ಕಿರುತೆರೆಯಿಂದ ಹಿರಿತೆರೆಗೆ ಹೈಜಂಪ್ ಮಾಡಿ ಗೆದ್ದವರಿವರು: ಸುದೀಪ್, ದರ್ಶನ್, ಗಣೇಶ್ ನಟಿಸಿದ ಧಾರಾವಾಹಿಗಳು ಇವೇನೆ!
ನಟನೆಯನ್ನೇ ತಮ್ಮ ಜೀವನವಾಗಿಸಿಕೊಳ್ಳಬೇಕೆಂದು ಕನಸು ಹೊತ್ತು ಅದೆಷ್ಟೋ ಜನ ಮುಂದೆ ಬಂದಾಗ ಮೊದಲು ಅವರಿಗೆ ಅವಕಾಶ ನೀಡುವುದೇ ಕಿರುತೆರೆ. ಇಂದು ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುತ್ತಿರುವ ಅದೆಷ್ಟೋ ಟಾಪ್ ನಟರು ಕಿರುತೆರೆಯಿಂದಲೇ ತಮ್ಮ ನಟನ ಜರ್ನಿ ಆರಂಭಿಸಿದ್ದು. ಹೌದು, ರಾಕಿಂಗ್ ಸ್ಟಾರ್ ಯಶ್ ಕೂಡ 'ಪ್ರೀತಿ ಇಲ್ಲದ ಮೇಲೆ' ಹಾಗೂ 'ನಂದಗೋಕುಲ' ಧಾರಾವಾಹಿಯಿಂದ ನಟನೆಗೆ ಕಾಲಿಟ್ಟರು.
ಗೋಲ್ಡನ್ ಸ್ಟಾರ್ ಗಣೇಶ್ ಅವರು ಪಾಪ ಪಾಂಡು ಎಂಬ ಕಾಮಿಡಿ ಧಾರಾವಾಹಿ ಮೂಲಕ ತಮ್ಮನ್ನು ತಾವು ನಟನೆಯಲ್ಲಿ ಗುರುತಿಸಿಕೊಂಡರು. ಅಂತೆಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು 'ಅಂಬಿಕಾ' ಧಾರಾವಾಹಿಯಲ್ಲಿ, ಕಿಚ್ಚ ಸುದೀಪ್ ಅವರು 'ಪ್ರೇಮದ ಕಾದಂಬರಿ' ಎಂಬ ಧಾರಾವಾಹಿಯಿಂದ. ನಟ ರಮೇಶ್ ಅರವಿಂದ್ 'ಪರಿಚಯ' ಎಂಬ ಕನ್ನಡ ಧಾರಾವಾಹಿಯಿಂದ ನಟನೆಗೆ ಕಾಲಿಟ್ಟರು.
ಈ ರೀತಿ ಕಿರುತೆರೆಯಿಂದ ನಟನೆಗೆ ಕಾಲಿಟ್ಟು ಇಂದು ಚಂದನವನದಲ್ಲಿ ದೊಡ್ಡ ಹೆಸರು ಮಾಡಿ, ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ ಎಂದರೆ ಅದು ಖಂಡಿತ ಚಿಕ್ಕ ವಿಚಾರವಲ್ಲ. ಅವರ ಶ್ರಮ ಹಾಗೂ ಡೆಡಿಕೇಶನ್ ಅವರನ್ನು ಇಷ್ಟು ದೂರ ಕೊಂಡೊಯ್ದಿದೆ ಎಂದರೆ ಖಂಡಿತ ತಪ್ಪಾಗಲ್ಲ. ಇದೇ ರೀತಿ ಈಗ ಒಂದು ದಶಕದಿಂದ ಬಹಳಷ್ಟು ಬೇರೆ ನಟರು ಕಿರುತೆರೆಯಿಂದ ಹಿರಿತೆರೆಗೆ ಹಾರಿದ್ದಾರೆ. ಆ ಪಟ್ಟಿ ಇಲ್ಲಿದೆ.

ಡಾರ್ಲಿಂಗ್ ಕೃಷ್ಣ
ಮೊದಲು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕೃಷ್ಣ ರುಕ್ಮಿಣಿ' ಎಂಬ ಧಾರಾವಾಹಿ ಮೂಲಕ ನಟನೆಗೆ ಕಾಲಿಟ್ಟಿದ್ದು ಡಾರ್ಲಿಂಗ್ ಕೃಷ್ಣ. ಧಾರಾವಾಹಿಗಳಲ್ಲಿ ನಟಿಸಿದ ಬಳಿಕ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ರು. 'ಲವ್ ಮಾಕ್ಟೇಲ್' ಸಿನಿಮಾವನ್ನು ತಾವೇ ನಿರ್ದೇಶಿಸಿ, ನಟಿಸಿ ಗೆದ್ದ ಡಾರ್ಲಿಂಗ್ ಕೃಷ್ಣ ಈಗ ಬೇಡಿಕೆಯ ನಟ.

