲಿ ನಿಂತು ವೈಶಾಖ ಕೇಳಿಸಿಕೊಳ್ಳುತ್ತಿದ್ದಾಳೆ.
ವೈಶಾಖಗೆ ವಿಡಿಯೋ ಬಗ್ಗೆ ಚಿಂತೆ
ಅಡ್ಡಕತ್ತರಿಯಲ್ಲಿ ಸಿಕ್ಕಿ ಹಾಕಿಕೊಂಡಿರುವ ರಾಮಾಚಾರಿ ಈಗ ಎಂಗೇಜ್ಮೆಂಟ್ ನಿಲ್ಲಿಸಲು ಆಗದೇ ಪರದಾಡುತ್ತಿದ್ದಾನೆ. ಆದರೆ ವೈಶಾಖ ಮಾತ್ರ ನನಗೆ ಚಾರು ಕಳಿಸಿದ್ದ ವಿಡಿಯೋ ಏನು ಎಂಬುದರ ಬಗ್ಗೆ ತಲೆಕೆಡಿಸಿಕೊಂಡಿದ್ದು ಶ್ರುತಿಗೂ ಅದೇ ವಿಡಿಯೋ ಹೋಗಿದೆ. ಅದಕ್ಕೆ ಅವಳು ಬೈಯುತ್ತಿದ್ದರೂ ರಾಮಾಚಾರಿ ಸುಮ್ಮನೆ ನಿಂತಿದ್ದಾನೆ ಎಂದು ಅಂದುಕೊಂಡಿದ್ದಾಳೆ.
ನಂತರ ತನ್ನ ಗಂಡನ ಬಳಿ ಹೋಗಿ ಮಾತನಾಡುತ್ತಿರುವಾಗ ಕೋದಂಡ ಸಹ ಈ ವೇಳೆ ಬುದ್ದಿ ಮಾತು ಹೇಳುತ್ತಿದ್ದಾನೆ. ನೀನು ಇವತ್ತು ಅಮ್ಮನ ಮುಂದೆ ಜಗಳಕ್ಕೆ ನಿಂತುಕೊಂಡಿದ್ದು ನನಗೆ ಯಾಕೋ ಸರಿ ಅನಿಸಲಿಲ್ಲ ಎಂದು ಹೇಳಿದ್ದಾನೆ. ಮನಸ್ಸಿನಲ್ಲಿ ವೈಶಾಖ ನನ್ನ ಗಂಡನ ಮನಸ್ಸು ಆ ಕಡೆ ವಾಲುತ್ತಿದೆ ಎಂದುಕೊಂಡು ಸುಮ್ಮನೆ ನಿಂತುಕೊಂಡಿದ್ದಾಳೆ.


Click it and Unblock the Notifications











