ಬದುಕಿನ ಅಧ್ಯಾಯಕ್ಕೆ ಶುರು ಮಾಡಲಿರುವ ನಟಿಯರ ಡಾರ್ಲಿಂಗ್ ಕಿಶನ್ ಬಿಳಗಲಿ; ಖಂಡಿತಾ ಮದುವೆ ಅಲ್ಲ!
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋಗಳ ಪೈಕಿ ಬಿಗ್ ಬಾಸ್ ಕೂಡಾ ಒಂದು. 'ಬಿಗ್ ಬಾಸ್ ಸೀಸನ್ 7' ರ ಸ್ಪರ್ಧಿಯಾಗಿ ಕನ್ನಡ ಕಿರುತೆರೆಗೆ ಕಾಲಿಟ್ಟ ಡ್ಯಾನ್ಸರ್ ಕಿಶನ್ ಬಿಳಗಲಿ ಮುಂದೆ ನಟನಾಗಿಯೂ ಗುರುತಿಸಿಕೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಿನಗಾಗಿ' ಧಾರಾವಾಹಿಯಲ್ಲಿ ನಾಯಕಿ ರಚನಾ ಮಾವನ ಮಗ ಅಶ್ವಿನ್ ಪಾತ್ರದಲ್ಲಿ ಅಭಿನಯಿಸಿದ್ದ ಕಿಶನ್ ಖಳನಾಯಕನಾಗಿ ವೀಕ್ಷಕರ ಮನ ಸೆಳೆದಿದ್ದರು.
ನಟನೆಯ ಹೊರತಾಗಿ ಸೋಶಿಯಲ್ ಮೀಡಿಯಾದಲ್ಲಿಯೂ ಆ್ಯಕ್ಟೀವ್ ಆಗಿರುವ ಕಿಶನ್ ಬಿಳಗಲಿ ಅವರು ಸಮಯ ಸಿಕ್ಕಾಗಲೆಲ್ಲಾ ಡ್ಯಾನ್ಸ್ ವಿಡಿಯೋಗಳನ್ನು ಅಪ್ ಲೋಡ್ ಮಾಡುತ್ತಿರುತ್ತಾರೆ. ನಮ್ರತಾ ಗೌಡ, ರಾಗಿಣಿ ದ್ವಿವೇದಿ, ರಾಧಿಕಾ ನಾರಾಯಣ್, ದೀಪಿಕಾ ದಾಸ್, ತನ್ವಿ ರಾವ್ ಮುಂತಾದ ನಟಿಯರೊಡನೆ ಕಿಶನ್ ಅವರು ಹೆಜ್ಜೆ ಹಾಕಿದ್ದಾರೆ.

ಇದರ ನಡುವೆ ಕಿಶನ್ ಬಿಳಗಲಿ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಸಿಹಿ ಸುದ್ದಿ ಎಂಬ ವಿಚಾರ ಕಿವಿಗೆ ಬಿದ್ದದ್ದೇ ಅನೇಕರು ಮದುವೆ ಎಂದೇ ಭಾವಿಸುತ್ತಾರೆ. ಕಿಶನ್ ಬಿಳಗಲಿ ಅವರು ದಾಂಪತ್ಯ ಜೀವನಕ್ಕೆ ಕಾಲಿರಿಸುತ್ತಿದ್ದಾರೆ ಎಂಬ ಆಲೋಚನೆ ಅನೇಕರ ಮನದಲ್ಲಿ ಈಗಾಗಲೇ ಮೂಡಿದೆ.
