Bhagyalakshmi: ಶ್ರೇಷ್ಠಾಳ ನಾಟಕಕ್ಕೆ ಕುಸುಮಾ ಸೋತು ಹೋದಳು; ಏನ್ ಗುರೂ ಇದು?
ಕುಸುಮಾ ಬುದ್ದಿವಂತೆ. ಯಾವುದನ್ನು ಅಷ್ಟು ಸಲೀಸಾಗಿ ನಂಬುವುದಿಲ್ಲ. ಹಾಗೇ ಯಾರೇ ನಾಟಕವಾಡುತ್ತಿದ್ದರು, ಆ ನಾಟಕವನ್ನ ಬೇಗ ಕಂಡು ಹಿಡಿಯುತ್ತಾಳೆ ಎಂಬ ಭರವಸೆ ಇತ್ತು. ಮಾತಿನಲ್ಲೂ ಅಷ್ಟೇ ತೂಕವಾದ ಮಾತುಗಾರಿಕೆ. ಕುಸುಮಾ ಹೇಳಿದ ಮಾತಿಗೆ ಯಾರು ತುಟಿಕ್ ಪಿಟಿಕ್ ಎನ್ನುವಂತೆ ಇರಲಿಲ್ಲ. ಆದರೆ ಈಗ್ಯಾಕೋ ಸಪ್ಪೆ ಆಗ್ತಿದ್ದಾಳೆ ಕುಸುಮಾ.
ಭಾಗ್ಯಾಳನ್ನು ಬಿಡುವುದಕ್ಕಾಗಿ ತಾಂಡವ್ ಅದೆಷ್ಟು ಸಲ ಯಾಮಾರಿಸುವುದಕ್ಕೆ ಪ್ರಯತ್ನ ಪಟ್ಟನೋ. ಆದರೆ ಕುಸುಮಾ ಯಾವುದಕ್ಕೂ ಬಗ್ಗಲಿಲ್ಲ. ಈಗ ಶ್ರೇಷ್ಠಾ ಕಣ್ಣೀರಿಗೆ ಕರಗಿ ಬಿಟ್ಟಿದ್ದಾಳೆ. ಏನನ್ನೇ ಹೇಳಿದರೂ ಅದನ್ನೇ ನಂಬಿ ಹೊರಟಿದ್ದಾಳೆ.

