ರೀಲ್ಸ್ ಮಾಡಿ ಎಡವಟ್ಟು; ಬಿಗ್‌ಬಾಸ್ ಮಾಜಿ ಸ್ಪರ್ಧಿಗಳಾದ ಕಿಶನ್, ನಿವೇದಿತಾ ವಿರುದ್ಧ ದೂರು
ಕನ್ನಡ ಬಿಗ್‌ಬಾಸ್ ಸ್ಪರ್ಧಿಗಳು ಒಂದಿಲ್ಲೊಂದು ಸಂಕಷ್ಟಕ್ಕೆ ಸಿಲುಕುತ್ತಲೇ ಇದ್ದಾರೆ. ಈ ಹಿಂದೆ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದ ವಿನಯ್ ಹಾಗೂ ರಜತ್ ವಿರುದ್ಧ ದೂರ ದಾಖಲಾಗಿ ಇಬ್ಬರನ್ನು ಪೊಲೀಸರು ಬಂಧಿಸುವಂತಾಗಿತ್ತು. ಪೆಟ್ರೋಲ್ ಬಾಂಬ್ ಸಿಡಿಸಿ ರೀಲ್ಸ್ ಮಾಡಿದ್ದ ರಜತ್ ವಿರುದ್ಧ ಮತ್ತೊಂದು ದೂರು ದಾಖಲಾಗಿತ್ತು. ಇದೀಗ ನವಿಲು ಗರಿ ಉಡುಪು ಧರಿಸಿ ಡ್ಯಾನ್ಸ್ ಮಾಡಿದ್ದ ಬಿಗ್‌ಬಾಸ್ ಮಾಜಿ ಸ್ಪರ್ಧಿಗಳಾದ ಕಿಶನ್ ಬಿಳಗಲಿ ಹಾಗೂ ನಿವೇದಿತಾ ಗೌಡ ವಿರುದ್ದ ದೂರು ದಾಖಲಾಗಿದೆ.
ಎರಡು ದಿನಗಳ ಹಿಂದೆ ಕಿಶನ್ ಹಾಗೂ ನಿವೇದಿತಾ ಕಲರ್‌ಫುಲ್ ಕಾಸ್ಟ್ಯೂಮ್ಸ್ ಧರಿಸಿ ಬಿಂದಾಸ್ ಡ್ಯಾನ್ಸ್ ಮಾಡಿ ರಂಗೇರಿಸಿದ್ದರು. 'ಕಲಾವಿದ' ಚಿತ್ರದ 'ಹೇ ನವಿಲೆ' ಹಾಡಿಗೆ ಹೆಜ್ಜೆ ಹಾಕಿದ್ದರು. ಇಬ್ಬರೂ ಥೇಟ್ ನವಿಲುಗಳ ರೀತಿ ಡಿಸೈನ್ ಮಾಡಿದ್ದ ಉಡುಪು ಧರಿಸಿದ್ದರು. ಗಂಡು ನವಿಲಿನ ರೀತಿ ಸಾಕಷ್ಟು ನವಿಲು ಗರಿಗಳಿರುವ ಉಡುಪಿನಲ್ಲಿ ಕಿಶನ್ ಮಿಂಚಿದ್ದರು. ಸದ್ಯ ಈ ಸಂಬಂಧ ಅರಣ್ಯ ಇಲಾಖೆಗೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ದೂರು ನೀಡಿ ಇಬ್ಬರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಗರಿಗಳಿಗಾಗಿ ನವಿಲುಗಳ ಅಕ್ರಮ ಬೇಟೆ, ಕಳ್ಳಸಾಗಾಣಿಕೆ ಮಾಡಲಾಗುತ್ತದೆ. ಇದೇ ರೀತಿ ನವಿಲಿನ ಬೇಟೆಯಾಡಿ ಕಿತ್ತು ತಂಡ ನವಿಲು ಗರಿಗಳನ್ನು ಬಳಸಿ ಈ ಉಡುಪು ತಯಾರಿಸಿಲಾಗಿಯೇ? ಎನ್ನುವ ಚರ್ಚೆ ಶುರುವಾಗಿದೆ. ಕಿಶನ್ ಹಾಗೂ ನಿವೇದಿತಾ ಡ್ಯಾನ್ಸ್ ವಿಡಿಯೋ ವೈರಲ್ ಆಗುತ್ತಿದ್ದಂತೆ ಕೆಲವರು ಕಾಮೆಂಟ್ ಮಾಡಿ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇದು ಸರಿಯಲ್ಲ ಎಂದು ವಾದಿಸಿದ್ದರು. ಕ್ರಮಕ್ಕೆ ಆಗ್ರಹಿಸಿದ್ದರು. ಈಗ ಇದೇ ವಿಚಾರದ ಸಂಬಂಧ ದೂರು ದಾಖಲಾಗಿದೆ.