ವಿಜಯ್ ಸೂರ್ಯ
ತಮ್ಮ ಚೆಲುವಿನಿಂದಲೇ ಕನ್ನಡದ ಅದೆಷ್ಟೋ ಹೆಣ್ಣು ಮಕ್ಕಳ ಮನಸ್ಸು ಕದ್ದ ನಟ ವಿಜಯ್ ಸೂರ್ಯ. 'ಅಗ್ನಿಸಾಕ್ಷಿ' ಎಂಬ ಧಾರಾವಾಹಿಯಿಂದ ಬಹಳಷ್ಟು ಜನಪ್ರಿಯತೆ ಪಡೆದು ನಂತರ 'ಇಷ್ಟಕಾಮ್ಯ' ಎಂಬ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡರು. ಮುಂದೆ 'ಪ್ರೇಮಲೋಕ' ಎಂಬ ಧಾರಾವಾಹಿಯಲ್ಲಿ ಸೂರ್ಯ ಎಂಬ ನಾಯಕನ ಪಾತ್ರ ಮಾಡಿದ್ದ ವಿಜಯ್ ಸೂರ್ಯ ಹಿರಿತೆರೆಯಲ್ಲಿ ಮೋಡಿ ಮಾಡುತ್ತಿದ್ದಾರೆ. ಮಾತ್ರವಲ್ಲ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನಮ್ಮ ಲಚ್ಚಿ' ಧಾರಾವಾಹಿಯಲ್ಲಿ ನಾಯಕ ಸಂಗಮ್ ಆಗಿ ಅಭಿನಯಿಸುತ್ತಿದ್ದಾರೆ.

ರಿಷಿ
'ಆಪರೇಷನ್ ಅಲಮೇಲಮ್ಮ' ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟು ಬಹಳಷ್ಟು ಹೆಸರು ಮಾಡಿರುವ ನಟ ರಿಷಿ ಅವರು ಮೊದಲು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅನುರೂಪ' ಎಂಬ ಧಾರಾವಾಹಿಯಲ್ಲಿ ಲೆಕ್ಚರರ್ ಪಾತ್ರ ಮಾಡುವ ಮೂಲಕ ಸಾವಿರಾರು ಅಭಿಮಾನಿಗಳ ಮನ ಗೆದ್ದರು. 'ಮನಸಾರೆ' ಎಂಬ ಧಾರಾವಾಹಿಯಲ್ಲಿ ಅತಿಥಿ ಪಾತ್ರವನ್ನು ಮಾಡಿದ್ದ ರಿಷಿ ಸದ್ಯಕ್ಕೆ ಬೆಳ್ಳಿ ತೆರೆಯಲ್ಲಿ ಬಹಳ ಬ್ಯುಸಿಯಾಗಿದ್ದಾರೆ. 'ಕವಲುದಾರಿ', 'ಶ್ರೀ ಭರತ ಬಾಹುಬಲಿ', 'ನೋಡಿ ಸ್ವಾಮಿ ಇವನು ಇರೋದೇ ಹೀಗೆ' ಹೀಗೆ ಇತ್ಯಾದಿ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ.

ಶ್ರೀ ಮಹಾದೇವ್
'ಇರುವುದೆಲ್ಲವ ಬಿಟ್ಟು', 'ಕೋಟಿಗೊಬ್ಬ' ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಶ್ರೀ ಮಹಾದೇವ ಅವರು ಮೊದಲು 'ಚಿಟ್ಟೆ ಹೆಜ್ಜೆ' ಎಂಬ ಧಾರಾವಾಹಿಯಲ್ಲಿ ನಾಯಕನಾಗಿ ಕಾಣಿಸಿಕೊಂಡರು. ನಂತರ 'ಶ್ರೀರಸ್ತು ಶುಭಮಸ್'ತು ಎಂಬ ಸೂಪರ್ ಹಿಟ್ ಧಾರಾವಾಹಿಯನ್ನು ಮಾಡಿದ ಇವರು ಸದ್ಯಕ್ಕೆ 'ಹೊಂದಿಸಿ ಬರೆಯಿರಿ' ಎಂಬ ಅದ್ಭುತ ಸಿನಿಮಾದಲ್ಲಿ ನಟಿಸುವ ಮೂಲಕ ಬಹಳಷ್ಟು ಹೆಸರನ್ನು ಮಾಡುತ್ತಿದ್ದಾರೆ.

ಚಂದನ್ ಕುಮಾರ್
'ರಾಧಾಕಲ್ಯಾಣ' ಎಂಬ ಧಾರಾವಾಹಿ ಮೂಲಕ ನಟನೆಗೆ ಕಾಲಿಟ್ಟ ಚಂದನ್, ನಂತರ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ಬಹಳಷ್ಟು ಹೆಸರು ಮಾಡಿದರು. ಮುಂದೆ 'ಸರ್ವಮಂಗಳ ಮಾಂಗಲ್ಯೇ' ಹಾಗೂ ತೆಲುಗಿನ 'ಸನ್ ಆಫ್ ಸಾವಿತ್ರಮ್ಮ' ಹಾಗೂ 'ಶ್ರೀಮತಿ ಶ್ರೀನಿವಾಸ' ಧಾರಾವಾಹಿಯಲ್ಲಿ ನಟಿಸಿದ್ದ ಇವರು ಇತ್ತೀಚೆಗೆ ಮುಕ್ತಾಯಗೊಂಡ 'ಮರಳಿ ಮನಸಾಗಿದೆ' ಧಾರಾವಾಹಿಯಲ್ಲಿ ನಟಿಸಿದ್ದಾರೆ. 'ಪ್ರೇಮ ಬರಹ', 'ಲವ್ ಯೂ ಅಲಿಯಾ' ಇತ್ಯಾದಿ ಚಿತ್ರಗಳಲ್ಲಿಯೂ ನಾಯಕನಾಗಿ ನಟಿಸಿದ್ದಾರೆ.


Click it and Unblock the Notifications











