ಸಂಸ್ಕ್ರತಿ -ಸಂಪ್ರದಾಯಕ್ಕೆ ಧಕ್ಕೆ ; ಬಿಗ್ ಬಾಸ್ ಬ್ಯಾನ್ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ
ನಿಜಾ.. ''ಬಿಗ್ ಬಾಸ್'' ಕಾರ್ಯಕ್ರಮದ ಕುರಿತು ಸಾರ್ವತ್ರಿಕ ವಲಯದಲ್ಲಿ ಅಸಮಾಧಾನ ಅಸಹನೆಯ ಅಲೆ ಮೊದಲಿಂದ ಇದ್ದೇ ಇದೆ. ಆದರೂ ಕೂಡ ''ಬಿಗ್ ಬಾಸ್'' ಭಾರತದ ಜನಪ್ರಿಯ ಕಾರ್ಯಕ್ರಮದಲ್ಲೊಂದು. ಅದರಲ್ಲಿ ದೂಸ್ರಾ ಮಾತಿಲ್ಲ. ಪ್ರತಿ ವರ್ಷ ಜೂನ್‌ನ ನಂತರ ದಿನ ನಿತ್ಯ ಬಹುದೊಡ್ಡ ವರ್ಗ ಈ ಕಾರ್ಯಕ್ರಮವನ್ನು ನೋಡುತ್ತಲೇ ಬೈಯುತ್ತೆ. ಬೈಯುತ್ತಲೇ ನೋಡುತ್ತೆ.
ಇಂಥಾ ''ಬಿಗ್ ಬಾಸ್'' ಕಾರ್ಯಕ್ರಮವನ್ನು ಕೆಲ ಒಮ್ಮೆ ಕೆಲವೊಂದು ಸಾರಿ ವಿಧಿಯಿಲ್ಲದೆ ನೋಡುವ ಸಂದರ್ಭ ಒದಗಿ ಬಿಡುತ್ತೆ. ಆಗ ಈ ದೊಡ್ಡ ಮನೆಯ ಹಲವು ಸಂಗತಿಗಳು ಚರ್ಚೆಗೆ ನಾಂದಿಯನ್ನು ಹಾಡುತ್ತಾವೆ. ಸಮಾಜಕ್ಕೆ ಈ ಕಾರ್ಯಕ್ರಮ ಕೊಡುತ್ತಿರುವ ಸಂದೇಶವಾದರೂ ಏನು ಎನ್ನುವ ಪ್ರಶ್ನೆ ಏಕಾಏಕಿ ಹಲವರನ್ನು ಕಾಡಲು ಶುರುವಾಗುತ್ತೆ.

ಕುಟುಂಬ ಸಮೇತ ನೋಡುವ ಪ್ರೇಕ್ಷಕರು ಕೂಡ ಈ ಕಾರ್ಯಕ್ರಮದ ಕುರಿತು ಅಪಸ್ವರ ತೆಗೆಯುತ್ತಾರೆ. ಕಾರ್ಯಕ್ರಮದಿಂದ ಮುಜುಗರಕ್ಕೀಡಾಗುತ್ತಾರೆ. ತಮ್ಮ ಆಕ್ರೋಶವನ್ನೂ ಕೂಡ ಹೊರ ಹಾಕುತ್ತಾರೆ. ತಮಿಳಿನ ''ಬಿಗ್ ಬಾಸ್'' ಕಾರ್ಯಕ್ರಮದ ವಿಚಾರದಲ್ಲಿ ಸದ್ಯ ಇದೇ ಆಗುತ್ತಿದೆ.