ಕಗ್ಗಲಿಪುರ ಅರಣ್ಯ ವಲಯ ಅಧಿಕಾರಿಗಳಿಗೆ ದಿನೇಶ್ ಕಲ್ಲಹಳ್ಳಿ ದೂರು ನೀಡಿದ್ದಾರೆ. ನವಿಲು ಗರಿಗಳನ್ನು ಬಳಸಿ ಉಡುಪುಗಳನ್ನು ತಯಾರಿಸುವುದು, ಅದನ್ನು ಸಾರ್ವಜನಿಕವಾಗಿ ಪ್ರದರ್ಶನ ಮಾಡುವುದು ಹಾಗೂ ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ವನ್ಯಜೀವಿ (ಸಂರಕ್ಷಣಾ) ಕಾಯ್ದೆ, 1972ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅವರು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ಕಿಶನ್ ಹಾಗೂ ನಿವೇದಿತಾ ಧರಿಸಿರುವ ಉಡುಪಿನಲ್ಲಿ ಬಳಸಲಾದ ಗರಿಗಳು ನೈಜವಾಗಿಯೇ ಅಥವಾ ಕೃತಕವೇ ಎಂದು ವೈಜ್ಞಾನಿಕವಾಗಿ ಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ.
ನಿಜವಾದ ನವಿಲು ಗರಿಗಳನ್ನು ಬಳಸಿ ಈ ಉಡುಪು ಸಿದ್ಧಪಡಿಸಿದ್ದರೆ ಕೂಡಲೇ ವಶಕ್ಕೆ ಪಡೆಯಬೇಕು. ಆ ನವಿ ಗರಿಗಳ ಮೂಲ, ಯಾರು ಮಾರಾಟ ಮಾಡಿದರು, ಹೇಗಿ ಸಿಕ್ತು ಎನ್ನುವ ಬಗ್ಗೆ ತನಿಖೆ ನಡೆಯಬೇಕು. ನವಿಲು ಗರಿಗಳನ್ನು ಪೂರೈಕೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ದಿನೇಶ್ ಕಲ್ಲಹಳ್ಳಿ ತಮ್ಮ ದೂರಿನಲ್ಲಿ ಆಗ್ರಹಿಸಿದ್ದಾರೆ. ಈ ಹಿಂದೆ ವರ್ತೂರ್ ಸಂತೋಷ್ ಬಿಗ್‌ಬಾಸ್ ಮನೆಯೊಳಗೆ ಇದ್ದಾಗಲೇ ಹುಲಿ ಉಗುರು ಪ್ರಕರಣದಲ್ಲಿ ಜೈಲು ಸೇರುವಂತಾಗಿದ್ದು ಗೊತ್ತೇಯಿದೆ. ಹುಲಿ ಉಗುರಿನ ಲಾಕೆಟ್ ಧರಿಸಿದ್ದ ಕಲಾವಿದರ ಮನೆಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು.
ವಿರೋಧ ಹೆಚ್ಚಾಗುತ್ತಿದಂತೆ ಕಿಶನ್ ಹಾಗೂ ನಿವೇದಿತಾ ತಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್‌ನಿಂದ ಡ್ಯಾನ್ಸ್ ವೀಡಿಯೋ ಡಿಲೀಟ್ ಮಾಡಿದ್ದಾರೆ. ಬಿಗ್‌ಬಾಸ್ ಮನೆಯಿಂದ ಹೊರಬಂದಮೇಲೆ ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ಕಿಶನ್ ತಮ್ಮ ಡ್ಯಾನ್ಸ್ ಮೂಲಕ ಗಮನ ಸೆಳೆಯುತ್ತಿದ್ದಾರೆ. ಸಾಕಷ್ಟು ನಟಿಯರ ಜೊತೆ ಭಿನ್ನ ವಿಭಿನ್ನ ಕಾನ್ಸೆಪ್ಟ್‌ನಲ್ಲಿ ಡ್ಯಾನ್ಸ್ ಮಾಡಿ ವೀಡಿಯೋ ಶೇರ್ ಮಾಡುತ್ತಾರೆ. ನಿವೇದಿತಾ ಕೂಡ ವಿಭಿನ್ನ ರೀತಿಯ ರೀಲ್ಸ್, ಫೋಟೊಸ್ ಹಂಚಿಕೊಳ್ಳುತ್ತಾರೆ. 20 ಲಕ್ಷಕ್ಕೂ ಹೆಚ್ಚು ಜನ ಆಕೆಯ ಇನ್‌ಸ್ಟಾ ಅಕೌಂಟ್ ಫಾಲೋ ಮಾಡುತ್ತಿದ್ದಾರೆ.


Click it and Unblock the Notifications