ನಟ ಕಿಚ್ಚ ಸುದೀಪ್ ವಿರುದ್ಧ ದೂರು ದಾಖಲು
ಬಿಗ್‌ಬಾಸ್ ಶೋ ಪದೇ ಪದೆ ವಿವಾದದ ಕೇಂದ್ರಬಿಂದುವಾಗ್ತಿದೆ. ಈಗ ಕಾರ್ಯಕ್ರಮ ನಿರೂಪಕ ಕಿಚ್ಚ ಸುದೀಪ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ. ಜೊತೆಗೆ ಅಶ್ವಿನಿ ಗೌಡ ಹಾಗೂ ಗಿಲ್ಲಿ ಮೇಲೆ ಹಲ್ಲೆ ಮಾಡಿದ ರಿಷಾ ಗೌಡ ವಿರುದ್ಧವೂ ಸಂಧಾ ಪವಿತ್ರಾ ಎಂಬುವವರು ದೂರು ನೀಡಿದ್ದಾರೆ.
ಕಿರಿತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ನಾನಾ ಕಾರಣಕ್ಕೆ ಸದ್ದು ಮಾಡುತ್ತದೆ. ಕೆಲವರು ಇಂತಹ ಶೋಗಳನ್ನು ಬ್ಯಾನ್ ಮಾಡಬೇಕು ಎನ್ನುತ್ತಾರೆ. ಇನ್ನು ಬಿಗ್‌ಬಾಸ್ ಮನೆಯಲ್ಲಿರುವ ಸ್ಪರ್ಧಿಗಳ ಮೇಲೆ ಹೊರಗಡೆ ದೂರು ದಾಖಲಾಗುವುದು ಹೊಸದೇನು ಅಲ್ಲ. ಈ ಹಿಂದೆ ವರ್ತೂರು ಸಂತೋಷ್, ತನಿಷಾ ಕುಪ್ಪಂಡ, ಇತ್ತೀಚೆಗೆ ಗಿಲ್ಲಿ, ಅಶ್ವಿನಿ ಗೌಡ ವಿರುದ್ಧ ದೂರು ದಾಖಲಾಗಿದ್ದು ಗೊತ್ತೇಯಿದೆ.

ವೀಕೆಂಡ್ ಪಂಚಾಯ್ತಿ ವೇಳೆ ರಕ್ಷಿತಾ ಶೆಟ್ಟಿ ಮೇಲೆ ಸುದೀಪ್ ಗರಂ ಆಗಿದ್ದರು. ಆಕ್ರೋಶದಿಂದ ಮಾತನಾಡಿದ್ದರು. ಇದು ಮಹಿಳೆಗೆ ಮಾಡಿದ ಅವಮಾನ, ದರ್ಪ ಎಂದು ಸಂಧಾ ಪವಿತ್ರಾ ಎಂಬುವವರು ಆರೋಪಿಸಿ ಮಹಿಳಾ ಆಯೋಗ ಹಾಗೂ ಬಿಡದಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ಕೊಡುತ್ತಿದ್ದಂತೆ ಸುದೀಪ್ ಅಭಿಮಾನಿಗಳು ನನಗೆ ಧಮ್ಕಿ ಹಾಕುತ್ತಿದ್ದಾರೆ ಎಂದು ಆಕೆ ಅಳಲು ತೋಡಿಕೊಂಡಿದ್ದಾರೆ.
ರಕ್ಷಿತಾ ಶೆಟ್ಟಿ ಅವರನ್ನು 'ಎಸ್ ಕ್ಯಾಟಗರಿ' ಎಂದು ಅಶ್ವಿನಿ ಗೌಡ ಹೇಳಿದ್ದರು. ಈ ಬಗ್ಗೆ ವಕೀಲರೊಬ್ಬರು ಈ ಹಿಂದೆ ದೂರು ನೀಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದೇ ವಿಚಾರವಾಗಿ ಸಂಧ್ಯಾ ಪವಿತ್ರಾ ಕೂಡ ಈಗ ದೂರು ನೀಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ಒಟ್ಟಾರೆ ಬಿಗ್‌ಬಾಸ್ ಸೀಸನ್ 12 ಮುಗಿಯುವ ಹೊತ್ತಿಗೆ ಇನ್ನೆಷ್ಟು ದೂರು ದಾಖಲಾಗುತ್ತದೆ ಎನ್ನುವುದು ಗೊತ್ತಿಲ್ಲ.