ಹೌದು, ವಿಜಯ್ ಸೇತುಪತಿಯ ಈ ಬಾರಿಯ ''ಬಿಗ್ ಬಾಸ್''ನಲ್ಲಿ ಸ್ಫರ್ಧಿಗಳ ನಡುವೆ ಮಾತಿನ ಚಕಮಕಿ ಮಾತ್ರ ನಡೆಯುತ್ತಿಲ್ಲ. ಬದಲಿಗೆ ನಾನಾ-ನೀನಾ ಅಂತ ಕೈ ಕೈ ಮಿಲಾಯಿಸುತ್ತಿದ್ದಾರೆ. ಇಷ್ಟೇ ಅಲ್ಲ ಮನೆಯಲ್ಲಿ ಮಹಿಳಾ ಸ್ಫರ್ಧಿಗಳನ್ನು ತಬ್ಬಿಕೊಳ್ಳುತ್ತಿದ್ದಾರೆ. ಮನೆಯ ಕಂಡ ಕಂಡಲೆಲ್ಲಾ ಕ್ಯಾಮರಾಗಳಿವೆ ಎನ್ನುವ ಪರಿಜ್ಞಾನವೂ ಇಲ್ಲದೆ ಮುತ್ತಿನ ಮಳೆ ಸುರಿಸುತ್ತಿದ್ದಾರೆ. ಇವರ ಹಾವ-ಭಾವ ನೋಡಲು ಎರಡು ಕಣ್ಣು ಸಾಲುತ್ತಿಲ್ಲ.
ಹೀಗಾಗಿಯೇ ''ಬಿಗ್ ಬಾಸ್'' ವಿರುದ್ಧ ಈಗ ತಮಿಳುನಾಡಿನಲ್ಲಿ ಆಕ್ರೋಶದ ಅಲೆ ಎದ್ದಿದೆ. ಸ್ಫರ್ಧಿಗಳು ಮಾಡುವ ಈ ತಪ್ಪಿಗೆ ಕಾರ್ಯಕ್ರಮದ ನಿರೂಪಕ ವಿಜಯ್ ಸೇತುಪತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ಧಾರೆ.
ಇಷ್ಟೇ ಅಲ್ಲ ''ಬಿಗ್ ಬಾಸ್'' ವಿಚಾರದಲ್ಲಿ ಪಕ್ಕದ ಮನೆಯಲ್ಲಿ ಈಗ ರಾಜಕೀಯ ಕೂಡ ಶುರುವಾಗಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ನಿನ್ನೆ (ನವೆಂಬರ್ 10 ) ''ಬಿಗ್ ಬಾಸ್'' ಕಾರ್ಯಕ್ರಮದಿಂದ ತಮಿಳುನಾಡಿನ ಸಂಸ್ಕ್ರತಿ - ಸಂಪ್ರದಾಯಕ್ಕೆ ಧಕ್ಕೆಯಾಗುತ್ತಿದೆ. ಕುಟುಂಬ ಸಮೇತ ನೋಡುವ ಪ್ರೇಕ್ಷಕರಿಗೆ ಈ ಕಾರ್ಯಕ್ರಮದಿಂದ ಮುಜುಗರವಾಗುತ್ತಿದೆ ಎಂದು ಆರೋಪಿಸಿ ''ಬಿಗ್ ಬಾಸ್'' ಚಿತ್ರೀಕರಣ ನಡೆಯುವ ವೇಲ್ಸ್ ಫಿಲ್ಮ್ ಸಿಟಿಯ ಬಳಿ ಪ್ರತಿಭಟನೆ ನಡೆದಿದೆ. ಆಡಳಿತರೂಢ ಡಿಎಂಕೆಯ ಮಿತ್ರ ಪಕ್ಷ ತಮಿಳಗ ವಾಳ್ವುರಿಮೈ ಕಚ್ಚಿ (ಟಿವಿಕೆ) ಪಕ್ಷ ಪ್ರತಿಭಟನೆ ನಡೆಸಿದೆ. ವಿಜಯ್ ಸೇತುಪತಿ ಅವರ ಪ್ರತಿಕೃತಿಯನ್ನು ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದೆ.