ಆದರೆ ಅಸಲಿ ವಿಷಯವೇ ಬೇರೆ. ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುಚ ಕಿಶನ್ ಬಿಳಗಲಿ ಅವರು "ನನ್ನ ಜೀವನದ ಹೊಸ ಅಧ್ಯಾಯ ನಿಮ್ಮ ಜೊತೆ ಶುರು ಮಾಡ್ತಿದ್ದೇನೆ. ಇಷ್ಟು ವರ್ಷ ಸತತವಾಗಿ ವಿಡಿಯೋ ಮಾಡಿಕೊಂಡು ಬಂದಿದ್ದೇನೆ. ಅದನ್ನು ನೀವು ಕೂಡ ಇಷ್ಟಪಟ್ಟಿದ್ದೀರಿ. ವಿಡಿಯೋ ಮಾಡ್ತಾ ಮಾಡ್ತಾ ನಾನು ವಿಡಿಯೋ ಕೋರಿಯೋಗ್ರಫಿ ಹಾಗೂ ಕ್ರಿಯೇಟಿವ್ ವಿಡಿಯೋಗ್ರಾಫಿಯನ್ನು ಕಲಿತಿದ್ದೇನೆ. ಮದುವೆ, ಎಂಗೇಜ್ಮೆಂಟ್, ಹಳದಿ, ಸಂಗೀತದಂತಹ ಯಾವುದೇ ಸ್ಪೆಷಲ್ ಡೇ ಇರಲಿ, ನಾನು ನನ್ನ ಟೀಂ ಜೊತೆ ಬ್ಯೂಟಿಫುಲ್ ಕಾನ್ಸೆಪ್ಟ್ ಹಿಡಿದು ನಿಮ್ಮ ಬಳಿ ಬರಲು ಸಿದ್ಧನಿದ್ದೇನೆ. ನಿಮ್ಮ ದಿನವನ್ನು ಇನ್ನಷ್ಟು ವಿಶೇಷಗೊಳಿಸೋಕೆ ನನ್ನನ್ನು ಸಂಪರ್ಕಿಸಬಹುದು. ನೀವು ನನ್ನನ್ನು ಡಿಎಂ ಮಾಡ್‌ಬಹುದು ಅಥವಾ ನಮ್ಮ ವಿಡಿಯೋಗ್ರಾಫಿ ಪೇಜ್‌ಗೆ ಡಿಎಂ ಮಾಡಿ, ಇಲ್ಲವೆ ಇಲ್ಲಿ ನೀಡಿರುವ ನಂಬರ್‌ಗೆ ಫೋನ್ ಮಾಡಿ" ಎಂದು ವಿಡಿಯೋದಲ್ಲಿ ಕಿಶನ್ ಹೇಳಿಕೊಂಡಿದ್ದಾರೆ.
ವಿಡಿಯೋದ ಕೆಳಗೆ "ಓಂ ಸಾಯಿ ರಾಮ್. ಹೊಸ ಆರಂಭ. ಬೆಳೆಯಲು ಹಾಗೂ ನಿಮಗೆ ಹತ್ತಿರವಾಗಲು ಇದಕ್ಕಿಂತ ಒಳ್ಳೆಯ ದಾರಿ ಕಾಣಿಸಲಿಲ್ಲ. ಇದನ್ನು ಇತರರ ಜೊತೆಗೂ ಹಂಚಿಕೊಳ್ಳಿ. ಪ್ರೋತ್ಸಾಹ ನೀಡುತ್ತಿರುವ ಎಲ್ಲರಿಗೂ ಧನ್ಯವಾದಗಳು" ಎಂದು ಬರೆದುಕೊಂಡಿರುವ ಕಿಶನ್ ಬಿಳಗಲಿ ತಮ್ಮ ಫೋನ್ ನಂಬರ್ ಅನ್ನೂ ನೀಡಿದ್ದಾರೆ.
ಕಿಶನ್ ಬಿಳಗಲಿ ಹಂಚಿಕೊಂಡಿರುವ ಈ ವಿಡಿಯೋಕ್ಕೆ ಸಾಕಷ್ಟು ಪ್ರತಿಕ್ರಿಯೆ ಬಂದಿದೆ. "ಪೀಠಿಕೆ ನೋಡಿ ನಾನು ಅದ್ಕೊಂಡೆ ಸಾಹೇಬ್ರು ಮದುವೆ ಆಗಿ ಹೊಸ ಜೀವನಕ್ಕೆ ಕಾಲಿಡ್ತಿದ್ದಾರೆ ಅಂತ" ಹೀಗೆ ನಿನಗಾಗಿ ಧಾರಾವಾಹಿ ಡೈರೆಕ್ಟರ್ ಸಂಪೃಥ್ವಿ ಕಮೆಂಟ್ ಹಾಕಿದ್ದಾರೆ. ಇದರ ಹೊರತಾಗಿ ಮಲೈಕಾ ವಸುಪಾಲ್, ದಿಲೀಪ್ ಆರ್ ಶೆಟ್ಟಿ, ವಾಸುಕಿ ವೈಭವ್, ತನಿಷಾ ಕುಪ್ಪಂಡ, ಸಿಂಪಲ್ ಸುನಿ ಮುಂತಾದರವರು ಕಂಗ್ರಾಜ್ಯುಲೇಶನ್ಸ್ ಹೇಳಿದ್ದಾರೆ. ಇದರ ಹೊರತಾಗಿ ನೂರಕ್ಕೂ ಅಧಿಕ ಕಮೆಂಟ್‌ಗಳು ಬಂದಿದ್ದು "ಆಲ್ ದಿ ಬೆಸ್ಟ್, ಕಂಗ್ರಾಜುಲೇಶನ್ಸ್, ಬೆಸ್ಟ್ ಆಫ್ ಲಕ್, ಶುಭವಾಗಲಿ" ಎಂದು ಹಾರೈಸಿದ್ದಾರೆ.


Click it and Unblock the Notifications