ಕಳೆದ ವಾರದ ರಕ್ಷಿತಾ ಶೆಟ್ಟಿ ಮೇಲೆ ಸುದೀಪ್ ಗರಂ ಆಗಿದ್ದರು. ಅದಕ್ಕೆ ಕಾರಣ ಗಿಲ್ಲಿ ಜೊತೆ ಸೇರಿ ಆಕೆ ಇರಿಟೇಟ್ ಮಾಡಿದ್ದು. ರಕ್ಷಿತಾ ಹಾಗೂ ಗಿಲ್ಲಿ ಇಬ್ಬರೂ ಬೇರೆ ಬೇರೆ ತಂಡದಲ್ಲಿದ್ದರು. ಟಾಸ್ಕ್ ವೇಳೆ ರಕ್ಷಿತಾ ಹಾಗೂ ಗಿಲ್ಲಿ ಗುಟ್ಟಾಗಿ ಮಾತನಾಡಿದ್ದರು. ಇದು ಅಶ್ವಿನಿ ಬೇಸರಕ್ಕೂ ಕಾರಣವಾಗಿತ್ತು. ರಕ್ಷಿತಾಳನ್ನು ಆಕೆಯ ತಂಡದ ವಿರುದ್ಧವೇ ಗಿಲ್ಲಿ ಎತ್ತಿಕಟ್ಟುತ್ತಿದ್ದಾರೆ ಎಂದು ಕೆಲವರು ಆರೋಪಿಸಿದ್ದರು.
ವೀಕೆಂಡ್ ಪಂಚಾಯ್ತಿಯಲ್ಲಿ ಈ ವಿಚಾರವನ್ನು ಸುದೀಪ್ ಪರೋಕ್ಷವಾಗಿ ಪ್ರಸ್ತಾಪಿಸಿದ್ದರು. ನೀವಿಬ್ರೂ ಇರಿಟೇಟ್ ಮಾಡಿದ್ರಾ ಎಂದು ಖಾರವಾಗಿಯೇ ಕೇಳಿದ್ರು. ಅದಕ್ಕೆ 'ಹೌದು' ಎಂದು ರಕ್ಷಿತಾ ಉತ್ತರಿಸಿದ್ದರು. ನಿಮ್ಮದೇ ತಂಡವನ್ನು ಯಾಕೆ ಇರಿಟೇಟ್ ಮಾಡ್ತಿದ್ದೀರಾ ಅಂದಾಗ "ನಿಮಗೆ ಯಾವಾಗ ಹಾಗೆ ಅನ್ನಿಸಿತು" ಎಂದು ರಕ್ಷಿತಾ ಕೇಳಿದ್ದರು. ಕೂಡಲೇ ಕೆಂಡಾಮಂಡಲವಾದ ಸುದೀಪ್ "ಅದೇ ಈಗ ನನ್ನ ಪಿತ್ತ ನೆತ್ತಿಗೇರಿತ್ತಲ್ಲ. ಅದಕ್ಕಿಂತ ಸ್ವಲ್ಪ ಮುಂಚೆ" ಎಂದು ತಿರುಗೇಟು ಕೊಟ್ಟಿದ್ದರು.