ಈ ಕುರಿತು ತಮ್ಮ ಆಕ್ರೋಶವನ್ನು ಹೊರ ಹಾಕಿರುವ ಟಿವಿಕೆ ನಾಯಕ ಮತ್ತು ಶಾಸಕ ವೇಲುಮುರುಗನ್, ''ಬಿಗ್ ಬಾಸ್'' ಕಾರ್ಯಕ್ರಮ ಅಸಹ್ಯದ ಪರಮಾವಧಿ ತಲುಪಿದೆ ಎಂದು ಹೇಳಿದ್ದಾರೆ. ಮನೆಯಲ್ಲಿ ಲಿಪ್ ಕಿಸ್ ಮಾಡಲಾಗುತ್ತಿದೆ, ಮಲಗುವ ಕೋಣೆಯಲ್ಲಿ ಹುಡುಗ-ಹುಡುಗಿ ತಬ್ಬಿಕೊಂಡು ಮಲಗಿರುವ ದೃಶ್ಯಗಳನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ಹೇಳಿರುವ ವೇಲು ಮುರುಗನ್ ತಮಿಳು ಸಂಸ್ಕ್ರತಿ ಸಂಪ್ರದಾಯ ಹಾಳಾದರೂ ಇವರಿಗೆ ಚಿಂತೆ ಇಲ್ಲ ಎಂಬಂತೆ ಕಾರ್ಯಕ್ರ ನಡೆಸಿಕೊಡಲಾಗುತ್ತಿದೆ ಎಂದು ಕಿಡಿ ಕಾರಿದ್ದಾರೆ.
ಕಾರ್ಯಕ್ರಮ ನೋಡುತ್ತಿದ್ದರೆ ಇವರಿಗೆ ಹಣವೇ ಮುಖ್ಯ ಎಂದು ಅನಿಸುತ್ತೆ, ಆದರೆ ನಮಗೆ ನಮ್ಮ ಸಂಸ್ಕ್ರತಿ ಮತ್ತು ಸಂಪ್ರದಾಯ ಮುಖ್ಯ ಎಂದು ಹೇಳಿರುವ ವೇಲುಮುರುಗನ್ ''ಬಿಗ್ ಬಾಸ್'' ಮನೆ ಮಂದಿಯೆಲ್ಲಾ ಕುಳಿತು ನೋಡಲಾಗದಂತಹ ಸ್ಥಿತಿ ತಲುಪಿದೆ ಎಂದು ಹೇಳಿದ್ಧಾರೆ. ಮನೆಯಲ್ಲಿ ಲೈಂ*ಗಿಕ ಕ್ರಿಯೆಯೊಂದನ್ನು ಇವರು ತೋರಿಸಿಲ್ಲ ಅಷ್ಟೇ ಅದೊಂದು ಹೊರತು ಪಡಿಸಿದರೆ ''ಬಿಗ್ ಬಾಸ್'' ಮನೆಯಲ್ಲಿ ನಡೆಯಬಾರದ ಚಟುವಟಿಕೆಯೆಲ್ಲಾ ನಡೆಯುತ್ತಿದೆ ಎಂದು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಮುಂದುವರೆದು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಾವು ತಮಿಳುನಾಡು ವಿಧಾನಸಭೆಯ ಸ್ಪೀಕರ್ ಅವರನ್ನು ಕೂಡ ಸಂಪರ್ಕ ಮಾಡಿದ್ದೇವೆ ಎಂದು ಹೇಳಿರುವ ವೇಲುಮುರುಗನ್, ಚರ್ಚೆಗೆ ನಮಗೆ ಅವಕಾಶ ನೀಡದಿದ್ದರೆ.. ''ಬಿಗ್ ಬಾಸ್'' ಕಾರ್ಯಕ್ರಮವನ್ನು ಕೂಡಲೇ ನಿಷೇಧ ಮಾಡದಿದ್ದರೆ ಮುಖ್ಯಮಂತ್ರಿ ಹಾಗೂ ಐಟಿ ಮತ್ತು ಪ್ರಸಾರ ಇಲಾಖೆಗಳಿಗೆ ನಾವು ಭೇಟಿ ಕೊಡಲಿದ್ದೇವೆ, ಕಾರ್ಯಕ್ರಮ ಪ್ರಸಾರ ಮಾಡುತ್ತಿರುವ ವಿಜಯ್ ವಾಹಿನಿಯ ಎದುರು ಸಾವಿರಾರು ಮಹಿಳೆಯರೊಂದಿಗೆ ದೊಡ್ಡ ಪ್ರತಿaಭಟನೆ ಮಾಡುತ್ತೇವೆ ಎಂದು ಎಚ್ಚರಕೆಯನ್ನು ಕೂಡ ನೀಡಿದ್ದಾರೆ.


Click it and Unblock the Notifications











