'ರಾಜ ರಾಣಿ' 3ನೇ ಸೀಸನ್ ಶುರುವಾಯ್ತು; ವೇದಿಕೆ ಮೇಲೆ ಕಾಲಿಡುತ್ತಿದ್ದಂತೆ ಭಾವುಕರಾಗಿದ್ದೇಕೆ ಅದಿತಿ?
ಐಪಿಎಲ್, ಎಲೆಕ್ಷನ್ ಮುಗಿಯುತ್ತಿದ್ದಂತೆ ಮನರಂಜನಾ ವಾಹಿನಿಗಳು ಆಕ್ಟಿವ್ ಆಗಿ ಬಿಟ್ಟಿವೆ. ಹೊಸ ಶೋಗಳನ್ನು ಆರಂಭ ಮಾಡುತ್ತಿವೆ. ವೀಕ್ಷಕರನ್ನು ಮತ್ತೆ ತನ್ನತ್ತ ಸೆಳೆಯುವುದಕ್ಕೆ ಸ್ಕೆಚ್ ಹಾಕಿವೆ. ಈ ನಿಟ್ಟಿನಲ್ಲಿ ಕಲರ್ಸ್ ಕನ್ನಡದ ಜನಪ್ರಿಯ ಶೋ 'ರಾಜ ರಾಣಿ'ಯ ಮೂರನೇ ಸೀಸನ್ ಆರಂಭ ಆಗಿದೆ.
ಇಂದಿನಿಂದ (ಜೂನ್ 8) ವೀಕೆಂಡ್‌ನಲ್ಲಿ ಈ ರಿಯಾಲಿಟಿ ಶೋ 'ರಾಜ ರಾಣಿ ರೀಲೋಡೆಡ್- ಸೀಸನ್ 3' ಆರಂಭ ಆಗಿದೆ. ಕಿರುತೆರೆಯಲ್ಲಿ ವೀಕ್ಷಕರನ್ನು ರಂಜಿಸುವುದಕ್ಕೆ ಮುಂದಾಗಿದೆ. ಈ ಬಾರಿ 'ರಾಜಾ ರಾಣಿ' ಶೋನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಈ ಬಾರಿ ಡ್ಯಾನ್ಸ್ ಮೇಲೆ ಹೆಚ್ಚು ಒತ್ತು ನೀಡಲಾಗಿದೆ.

ಈ ಹಿಂದಿನ ಸೀಸನ್‌ನಂತೆ ತಮಾಷೆ, ಹರಟೆ, ಆಟ, ಭಾವನೆಗಳೆಲ್ಲಾ ಇರುತ್ತವಾದರೂ, ಈ ಸಲ ಜೋಡಿಗಳ ಡ್ಯಾನ್ಸ್ ಕೂಡ ಮಾಡುತ್ತಾರೆ. ಹೀಗಾಗಿ ವೀಕ್ಷಕರಿಗೆ ವಿಶೇಷ ಮನರಂಜನೆ ಸಿಗಬಹುದು. ಈ ಬಾರಿ ಮತ್ತೊಂದು ವಿಶೇಷ ಅಂದರೆ, ಸೃಜನ್ ಲೋಕೇಶ್, ನಟಿ ತಾರಾ ಜೊತೆಗೆ ಮೂರನೇ ತೀರ್ಪುಗಾರರಾಗಿ ಅದಿತಿ ಪ್ರಭುದೇವ ಹೊಸ ಎಂಟ್ರಿ ಕೊಟ್ಟಿದ್ದಾರೆ.
ಎಂದಿನಂತೆ ಅನುಪಮಾ ಗೌಡ 'ರಾಜ ರಾಣಿ' ಸೀಸನ್ ಮೂರನ್ನು ನಿರೂಪಣೆ ಮಾಡುತ್ತಿದ್ದಾರೆ. ರಿಯಾಲಿಟಿ ಶೋ ಮೂಲಕ ಮತ್ತೆ ಕಿರುತೆರೆಗೆ ಕಾಲಿಡುತ್ತಿರುವ ಅದಿತಿ ಪ್ರಭುದೇವ ಅವರನ್ನು ಈ ಶೋನಲ್ಲಿ ವಿಶೇಷವಾಗಿ ಸ್ವಾಗತ ಮಾಡಲಾಗಿತ್ತು. ಆ ವೇಳೆ ಅದಿತಿ ಪ್ರಭುದೇವ ಭಾವುಕರಾಗಿದ್ದಾರೆ. ಅದ್ಯಾಕೆ ಅನ್ನೋದನ್ನು ತಿಳಿಯಲು ಮುಂದೆ ಓದಿ.
'ರಾಜಾ ರಾಣಿ' ಶೋಗೆ ಇದೇ ಮೊದಲ ಬಾರಿಗೆ ಜಡ್ಜ್ ಆಗಿ ಆಗಮಿಸುತ್ತಿರುವ ಅದಿತಿ ಪ್ರಭುದೇವ ಅವರನ್ನು ಅದ್ಧೂರಿಯಾಗಿ ಸ್ವಾಗತ ಮಾಡಲಾಗಿತ್ತು. ಈ ವೇಳೆ ವೇದಿಕೆ ಮೇಲೆ ಒಂದು ವಿಡಿಯೋವನ್ನು ಪ್ಲೇ ಮಾಡಲಾಗಿತ್ತು. ಅದರಲ್ಲಿ ಅದಿತಿಯ ಪುತ್ರಿಯ ಹಸ್ತದ ಫೋಟೊ, ಮಗುವಿನ ಧ್ವನಿಯನ್ನು ಪ್ಲೇ ಮಾಡಲಾಗಿತ್ತು. ಈ ವಿಡಿಯೋ ಪ್ಲೇ ಆಗುತ್ತಿದ್ದಂತೆ ಅದಿತಿ ಭಾವುಕರಾದರು.

ಇನ್ನು ಶೋ ಕಡೆ ಬರೋದಾರೆ, ಈಗಾಗಲೇ ಹನ್ನೆರಡು ಸೆಲೆಬ್ರಿಟಿ ಜೋಡಿಗಳನ್ನು ಶೋಗೆ ಆಯ್ಕೆ ಮಾಡಲಾಗಿದೆ. ಕಿರುತೆರೆಯಿಂದ ಹಿಡಿದು ಸೋಶಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿರುವ ಬೇರೆ ಬೇರೆ ಹಿನ್ನೆಲೆಯ ಜೋಡಿಗಳನ್ನು ಈ ಶೋಗೆ ಆಯ್ಕೆ ಮಾಡಲಾಗಿದೆ. ಡಾನ್ಸ್ ಮತ್ತು ಗೇಮ್‌ಗಳ ಮೂಲಕ ಈ ಎಲ್ಲಾ ಜೋಡಿಗಳು ರಂಜಿಸಲಿದ್ದಾರೆ.
ಸೃಜನ್ ಲೋಕೇಶ್ ಬ್ಯಾನರ್‌ನಲ್ಲಿ 'ರಾಜ ರಾಣಿ' ಸೀಸನ್ 3 ಶೋ ನಿರ್ಮಾಣ ಆಗುತ್ತಿದೆ. ಜೂನ್ 8 ರಿಂದ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ ಏಳೂವರೆ ಗಂಟೆಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿದೆ. ಇಷ್ಟೇ ಅಲ್ಲದೆ ಜಿಯೋ ಆಪ್‌ನಲ್ಲಿಯೂ 'ರಾಜಾ ರಾಣಿ' ಶೋ ಅನ್ನು ವೀಕ್ಷಣೆ ಮಾಡಬಹುದಾಗಿದೆ.


Click it and Unblock the Notifications