ಒಡವೆ ಕಳ್ಳತನ ವಿಚಾರ ಬಹಿರಂಗ
ಶ್ರೇಷ್ಠಾ ಈಗಾಗಲೇ ತನ್ನ ಮದುವೆ ತಯಾರಿ ಮಾಡಿಕೊಳ್ಳುತ್ತಿದ್ದಾಳೆ. ಅದಕ್ಕೆಂದೆ ಎಲ್ಲಾ ಒಡವೆಯನ್ನು ಮತ್ತೊಮ್ಮೆ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾಳೆ. ಕಬೋಡ್ ತೆಗೆದು ಒಡವೆ ಬಾಕ್ಸ್ ನೋಡಿದ ಶ್ರೇಷ್ಠಾಗೆ ಆಘಾತವಾಗಿದೆ. ಆದರೆ ಹೆಚ್ಚು ಯೋಚನೆ ಮಾಡುವಂತೆ ಇರಲಿಲ್ಲ. ಮನೆಯಲ್ಲಿಯೇ ಸುಂದ್ರಿ ಎಂಬ ಕಳ್ಳಿ ಇದ್ದಾಳೆ ಎಂಬುದು ಅರಿವಿಗೆ ಬಂದಿದೆ. ತಕ್ಷಣ ಬಂದು ಬೆದರಿಕೆ ಹಾಕಿದಾಗಲೇ ಸತ್ಯ ಹೊರಗೆ ಬಂದಿದೆ. ಪೊಲೀಸರು ಎಂಬ ಭಯಕ್ಕೆ ಒಡವೆಯನ್ನೆಲ್ಲಾ ಜ್ಯುವೆಲ್ಲರಿ ಶಾಪ್‌ನಲ್ಲಿ ಅಡವಿಟ್ಟಿರುವ ಬಗ್ಗೆ ತಿಳಿಸಿದ್ದಾಳೆ.
ಮನೆಗೆ ಹುಡುಕಿ ಬಂದಳು ಕುಸುಮಾ
ಪಾರ್ಕ್‌ನಲ್ಲಿ ಹಣ ಕೊಡುವುದಕ್ಕೆ ಹೋಗಿ ಪೂಜಾ, ಕುಸುಮಾ ಬಳಿ ಸಿಕ್ಕಿ ಬಿದ್ದಳು. ಆಮೇಲೆ ಈ ಎಲ್ಲಾ ಕೆಲಸ ಮಾಡಿದ್ದು ಶ್ರೇಷ್ಠಾನೆ ಅಂತ ಹೇಳಿದಾಗ, ಕುಸುಮಾಗೆ ಕೋಪ ಬಂತು. ಅವಳ ಗ್ರಹಚಾರ ಬಿಡಿಸುತ್ತೀನಿ ಬಾ ಅಂತ ಪೂಜಾ ಹಾಗೂ ಸುನಂದಾಳ ಜೊತೆಗೆ ಮನೆಗೆ ಬಂದಳು. ಅಷ್ಟರಲ್ಲಾಗಲೇ ಒಡವೇ ಕಳ್ಳತನ ಆಗಿದ್ದ ಕೋಪದಲ್ಲಿ ಇದ್ದಳು. ಪೂಜಾ, ಅತ್ತೆ ಬಳಿ ಹೇಳಿದಳು. ನೀವೂ ಏನೇ ಮಾಡಿದರೂ ಅವಳು ಒಪ್ಪಿಕೊಳ್ಳುವುದಿಲ್ಲ ಎಂದಳು. ಆದರೂ ಕುಸುಮಾ ನಾನು ಗ್ರಹಚಾರ ಬಿಡಿಸುತ್ತೀನಿ ಬಾ ಎಂದೇ ಕರೆದುಕೊಂಡು ಹೋದಳು.
ಶ್ರೇಷ್ಠಾ ನಾಟಕ ಶುರು
ಅಲ್ಲಿ ಕುಸುಮಾಳ ಕೋಪ ಕಂಡು ಆರಂಭದಲ್ಲಿ ಶ್ರೇಷ್ಠಾ ಹೆದರಿದ್ದಳು. ಪೂಜಾ ಹೇಳಿದ ಮಾತು ನಿಜ ಎಂದಾಗ, ಹೌದು ಆಂಟಿ ಪೂಜಾನೆ ಕದ್ದಿದ್ದು ಆ ಹಣವನ್ನ. ನಾನೇ ಕದ್ದು ನಾನೇ ಯಾಕೆ ಸಾಲ ಕೊಡುತ್ತೀನಿ. ಮನೆಗೆ ಬಂದಾಗ ನೀವೇ ಅನ್ನ ಹಾಕಿದ್ದೀರಿ. ತಾಂಡವ್ ಸರ್ ಮನೆಗೆ ಕರೆದುಕೊಂಡು ಬಂದಾಗೆಲ್ಲಾ ಚೆನ್ನಾಗಿ ನೋಡಿಕೊಂಡಿದ್ದೀರಿ. ನೀವೂ ನನಗೆ ಅಮ್ಮನ ರೀತಿ. ಕೊಟ್ಟ ಹಣವನ್ನ ವಾಪಾಸ್ ಕೊಡಬೇಕಾಗುತ್ತೆ ಎಂಬ ಕಾರಣಕ್ಕೆ ಪೂಜಾ ಇಷ್ಟೆಲ್ಲಾ ನಾಟಕ ಆಡುತ್ತಿದ್ದಾಳೆ. ಈಗ ನೋಡಿ ನಮ್ಮ ಮನೆಯ ಒಡವೆಯನ್ನು ಕದ್ದಿದ್ದಾಳೆ. ನೀವೂ ನನಗೆ ಅಮ್ಮನ ರೀತಿ' ಎಂದಿದ್ದಾಳೆ.

ಹಣ ಇಟ್ಟು ಬಾ ಎಂದ ಕುಸುಮಾ
ಶ್ರೇಷ್ಠಾಳ ಮಾತಿಗೆ ಕುಸುಮಾ ಸೈಲೆಂಟ್ ಆಗಿ ನಿಂತು ಬಿಟ್ಟಿದ್ದಳು. ಆಮೇಲೆ ಶ್ರೇಷ್ಠಾ ನಾಟಕವನ್ನೆಲ್ಲಾ ಆಡಿ, ರೂಮಿಗೆ ಓಡಿ ಹೋದಳು. ಅದನ್ನು ಕಂಡ ಕುಸುಮಾ, ಪೂಜಾಗೆ ಬೈದಳು. ನಿನ್ನ ಕಳ್ಳತನ ಮುಚ್ಚಿಡುವುದಕ್ಕೆ ಏನೇನೋ ಸುಳ್ಳು ಹೇಳ್ತೀಯಾ. ಅಲ್ಲಿ ಹಣ ಇಟ್ಟು ಸುಮ್ಮನೆ ಬರ್ತಾ ಇರಬೇಕು ಎಂದು ಹೇಳಿ ಕುಸುಮಾ ಅಲ್ಲಿಂದ ಹೊರ ನಡೆದಳು. ಶ್ರೇಷ್ಠಾ ಹೊರಗೆ ಬಂದು ಗೆದ್ದ ಖುಷಿ ಫೀಲ್ ಮಾಡಿದಳು.


Click it and Unblock the Notifications