ಅಷ್ಟಕ್ಕೆ ಸುಮ್ಮನಾಗದ ಕಿಚ್ಚ "ನಾನು ಎರಡು ಸಲ ನಗ್ತೀನಮ್ಮ. ಒಂದು ತುಂಬಾ ನಗು ಬಂದಾಗ, ಇನ್ನೊಂದು ಏರಿದಾಗ" ಎಂದು ನಗೆ ಬೀರಿದ್ದರು. ಇದಕ್ಕೆ ಸಂಬಂಧಿಸಿದ ಪ್ರೋಮೊ ಕೂಡ ಸಖತ್ ಸದ್ದು ಮಾಡಿತ್ತು. ರಕ್ಷಿತಾ ಮೇಲೆ ಸುದೀಪ್ ಆಕ್ರೋಶ ವ್ಯಕ್ತಪಡಿಸಿದ ಬಗ್ಗೆ ಕರಾವಳಿ ಮೂಲದ ಮಹಿಳೆಯೊಬ್ಬರು ಆಕ್ರೋಶ ವ್ಯಕ್ತಪಡಿಸಿ ವೀಡಿಯೋ ಮಾಡಿದ್ದರು. ಅಶ್ವಿನಿ ವಿರುದ್ಧ ಮಾತನಾಡದ ನೀವು ರಕ್ಷಿತಾ ವಿರುದ್ಧ ಯಾಕೆ ಕೂಗಾಡುತ್ತೀರಾ? ಎಂದು ಪ್ರಶ್ನಿಸಿದ್ದರು. ಆ ವೀಡಿಯೋ ಕೂಡ ವೈರಲ್ ಆಗಿತ್ತು.
ಸದ್ಯ ಬಿಗ್‌ಬಾಸ್ 12 ಒಂದೂವರೆ ತಿಂಗಳು ಪೂರೈಸಿದೆ. ಕಳೆದ ವಾರ ಅಚ್ಚರಿ ಎನ್ನುವಂತೆ ಕಾಕ್ರೋಚ್ ಸುಧಿ ಎಲಿಮಿನೇಟ್ ಆಗಿ ಹೊರ ಬಂದಿದ್ದರು. ಈ ವಾರ ಯಾರು ಹೊರ ಬರಬಹುದು ಎನ್ನುವ ಚರ್ಚೆ ಶುರುವಾಗಿದೆ. ಸುದೀಪ್ ವಿರುದ್ಧ ದೂರು ನೀಡಿರುವ ಸಂಧ್ಯಾ ಪವಿತ್ರಾ ವಿರುದ್ಧ ಕೂಡ ಸಾಕಷ್ಟು ಆರೋಪಗಳಿವೆ. ಧರ್ಮಸ್ಥಳದ ಸೌಜನ್ಯಾ ಹೆಸರಿನಲ್ಲಿ ಹೆಲ್ಪ್‌ಲೈನ್ ತೆರೆದು ಅಸಹಾಯಕರಿಗೆ ಸಹಾಯ ಮಾಡುವುದಾಗಿ ಹೇಳಿ ವ್ಯಕ್ತಿಯೊಬ್ಬರಿಂದ ಹಣ ಪಡೆದು ವಂಚಿಸಿರುವ ಆರೋಪ ಇದೆ. ಈ ಸಂಬಂಧ ದೂರು ಸಹ ದಾಖಲಾಗಿತ್ತು.
ನಿರುದ್ಯೋಗಿಗಳನ್ನು ಗುರಿಯಾಗಿಸಿಕೊಂಡು ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ಸಂಧ್ಯಾ ಪವಿತ್ರಾ ವಂಚಿಸಿದ್ದಾರೆ ಎನ್ನುವ ಆರೋಪ ಕೂಡ ಇದೆ. ನಲಪ್ಪಾಡ್ ಕೂಡ ಈಕೆಯನ್ನು ಯಾರು ನಂಬಬೇಡಿ ಎಂದು ಇಂಡಿಯಾ ಟುಡೇಗೆ ತಿಳಿಸಿದ್ದರು. ಹೀಗೆ ಸಾಕಷ್ಟು ಆರೋಪಗಳನ್ನು ಎದುರಿಸುತ್ತಿರುವ ಸಂಧ್ಯಾ ಈಗ ಸುದೀಪ್ ವಿರುದ್ಧ ದೂರು ನೀಡಿರುವುದು ಪ್ರಚಾರದ ಗಿಮಿಕ್ ಎಂದು ಕೆಲವರು ಆರೋಪಿಸುತ್ತಿದ್ದಾರೆ.


Click it and Unblock the Notifications











